ಘರೆ ಬೈರೆ - ಬೆಂಕಿಯಲ್ಲಿ ಅರಳಿದ ಹೂವಿನ ಕತೆ

Update: 2019-12-22 11:14 GMT

ರಾಷ್ಟ್ರೀಯ ಆಂದೋಲನ ಮತ್ತು ಭಾರತೀಯ ಮಹಿಳೆಯ ಸಂಬಂಧವನ್ನು ಕುರಿತ ಟ್ಯಾಗೋರರ ಘರೆ ಬೈರೆ ಕೃತಿ, ಕುಲೀನ ವರ್ಗದ ಮಹಿಳೆಯೊಬ್ಬಳು ಸಾಮಾಜಿಕ ಬಂಧನಗಳಿಂದ ಬಿಡಿಸಿಕೊಂಡು ತನ್ನ ವ್ಯಕ್ತಿತ್ವವನ್ನು ಹುಡುಕಿಕೊಳ್ಳುವ ಪ್ರಯತ್ನದ ಕಥಾವಸ್ತುವುಳ್ಳದ್ದು. ಈ ಕೃತಿಯನ್ನು ಸತ್ಯಜಿತ್ ರೇ ಅವರು ಚಿತ್ರವಾಗಿಸಿದಾಗ, ಭಾರತದಲ್ಲಿ ವಿಶೇಷವಾಗಿ ಬಂಗಾಳ ರಾಜ್ಯದಲ್ಲಿ ಮತ್ತು ವಿದೇಶದಲ್ಲಿ ವಾಣಿಜ್ಯ ಹಾಗೂ ಕಲಾತ್ಮಕ ಯಶಸ್ಸು ಕಂಡಿತು. ಬ್ರಿಟಿಷ್ ಪತ್ರಿಕೆಗಳಂತೂ ಈ ಚಿತ್ರವನ್ನು ಹಾಡಿ ಹೊಗಳಲು ಪೈಪೋಟಿಗೆ ಇಳಿದವು. ಯಥಾಪ್ರಕಾರ ಭಾರತದಲ್ಲಿ ಹಲವಾರು ವಿಮರ್ಶಕರು ಈ ಚಿತ್ರವನ್ನು ಕಟುವಾಗಿ ಟೀಕಿಸಿದರು.

ತ್ಯಜಿತ್ ರೇ ಅವರು ಮಹಿಳಾ ಲೋಕವನ್ನು ಪಥೇರ್ ಪಾಂಚಾಲಿಯಿಂದ ಹಿಡಿದು ದೇವಿ, ಚಾರುಲತಾ ಮುಂತಾದ ಚಿತ್ರಗಳಲ್ಲಿ ನಿರೂಪಿಸಿರುವ ವಿಧಾನವು ಹೆಚ್ಚು ವಾಸ್ತವವೂ, ಬಿಗಿಯಾದ ಬಂಧವು ಮತ್ತು ಕಲಾತ್ಮಕವೂ ಆಗಿರುವುದನ್ನು ಜಗತ್ತು ಗ್ರಹಿಸಿದೆ. ಆದರೆ ಅವರು ಇವುಗಳಿಗಿಂತ ಸಂಪೂರ್ಣ ಭಿನ್ನವಾದ ರಾಷ್ಟ್ರೀಯ ಆಂದೋಲನ ಮತ್ತು ಭಾರತೀಯ ಮಹಿಳೆಯ ಸಂಬಂಧವನ್ನು ಕುರಿತ ‘ಘರೆ ಬೈರೆ’(1984) ಚಿತ್ರವನ್ನು ಅವರು ತಮ್ಮ ವೃತ್ತಿ ಬದುಕಿನ ಕೊನೆಯಲ್ಲಿ ಸೃಷ್ಟಿಸಿದರು. ರವೀಂದ್ರನಾಥ ಟ್ಯಾಗೋರ್ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಈ ಚಿತ್ರವು ಸ್ವದೇಶಿ ಆಂದೋಲನದ ಯುಗವನ್ನು, ಈ ಸುಧಾರಣೆಗಳ ಭಾಗವಾಗಿ ಭಾರತೀಯ ಮಹಿಳೆಯರು ಅನುಭವಿಸಿದ ದ್ವಂದ್ವಗಳ ಕಾಲವನ್ನು ಸಮರ್ಥವಾಗಿ ಮರುಸೃಷ್ಟಿಸಿದೆ.

