ಒಳಚರಂಡಿ ಸ್ವಚ್ಛತಾ ಕಾರ್ಮಿಕರ ಸಾವಿನ ಪ್ರಕರಣ: ಓರ್ವನ ಬಂಧನ

Update: 2019-12-24 14:24 GMT

ಮುಂಬೈ, ಡಿ.24: ವಸತಿ ಸಮುಚ್ಛಯದ ಒಳಚರಂಡಿ ತೊಟ್ಟಿಯನ್ನು ಸ್ವಚ್ಛಗೊಳಿಸುವ ಸಂದರ್ಭ ಮೂವರು ಕಾರ್ಮಿಕರು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಗೃಹನಿರ್ಮಾಣ ಮಂಡಳಿಯ ಸಿಬಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

 ಗಣೇಶ್‌ವಾಡಿ ಪ್ರದೇಶದಲ್ಲಿ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ ನಿರ್ಮಿಸಿದ್ದ ವೌರ್ಯ ಸೊಸೈಟಿ ಎಂಬ 22 ಮಹಡಿಯ ಕಟ್ಟಡದ ಒಳಚರಂಡಿ ಟ್ಯಾಂಕನ್ನು ಸೋಮವಾರ ಸ್ವಚ್ಛಗೊಳಿಸುವ ಸಂದರ್ಭ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ದುರ್ಘಟನೆಯ ಹಿನ್ನೆಲೆಯಲ್ಲಿ ಮಂಡಳಿಯ ಖಜಾಂಚಿ ಪವನ್ ವಿಶ್ವನಾಥ್ ಪಾಲವ್‌ನನ್ನು ಬಂಧಿಸಲಾಗಿದೆ ಎಂದು ಮುಂಬೈ ವಲಯ 6ರ ಪೊಲೀಸ್ ಆಯುಕ್ತ ಶಶಿಕುಮಾರ್ ಮೀನಾ ಹೇಳಿದ್ದಾರೆ. ಒಳಚರಂಡಿಯ ಟ್ಯಾಂಕನ್ನು ಸ್ವಚ್ಛಗೊಳಿಸುವ ಕಾರ್ಯದ ಅನುಭವವಿಲ್ಲದ ಮೂವರು ಖಾಸಗಿ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿದ ಆರೋಪದಡಿ ಪವನ್ ವಿಶ್ವನಾಥ್‌ನನ್ನು ಬಂಧಿಸಲಾಗಿದೆ ಎಂದವರು ಹೇಳಿದ್ದಾರೆ.

ಯಾವುದೇ ಸುರಕ್ಷಾ ಸಾಧನವಿಲ್ಲದೆ ಮೂವರು ಕಾರ್ಮಿಕರನ್ನು ಒಳಚರಂಡಿ ಟ್ಯಾಂಕ್‌ನೊಳಗೆ ಇಳಿಸಲಾಗಿದೆ. ಅಲ್ಲದೆ ಕೆಲಸ ನಡೆಯುತ್ತಿದ್ದ ಸಂದರ್ಭ ಆರೋಪಿ ಸ್ಥಳದಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಒಳಚರಂಡಿ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ತೀವ್ರ ಅಸ್ವಸ್ಥರಾಗಿದ್ದರು. ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಕಾರ್ಮಿಕರನ್ನು ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News