×
Ad

ಏಶ್ಯದಲ್ಲಿ ಮಾರಣಹೋಮಗೈದ ಸುನಾಮಿಗೆ 15 ವರ್ಷ

Update: 2019-12-26 21:53 IST

ಫಾಂಗ್ ನಗರ (ಥಾಯ್ಲೆಂಡ್), ಡಿ. 26: ಹಿಂದೂ ಮಹಾ ಸಾಗರದ ಅಡಿಯಿಂದ ಎದ್ದ ದೈತ್ಯ ಸುನಾಮಿ ಅಲೆಗಳು ಸುತ್ತಮುತ್ತಲಿನ ದೇಶಗಳ ಕರಾವಳಿಗಳನ್ನು ಮುಳುಗಿಸಿ, ಸಾವಿನ ರುದ್ರನರ್ತನ ಮಾಡಿದ ಘಟನೆಗೆ ಇಂದು 15 ವರ್ಷ.

ಜಗತ್ತಿನ ಮಹಾ ಪ್ರಾಕೃತಿಕ ವಿಪತ್ತುಗಳ ಪೈಕಿ ಒಂದಾಗಿರುವ ಅಂದಿನ ವಿಪತ್ತಿನಲ್ಲಿ ಪ್ರಾಣಗಳನ್ನು ಕಳೆದುಕೊಂಡವರ ಸಂಖ್ಯೆ 2.30 ಲಕ್ಷಕ್ಕೂ ಹೆಚ್ಚು.

2004 ಡಿಸೆಂಬರ್ 26ರ ಬೆಳಗ್ಗೆ ಉತ್ತರ ಸುಮಾತ್ರ ದ್ವೀಪದ ಸಾಗರದಲ್ಲಿ ಸಂಭವಿಸಿದ ರಿಕ್ಟರ್ ಮಾಪಕದಲ್ಲಿ 9.1ರ ತೀವ್ರತೆಯ ಅತ್ಯಂತ ಪ್ರಬಲ ಭೂಕಂಪವು 17.4 ಮೀಟರ್‌ಗಳಷ್ಟು ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಆ ದೈತ್ಯ ಅಲೆಗಳು ಇಂಡೋನೇಶ್ಯ, ಶ್ರೀಲಂಕಾ, ಭಾರತ, ಥಾಯ್ಲೆಂಡ್ ಮತ್ತು ಇತರ 9 ದೇಶಗಳ ಕರಾವಳಿಗಳನ್ನು ಮುಳುಗಿಸಿದವು.

ಸುನಾಮಿ ದಾಳಿಯಲ್ಲಿ ಇಂಡೋನೇಶ್ಯದ ಅಸೆಹ್ ಪ್ರಾಂತದಲ್ಲಿ ಗ್ರಾಮಗಳಿಗೆ ಗ್ರಾಮಗಳೇ ಕೊಚ್ಚಿಕೊಂಡು ಹೋಗಿದ್ದವು. ಆ ಭೀಕರ ದುರಂತದಲ್ಲಿ 1,25,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬಳಿಕ, ಆ ಗ್ರಾಮಗಳನ್ನು ಪುನರ್ನಿರ್ಮಿಸಲಾಗಿದೆ. ಅತ್ಯಪಾಯಕಾರಿ ವಲಯದಲ್ಲಿ ಮನೆಗಳು, ಅಂಗಡಿಗಳು, ಸರಕಾರಿ ಕಚೇರಿಗಳು ಮತ್ತು ಶಾಲಾ ಕಟ್ಟಡಗಳು ಸೇರಿದಂತೆ 25,600 ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಅಸೆಹ್ ಪ್ರಾಂತದ ಹಲವು ಕಡೆಗಳಲ್ಲಿ ಶತಮಾನದ ಆರಂಭದ ಮಹಾ ಸುನಾಮಿಗೆ ಬಲಿಯಾದ ಜನರಿಗೆ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಥಾಯ್ಲೆಂಡ್‌ನಲ್ಲಿ 5,300ಕ್ಕೂ ಅಧಿಕ ಜನರು ಸುನಾಮಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅಂಡಮಾನ್ ಸಮುದ್ರದಲ್ಲಿರುವ ದ್ವೀಪಗಳಿಗೆ ಬಂದ ಪ್ರವಾಸಿಗರು ಮೃತರಲ್ಲಿ ಸೇರಿದ್ದಾರೆ. ಥಾಯ್ಲೆಂಡ್‌ನ ಹಲವು ಭಾಗಗಳಲ್ಲಿ ಸುನಾಮಿ ಬಲಿಪಶುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶ್ರೀಲಂಕಾದಲ್ಲಿ 35,000ಕ್ಕೂ ಅಧಿಕ ಮಂದಿ ಹಿಂದೂ ಮಹಾಸಾಗರದ ಸುನಾಮಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ 10,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

 ‘ಸುನಾಮಿ ಅಲೆಗಳು ಈಗಲೂ ಕನಸಿನಲ್ಲಿ ಬರುತ್ತವೆ’

‘‘ಅದು ಈಗಲೂ ನನ್ನನ್ನು ಕಾಡುತ್ತಿದೆ. ನಾನು ಅದನ್ನು ಯಾವಾಗಲೂ ನೆನಪಿನಲ್ಲಿಡುತ್ತೇನೆ’’ ಎಂದು ಥಾಯ್ಲೆಂಡ್‌ನ 28 ವರ್ಷದ ಮಹಿಳೆ ಸುವಾನೀ ಮಲಿವಾನ್ ಹೇಳುತ್ತಾರೆ.

15 ವರ್ಷಗಳ ಹಿಂದೆ ದೈತ್ಯ ಸುನಾಮಿ ಅಲೆಗಳು ಫಾಂಗ್ ನಗರ ಪ್ರಾಂತಕ್ಕೆ ಅಪ್ಪಳಿಸಿದಾಗ ಅವರ ತಂದೆ, ತಾಯಿ ಮತ್ತು ಇತರ ಐವರು ಸಂಬಂಧಿಕರು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋದರು ಹಾಗೂ ಯಾವತ್ತೂ ಹಿಂದಿರುಗಲಿಲ್ಲ.

‘‘ಕೆಲವು ಸಲ ಸುನಾಮಿ ಅಲೆಗಳು ಧಾವಿಸಿಕೊಂಡು ಬರುತ್ತಿರುವ ಕನಸುಗಳು ನನಗೆ ಬೀಳುತ್ತವೆ. ನಾನು ಈಗಲೂ ಅದಕ್ಕೆ ಹೆದರಿಕೊಂಡೇ ಬದುಕುತ್ತಿದ್ದೇನೆ’’ ಎಂದು ಅವರು ಹೇಳಿದರು. ‘‘ನಾನು ಬೇರೆ ಎಲ್ಲಾದರು ಹೋಗಬೇಕೆಂದು ಕೊಳ್ಳುತ್ತೇನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಯಾಕೆಂದರೆ ನಾನು ಹುಟ್ಟಿದ್ದು ಇಲ್ಲಿ. ನನ್ನ ತಂದೆ ಮತ್ತು ತಾಯಿ ಮರಣಿಸಿದ್ದು ಇಲ್ಲಿ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News