ಟ್ಯಾಗೋರ್ ಅವರು ಬರಹಗಾರರಾಗಿ ಅತ್ಯಂತ ಕ್ರಿಯಾಶೀಲರಾಗಿದ್ದ ಸಮಯದಲ್ಲಿ ತಮ್ಮ ನಾಲ್ಕನೇ ಕಾದಂಬರಿ ‘ಘರೆ ಬೈರೆ’ಯನ್ನು ರಚಿಸಿದರು. ಈ ಕಾದಂಬರಿಯು 1914ನೇ ಮೇ ತಿಂಗಳಿಂದ 1915ರ ಮಾರ್ಚ್‌ವರೆಗೆ ಸಬುಜ್‌ಪತ್ರ ಎಂಬ ನಿಯತಕಾಲಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಮರುವರ್ಷ ಅದು ಪುಸ್ತಕ ರೂಪದಲ್ಲಿ ಹೊರಬಂತು.

ವಿಶೇಷವೆಂದರೆ ರೇ ಅವರು ತಮ್ಮ ಮೊದಲ ಚಲನಚಿತ್ರ ‘ಪಥೇರ್ ಪಾಂಚಾಲಿ’ ಚಿತ್ರವನ್ನು ತೆರೆಗೀಯುವ ಮೊದಲೇ ಈ ಕೃತಿಯಿಂದ ಆಕರ್ಷಿತರಾಗಿದ್ದರು. ಇದನ್ನು ತೆರೆಗೆ ತರುವ ಪ್ರಯತ್ನವನ್ನು 1947ರಲ್ಲೇ ಮಾಡಿದ್ದರು. ಈ ಕಾದಂಬರಿಯು ಕುಲೀನ ವರ್ಗದ ಮಹಿಳೆಯೊಬ್ಬಳು ಸಾಮಾಜಿಕ ಬಂಧನಗಳಿಂದ ಬಿಡಿಸಿಕೊಂಡು ತನ್ನ ವ್ಯಕ್ತಿತ್ವವನ್ನು ಹುಡುಕಿಕೊಳ್ಳುವ ಪ್ರಯತ್ನದ ವಸ್ತುವನ್ನೊಳಗೊಂಡಿತ್ತು. ಇಂಥ ವಸ್ತು ರೇ ಅವರಿಗೆ ಅಚ್ಚುಮೆಚ್ಚಿನದಾಗಿತ್ತು. ಎಲ್ಲವೂ ಸರಿಯಿದ್ದಿದ್ದರೆ ಇದು ರೇ ಅವರ ಮೊದಲ ಕಥಾಚಿತ್ರವಾಗಬೇಕಿತ್ತು. ಆದರೆ ಆ ಕಾಲಕ್ಕೆ ಇದು ಪ್ರೇಕ್ಷಕರಿಗೆ ಹಿಡಿಸುವ ಬಗ್ಗೆ ಶಂಕೆಗಳಿದ್ದುದರಿಂದ ಪಥೇರ್ ಪಾಂಚಾಲಿಯನ್ನು ಕೈಗೆತ್ತಿಕೊಂಡರು. ‘ಪಥೇರ್ ಪಾಂಚಾಲಿ’ ಬಿಡುಗಡೆಯ ನಂತರ ಪಡೆದ ಯಶಸ್ಸಿನಿಂದಾಗಿ ರೇ ಅವರು ಘರೇಬೈರೆಯನ್ನು ಚಿತ್ರರೂಪಕ್ಕೆ ತರುವ ಪ್ರಯತ್ನವನ್ನು ಮತ್ತೆ ಮುಂದುವರಿಸಿದರಾದರೂ ಯಾವುದೋ ಕಾರಣಕ್ಕಾಗಿ ಕೈಬಿಟ್ಟರು. ತಮ್ಮ ಮನಸ್ಸಿನಲ್ಲಿ ದೀರ್ಘಕಾಲ ಕಾವು ಕೊಟ್ಟು ಮಾಗಿಸಿದ್ದ ತಮ್ಮ ನೆಚ್ಚಿನ ಕಾದಂಬರಿಯನ್ನು ಅಂತಿಮವಾಗಿ 1984ರಲ್ಲಿ ಅವರು ಯಶಸ್ವಿಯಾಗಿ ತೆರೆಗೆ ಅಳವಡಿಸಿದರು. ಕಾದಂಬರಿ ಪ್ರಕಟವಾಗಿ ಆ ವೇಳೆಗೆ ಏಳು ದಶಕಗಳಾಗಿತ್ತು.

