×
Ad

ದಿಲ್ಲಿಯ ತುಕ್ಡೆ ತುಕ್ಡೆ ಗ್ಯಾಂಗ್‌ಗೆ ತಕ್ಕ ಪಾಠ ಕಲಿಸಬೇಕು: ಅಮಿತ್ ಶಾ

Update: 2019-12-26 20:30 IST

ಹೊಸದಿಲ್ಲಿ, ಡಿ. 26: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ದಿಲ್ಲಿಯಲ್ಲಿ ವದಂತಿ ಹರಡುತ್ತಿರುವುದಕ್ಕೆ ಕಾಂಗ್ರೆಸ್ ಅನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ ಶಾ, ದಿಲ್ಲಿಯಲ್ಲಿ ಕಳೆದ ಒಂದು ವಾರದಿಂದ ನಡೆದ ಹಿಂಸಾಚಾರಕ್ಕೆ ಪ್ರತಿ ಪಕ್ಷ ಕಾರಣ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ದಿಲ್ಲಿಯ ತುಕ್ಡೆ ತುಕ್ಡೆ ಗ್ಯಾಂಗ್‌ಗೆ ತಕ್ಕ ಪಾಠ ಕಲಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಹೊಸದಿಲ್ಲಿಯ ನಡೆದ ಕಾರ್ಯಕ್ರಮವೊಂದರಲ್ಲಿ ಜನರಲ್ಲಿ ಆಗ್ರಹಿಸಿದರು.

‘‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಚರ್ಚಿಸಲಾಗಿದೆ. ಯಾರೊಬ್ಬರೂ ಏನನ್ನೂ ಹೇಳಿಲ್ಲ (ವಿರೋಧಿಸಿಲ್ಲ). ಒಂದು ಬಾರಿ ಅದು ಹೊರಬಿದ್ದ (ಸಂಸತ್ತಿನಿಂದ) ಬಳಿಕ ಅವರು ಜನರನ್ನು ದಾರಿ ತಪ್ಪಿಸಲು ಆರಂಭಿಸಿದ್ದಾರೆ’’ ಎಂದು ಅಮಿತ್ ಶಾ ಹೇಳಿದರು.

‘‘ಕಾಂಗ್ರೆಸ್ ನೇತೃತ್ವದ ತುಕ್ಡೆ ತುಕ್ಡೆ ಗ್ಯಾಂಗ್‌ಗೆ ತಕ್ಕ ಪಾಠ ಕಲಿಸಲು ಇದು ಸೂಕ್ತ ಸಮಯ ಎಂದು ನಾನು ಹೇಳಲು ಬಯಸುತ್ತೇನೆ. ನಗರದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಅವರು ಕಾರಣರಾಗಿದ್ದಾರೆ. ದಿಲ್ಲಿಯ ಜನರು ಅವರಿಗೆ ತಕ್ಕ ಪಾಠ ಕಲಿಸಬೇಕು’’ ಎಂದು ಅವರು ಹೇಳಿದರು.

ಕಳೆದ ತಿಂಗಳ ಆರಂಭದಲ್ಲಿ ಸಂಸತ್ತಿನಲ್ಲಿ ಅನುಮೋದನೆಗೊಂಡ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹರಡಿರುವುದು ಕಾಂಗ್ರೆಸ್ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದರು.

‘‘ಎಲ್ಲ ಮುಸ್ಲಿಮರನ್ನು ಬಂಧನ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಎಂಬ ವದಂತಿಯನ್ನು ಕಾಂಗ್ರೆಸ್, ಅದರ ಮಿತ್ರ ಪಕ್ಷಗಳು ಹಾಗೂ ನಗರ ನಕ್ಸಲರು ಹರಡುತ್ತಿದ್ದಾರೆ. ದೇಶದ ಮುಸ್ಲಿಮರನ್ನು ಯಾವುದೇ ಬಂಧನ ಕೇಂದ್ರಗಳಿಗೆ ಕಳುಹಿಸುವುದಿಲ್ಲ’’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿ ವಿಧಾನ ಸಭೆ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ನಡೆದ ಬೃಹತ್ ರ್ಯಾಲಿಯ ಸಂದರ್ಭ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News