×
Ad

ಮೀರತ್ ಪ್ರವೇಶಿಸದಂತೆ ರಾಹುಲ್, ಪ್ರಿಯಾಂಕಾಗೆ ತಡೆ

Update: 2019-12-24 20:02 IST
ಫೈಲ್ ಫೋಟೊ

ಹೊಸದಿಲ್ಲಿ, ಡಿ.24: ಉತ್ತರಪ್ರದೇಶದ ಮೀರತ್‌ನಲ್ಲಿ ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಮೃತಪಟ್ಟವರ ಕುಟುಂಬವನ್ನು ಭೇಟಿಯಾಗಲು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾಧ್ರಾಗೆ ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

 ರಾಹುಲ್ ಮತ್ತು ಪ್ರಿಯಾಂಕಾ ಮಂಗಳವಾರ ಬೆಳಿಗ್ಗೆ ವಾಹನದಲ್ಲಿ ಮೀರತ್‌ನತ್ತ ಹೊರಟಿದ್ದರು. ಆದರೆ ಮೀರತ್‌ನಲ್ಲಿ ನಿಷೇಧಾಜ್ಞೆ ಇರುವುದರಿಂದ ಆ ಕಡೆ ಹೋಗದಂತೆ ಪೊಲೀಸರು ಹೇಳಿದ್ದರು. ಬಳಿಕ ರಾಹುಲ್ ಹಾಗೂ ಇತರ ಕಾಂಗ್ರೆಸಿಗರಿದ್ದ ವಾಹನಗಳ ಸಾಲು ದಿಲ್ಲಿಯತ್ತ ಹಿಂದಿರುಗಿದೆ ಎಂದು ಮೂಲಗಳು ತಿಳಿಸಿವೆ. ಮೀರತ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕನಿಷ್ಟ 6 ಮಂದಿ ಮೃತಪಟ್ಟಿದ್ದಾರೆ.

‘‘ನಿಮ್ಮ ಬಳಿ ಆದೇಶವಿದ್ದರೆ ತೋರಿಸಿ ಎಂದು ಪೊಲೀಸರನ್ನು ಪ್ರಶ್ನಿಸಿದೆವು. ಆದರೆ ಅವರು ಆದೇಶ ತೋರಿಸಲಿಲ್ಲ. ದಯವಿಟ್ಟು ಹಿಂದಿರುಗಿ ಎಂದು ಹೇಳಿದರು. ಮೂರು ಜನರಂತೆ ಪ್ರತ್ಯೇಕ ಪ್ರತ್ಯೇಕವಾಗಿ ತೆರಳುತ್ತೇವೆ ಎಂದು ಹೇಳಿದರೂ ಪೊಲೀಸರು ಕೇಳಲಿಲ್ಲ. ಭೇಟಿ ಕಾರ್ಯಕ್ರಮವನ್ನು ಮುಂದೂಡುವಂತೆ ತಮಗೆ ತಿಳಿಸಲಾಯಿತು’’ ಎಂದು ರಾಹುಲ್ ಹೇಳಿದ್ದಾರೆ. ಪೌರತ್ವ ಕಾಯ್ದೆ ವಿರೋಧಿಸಿ ಬಿಜ್ನೋರ್‌ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ಮೃತಪಟ್ಟಿದ್ದ ಇಬ್ಬರ ಮನೆಗೆ ಶನಿವಾರ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ್ದರು. ಆಗ ಪೊಲೀಸರು ಅವರನ್ನು ತೆದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News