1984ರಲ್ಲಿ ಬಿಡುಗಡೆಯಾದ ‘ಘರೆ ಬೈರೆ’ ಚಿತ್ರವು ಭಾರತದಲ್ಲಿ ವಿಶೇಷವಾಗಿ ಬಂಗಾಳ ರಾಜ್ಯದಲ್ಲಿ ಮತ್ತು ವಿದೇಶದಲ್ಲಿ ವಾಣಿಜ್ಯ ಹಾಗೂ ಕಲಾತ್ಮಕ ಯಶಸ್ಸು ಕಂಡಿತು. ಬ್ರಿಟಿಷ್ ಪತ್ರಿಕೆಗಳಂತೂ ಈ ಚಿತ್ರವನ್ನು ಹಾಡಿ ಹೊಗಳಲು ಪೈಪೋಟಿಗೆ ಇಳಿದವು. ಯಥಾಪ್ರಕಾರ ಭಾರತದಲ್ಲಿ ಹಲವಾರು ವಿಮರ್ಶಕರು ಈ ಚಿತ್ರವನ್ನು ಕಟುವಾಗಿ ಟೀಕಿಸಿದರು. ಇದು ಮಹಿಳೆಯ ಒಳ ಮತ್ತು ಹೊರಜಗತ್ತಿನ ಭಿತ್ತಿಯಲ್ಲಿ ಹೆಣ್ಣಿನ ಶೋಧನೆಯ ಪ್ರಯತ್ನವೆಂದು ಬಹುತೇಕ ವಿಮರ್ಶಕರು ಅನುಮೋದಿಸಿದರೆ, ಹಲವು ವಿಮರ್ಶಕರು ಇದು ಸತ್ಯಜಿತ್ ರೇ ಅವರ ದುರ್ಬಲ ಕೃತಿ ಮಾತ್ರವಲ್ಲ, ಒಂದು ಉತ್ತಮ ಚಿತ್ರವಾಗುವ ಅವಕಾಶವನ್ನು ಕಳೆದುಕೊಂಡ ದುರಂತ ಎಂದೂ ಟೀಕಿಸಿದರು. ಆದರೆ ಒಟ್ಟಾರೆಯಾಗಿ ರೇ ಅವರು ಹೆಣ್ಣಿನ ಪಾತ್ರಗಳ ಒಳತೋಟಿಗಳನ್ನು ಸಮರ್ಥವಾಗಿ ಹಿಡಿದಿಡಿದ ಟ್ಯಾಗೋರ್ ಅವರ ಕೃತಿಗಳನ್ನು ತೆರೆಗೆ ಅಳವಡಿಸುವಲ್ಲಿ ಯಶಸ್ಸು ಕಂಡದ್ದಂತೂ ನಿಜ. ತೀನ್‌ಕನ್ಯಾ, ‘ಚಾರುಲತಾ’ ಚಿತ್ರಗಳಲ್ಲಿ ಟ್ಯಾಗೋರ್ ಅವರ ಹೆಣ್ಣಿನ ಜಗತ್ತಿನ ಅನೇಕ ಪದರುಗಳನ್ನು ಅನಾವರಣ ಮಾಡಿದ ರೇ ಅವರು ‘ಘರೇ ಬೈರೆ’ ಚಿತ್ರದಲ್ಲಿಯೂ ಅದನ್ನು ಯಶಸ್ವಿಯಾಗಿ ಮುಂದುವರಿಸಿದರು.

ಟ್ಯಾಗೋರ್ ಅವರ ಕಾದಂಬರಿಯು ಪ್ರಧಾನವಾಗಿ ಲಾರ್ಡ್ ಕರ್ಜನ್ 1905ರಲ್ಲಿ ಧರ್ಮದ ಆಧಾರದಲ್ಲಿ ಅಖಂಡ ಬಂಗಾಳವನ್ನು ಪೂರ್ವ ಮತ್ತು ಪಶ್ಚಿಮ ಬಂಗಾಳವನ್ನಾಗಿ ವಿಭಜಿಸಿದ ನಂತರ ಅಲ್ಲಿ ಸಂಭವಿಸಿದ ಪಲ್ಲಟಗಳನ್ನು ಕುರಿತದ್ದು. ಬಂಗಾಳದ ಶ್ರೀಮಂತ ಕುಟುಂಬದ ವಿವರಗಳು, ಅಲ್ಲಿನ ಸಂಪ್ರದಾಯ, ಹೆಣ್ಣಿನ ಸ್ಥಾನ ಮಾನ, ಬಂಗಾಳಿ ಯುವಕರ ರಾಜಕೀಯ ನಿಲುವು, ರಾಷ್ಟ್ರೀಯ ಚಳವಳಿಗಳ ಪ್ರತಿಕ್ರಿಯೆ ಮುಂತಾದ ದೀರ್ಘ ವಿವರಗಳನ್ನು ಒಳಗೊಂಡ ಕೃತಿ. ಹಿಂದೂ ಮತ್ತು ಮುಸ್ಲಿಮ್ ಜನಾಂಗದ ಜನಸಂಖ್ಯಾ ಬಾಹುಳ್ಯವನ್ನು ಆಧರಿಸಿ ಮಾಡಿದ ಈ ವಿಭಜನೆ ಆವರೆವಿಗೂ ಸಾಮಾಜಿಕ, ಆರ್ಥಿಕ ಮತ್ತು ಇತರ ಸಂಗತಿಗಳಿಂದ ಹೆಣೆದುಕೊಂಡಿದ್ದ ಎರಡೂ ಧರ್ಮಗಳ ಜನರು ದಿಕ್ಕಾಪಾಲಾಗುವ ಪರಿಸ್ಥಿತಿ ಏರ್ಪಟ್ಟಿದೆ. ಬಂಗಾಳ ವಿಭಜನೆಗೆ ಅಲ್ಲಿನ ಬೌದ್ಧಿಕ ವರ್ಗ ವಿರೋಧ ವ್ಯಕ್ತಪಡಿಸುತ್ತದೆ. ನಂಬಿಕೆಯ ಜಾಗದಲ್ಲಿ ಅಪನಂಬಿಕೆ ಮೊಟ್ಟೆಯಿಟ್ಟಿದೆ. ವಸಾಹತು ಆಳ್ವಿಕೆ ಅದಕ್ಕೆ ಕಾವು ಕೊಡುತ್ತಿದೆ. ಉತ್ಪಾದನೆಯಲ್ಲಿ ಹೆಗೆಲೆಣೆಯಾಗಿದ್ದ ಎರಡು ಧರ್ಮದ ಜನರ ಸಂಬಂಧ ಜಾಲ ಹರಿದಿದೆ. ಬ್ರಿಟಿಷರ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ದೇಶೀಯ ಉತ್ಪಾದನೆಯನ್ನು ಬಲಗೊಳಿಸುವ ಗುರಿಯ ರಾಷ್ಟ್ರೀಯ ಚಳವಳಿ ಸಹ ಭುಗಿಲೆದ್ದಿದೆ.

ಬಂಗಾಳ ರಾಜ್ಯವು ಹಾದುಹೋಗುತ್ತಿರುವ ಈ ತಳಮಳದ ಕಾಲದಲ್ಲಿ ‘ಘರೆ ಬೈರೆ’ ಕಾದಂಬರಿಯು ಉದಾರವಾದಿ ಮತ್ತು ಶ್ರೀಮಂತ ಜಮೀನುದಾರ ನಿಖಿಲೇಶ್ ಚೌಧರಿಯನ್ನು ವಿವಾಹವಾಗಿರುವ ಬಿಮಲ ಎಂಬ ಹೆಣ್ಣಿನ ಕಥೆಯನ್ನು ಹೇಳುತ್ತದೆ. ಬಿಮಲ ಒಬ್ಬ ಆದರ್ಶ ಗೃಹಿಣಿ. ಮದುವೆಯ ನಂತರ ದೊಡ್ಡ ಬಂಗಲೆಯಲ್ಲಿ ತನ್ನ ಅಂತರಮಹಲ್‌ನ ಬಿಟ್ಟರೆ ಉಳಿದ ಕಡೆ ಅಪ್ಪಿತಪ್ಪಿಯೂ ಹೋಗಿಲ್ಲ. ನಿಖಿಲೇಶ್‌ಗೆ ಸ್ವದೇಶಿ ಚಳವಳಿಯ ಸಾಧಕ ಬಾಧಕಗಳ ಅರಿವಿದೆ. ಮನುಷ್ಯ ಸಂಬಂಧಗಳನ್ನು ಅದು ಛಿದ್ರಿಸಬಹುದೆಂಬ ಆತಂಕ. ಹಾಗಾಗಿ ಆ ಆಂದೋಲನದ ಬಗ್ಗೆ ಅಕ್ಕರೆಯಿಲ್ಲ. ಆದರೆ ಸ್ವದೇಶಿ ಚಳವಳಿಗೆ ಅರ್ಪಿಸಿಕೊಂಡ ಬಾಲ್ಯ ಸ್ನೇಹಿತ ಸಂದೀಪ್ ಮುಖರ್ಜಿಯು ನಿಖಿಲೇಶನ ನಿಲುವಿನ ಕಟು ವಿಮರ್ಶಕ. ಆದರೆ ನಿಖಿಲೇಶ್‌ಗೆ ತನ್ನ ಗೆಳೆಯನ ಬಗ್ಗೆ ಅಭಿಮಾನ.

