ಪಾಕ್‌ನಿಂದ ನಿಷೇಧಿತ ಸಂಘಟನೆಗಳಿಗೆ ಸೇರಿದ ಸಂಸ್ಥೆಗಳ ವಿವರ ಕೋರಿದ ಎಫ್‌ಎಟಿಎಫ್

Update: 2019-12-23 17:02 GMT

ಇಸ್ಲಾಮಾಬಾದ್, ಡಿ. 23: ನಿಷೇಧಿತ ಸಂಘಟನೆಗಳಿಗೆ ಸೇರಿದ ಮದರಸಗಳ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಪೂರೈಕೆಯಾಗುವ ಹಣದ ಮೇಲೆ ನಿಗಾ ಇಡುವ ಜಾಗತಿಕ ಕಣ್ಗಾವಲು ಸಂಸ್ಥೆ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಪಾಕಿಸ್ತಾನದಿಂದ ಸ್ಪಷ್ಟೀಕರಣಗಳು ಮತ್ತು ಅಂಕಿಅಂಶಗಳನ್ನು ಕೋರಿದೆ.

ಭಯೋತ್ಪಾದನೆ ಮತ್ತು ಕಪ್ಪು ಹಣ ಬಿಳುಪಾಗುವುದನ್ನು ತಡೆಯಲು ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ವಿವರಗಳನ್ನೊಳಗೊಂಡ ವರದಿಯೊಂದನ್ನು ಪಾಕಿಸ್ತಾನ ಸಲ್ಲಿಸಿದ ಬಳಿಕ ಪ್ಯಾರಿಸ್ ‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಫ್‌ಎಟಿಎಫ್ ಹೆಚ್ಚಿನ ವಿವರಗಳನ್ನು ಕೋರಿದೆ.

 ಎಫ್‌ಎಟಿಎಫ್ ಅಕ್ಟೋಬರ್‌ನಲ್ಲಿ ಪಾಕಿಸ್ತಾನವನ್ನು 2020 ಫೆಬ್ರವರಿವರೆಗೆ ಬೂದು ಪಟ್ಟಿಯಲ್ಲಿ ಇರಿಸಿತ್ತು. ಒಂದು ವೇಳೆ, ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲವಾದರೆ, ಮುಂದಿನ ಹಂತ ಅದನ್ನು ಕಪ್ಪು ಪಟ್ಟಿಗೆ ಸೇರಿಸುವುದು. ಪಾಕಿಸ್ತಾನ ಕಪ್ಪು ಪಟ್ಟಿಗೆ ಸೇರ್ಪಡೆಗೊಂಡರೆ ಅದಕ್ಕೆ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಯಾವುದೇ ನೆರವು ಸಿಗುವುದಿಲ್ಲ.

ಎಫ್‌ಎಟಿಎಫ್‌ನ ಒಟ್ಟು 27 ಪ್ರಶ್ನೆಗಳ ಪೈಕಿ ಈಗ ಉಳಿದಿರುವ 22 ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಲು ಪಾಕಿಸ್ತಾನ ವಿಫಲವಾದರೆ ಆ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಅದು (ಎಫ್‌ಎಟಿಎಫ್) ಪಾಕಿಸ್ತಾನಕ್ಕೆ ಅಕ್ಟೋಬರ್‌ನಲ್ಲಿ ಎಚ್ಚರಿಕೆ ನೀಡಿತ್ತು.

22 ಪ್ರಶ್ನೆಗಳಿಗೆ ಉತ್ತರಗಳನ್ನೊಳಗೊಂಡ ವರದಿಯನ್ನು ಪಾಕಿಸ್ತಾನವು ಡಿಸೆಂಬರ್ 6ರಂದು ಎಫ್‌ಎಟಿಎಫ್‌ಗೆ ಸಲ್ಲಿಸಿದೆ.

ಈ ವರದಿಗೆ ಪ್ರತಿಯಾಗಿ ಎಫ್‌ಎಟಿಎಫ್ ಜಂಟಿ ಗುಂಪು ಪಾಕಿಸ್ತಾನಕ್ಕೆ 150 ಪ್ರಶ್ನೆಗಳನ್ನು ಕಳುಹಿಸಿದೆ. ಈ ಪ್ರಶ್ನೆಗಳು ಸ್ಪಷ್ಟೀಕರಣಗಳು ಮತ್ತು ತಾಜಾ ಮಾಹಿತಿಗಳನ್ನು ಕೇಳಿವೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಮದರಸಗಳ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ವಿವರಗಳನ್ನು ಕೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News