×
Ad

ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳಿಗೆ ಎಂಐಟಿ ವಿದ್ಯಾರ್ಥಿಗಳು, ಶಿಕ್ಷಕರ ಬೆಂಬಲ

Update: 2019-12-26 21:40 IST
file photo

ಬೋಸ್ಟನ್ (ಅಮೆರಿಕ), ಡಿ. 26: ಭಾರತದ ನೂತನ ಪೌರತ್ವ ಕಾನೂನು ಮತ್ತು ರಾಷ್ಟ್ರೀಯ ನಾಗರಿಕರ ಪಟ್ಟಿ (ಎನ್‌ಆರ್‌ಸಿ) ಜೊತೆಯಾಗಿ ಸರಿಪಡಿಸಲಾಗದ ರೀತಿಯಲ್ಲಿ ಭಾರತೀಯ ಪೌರತ್ವವನ್ನು ಮರು ನಿರೂಪಿಸುತ್ತವೆ ಎಂದು ಅಮೆರಿಕದ ಮ್ಯಾಸಚೂಸಿಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ 130ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮತ್ತು ಹಳೆ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ. ಭಾರತದಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಅವರು ಈ ಮೂಲಕ ಬೆಂಬಲ ಸೂಚಿಸಿದ್ದಾರೆ.

ದೇಶದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಅಡಿಪಾಯವು ‘ಅಪಾಯದಲ್ಲಿದೆ’ ಎಂದು ಅವರು ಹೇಳಿದ್ದಾರೆ.

ದಿಲ್ಲಿಯ ಜಾಮಿಯಾ ಮಿಲ್ಲಿಯ ಇಸ್ಲಾಮಿಯ ಮತ್ತು ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆದಿದೆಯೆನ್ನಲಾದ ಪೊಲೀಸ್ ದೌರ್ಜನ್ಯ ಹಾಗೂ ದೇಶದ ಇತರ ಭಾಗಗಳಲ್ಲಿ ನಡೆದ ಪ್ರತಿಭಟನೆಗಳನ್ನು ದಮನಿಸಲು ಪೊಲೀಸರು ತೆಗೆದುಕೊಂಡ ಕ್ರಮಗಳನ್ನು ಅವರು ಖಂಡಿಸಿದ್ದಾರೆ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಸ್ತೆಗಿಳಿದವರನ್ನು ಅಭಿನಂದಿಸಿದ್ದಾರೆ.

ನೂತನ ಪೌರತ್ವ ಕಾನೂನು ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ವಿರುದ್ಧ ತಾರತಮ್ಯ ನಡೆಸುತ್ತದೆ ಎಂದು ಆರೋಪಿಸಿ ಭಾರತದಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜದ ಇತರ ವರ್ಗಗಳ ಜನರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಕಾರರ ವಿರುದ್ಧ ಪೊಲೀಸರು ಬಲಪ್ರಯೋಗಿಸುವುದನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿದಂತೆ ಜಗತ್ತಿನಾದ್ಯಂತದ ವಿದ್ಯಾರ್ಥಿಗಳು ಈಗಾಗಲೇ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಬಹುತ್ವ, ವೈವಿಧ್ಯತೆ ಸಂವಿಧಾನ, ದೇಶದ ಮಾರ್ಗದರ್ಶಕ ತತ್ವಗಳು

‘‘ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ಪಟ್ಟಿ (ಎನ್‌ಆರ್‌ಸಿ) ಜೊತೆಯಾಗಿ ಸರಿಪಡಿಸಲಾಗದ ರೀತಿಯಲ್ಲಿ ಭಾರತೀಯ ಪೌರತ್ವ ಮತ್ತು ರಾಷ್ಟ್ರೀಯತೆಯನ್ನು ಮರುನಿರೂಪಿಸುತ್ತವೆ. ಅವುಗಳು ಬಹುತ್ವ ಮತ್ತು ವೈವಿಧ್ಯತೆಗಳಿಗೆ ತಿಲಾಂಜಲಿ ಕೊಡುತ್ತವೆ. ಬಹುತ್ವ ಮತ್ತು ವೈವಿಧ್ಯತೆ ಸಂವಿಧಾನ ಮತ್ತು ದೇಶದ ಮಾರ್ಗದರ್ಶಕ ತತ್ವಗಳಾಗಿದ್ದು, 70 ವರ್ಷಗಳಿಂದ ಅವುಗಳನ್ನು ರಕ್ಷಿಸಿಕೊಂಡು ಬರಲಾಗಿದೆ. ಈ ತತ್ವಗಳೇ ಸಿಎಎ ಮತ್ತು ಎನ್‌ಆರ್‌ಸಿಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಒತ್ತಾಯಿಸುವ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತಿವೆ’’ ಎಂದು ಎಂಐಟಿ ವಿದ್ಯಾರ್ಥಿಗಳು ಹೇಳಿಕೆಗಳಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News