ಇಂಥ ಸನ್ನಿವೇಶದಲ್ಲಿ ‘ಸುಖಸಾಯರ್’ ಭವನದಲ್ಲಿ ವಾಸ ಮಾಡುತ್ತಿರುವ ಶ್ರೀಮಂತ ನಿಖಿಲೇಶ್ ಚೌಧುರಿಗೆ ರಾಷ್ಟ್ರೀಯ ಚಳವಳಿಯಲ್ಲಿ ಅಕ್ಕರೆಯಿಲ್ಲ. ಶ್ರೀಮಂತನಾದರೂ ಆಧುನಿಕತೆಗೆ ತೆರೆದುಕೊಂಡವನು. ಪತ್ನಿ ಬಿಮಲಳ ಬಗ್ಗೆ ಅಪಾರ ಪ್ರೀತಿ. ಸಂಪ್ರದಾಯದಂತೆ ಮನೆಯಲ್ಲಿ ಬಂಧಿಯಾದ ಹೆಂಡತಿಯು ಹೊರಜಗತ್ತನ್ನು ನೋಡಲೆಂಬ ಆಸೆ. ಅದಕ್ಕಾಗಿ ಅವಳಿಗೆ ವಿದೇಶಿ ಸಂಗೀತ, ವಿದೇಶೀಯರ ನಡೆನುಡಿಗಳನ್ನು ಕಲಿಸಲು ಅವಕಾಶ ಕಲ್ಪಿಸುತ್ತಾನೆ.

ಆರಂಭದಲ್ಲಿ ತನ್ನ ಸಂಪ್ರದಾಯದ ಕಟ್ಟುಪಾಡುಗಳಲ್ಲಿ ಸುಖ ಕಾಣುವ ಬಿಮಲ, ತನ್ನ ಗಂಡನ ಸ್ನೇಹಿತ ರಾಷ್ಟ್ರೀಯವಾದಿ, ವಿದೇಶಿ ವಸ್ತುಗಳ ಬಹಿಷ್ಕಾರ ಆಂದೋಲನದ ಮುಂದಾಳು ಸಂದೀಪ್ ಮುಖರ್ಜಿಯ ವಿವರಗಳನ್ನು ಕೇಳಿಸಿಕೊಳ್ಳುತ್ತಾ ಅವನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾಳೆ. ತನ್ನ ಗುಣಧರ್ಮಗಳಿಗೆ ವಿರುದ್ಧವಾದ ಸಂದೀಪನಿಗೆ ತನ್ನ ಮನೆಯಲ್ಲಿಯೇ ನಿಖಿಲೇಶ್ ಆತಿಥ್ಯ ನೀಡುತ್ತಾನೆ. ಆರಂಭದಲ್ಲಿ ಹಿಂದೆಗೆಯುವ ಆಕೆ ಗಂಡನ ಪ್ರೇರಣೆಯಂತೆ ಅವನನ್ನು ಹಜಾರದಲ್ಲಿ ಭೇಟಿಯಾಗಲು ಮೊದಲ ಬಾರಿಗೆ ತನ್ನ ಅಂತರ ಮಹಲಿನ ಹೊಸ್ತಿಲು ದಾಟುವ ಬಿಮಲ ಸಂದೀಪನ ಮಾತು, ವಿಚಾರಗಳಿಗೆ ಮನಸೋಲುತ್ತಾಳೆ. ಅವಳ ಸೌಂದರ್ಯದಿಂದ ಸಂದೀಪನೂ ಹುಚ್ಚನಾಗುತ್ತಾನೆ.

