ಜಾರ್ಖಂಡ್ ಚುನಾವಣಾ ಫಲಿತಾಂಶ: ಕಾಂಗ್ರೆಸ್-ಜೆಎಂಎಂ ಮುನ್ನಡೆ
ರಾಂಚಿ, ಡಿ.23: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಕಾರ್ಯ ಮುಂಜಾನೆ ಆರಂಭವಾಗಿದ್ದು, ಕಾಂಗ್ರೆಸ್- ಜೆಎಂಎಂ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಮತಗಟ್ಟೆ ಸಮೀಕ್ಷೆಗಳ ಫಲಿತಾಂಶದಂತೆ ಅತಂತ್ರ ವಿಧಾನಸಭೆ ನಿರ್ಮಾಣದ ಸಾಧ್ಯತೆಗಳು ಕಾಣಿಸಿಕೊಂಡಿವೆ.
ಇತ್ತೀಚಿನ ವರದಿಗಳು ಬಂದಾಗ 81 ಸ್ಥಾನಗಳ ಪೈಕಿ 79 ಸ್ಥಾನಗಳ ಮುನ್ನಡೆ ವಿವರ ಲಭ್ಯವಿದ್ದು, ಕಾಂಗ್ರೆಸ್- ಜೆಎಂಎಂ ಮೈತ್ರಿಕೂಟ 37, ಬಿಜೆಪಿ 33 ಹಾಗೂ ಇತರ ಪಕ್ಷಗಳು 9 ಸ್ಥಾನಗಳಲ್ಲಿ ಮುಂದಿವೆ. ಜೆಎಂಎಂ- ಕಾಂಗ್ರೆಸ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಹೇಮಂತ್ ಸೊರೆನ್ ದಮ್ಕಾ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಜೆಎಂಎಂ ಅಭ್ಯರ್ಥಿಗಳು 20 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ-31, ಕಾಂಗ್ರೆಸ್-12, ಎಜೆಎಸ್‌ಯುಪಿ-2, ಜೆವಿಎಂ(ಪಿ)-2 ಹಾಗೂ ಆರ್‌ಜೆಡಿ-1 ಸ್ಥಾನಗಳಲ್ಲಿ ಮುಂದಿವೆ. ಬಹುಮತಕ್ಕೆ 41 ಸ್ಥಾನಗಳ ಅಗತ್ಯವಿದೆ.
ಒಟ್ಟು 81 ಸದಸ್ಯಬಲದ ವಿಧಾನಸಭೆಯಲ್ಲಿ ಕಳೆದ ಬಾರಿ ಬಿಜೆಪಿ 37, ಕಾಂಗ್ರೆಸ್ ಮೈತ್ರಿಕೂಟ 25, ಜೆವಿಎಂ(ಪಿ) 8, ಎಜೆಎಸ್‌ಯುಪಿ 5 ಹಾಗೂ ಇತರ ಪಕ್ಷಗಳು 6 ಶಾಸಕರನ್ನು ಹೊಂದಿದ್ದವು.
ನವೆಂಬರ್ 30ರಿಂದ ಡಿಸೆಂಬರ್ 20ರವರೆಗೆ ಐದು ಹಂತಗಳಲ್ಲಿ ವಿಧಾನಸಭೆಗೆ ಮತದಾನ ನಡೆದಿತ್ತು. ಮತಗಟ್ಟೆ ನಿರ್ಗಮನ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಗಳಿವೆ.