ಪ್ರತಿಭಟನಾಕಾರರ ವಿರುದ್ಧ ಉ.ಪ್ರ.ಸರಕಾರದ ಪ್ರತೀಕಾರಕ್ಕೆ ಮಾಗ್ಸೆಸೆ ಪುರಸ್ಕೃತ ಪಾಂಡೆ ವಿಷಾದ

Update: 2019-12-26 14:14 GMT
ಫೋಟೊ ಕೃಪೆ: twitter. com/sandeep4justice

ಲಕ್ನೋ,ಡಿ.26: ಸಿಎಎ ವಿರುದ್ಧ ಪ್ರತಿಭಟನಾನಿರತರ ವಿರುದ್ಧ ರಾಜ್ಯ ಸರಕಾರದ ಪ್ರತೀಕಾರದ ಕ್ರಮವು ಖಂಡನೀಯವಾಗಿದೆ ಎಂದು ಗುರುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಬಹಿರಂಗ ಪತ್ರವನ್ನು ಬರೆದಿರುವ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಂದೀಪ ಪಾಂಡೆ ಅವರು,ಹೆಚ್ಚು ವಿವೇಚನೆ ಮತ್ತು ಸಂಯಮ ಪ್ರದರ್ಶಿಸುವಂತೆ ಕರೆ ನೀಡಿದ್ದಾರೆ. ಆದಿತ್ಯನಾಥ್ ಜೊತೆ ಭೇಟಿಗೆ ಅವಕಾಶ ಕೋರಿ ಪಾಂಡೆ ಅವರು ಡಿ.21ರಂದು ಮುಖ್ಯಮಂತ್ರಿ ಕಚೇರಿಗೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ಲಭಿಸದ ಹಿನ್ನೆಲೆಯಲ್ಲಿ ಈ ಬಹಿರಂಗ ಪತ್ರವನ್ನು ಬರೆದಿದ್ದಾರೆ.

‘ಅರಾಜಕತೆವಾದಿ ಶಕ್ತಿಗಳು’ ಹಿಂಸಾಚಾರಕ್ಕೆ ಕಾರಣವಾಗಿದ್ದರೂ ಶಾಂತಿಯುತ ಪ್ರತಿಭಟನಾ ಮಾರ್ಗಗಳನ್ನು ಅನುಸರಿಸಿದ್ದ ಮತ್ತು ದೇಶದ ಸಂವಿಧಾನದಲ್ಲಿ ವಿಶ್ವಾಸ ಹೊಂದಿರುವ ಜನರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಿಕ್ಷಣತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಪಾಂಡೆ ಪತ್ರದಲ್ಲಿ ಆರೋಪಿಸಿದ್ದಾರೆ.

ಅರಾಜಕತೆವಾದಿ ಶಕ್ತಿಗಳನ್ನು ಗುರುತಿಸುವಲ್ಲಿ ನಿಮ್ಮ ಪೊಲೀಸರ ಅಸಮರ್ಥತೆಯಿಂದಾಗಿ ಸಂವಿಧಾನದಲ್ಲಿ ವಿಶ್ವಾಸ ಹೊಂದಿರುವ ಸಾಮಾಜಿಕ ಕಾರ್ಯಕರ್ತರನ್ನು ನೀವು ಜೈಲಿಗೆ ಕಳುಹಿಸದರೆ ಸರಕಾರದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಶಾಂತಿಯುತ ಮಾರ್ಗಗಳು ನಿರ್ಮೂಲನಗೊಳ್ಳುತ್ತವೆ ಮತ್ತು ಅರಾಜಕತೆವಾದಿ ಶಕ್ತಿಗಳು ಸುಲಭವಾಗಿ ಜನರನ್ನು ದಾರಿ ತಪ್ಪಿಸುತ್ತವೆ ಎಂದು ಅವರು ಹೇಳಿದ್ದಾರೆ.