ನಿಖಿಲೇಶ್ ಚೌಧುರಿಗಿಂತ ಭಿನ್ನ ಮಾರ್ಗ ಹಿಡಿದ ಸಂದೀಪ್ ಚೌಧುರಿ ಜನರ ನಡುವೆ ಸಂಘರ್ಷ ಹುಟ್ಟುಹಾಕಲು, ಬಿಮಲಳ ಮನಸ್ಸನ್ನು ಗೆಲ್ಲಲು ರಾಷ್ಟ್ರೀಯತೆ, ದೇಶಭಕ್ತಿ, ಬ್ರಿಟಿಷರ ವಿರುದ್ಧದ ಹೋರಾಟದ ಸಿದ್ಧಾಂತಗಳ ಅಸ್ತ್ರಗಳನ್ನು ಬಳಸುತ್ತಾನೆ. ಸಂದೀಪನ ಕುಟಿಲ ಮೋಹಕ್ಕೆ ವಶಳಾದ ಬಿಮಲಳನ್ನು ಮತ್ತೆ ವಾಪಸ್ ತರಲು ನಿಖಿಲೇಶ್ ವಿಫಲ ಯತ್ನ ನಡೆಸುತ್ತಾನೆ. ಹಲವಾರು ಘಟನೆಗಳ ನಂತರ ಬಿಮಲಳಿಗೆ ಸಂದೀಪನ ಸಂಚುಗಳು ತಿಳಿಯುವ ವೇಳೆಗೆ ಕಾಲ ಮಿಂಚಿರುತ್ತದೆ. ಆತನ ದುರುದ್ದೇಶಗಳ ಪರಿಣಾಮವಾಗಿ ಕೋಮು ಗಲಭೆ ಭುಗಿಲೇಳುತ್ತದೆ. ಅದರಿಂದ ಸಂದೀಪ್ ತಪ್ಪಿಸಿಕೊಂಡು ಹೋಗುತ್ತಾನೆ. ನಿಖಿಲೇಶ್ ಸಂಘರ್ಷಕ್ಕೆ ಬಲಿಯಾಗುತ್ತಾನೆ. ಸಂಪ್ರದಾಯಗಳನ್ನು ಮುರಿಯುವ ಹೆಣ್ಣು ತೆರಬೇಕಾದ ಬೆಲೆ ಇದೆಂದು ಸರಳ ಗ್ರಹಿಕೆಗೆ ನಿಲುಕುತ್ತದೆ. ಆದರೆ ಒಂದು ಚಾರಿತ್ರಿಕ ಸನ್ನಿವೇಶದಲ್ಲಿ ಉದ್ಭವಿಸುವ ಮನುಕುಲ ವಿರೋಧಿ ಸಿದ್ಧಾಂತಗಳು. ಆಡಳಿತ ನಿರ್ಧಾರಗಳಿಗೆ ಮಹಿಳೆಯೂ ಸೇರಿದಂತೆ ಬಲಿಯಾಗುವ ಸಮಾಜದ ದುರಂತವನ್ನು ಕಾದಂಬರಿಯು ಕಟ್ಟಿಕೊಡುತ್ತದೆ. ಅದನ್ನು ಸಮರ್ಥವಾಗಿ ಚಲನಚಿತ್ರ ರೂಪದಲ್ಲಿ ರೇ ಅವರು ನಿರೂಪಿಸಿದ್ದಾರೆ.

