ಸಶಸ್ತ್ರ ಪಡೆಗಳ ಮುಖ್ಯಸ್ಥರ ನೇಮಕಕ್ಕೆ ಸಚಿವ ಸಂಪುಟ ಅನುಮೋದನೆ
ಹೊಸದಿಲ್ಲಿ, ಡಿ.24: ಭಾರತದ ಮೂರೂ ಸಶಸ್ತ್ರ ಪಡೆಗಳಿಗೆ ಒಬ್ಬ ಮುಖ್ಯಸ್ಥನನ್ನು ನೇಮಕ ಮಾಡುವ ಪ್ರಸ್ತಾವಕ್ಕೆ ಮಂಗಳವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ದೊರಕಿದೆ.
ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆ ಈ ಮೂರೂ ಪಡೆಗಳಿಗೆ ಮುಖ್ಯಸ್ಥನಾಗಿರುವ ಅಧಿಕಾರಿ ನಾಲ್ಕು ನಕ್ಷತ್ರಗಳ ದಳಪತಿಯಾಗಲಿದ್ದು (ಫೋರ್ ಸ್ಟಾರ್ ಜನರಲ್) ಸರಕಾರಕ್ಕೆ ಸಲಹೆ ನೀಡುವ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ‘ಸಮಾನರಲ್ಲಿ ಪ್ರಥಮ’ ಅಧಿಕಾರಿಯಾಗಿರುವ ಇವರು ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಸಹಕ್ರಿಯತೆಯನ್ನು ಒದಗಿಸಲಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ನೂತನವಾಗಿ ಆರಂಭಿಸುವ ಮಿಲಿಟರಿ ವ್ಯವಹಾರ ವಿಭಾಗದ ಮುಖ್ಯಸ್ಥರಾಗಿರುವ ಇವರು, ಸೇವಾ ಮುಖ್ಯಸ್ಥರ ಸಂಬಳ ಹಾಗೂ ಭತ್ತೆಗಳನ್ನು ಪಡೆಯಲಿದ್ದಾರೆ. ಅಲ್ಲದೆ ಸಿಬ್ಬಂದಿ ಸಮಿತಿಯ ಮುಖ್ಯಸ್ಥರಾಗಲಿದ್ದು ಬಾಹ್ಯಾಕಾಶ ಮತ್ತು ಸೈಬರ್‌ಸ್ಪೇಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪಡೆಗಳು ಇವರ ನೇರ ನಿಯಂತ್ರಣದಲ್ಲಿರುತ್ತದೆ.
ಸೇನಾಪಡೆಯ ಮುಖ್ಯಸ್ಥರಾಗಿ ಡಿಸೆಂಬರ್ 31ಕ್ಕೆ ಮೂರು ವರ್ಷಗಳ ಸೇವಾವಧಿ ಪೂರೈಸಲಿರುವ ಜನರಲ್ ಬಿಪಿನ್ ರಾವತ್ ನೂತನ ಸಿಡಿಎಸ್ ಆಗಿ ನೇಮಕಗೊಳ್ಳುವ ನಿರೀಕ್ಷೆಯಿದೆ. ರಾವತ್ ಅವರ ಸ್ಥಾನದಲ್ಲಿ ಲೆಜ ಮನೋಜ್ ಮುಕುಂದ್ ನರವಣೆ ನೇಮಕವಾಗಲಿದ್ದಾರೆ. ಸಿಡಿಎಸ್ ಹುದ್ದೆಯ ಕಾರ್ಯವ್ಯಾಪ್ತಿ, ಅಧಿಕಾರ, ಜವಾಬ್ದಾರಿ ಹಾಗೂ ಕಾರ್ಯವಿಧಾನದ ಬಗ್ಗೆ ನಿರ್ಧರಿಸಲು ಸರಕಾರ ಕಳೆದ ಆಗಸ್ಟ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. 1999ರ ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ, 2001ರಲ್ಲಿ ಪರಿಶೀಲನಾ ಸಮಿತಿಯ ವರದಿಯಲ್ಲಿ ಸಿಡಿಎಸ್ ಹುದ್ದೆಗೆ ಬಲವಾಗಿ ಒತ್ತಾಯಿಸಲಾಗಿತ್ತು.