×
Ad

ಧರ್ಮ ಮತ್ತು ರಾಜಕೀಯವನ್ನು ಬೆರೆಸಿದ್ದು ನಮ್ಮ ತಪ್ಪು: ಉದ್ಧವ್ ಠಾಕ್ರೆ

Update: 2019-12-24 19:50 IST

ಮುಂಬೈ, ಡಿ.24: ಧರ್ಮವನ್ನು ರಾಜಕೀಯದ ಜೊತೆ ಬೆರೆಸಿದ್ದು ಹಾಗೂ ಬಿಜೆಪಿ ಜೊತೆ ಕೈಜೋಡಿಸಿದ್ದು ಶಿವಸೇನೆ ಮಾಡಿದ ಅತೀ ದೊಡ್ಡ ತಪ್ಪಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್, ಜನಾದೇಶವನ್ನು ತಿರಸ್ಕರಿಸಿ, ಶಿವಸೇನೆಯ ತತ್ವ ಸಿದ್ಧಾಂತಕ್ಕೆ ದ್ರೋಹ ಬಗೆದು ರಾಜಕೀಯ ಲಾಭಕ್ಕಾಗಿ ಉದ್ಧವ್ ಠಾಕ್ರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿದ್ದಾರೆ ಎಂದು ಟೀಕಿಸಿದ್ದರು. ಈ ಟೀಕೆಗೆ ಇದಿರೇಟು ನೀಡಿರುವ ಠಾಕ್ರೆ, ಈ ಹಿಂದೆ ಬಿಜೆಪಿಯೂ ವಿಭಿನ್ನ ಸಿದ್ಧಾಂತದ ಪಕ್ಷಗಳಾದ ಟಿಎಂಸಿ, ಲೋಕಜನಶಕ್ತಿ ಪಕ್ಷವಷ್ಟೇ ಅಲ್ಲ ಪಿಡಿಪಿಯ ಜೊತೆಯೂ ಮೈತ್ರಿ ಮಾಡಿಕೊಂಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಧರ್ಮ ಎಂದರೆ ಕೇವಲ ಬಾಯ್ಮಾತಿನಲ್ಲಿ ಹೇಳಿದರೆ ಆಗದು, ಅದನ್ನು ಅನುಸರಿಸಬೇಕು. ಧರ್ಮವು ಕೇವಲ ಪುಸ್ತಕದ ಬದನೆಕಾಯಿಯಲ್ಲ, ನಿಜ ಜೀವನದಲ್ಲೂ ಅದನ್ನು ಪಾಲಿಸಬೇಕು ಎಂದು ಠಾಕ್ರೆ ಹೇಳಿದ್ದಾರೆ. ಫಡ್ನವೀಸ್ ಜನಾದೇಶದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಇದು ರಾಜಕೀಯ. ಧರ್ಮವನ್ನು ರಾಜಕೀಯದ ಜೊತೆ ಬೆರೆಸಿ ಬಹುಷಃ ನಾವು ತಪ್ಪು ಮಾಡಿದ್ದೇವೆ. ಧರ್ಮ ಮಾರ್ಗದಲ್ಲಿ ನಡೆಯುವವರೂ ಜೂಜಾಟದಲ್ಲಿ ಸೋತಿದ್ದಾರೆ ಎಂಬುದನ್ನು ಆಗ ಮರೆತಿದ್ದೆವು(ಮಹಾಭಾರತ) . ರಾಜಕೀಯ ಒಂದು ಜೂಜಾಟವಾಗಿದ್ದು ಅದನ್ನು ಸೂಕ್ತ ವಾಗಿ ನಿರ್ವಹಿಸಬೇಕು ಎಂಬುದನ್ನು ನಾವು ಮರೆತಿದ್ದೆವು. ಧರ್ಮವನ್ನು ರಾಜಕೀಯದೊಂದಿಗೆ ಬೆರೆಸಿದ್ದಕ್ಕೆ ನಮಗೆ ತಕ್ಕ ಶಾಸ್ತಿಯಾಗಿದೆ. ಹಿಂದುತ್ವದ ಕಾರಣದಿಂದ ನಾವು (ಬಿಜೆಪಿ ಮತ್ತು ಶಿವಸೇನೆ) 25 ವರ್ಷದಿಂದ ಜೊತೆಗಿದ್ದೆವು. ಆದರೆ ಈಗಲೂ ನಾವು ಧರ್ಮವನ್ನು ಬದಲಿಸಿಲ್ಲ. ನಿನ್ನೆ, ಇವತ್ತು ಅಥವಾ ನಾಳೆ ಕೂಡಾ ನಾವು ಹಿಂದುಗಳಾಗಿಯೇ ಇರುತ್ತೇವೆ. ಆದರೆ ನಿಮ್ಮ ಕತೆಯೇನು ? ನೀವು ಅಧಿಕಾರಕ್ಕಾಗಿ ಬದ್ಧ ರಾಜಕೀಯ ವೈರಿಗಳೊಂದಿಗೆಯೂ ಕೈ ಜೋಡಿಸಿಲ್ಲವೇ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನೊಂದಿಗೆ ಕೈಜೋಡಿಸುತ್ತೇನೆ ಎಂದು ಬಾಳಾಸಾಹೇಬ್ ಠಾಕ್ರೆಯವರಿಗೆ ಆಶ್ವಾಸನೆ ನೀಡಿದ್ದೇನೆಯೇ ಎಂದು ಫಡ್ನವೀಸ್ ಪ್ರಶ್ನಿಸಿದ್ದಾರೆ. ಇಲ್ಲ, ನಾನು ಆಶ್ವಾಸನೆ ನೀಡಿಲ್ಲ. ಆದರೆ ನೀಡಿದ ಆಶ್ವಾಸನೆಗೆ ಬದ್ಧನಾಗಿರುತ್ತೇನೆ ಎಂದು ಸ್ಪಷ್ಟಪಡಿಸುತ್ತೇನೆ. ಬಿಜೆಪಿಯವರಂತೆ ಆಶ್ವಾಸನೆ ನೀಡಿ ಮೋಸ ಮಾಡುವುದಿಲ್ಲ. ರಿಕ್ಷಾದಲ್ಲಿ ಪ್ರಯಾಣಿಸುವ ಜನರಿಗಾಗಿ ನಮ್ಮ ಸರಕಾರವಿದೆ. ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸುವವರಿಗಾಗಿ ಅಲ್ಲ ಎಂದು ಠಾಕ್ರೆ ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ನೇತೃತ್ವದ ಸರಕಾರದಲ್ಲಿ ಶಿವಸೇನೆಯ ಸುಭಾಷ್ ದೇಸಾಯಿ ಕೈಗಾರಿಕಾ ಸಚಿವರಾಗಿದ್ದರು. ರಾಜ್ಯದಲ್ಲಿ ಈಗಿರುವ ಆರ್ಥಿಕ ಪರಿಸ್ಥಿತಿಗೆ ಅವರೂ ಸಮಾನ ಜವಾಬ್ದಾರರು ಎಂಬ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಠಾಕ್ರೆ, ನೋಟು ರದ್ದತಿ ಮತ್ತು ದೋಷಪೂರಿತ ಜಿಎಸ್‌ಟಿ ಆರ್ಥಿಕತೆಯನ್ನು ಹದಗೆಡಿಸಿದೆ ಎಂದರು. ಪೌರತ್ವ ಕಾಯ್ದೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದುಗಳನ್ನು ಇತರ ದೇಶಗಳಿಂದ ವಾಪಾಸು ಕರೆತಂದ ಬಳಿಕ ಅವರನ್ನು ಎಲ್ಲಿ ನೆಲೆಗೊಳಿಸುವುದು. ಈ ಬಗ್ಗೆ ನ್ಯಾಯಾಲಯವೇ ನಿರ್ಧರಿಸಲಿ ಎಂದುತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News