ಪೌರತ್ವ ತಿದ್ದುಪಡಿ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರನ ನಿವಾಸದ ಮೇಲೆ ಎನ್‌ಐಎ ದಾಳಿ

Update: 2019-12-26 15:14 GMT
ಸಾಂದರ್ಭಿಕ ಚಿತ್ರ

ಗುವಾಹಟಿ, ಡಿ. 26: ಅಸ್ಸಾಂ ಹೋರಾಟಗಾರ ಅಖಿಲ್ ಗೊಗೋಯಿ ಅವರ ಗುವಾಹಟಿಯಲ್ಲಿರುವ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ದಾಳಿ ನಡೆಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ನಡುವೆ ಈ ತಿಂಗಳ ಆರಂಭದಲ್ಲಿ ಕಠಿಣ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಗೊಗೋಯಿ ಅವರನ್ನು ಬಂಧಿಸಲಾಗಿತ್ತು. ನಿಷೇಧಿತ ಮಾವೋವಾದಿ ಗುಂಪಿನೊಂದಿಗೆ ನಂಟು ಹೊಂದಿರುವ ಆರೋಪಕ್ಕೆ ಅಖಿಲ್ ಗೊಗೋಯಿ ಒಳಗಾಗಿದ್ದರು. ರಾಜ್ಯದಲ್ಲಿ ಮಾವೋವಾದಿಗಳು ನೆಲೆ ಸ್ಥಾಪಿಸಲು ನೆರವಾಗಲು ಅಸ್ಸಾಂನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಚಳವಳಿಯನ್ನು ಅವರು ಬಳಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಎನ್‌ಐಎಯ ಅಧಿಕಾರಿಗಳು ಆರೋಪಿಸಿದ್ದಾರೆ.

ಇಂದು ಅಖಿಲ್ ಗೊಗೊಯಿ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಆರ್‌ಟಿಐ ಸಹಿತ ಹಲವು ದಾಖಲೆಗಳು ಹಾಗೂ ಹಳೆಯ ಲ್ಯಾಪ್‌ಟಾಪ್ ಅನ್ನು ಎನ್‌ಐಎ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅವರ ಪತ್ನಿ ಕರಬಿ ಗೊಗೋಯಿ ಅವರು ತಿಳಿಸಿದ್ದಾರೆ. ಅಖಿಲ್ ಗೊಗೋಯಿ ಕಳೆದ ಬಾರಿ ಜೈಲಿನಲ್ಲಿ ಇದ್ದಾಗ ದಿನಚರಿ ಬರೆದ ಡೈರಿಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಜೈಲಿನಲ್ಲಿ ಅನುಭವದ ಕುರಿತು ಪುಸ್ತಕ ಬರೆಯಲು ಅವರು ಬಯಸಿದ್ದರು. ಒಂದು ಪ್ರತಿ ಅಲ್ಲಿರಿಸುವಂತೆ ನಾವು ಮನವಿ ಮಾಡಿದ್ದೆವು. ಆದರೆ, ಅವರು ಅವಕಾಶ ನೀಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

 ರಾಜ್ಯದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ನಡುವೆ ಡಿಸೆಂಬರ್ 12ರಂದು ಅಖಿಲ್ ಗೊಗೋಯಿ ಅವರನ್ನು ಬಂಧಿಸಲಾಗಿತ್ತು. 5 ದಿನಗಳ ನಂತರ ಅವರನ್ನು ಗುವಾಹಟಿಯ ವಿಶೇಷ ನ್ಯಾಯಾಲಯ ಎನ್‌ಐಎ ಕಸ್ಟಡಿಗೆ ನೀಡಿತ್ತು. ಎನ್‌ಐಎ ಕಸ್ಟಡಿ ಅಂತ್ಯಗೊಂಡ ಬಳಿಕ ಅವರನ್ನು ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News