×
Ad

ಮಹಾರಾಷ್ಟ್ರದಲ್ಲಿ ಎನ್‌ಆರ್‌ಸಿ ಅನುಷ್ಠಾನವಿಲ್ಲ, ಬಂಧನ ಕೇಂದ್ರಗಳೂ ಇರುವುದಿಲ್ಲ: ಸಿಎಂ ಉದ್ಧವ್ ಠಾಕ್ರೆ

Update: 2019-12-24 19:30 IST

ಮುಂಬೈ,ಡಿ.24: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ಸೋಮವಾರ ತನ್ನನ್ನು ಭೇಟಿಯಾಗಿದ್ದ ಮುಸ್ಲಿಮ್ ರಾಜಕಾರಣಿಗಳು ಮತ್ತು ಧರ್ಮಗುರುಗಳ ಎರಡು ನಿಯೋಗಗಳಿಗೆ ಭರವಸೆ ನೀಡಿದ್ದಾರೆ. ರಾಜ್ಯ ಸರಕಾರವು ಯಾವುದೇ ಬಂಧನ ಕೇಂದ್ರಗಳನ್ನು ನಿರ್ಮಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ತಮ್ಮನ್ನು ರಾಜ್ಯದಿಂದ ಹೊರಕ್ಕೆ ದಬ್ಬಲಾಗುತ್ತದೆ ಎಂದು ಮುಸ್ಲಿಮ್ ಸಮುದಾಯವು ಭೀತಿ ಪಟ್ಟುಕೊಳ್ಳಬೇಕಿಲ್ಲ ಎಂದು ಹೇಳಿದ ಮುಖ್ಯಮಂತ್ರಿಗಳು, ಮಹಾರಾಷ್ಟ್ರದಲ್ಲಿ ಸಿಎಎ ಅಥವಾ ಎನ್‌ಆರ್‌ಸಿ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಒಂದು ವೇಳೆ ಜಾರಿಗೊಂಡರೂ ಮುಸ್ಲಿಮರು ಅದರ ಭಾಗವಾಗಿರುವಂತೆ ಸರಕಾರವು ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದರು ಎಂದು ಭೇಟಿಯ ಸಂದರ್ಭ ಉಪಸ್ಥಿತರಿದ್ದ ಮುಂಬೈ ದಕ್ಷಿಣ ಶಾಸಕ ಅಮೀನ ಪಟೇಲ್ ತಿಳಿಸಿದರು.

ಬಂಧನ ಕೇಂದ್ರಗಳ ಕುರಿತಂತೆ ಹಲವಾರು ತಪ್ಪು ತಿಳುವಳಿಕೆಗಳನ್ನು ಹರಡಲಾಗುತ್ತಿದೆ. ಅದು ಮಾದಕದ್ರವ್ಯಗಳು ಅಥವಾ ಇತರ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಮ್ಮ ಶಿಕ್ಷೆಯನ್ನು ಪೂರೈಸಿರುವ ವಿದೇಶಿಯರಿಗಾಗಿರುವ ವ್ಯವಸ್ಥೆಯಾಗಿದೆ. ತಮ್ಮ ಸ್ವದೇಶಗಳಿಗೆ ಗಡೀಪಾರುಗೊಳ್ಳುವವರೆಗೆ ಈ ವಿದೇಶಿಯರನ್ನು ಬಂಧನ ಕೇಂದ್ರಗಳಲ್ಲಿ ಇರಿಸಲಾಗುತ್ತದೆ. ಹೀಗಾಗಿ ಈ ಕೇಂದ್ರಗಳ ಬಗ್ಗೆ ಭಯ ಪಡಬೇಕಿಲ್ಲ ಎಂದು ಠಾಕ್ರೆ ಹೇಳಿದರು.

ಎನ್‌ಆರ್‌ಸಿ ಕುರಿತು ಯಾವುದೇ ನಿರ್ಧಾರವಾಗಿಲ್ಲ ಮತ್ತು ಇಂತಹ ಕಾನೂನು ಬಂದರೂ ಅದು ಮುಸ್ಲಿಮರಿಗೆ ಮಾತ್ರವಲ್ಲ,ಎಲ್ಲ ಧರ್ಮದವರಿಗೂ ಅನ್ವಯಿಸುತ್ತದೆ ಎಂದ ಅವರು,ಸಿಎಎ ಕುರಿತಂತೆ ದೇಶದಲ್ಲಿ ಆಶಾಂತಿ ಮತ್ತು ಭೀತಿಯ ವಾತಾವರಣವಿದೆ. ಶಾಂತಿಯುತ ರಾಜ್ಯವೆಂಬ ಮಹಾರಾಷ್ಟ್ರದ ಖ್ಯಾತಿ ಮತ್ತು ಸಂಪ್ರದಾಯವನ್ನು ಕಾಯ್ದುಕೊಳ್ಳಲು ನಾವು ಪ್ರಯತ್ನಗಳನ್ನು ಮಾಡಬೇಕು. ಯಾರ ಹಕ್ಕುಗಳನ್ನೂ ಕಿತ್ತುಕೊಳ್ಳಲಾಗುವುದಿಲ್ಲ. ಎಲ್ಲ ಧರ್ಮಗಳ ಪ್ರಜೆಗಳ ಹಕ್ಕುಗಳನ್ನು ರಕ್ಷಿಸಲು ಸರಕಾರವು ಸಶಕ್ತವಾಗಿದೆ ಎಂದರು.

ತನ್ಮಧ್ಯೆ,ನವಿ ಮುಂಬೈನ ನೆರೂಳ್‌ನಲ್ಲಿ ಅಕ್ರಮ ವಲಸಿಗರಿಗಾಗಿ ರಾಜ್ಯದ ಮೊದಲ ಬಂಧನ ಕೇಂದ್ರವನ್ನು ಸ್ಥಾಪಿಸುವ ತನ್ನ ಪೂರ್ವಾಧಿಕಾರಿ ದೇವೇಂದ್ರ ಫಡ್ನವೀಸ್ ಅವರ ನಿರ್ಧಾರವನ್ನು ಠಾಕ್ರೆ ರದ್ದುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News