 ಲಕ್ನೋದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭ ಹಿಂಸಾಚಾರಕ್ಕಾಗಿ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ಹೆಚ್ಚಿನ ಆರೋಪಿಗಳು ಮುಸ್ಲಿಮರಾಗಿದ್ದಾರೆ. ರಾಜ್ಯದಲ್ಲಿ ಗುಂಡೇಟಿನಿಂದ ಮೃತಪಟ್ಟಿರುವ ಎಲ್ಲ ಹದಿನಾರೂ ಯುವಕರು ಮುಸ್ಲಿಮರೇ ಆಗಿದ್ದಾರೆ ಎಂದು ಬೆಟ್ಟು ಮಾಡಿರುವ ಅವರು,ಕ್ರಮ ಕೈಗೊಳ್ಳುವಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯವಿದ್ದರೆ ಅವರು ಸರಕಾರ-ಆಡಳಿತದಲ್ಲಿ ವಿಶ್ವಾಸವಿಡಬೇಕು ಎಂದು ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಬಳಿಕ ಈಗ ಬಿಜೆಪಿ ನಾಯಕರು ಚಿಂತಿಸದಂತೆ ದೇಶದ ಮುಸ್ಲಿಮ್ ಪ್ರಜೆಗಳನ್ನು ಕೇಳಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

 ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆಗಾಗಿ ದೇಶದ ಇತರ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಯಿಲ್ಲದೆ ಲಕ್ಷಾಂತರ ಜನರು ಸೇರಿದ್ದರು,ಆದರೆ ಉತ್ತರ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಏಕೆ ಎಂದು ಪ್ರಶ್ನಿಸುವ ಅಗತ್ಯವಿದೆ ಎಂದು ಪಾಂಡೆ ಹೇಳಿದ್ದಾರೆ. ಲಕ್ನೋದಲ್ಲಿ ಗರಿಷ್ಠ ಹಿಂಸಾಚಾರ ಸಂಭವಿಸಿದ್ದ ಡಿ.19ರಂದು ನ್ಯಾಯವಾದಿ ಮುಹಮ್ಮದ್ ಶುಐಬ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್.ದಾರಾಪುರಿ ಅವರನ್ನು ಬಂಧಿಸಲಾಗಿತ್ತು. ತನ್ನಂತಹ ಹಲವರನ್ನು ಗೃಹಬಂಧನ ದಲ್ಲಿರಿಸಲಾಗಿತ್ತು. ಕಾಂಗ್ರೆಸ್ ವಕ್ತಾರೆ ಸದಫ್ ಜಾಫರ್ ಅವರು ತನ್ನ ಬಂಧನಕ್ಕೆ ಮುನ್ನ ಕೊನೆಯ ಕ್ಷಣದವರೆಗೂ ಹಿಂಸಾಚಾರದಲ್ಲಿ ತೊಡಗಿದ್ದ ಯುವಕರನ್ನು ಸಮಾಧಾನಿಸಲು ಪ್ರಯತ್ನಿಸುತ್ತಿದ್ದರು ಎಂದಿರುವ ಪಾಂಡೆ,ಇವರೆಲ್ಲ ಶಾಂತಿಯತ ಪ್ರತಿಭಟನೆಯಲ್ಲಿ ತೊಡಗಿದ್ದರು ಎಂದು ನಾನು ಆತ್ಮವಿಶ್ವಾಸದೊಂದಿಗೆ ಹೇಳಬಲ್ಲೆ. ಇದನ್ನು ನಿಮ್ಮ ವಿವೇಚನೆಗೆ ಬಿಡುತ್ತೇನೆ. ಸರಿ ಎಂದು ನಿಮಗನ್ನಿಸಿದರೆ ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಮತ್ತು ಸಾಮಾಜಿಕ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳಿ ಮತ್ತು ಅಮಾಯಕರನ್ನು ಬಿಡುಗಡೆಗೊಳಿಸಿ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News