ಶ್ರೀಲಂಕಾ ವಿರುದ್ಧ ಜಯಭೇರಿ, ಪಾಕಿಸ್ತಾನಕ್ಕೆ ಐತಿಹಾಸಿಕ ಸರಣಿ

Update: 2019-12-23 18:37 GMT

ಕರಾಚಿ, ಡಿ.23: ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯವನ್ನು 236 ರನ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡ ಪಾಕಿಸ್ತಾನ 10 ವರ್ಷಗಳ ಬಳಿಕ ತವರು ನೆಲದಲ್ಲಿ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿತು. ಐದನೇ ದಿನವಾದ ಸೋಮವಾರ ಬೆಳಗ್ಗೆ ಕೇವಲ 14 ನಿಮಿಷಗಳಲ್ಲಿ, 16 ಎಸೆತಗಳ ಬೌಲಿಂಗ್‌ನಲ್ಲಿ ಶ್ರೀಲಂಕಾದ ಕೊನೆಯ ಮೂರು ವಿಕೆಟ್‌ಗಳನ್ನು ಉರುಳಿಸಿದ ಪಾಕ್ ಗೆಲುವಿನ ವಿಧಿವಿಧಾನ ಪೂರೈಸಿತು.

ಪಾಕ್ ವೇಗಿ ನಸೀಂ ಶಾ ಅವರು ಲಸಿತ್ ಎಂಬುಲ್ಡೆನಿಯಾರನ್ನು(0) ದಿನದ ಮೊದಲ ಎಸೆತದಲ್ಲೇ ಪೆವಿಲಿಯನ್‌ಗೆ ಕಳುಹಿಸಿದರು. ಮತ್ತೊಂದೆಡೆ ಶತಕ ವೀರ ಒಶಾಡಾ ಫೆರ್ನಾಂಡೊ ನಿನ್ನೆಯ ಸ್ಕೋರ್ 102ಕ್ಕೆ ಒಂದೂ ರನ್ ಸೇರಿಸದೆ ಲೆಗ್ ಸ್ಪಿನ್ನರ್ ಯಾಸಿರ್ ಶಾಗೆ ವಿಕೆಟ್ ಒಪ್ಪಿಸಿದರು. ಫೆರ್ನಾಂಡೊ 180 ಎಸೆತಗಳ ಇನಿಂಗ್ಸ್ ನಲ್ಲಿ 13 ಬೌಂಡರಿ ಗಳಿಸಿದ್ದರು. ನಸೀಂ ಮುಂದಿನ ಓವರ್‌ನ 5ನೇ ಎಸೆತದಲ್ಲಿ ವಿಶ್ವ ಫೆರ್ನಾಂಡೊರನ್ನು ಶೂನ್ಯಕ್ಕೆ ಔಟ್ ಮಾಡುವುದರೊಂದಿಗೆ ಲಂಕಾದ 2ನೇ ಇನಿಂಗ್ಸ್‌ಗೆ ತೆರೆ ಎಳೆದರು. ಆಗ ಪಾಕ್ ಪಾಳಯದಲ್ಲಿ ಸಂಭ್ರಮದ ಕಟ್ಟೆಯೊಡೆಯಿತು. ದೀರ್ಘಸಮಯದ ಬಳಿಕ ಸ್ವದೇಶದಲ್ಲಿ ಆಡಿದ ಟೆಸ್ಟ್ ಸರಣಿ ಜಯಿಸಿ ಸಂಭ್ರಮಪಟ್ಟಿತು.

 ಪಾಕಿಸ್ತಾನ ತಂಡ ಪ್ರವಾಸಿ ಶ್ರೀಲಂಕಾ ತಂಡಕ್ಕೆ 2ನೇ ಪಂದ್ಯ ಗೆಲ್ಲಲು 476 ರನ್ ಕಠಿಣ ಗುರಿ ವಿಧಿಸಿತ್ತು. ರವಿವಾರ 4ನೇ ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದ್ದ ಶ್ರೀಲಂಕಾ ಸೋಲಿನತ್ತ ಮುಖ ಮಾಡಿತ್ತು. 16 ರ ಹರೆಯದ ನಸೀಂ ಶಾ ಟೆಸ್ಟ್ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಎರಡನೇ ಅತ್ಯಂತ ಕಿರಿಯ ವಯಸ್ಸಿನ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ನಸೀಂ 31 ರನ್‌ಗೆ ಐದು ವಿಕೆಟ್‌ಗಳನ್ನು ಉಡಾಯಿಸಿದರು. 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಉಗ್ರಗಾಮಿಗಳ ದಾಳಿ ನಡೆದ ಬಳಿಕ ಐಸಿಸಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯ ಆಡಲು ನಿಷೇಧ ಹೇರಿದ ಸಂದರ್ಭದಲ್ಲಿ ನಸೀಂಗೆ ಕೇವಲ ಆರು ವರ್ಷ ವಯಸ್ಸಾಗಿತ್ತು.

ಪಾಕ್-ಶ್ರೀಲಂಕಾ ಮಧ್ಯೆ ರಾವಲ್ಪಿಂಡಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯ ನಿರಂತರ ಮಳೆಯಿಂದಾಗಿ ಡ್ರಾನಲ್ಲಿ ಕೊನೆಗೊಂಡಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಅಬಿದ್ ಅಲಿ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಎರಡೂ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News