‘ಘರೇ ಬೈರೆ’ ಚಿತ್ರವು ಟ್ಯಾಗೋರ್ ಅವರ ಕೃತಿಯನ್ನು ತೆರೆಗೆ ಅಳವಡಿಸಿರುವುದು ರೇ ಅವರ ಮಹತ್ವಾಕಾಂಕ್ಷೆಯ ಪ್ರಯತ್ನದಂತೆ ಕಾಣುತ್ತದೆ. ಸುಮಾರು ನಲವತ್ತು ವರ್ಷಗಳ ಕಾಲ ರೇ ಅವರ ಮನಸ್ಸಿನಲ್ಲಿ ಮಥಿಸಿ ತಯಾರಾದ ಚಿತ್ರ. ಇದು ಟ್ಯಾಗೋರ್ ಅವರ ಅತ್ಯಂತ ಸಂಕೀರ್ಣವಾದ ಕಾದಂಬರಿ. ಅದು ಟ್ಯಾಗೋರ್ ಅವರಿಗೆ ಪ್ರಿಯವಾದ ರಾಷ್ಟ್ರೀಯತೆಯ ಹಿಪಾಕ್ರಸಿ ಮತ್ತು ಮೇಲ್ವರ್ಗದ ಮಹಿಳೆಯರ ಮೇಲೆ ಒತ್ತಾಯಪೂರ್ವಕವಾಗಿ ಹೇರಿರುವ ಕಟ್ಟುಪಾಡುಗಳ ದ್ವಂದ್ವಗಳನ್ನು ಎತ್ತಿ ಹಿಡಿಯುತ್ತದೆ. ಮೇಲ್ವರ್ಗದ ಮಹಿಳೆಯರು ತಮ್ಮ ಅಸ್ತಿತ್ವಕ್ಕಾಗಿ ವಿಫಲ ಹುಡುಕಾಟ ನಡೆಸುವ ಮತ್ತು ರಾಷ್ಟ್ರೀಯ ಚಳವಳಿಯ ಪೊಳ್ಳುತನವನ್ನು ಹತ್ತಿರದಿಂದ ಕಂಡ ಟ್ಯಾಗೋರ್ ಅವರು ತಮ್ಮ ಎರಡು ಕಾದಂಬರಿ ಘರೇ ಬೈರೆ ಮತ್ತು ಚಾರ್‌ಅಧ್ಯಾಯ್‌ನಲ್ಲಿ ವಿವರವಾಗಿ ಚಿತ್ರಿಸಿದ್ದಾರೆ. ಕಾದಂಬರಿಯ ಈ ಎಲ್ಲ ಆಶಯಗಳನ್ನು ಚಲನಚಿತ್ರ ರೂಪದಲ್ಲಿ ಅಳವಡಿಸುವುದು ಸುಲಭದ ಮಾತಲ್ಲ. ಅದಕ್ಕಾಗಿಯೇ ರೇ ಅವರ ಪ್ರಯತ್ನವನ್ನು ವಿಮರ್ಶಕರು ಮಹತ್ವಾಕಾಂಕ್ಷಿ ಪ್ರಯತ್ನವೆಂದು ಹೇಳಿದ್ದು. ಪಶ್ಚಿಮದ ವಿಮರ್ಶಕರು ಸಹ ಇದರ ವಸ್ತು ಒಂದು ಪ್ರದೇಶದ, ಕುಟುಂಬದ ಸಣ್ಣಕಥನವೇ ಹೊರತು ವಿಶ್ವ ಪ್ರೇಕ್ಷಕರಿಗೆ ಹೇಳಿಮಾಡಿಸಿದ್ದಲ್ಲವೆಂದು ಮೂಗು ಮುರಿದಿದ್ದರು. ಆದರೆ ರೇ ಅವರು ಪ್ರಧಾನ ಪಾತ್ರಗಳ ಮೂಲಕ ರಾಷ್ಟ್ರೀಯತೆಯ ಪೊಳ್ಳು ಮತ್ತು ದ್ವಂದ್ವವನ್ನು ತಮ್ಮ ಚಿತ್ರದಲ್ಲಿ ಗಟ್ಟಿಯಾಗಿ ರೂಪಿಸಿದ್ದಾರೆ. ಈ ನಿರೂಪಣೆಯ ಕೇಂದ್ರಕ್ಕೆ ಬಿಮಲಳ ಪಾತ್ರವನ್ನು ಬೆಸೆದಿದ್ದಾರೆ. ತಮಗೆ ಎರಡು ಬಾರಿ ಹೃದಯಾಘಾತವಾದರೂ ಲೆಕ್ಕಿಸದೆ ರೇ ಅವರು ಚಿತ್ರವನ್ನು ಪೂರ್ಣಗೊಳಿಸಿದ್ದು, ಈ ಕಾದಂಬರಿಯ ಬಗ್ಗೆ ಅವರೆಷ್ಟು ಮೋಹಗೊಂಡಿದ್ದರೆಂಬುದು ವ್ಯಕ್ತವಾಗುತ್ತದೆ.

