ಆಮೆನಡಿಗೆಗೆ ರೈಲ್ವೆ ಗುಡ್‌ಬೈ; ವೇಗ ಎಷ್ಟು ಹೆಚ್ಚಲಿದೆ ಗೊತ್ತೇ?

Update: 2019-12-23 03:33 GMT

ಹೊಸದಿಲ್ಲಿ, ಡಿ.23: ಆಮೆನಡಿಗೆಗೆ ಹೆಸರಾದ ಭಾರತದ ರೈಲುಗಳು ಶೀಘ್ರದಲ್ಲೇ ಈ ಹಣೆಪಟ್ಟಿ ಕಳಚಿಕೊಳ್ಳಲಿವೆ. ಪ್ರಯಾಣಿಕ ರೈಲುಗಳ ವೇಗವನ್ನು ಶೇಕಡ 30ರಷ್ಟು ಹೆಚ್ಚಿಸಿ ಗಂಟೆಗೆ 80 ಕಿಲೋಮೀಟರ್‌ಗೆ ಏರಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ಸರಕು ಸಾಗಣೆ ರೈಲುಗಳ ವೇಗವನ್ನು ಶೇಕಡ 80ರಷ್ಟು ಹೆಚ್ಚಿಸಲು ಕೂಡಾ ರೈಲ್ವೆ ನಿರ್ಧರಿಸಿದೆ.

ಮೂಲ ಸೌಕರ್ಯದ ವಿಭಾಗವಾರು ಗುಂಪಿನ ಭಾಗವಾಗಿರುವ ರೈಲ್ವೆ ಸಚಿವಾಲಯ ಈ ಸಂಬಂಧ ಪ್ರಸ್ತುತಿಯನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಸಂಪುಟದ ಮುಂದೆ ನೀಡಿದ್ದು, ಮುಂದಿನ ಐದು ವರ್ಷಗಳ ಕಾರ್ಯಯೋಜನೆಯನ್ನು ತೆರೆದಿಟ್ಟಿದೆ. ಸದ್ಯ ಸರಕು ಸಾಗಾಟ ರೈಲುಗಳ ವೇಗ ಗಂಟೆಗೆ 25ರಿಂದ 30 ಕಿಲೋಮೀಟರ್ ಇದ್ದು 2024ರ ವೇಳೆಗೆ ಇದನ್ನು 45 ಕಿಲೋಮೀಟರ್‌ಗೆ ಹೆಚ್ಚಿಸುವ ಉದ್ದೇಶ ಹೊಂದಿದೆ.

ಪ್ರಯಾಣಿಕ ರೈಲುಗಳಲ್ಲಿ ಕೂಡಾ ಇಂಥದ್ದೇ ವೇಗವರ್ಧನೆಗೆ ಉದ್ದೇಶಿಸಿದ್ದು, ಇದು ಕೇವಲ ರಾಜಧಾನಿ ರೈಲುಗಳಿಗೆ ಸೀಮಿತವಾಗದೇ, ಇತರ ರೈಲುಗಳ ವೇಗವನ್ನೂ ಹೆಚ್ಚಿಸಲಾಗುತ್ತಿದೆ. ರಾಜಧಾನಿ ರೈಲುಗಳ ವೇಗವನ್ನು ಈಗಾಗಲೇ ಹೆಚ್ಚಿಸಲಾಗಿದ್ದು, ಮುಂಬೈ- ದೆಹಲಿ ನಡುವಿನ ಅಂತರವನ್ನು ಈ ರೈಲುಗಳು ಕೇವಲ 12 ಗಂಟೆಗಳಲ್ಲಿ ಕ್ರಮಿಸುತ್ತಿವೆ.

ದೆಹಲಿ ಬಳಿಯ ದಾದ್ರಿಯಿಂದ ಮುಂಬೈನ ಜವಾಹರಲಾಲ್ ನೆಹರೂ ಬಂದರು ಹಾಗೂ ಲೂಧಿಯಾನಾದಿಂದ ಪಶ್ಚಿಮ ಬಂಗಾಳದ ಧನಕುಣಿ ನಡುವೆ ಸಂಪರ್ಕ ಕಲ್ಪಿಸುವ ಎರಡು ವಿಶೇಷ ಸರಕು ಸಾಗಾಟ ಕಾರಿಡಾರ್‌ಗಳು ಈ ವರ್ಷ ಕಾರ್ಯಾರಂಭವಾಗುವ ಸಾಧ್ಯತೆ ಇದ್ದು, ಇದು ಸರಕು ಸಾಗಾಟ ರೈಲುಗಳ ವೇಗ ಹೆಚ್ಚಳಕ್ಕೆ ಕಾರಣವಾಗಲಿದೆ. ಇತರ ರೈಲು ಮಾರ್ಗಗಳಲ್ಲಿನ ಸಂಚಾರ ದಟ್ಟಣೆಯನ್ನು ಇದು ಕಡಿಮೆ ಮಾಡಲಿದ್ದು, ಅಲ್ಲದೆ ಇತರ ಮಾರ್ಗಗಳಲ್ಲಿ ವೇಗ ಹೆಚ್ಚಳಕ್ಕೂ ಅವಕಾಶ ಮಾಡಿಕೊಡಲಿದೆ. ಇದೀಗ ಮುಂಬೈ- ದೆಹಲಿ ಹಾಗೂ ಮುಂಬೈ ಹೌರಾ ನಡುವಿನ ರೈಲು ಮಾರ್ಗದಲ್ಲಿ ದಟ್ಟಣೆ ಅಧಿಕವಾಗಿದ್ದು, ಇತರ ರೈಲುಗಳ ವೇಗ ಹೆಚ್ಚಿಸಲು ಅವಕಾಶವಾಗುತ್ತಿಲ್ಲ ಎಂದು ರೈಲ್ವೆ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News