ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು: ಅಧಿಕಾರಿಗಳ ಹೇಳಿಕೆ

Update: 2019-12-25 18:11 GMT

ಲಕ್ನೊ, ಡಿ.25: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಕಾನ್ಪುರದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರು ಗುಂಡು ಹಾರಿಸುತ್ತಿರುವ ವೀಡಿಯೊ ದೃಶ್ಯಾವಳಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನ್ಪುರದ ಹಿರಿಯ ಪೊಲೀಸ್ ಅಧೀಕ್ಷಕ ಅನಂತ್‌ದೇವ್ ತಿವಾರಿ, ಪೊಲೀಸರು ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದಿದ್ದಾರೆ.

ಪೊಲೀಸರು ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡು ಹಾರಾಟದಿಂದ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ತಿವಾರಿ ಹೇಳಿದ್ದಾರೆ. ಕಾನ್ಪುರದಲ್ಲಿ ಓರ್ವ ವ್ಯಕ್ತಿ ಪೊಲೀಸರ ಗುಂಡೇಟಿನಿಂದ ಮೃತಪಟ್ಟಿರುವ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ತಿವಾರಿ, ಮರಣೋತ್ತರ ಪರೀಕ್ಷೆಯಿಂದ ವಾಸ್ತವಾಂಶ ಹೊರಬೀಳಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಪ್ರತಿಭಟನೆ ಸಂದರ್ಭ ಪೊಲೀಸರ ಗೋಲೀಬಾರ್‌ನಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ. ಆಕಸ್ಮಿಕವಾಗಿ ಗುಂಡೇಟು ತಗಲಿ ಸಾವು ಸಂಭವಿಸಿರಬಹುದು ಎಂದು ಡಿಜಿಪಿ ಒಪಿ ಸಿಂಗ್ ಹೇಳಿದ್ದಾರೆ. ಈ ಮಧ್ಯೆ, ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಶಾಮ್ಲಿ ಪೊಲೀಸರು ಪಿಎಫ್‌ಐ ಸಂಘಟನೆಯ ನಾಲ್ವರು ಸದಸ್ಯರನ್ನು ಬಂಧಿಸಿದ್ದು ಇದರೊಂದಿಗೆ ಡಿಸೆಂಬರ್ 19ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಪಿಎಫ್‌ಐ ಸದಸ್ಯರ ಸಂಖ್ಯೆ 7ಕ್ಕೇರಿದೆ. ಅಲ್ಲದೆ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲೂ ನಿರ್ಧರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News