ಕಾದಂಬರಿಯನ್ನು ತೆರೆಗೆ ಅಳವಡಿಸುವ ಕಾರ್ಯದಲ್ಲಿ ಅವರು ‘ಚಾರುಲತಾ’ ಚಿತ್ರವನ್ನು ರೂಪಿಸುವ ಸಂದರ್ಭದಲ್ಲಿ ವಹಿಸಿದ ಸ್ವಾತಂತ್ರವನ್ನು ಇಲ್ಲಿಯೂ ವಹಿಸಿದ್ದಾರೆ. ದಟ್ಟವಾದ ವಿವರಗಳನ್ನು ಸಿನೆಮಾ ಮಾ್ಯಮಕ್ಕೆ ಅಳವಡಿಸುವ ಬಗೆಗೆ ಅನೇಕ ಹೊಳಹುಗಳು ಈ ಚಿತ್ರದ ಪರಿಸರ, ಕಲಾ ನಿರ್ದೇಶನದಲ್ಲಿ ಸಿಗುತ್ತವೆ. ಅನೇಕ ವಿವರಗಳನ್ನು ಅವರು ಮಾರ್ಪಡಿಸಿದ್ದಾರೆ. ಉದಾಹರಣೆಗೆ ಸಂದೀಪನಿಗಾಗಿ ಬಿಮಲ ನಾಣ್ಯಗಳನ್ನು ಕದಿಯುವ ವಿವರ ಕಾದಂಬರಿಗಿಂತಲೂ ಚಿತ್ರದಲ್ಲಿಯೇ ಹೆಚ್ಚು ವಾಸ್ತವಕ್ಕೆ ಹತ್ತಿರವಾಗಿದೆ. ತನ್ನ ಅಂತರ ಮಹಲಿನಿಂದ ಹೊರಜಗತ್ತಿಗೆ ಹೆಜ್ಜೆ ಇಡುವ ದೃಶ್ಯವಂತೂ, ಸಿನೆಮಾದ ಅತ್ಯಂತ ಸಶಕ್ತ ದೃಶ್ಯಗಳಲ್ಲೊಂದಾಗಿದೆ.

‘ಬೆಂಕಿ’ ಈ ಚಿತ್ರದಲ್ಲಿ ಬಳಕೆಯಾಗಿರುವ ಪ್ರಮುಖ ರೂಪಕ. ಚಿತ್ರದ ಆಶಯಕ್ಕೆ ಅದು ಸೂಕ್ತವೂ ಹೌದು. ಪರಿಶುದ್ಧಗೊಳಿಸುವ ಮತ್ತು ಸುಡುವ ಅದರ ಎರಡು ಗುಣಗಳೂ ಇಲ್ಲಿ ಸಶಕ್ತ ರೂಪಕಗಳಾಗಿವೆ. ಚಿತ್ರದ ಆರಂಭದಲ್ಲಿ ಬೆಂಕಿಯ ಕೆನ್ನಾಲಿಗೆಗಳು ತೆರೆಯನ್ನು ನೆಕ್ಕುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಕ್ಯಾಮೆರಾ ಹಿಂದೆ ಸರಿದಂತೆ ಅದು ನಿಖಿಲೇಶನ ಚಿತೆಯಿಂದ ಎದ್ದದ್ದು. ಅದರ ನಡುವೆ ಶೋಕತಪ್ತಳೂ, ಪಶ್ಚಾತ್ತಾಪ ಪಡುವವಳೂ ಆದ ಬಿಮಲಳ ಬಿಂಬ ಮೂಡುತ್ತದೆ. ಪಶ್ಚಾತ್ತಾಪದಲ್ಲಿ ಬೇಯುವ ಬಿಮಲಳನ್ನು ಪರಿಶುದ್ಧಗೊಳಿಸುವುದಕ್ಕೆ ಚಿತೆಯ ಬೆಂಕಿ ರೂಪಕವಾದರೆ, ಕೋಮು ಸಂಘರ್ಷದಲ್ಲಿ ಹುಟ್ಟುವ ಬೆಂಕಿ ವಿನಾಶವನ್ನು ಸಂಕೇತಿಸುತ್ತದೆ. ಕಾದಂಬರಿಯಲ್ಲಿ ಒಂದೆರಡು ಸಾಲಿನಲ್ಲಿ ಕೋಮುಗಲಭೆಯ ಸೂಚನೆಯಿದ್ದರೆ, ಚಿತ್ರದಲ್ಲಿ ರೇ ಅವರು ಅದರ ಅಕರಾಳ ವಿಕರಾಳವನ್ನು ಸೃಷ್ಟಿಸಿದ್ದಾರೆ.

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News