'ಪ್ರತಿಯೊಂದು ಪ್ರತಿಭಟನೆಯನ್ನು ನಿಷೇಧಿಸುತ್ತೀರಾ?': ರಾಜ್ಯ ಸರಕಾರಕ್ಕೆ ಹೈಕೋರ್ಟ್ ತರಾಟೆ

Update: 2019-12-20 11:02 GMT

ಬೆಂಗಳೂರು: "ನೀವು ಪ್ರತಿಯೊಂದು ಪ್ರತಿಭಟನೆಯನ್ನು ನಿಷೇಧಿಸುತ್ತಾ ಹೋಗುತ್ತೀರಾ?, ಸೂಕ್ತ ಪ್ರಕ್ರಿಯೆಗಳ ಮೂಲಕ ನೀಡಲಾಗಿದ್ದ ಅನುಮತಿಯನ್ನು  ಹೇಗೆ ರದ್ದುಗೊಳಿಸುತ್ತೀರಿ?'' ಎಂದು ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಪ್ರಶ್ನಿಸಿದ್ದಾರೆ.

ರಾಜಧಾನಿಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅಪೀಲುಗಳ ಮೇಲಿನ ವಿಚಾರಣೆ ಸಂದರ್ಭ ಮುಖ್ಯ ನ್ಯಾಯಮೂರ್ತಿ ಮೇಲಿನ ಪ್ರಶ್ನೆಯನ್ನೆತ್ತಿದ್ದಾರೆ,.

ಡಿಸೆಂಬರ್ 19ರಿಂದ 21ರ ತನಕ ರಾಜಧಾನಿಯಲ್ಲಿ ಹೇರಲಾಗಿರುವ ನಿಷೇಧಾಜ್ಞೆಯ ಕಾನೂನುಬದ್ಧತೆಯನ್ನು ಪರಿಶೀಲಿಸುವುದಾಗಿಯೂ ನ್ಯಾಯಾಲಯ ಹೇಳಿದೆ.

"ಪ್ರತಿಯೊಂದು ಪ್ರತಿಭಟನೆ ಹಿಂಸಾತ್ಮಕವಾಗಲಿದೆ ಎಂದು ಊಹಿಸಿ ಸರಕಾರ ಕ್ರಮ ಕೈಗೊಳ್ಳುವುದು ಸರಿಯೇ?, ಸರಕಾರದ ನಿರ್ಧಾರವನ್ನು ಒಪ್ಪದ ಒಬ್ಬ ಸಾಹಿತಿ ಅಥವಾ ಕಲಾವಿದೆ ಶಾಂತಿಯುತ ಪ್ರತಿಭಟನೆ ನಡೆಸುವುದು ಸಾಧ್ಯವಿಲ್ಲವೇ?'' ಎಂದೂ ನ್ಯಾಯಾಲಯ ಪ್ರಶ್ನಿಸಿದೆ.

ಆರಂಭದಲ್ಲಿ ಪ್ರತಿಭಟನೆಗೆ ಅನುಮತಿ ನೀಡಿ ನಂತರ ಸೆಕ್ಷನ್ 144 ಹೇರಿ ಪ್ರತಿಭಟನೆಗೆ ಅವಕಾಶವನ್ನು ಸರಕಾರ ನಿರಾಕರಿಸಿತ್ತೇ ಎಂಬ ಪ್ರಶ್ನೆಗೆ ಉತ್ತರಿಸುವಂತೆ ನ್ಯಾಯಾಲಯ ಅಡ್ವಕೇಟ್ ಜನರಲ್ ಅವರಿಗೆ ಹೇಳಿದೆ.

ಗುರುವಾರ ರಾಜಧಾನಿಯಲ್ಲಿ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ, ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಷದ್ ಸಹಿತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News