ಬಿಹಾರದಲ್ಲಿ ಎನ್‌ಆರ್‌ಸಿ ಜಾರಿಯಿಲ್ಲ: ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಳಿವು

Update: 2019-12-20 14:16 GMT

ಹೊಸದಿಲ್ಲಿ, ಡಿ.20: ಬಿಹಾರದಲ್ಲಿ ಎನ್‌ಆರ್‌ಸಿಯನ್ನು ಜಾರಿಗೊಳಿಸಲಾಗುವುದಿಲ್ಲ ಎಂಬ ಮಹತ್ವದ ಸುಳಿವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೀಡಿದ್ದು,ಇದು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆಯನ್ನು ಎದುರಿಸುತ್ತಿರುವ ಮಿತ್ರಪಕ್ಷ ಬಿಜೆಪಿಯ ಸಂಕಷ್ಟವನ್ನು ಹೆಚ್ಚಿಸಿದೆ.

ಶುಕ್ರವಾರ,ಬಿಹಾರದಲ್ಲಿ ಎನ್‌ಆರ್‌ಸಿ ಜಾರಿಗೊಳ್ಳಲಿದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ‘ ಏನು ಎನ್‌ಆರ್‌ಸಿ?’ ಎಂದು ಕುಮಾರ್ ಉತ್ತರಿಸಿದ್ದು,ಇದು ಅವರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಕೊನೆಗೂ ಬಹಿರಂಗಗೊಳಿಸಿದೆ.

ಕಳೆದ ಶನಿವಾರ ನಿತೀಶ್ ಕುಮಾರ್ ಜೊತೆ ಬಿಸಿಬಿಸಿ ಚರ್ಚೆಯ ಬಳಿಕ ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರು ನೀಡಿದ್ದ ಹೇಳಿಕೆಯನ್ನೂ ಈ ಸುಳಿವು ದೃಢಪಡಿಸಿದೆ. ಬಿಹಾರದಲ್ಲಿ ಎನ್‌ಆರ್‌ಸಿಯನ್ನು ಜಾರಿಗೊಳಿಸುವುದಿಲ್ಲ ಎಂದು ತನಗೆ ಭರವಸೆ ನೀಡಿದ್ದಾರೆ ಎಂದು ಕಿಶೋರ್ ಸುದ್ದಿಗಾರರಿಗೆ ತಿಳಿಸಿದ್ದರು. ಮಾತುಕತೆಗೆ ಮುನ್ನ ಸಿಎಎ ಮತ್ತು ಎನ್‌ಆರ್‌ಸಿ ಕುರಿತು ನಿಲುವಿನಿಂದ ಮುನಿಸಿಕೊಂಡಿದ್ದ ಕಿಶೋರ್ ಪಕ್ಷವನ್ನು ತೊರೆಯಲು ಸಜ್ಜಾಗಿದ್ದರು.

ತಾನು ಸಿಎಎ ಅನ್ನು ಬೆಂಬಲಿಸಿದ್ದು ಹೌದು,ಆದರೆ ಇದು ಎನ್‌ಆರ್‌ಸಿ ಜೊತೆ ಸೇರಿದರೆ ಅಪಾಯಕಾರಿಯಾಗಬಹುದು ಎಂದು ಬಳಿಕ ತನಗೆ ನಿತೀಶ್ ಹೊಳೆದಿದೆ ಎಂದು ಹೇಳಿದ್ದಾಗಿ ಕಿಶೋರ್ ತಿಳಿಸಿದ್ದರು.

ಎನ್‌ಆರ್‌ಸಿ ಕುರಿತು ತಾನು ವಿವರವಾಗಿ ಮಾತನಾಡುವುದಾಗಿ ನಿತೀಶ್ ಸುದ್ದಿಗಾರರಿಗೆ ಭರವಸೆ ನೀಡಿದ್ದರಾದರೂ ಆ ಬಗ್ಗೆ ಅಧಿಕೃತವಾಗಿ ಎಂದೂ ಮಾತನಾಡಿಲ್ಲ. ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಸಾರ್ವಜನಿಕರ ಸಿಟ್ಟು ನಿತೀಶ್ ಮರುಚಿಂತನೆ ನಡೆಸುವಂತೆ ಮಾಡಿವೆ ಎಂದು ನಿಕಟ ಮೂಲಗಳು ತಿಳಿಸಿವೆ.

ಬಿಜೆಪಿಯ ಇನ್ನೊಂದು ಮಿತ್ರಪಕ್ಷ ಅಕಾಲಿ ದಳವೂ ಈ ಮೊದಲು ಎನ್‌ಆರ್‌ಸಿ ಮತ್ತು ಸಿಎಬಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಪೌರತ್ವ (ತಿದ್ದುಪಡಿ) ಮಸೂದೆಯಲ್ಲಿ ಮುಸ್ಲಿಮರೂ ಸೇರ್ಪಡೆಗೊಳ್ಳಬೇಕೆಂದು ಅಕಾಲಿ ದಳವು ಬಯಸುತ್ತದೆ. ನಾವು ಸಿಕ್ಖರ ಬಗ್ಗೆ ಮಾತ್ರವಲ್ಲ,ಎಲ್ಲ ಧರ್ಮಗಳಿಗೆ ಸೇರಿದ ಜನರ ಏಳಿಗೆಯ ಬಗ್ಗೆೆ ಸದಾ ಮಾತನಾಡುತ್ತ ಬಂದಿದ್ದೇವೆ ಎಂದು ಪಕ್ಷದ ನಾಯಕ ಸುಖಬೀರ ಸಿಂಗ್ ಹೇಳಿದ್ದರು.

ಮಮತಾ ಬ್ಯಾನರ್ಜಿ ಸೇರಿದಂತೆ ಬಿಜೆಪಿಯೇತರ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಎನ್‌ಆರ್‌ಸಿಯನ್ನು ಜಾರಿಗೊಳಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News