​ಸಚಿನ್ ಭದ್ರತೆ ಹಿಂಪಡೆದ ಮಹಾರಾಷ್ಟ್ರ ಸರ್ಕಾರ

Update: 2019-12-25 04:39 GMT

ಮುಂಬೈ, ಡಿ.25: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಿದ್ದ 'ಎಕ್ಸ್' ವರ್ಗದ ಭದ್ರತಾ ವ್ಯವಸ್ಥೆಯನ್ನು ಸರ್ಕಾರ ಹಿಂಪಡೆದಿದೆ. ಆದರೆ ಶಿವಸೇನೆ ಶಾಸಕ ಆದಿತ್ಯ ಠಾಕ್ರೆಯವರ ಭದ್ರತೆಯನ್ನು 'ವೈ+' ವರ್ಗದಿಂದ 'ಝೆಡ್' ವರ್ಗಕ್ಕೆ ಮೇಲ್ದರ್ಜೆಗೇರಿಸಿದೆ.  45ಕ್ಕೂ ಹೆಚ್ಚು ಮಂದಿ ಅತಿಗಣ್ಯರ ಭದ್ರತಾ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಪುನರ್ರಚಿಸಿದ್ದು, ಇದರಲ್ಲಿ ಮೇಲಿನ ಬದಲಾವಣೆಗಳು ಸೇರಿವೆ.

ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಪ್ರಕಾರ, ತೆಂಡೂಲ್ಕರ್ ಅವರಿಗೆ ಎಕ್ಸ್ ವರ್ಗದ ಭದ್ರತೆ ಹಾಗೂ ದಿನವಿಡೀ ಪೊಲೀಸ್ ಕಾವಲು ನೀಡಲಾಗಿತ್ತು. ಇದೀಗ ಅದನ್ನು ಹಿಂಪಡೆಯಲಾಗಿದೆ. ಆದರೆ ಪೊಲೀಸ್ ಬೆಂಗಾವಲು ಮುಂದುವರಿಯಲಿದೆ. ಇತರರ ಪೈಕಿ ಬಿಜೆಪಿ ಮುಖಂಡ ಏಕನಾಥ್ ಖಾಡ್ಸೆಗೆ ಈ ಹಿಂದೆ ಇದ್ದ ವೈ ವರ್ಗದ ಭದ್ರತೆ ಹಾಗೂ ಬೆಂಗಾವಲು ಸೌಲಭ್ಯ ಹಿಂಪಡೆಯಲಾಗಿದೆ. ಉತ್ತರ ಪ್ರದೇಶದ ಮಾಜಿ ಗವರ್ನರ್ ರಾಮ ನಾಯ್ಕ ಅವರಿಗೆ ಇದ್ದ ಝೆಡ್+ ಭದ್ರತೆಯನ್ನು ವೈ ವರ್ಗಕ್ಕೆ ಇಳಿಸಲಾಗಿದೆ.

ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆಯವರ ಭದ್ರತೆ ವೈ+ನಿಂದ ಝೆಡ್ ವರ್ಗಕ್ಕೆ ಮೇಲ್ದರ್ಜೆಗೇರಿದೆ. ಅಪಾಯ ಸಾಧ್ಯತೆ ಗ್ರಹಿಕೆ ಸಮಿತಿಯ ಸಭೆಯಲ್ಲಿ ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಗುಪ್ತಚರ ವಿಭಾಗ, ಸ್ಥಳೀಯ ಪೊಲೀಸ್ ಠಾಣೆ ಮತ್ತು ಸ್ವತಂತ್ರವಾಗಿ ಪಡೆದ ಮಾಹಿತಿಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಒಟ್ಟು 97 ಮಂದಿಯ ಭದ್ರತಾ ವ್ಯವಸ್ಥೆಯನ್ನು ಪರಾಮರ್ಶಿಸಲಾಗಿದ್ದು, 29 ಮಂದಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ ಅಥವಾ ಕಡಿಮೆ ಮಾಡಲಾಗಿದೆ. ಉಳಿದಂತೆ 16 ಮಂದಿಯ ಭದ್ರತಾ ವ್ಯವಸ್ಥೆಯನ್ನು ಹಿಂಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News