ಶ್ರೀರಾಮನ ಅವಹೇಳನ ಆರೋಪ: ಟ್ವಿಟರ್ ನಲ್ಲಿ ಅಕ್ಷಯ್ ಕುಮಾರ್ ವಿರುದ್ಧ ಆಕ್ರೋಶ

Update: 2019-12-22 12:57 GMT

ಹೊಸದಿಲ್ಲಿ: ಅಕ್ಷಯ್ ಕುಮಾರ್ ನಟನೆಯ 'ಗುಡ್‍ನ್ಯೂಸ್' ಚಿತ್ರದ ಎರಡನೇ ಟ್ರೇಲರ್‍ ನ ಒಂದು ಸಂಭಾಷಣೆ ಇದೀಗ ವಿವಾದಕ್ಕೀಡಾಗಿದೆ.

ಟ್ರೇಲರ್‍ನ ಸಂಭಾಷಣೆಯೊಂದರಲ್ಲಿ ವ್ಯಕ್ತಿಯೊಬ್ಬ "ಮೇರೇ ಬಚ್ಚೆ ಕಾ ನಾಮ್ ಹೋಲಾ ರಾಮ್ ಹೆ, ಕ್ಯೋಂಕಿ ವೋ ಹೋಲಿ ಪೇ ಪೈದಾ ಹುವಾ ಥಾ" ಎಂದು ಹೇಳುತ್ತಾರೆ. ಈ ಸಂದರ್ಭ ಪ್ರತಿಕ್ರಿಯಿಸುವ ಅಕ್ಷಯ್, "ಅಚ್ಚಾ ಹುವಾ ಆಪ್ಕಾ ಬಚ್ಚಾ ಲೋಹ್ರಿ ಪೇ ಪೈದಾ ನಹಿ ಹುವಾ" ಎಂದು ಹೇಳುತ್ತಾರೆ. ಟ್ರೈಲರ್ ನಲ್ಲಿರುವ ಈ ಸಂಭಾಷಣೆ ಇದೀಗ ಭಾರೀ ವಿವಾದ ಸೃಷ್ಟಿಸಿದೆ.

ಹಲವು ಮಂದಿ ಟ್ವಿಟರ್ ನಲ್ಲಿ ನಟನನ್ನು ಟೀಕಿಸಿದ್ದು, ಅಕ್ಷಯ್ ಕುಮಾರ್ ರಾಮನನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಭಾಷಣೆ ಆಯ್ಕೆ ಮಾಡಿಕೊಳ್ಳಲು ಅಕ್ಷಯ್ ಕುಮಾರ್ ಅವರ ಕೆನಡಾ ಪೌರತ್ವ  ಕಾರಣ ಎಂದು ಕೆಲ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಡಿಯರ್ ಅಕ್ಷಯ್‍ಕುಮಾರ್ ನೀವು ಕೆನಡಾ ಪ್ರಜೆ; ನಮಗೇನೂ ತೊಂದರೆಯಿಲ್ಲ. ಆದರೆ ಭಾರತೀಯ ಧರ್ಮ ಹಾಗೂ ಹಿಂದೂ ದೇವರನ್ನು ಅವಹೇಳನ ಮಾಡಲು ನಿಮಗೆಷ್ಟು ಧೈರ್ಯ?, ನಾವು ಭಾರತೀಯರು ಇದನ್ನು ಸಹಿಸುವುದಿಲ್ಲ" ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

"ಮಿಷನ್ ಮಂಗಲ್‍ನಲ್ಲಿ ಹಿಂದೂ ಸಮುದಾಯಕ್ಕೆ ಅಕ್ಷಯ್ ಅಗೌರವ ತೋರಿದ್ದು, ಇದೀಗ ಗುಡ್‍ನ್ಯೂಸ್ ಚಿತ್ರದಲ್ಲೂ ಮುಂದುವರಿಸಿದ್ದಾರೆ" ಎಂದು ಮತ್ತೊಬ್ಬ ಬಳಕೆದಾರ ಆಕ್ಷೇಪಿಸಿದ್ದಾರೆ.

"ಅವರು ರಾಮನನ್ನು ನಿಂದಿಸಿದ್ದಾರೆ; ಸಿಖ್ಖರ ಹಬ್ಬವನ್ನು ಅಣಕಿಸಿದ್ದಾರೆ; ಜತೆಗೆ ಅದನ್ನು ತಪ್ಪಾಗಿ ಉಚ್ಚರಿಸಿದ್ದಾರೆ" ಎಂದು ಮತ್ತೊಬ್ಬ ಬಳಕೆದಾರರು ಟೀಕಿಸಿದ್ದಾರೆ.

"ಎಲ್ಲ ಭಾರತೀಯರಿಗೆ ಕೂಗಿ ಹೇಳುತ್ತಿದ್ದೇನೆ.. ಅವರದ್ದು, ಯಾವುದೇ ಧರ್ಮ ಇರಲಿ; ಅಲ್ಪ ಹಣಕ್ಕಾಗಿ ತೀರಾ ಕೆಳಮಟ್ಟಕ್ಕೆ ಇಳಿದಿದ್ದಾರೆ" ಎಂದು ಮತ್ತೊಬ್ಬರು ಖಂಡಿಸಿದ್ದಾರೆ. "ಅಕ್ಷಯ್ ಭಾರತದಲ್ಲಿ ನಕಲಿ ನಟ. ಅವರ ಬಗೆಗಿನ ಎಲ್ಲವೂ ನಕಲಿ. ನಕಲಿ ಪೌರತ್ವ, ನಕಲಿ ಐಡೆಂಟಿಟಿ, ನಕಲಿ ವ್ಯಕ್ತಿ; ದೇವರೇ ಅವರನ್ನು ಭಾರತದಿಂದ ಹೊರಕ್ಕೆಸೆಯ " ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News