ಕ್ರಿಮಿನಲ್ ದಾಖಲೆಯಿಲ್ಲ,ಪ್ರತಿಭಟನೆಯಲ್ಲಿ ಭಾಗಿಯಲ್ಲ, ಆದರೂ ಮುಸ್ಲಿಮರಿಂದ ಮುಚ್ಚಳಿಕೆ ಬರೆಸುತ್ತಿರುವ ಉ.ಪ್ರ.ಪೊಲೀಸರು!

Update: 2019-12-27 12:38 GMT
ಸಾಂದರ್ಭಿಕ ಚಿತ್ರ

ಲಕ್ನೋ,ಡಿ.27: ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಮಾಡಿ ಕಾರ್ಯಾಚರಣೆ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರು ಪ್ರತಿಭಟನೆಯಿಂದ ದೂರವಿದ್ದವರನ್ನೂ ಬಿಡುತ್ತಿಲ್ಲ. ಲಕ್ನೋಕ್ಕೆ ಸಮೀಪದ ಮೂರು ಗ್ರಾಮಗಳಲ್ಲಿ ಪೊಲೀಸರು ಸಿಪಿಸಿಯ ಕಲಂ 107/116ರ ಅಡಿ ಕನಿಷ್ಠ 100 ಮುಸ್ಲಿಂ ಪುರುಷರಿಂದ ತಲಾ 50,000 ರೂ.ಗಳ ಮುಚ್ಚಳಿಕೆಗಳನ್ನು ಬಲವಂತದಿಂದ ಪಡೆದುಕೊಂಡಿದ್ದಾರೆ. ತಾವು ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈ ಮುಚ್ಚಳಿಕೆಗಳಲ್ಲಿ ಅವರಿಂದ ಬರೆಸಿಕೊಳ್ಳಲಾಗಿದೆ. ಈಗ ಅವರೆಲ್ಲ ಕನಿಷ್ಠ ಮುಂದಿನ ಆರು ತಿಂಗಳವರೆಗೆ ಪ್ರತಿ 15 ದಿನಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ ಎಂದು 'scroll.in' ವರದಿ ಮಾಡಿದೆ.

ಈ ಕಲಂ ಶಂಕಿತ ವ್ಯಕ್ತಿಗಳ ವಿರುದ್ಧ ನಿರೋಧಕ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸರಿಗೆ ಅವಕಾಶ ನೀಡುತ್ತದೆ. ಶಾಂತಿಭಂಗವನ್ನುಂಟು ಮಾಡಬಹುದಾದ ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿಯ ಯಾವುದೇ ಶಂಕಿತ ವ್ಯಕ್ತಿಯ ವಿರುದ್ಧ ಕಾರ್ಯಕಾರಿ ದಂಡಾಧಿಕಾರಿಗಳು ಸಿಪಿಸಿಯ ಈ ಕಲಂ ಅನ್ನು ಹೊರಿಸಬಹುದು. ಇದಕ್ಕೆ ಮುನ್ನ ಅವರು ಅಗತ್ಯ ಮಾಹಿತಿಗಳನ್ನು ಪಡೆದುಕೊಂಡು ಸದ್ರಿ ವ್ಯಕ್ತಿಯ ವಿರುದ್ಧ ನಿರೋಧಕ ಕ್ರಮವನ್ನು ಕೈಗೊಳ್ಳಲು ಸಾಕಷ್ಟು ಕಾರಣಗಳಿವೆ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಆದರೆ ಹಿಂದೆಂದೂ ಕಾನೂನನ್ನು ಉಲ್ಲಂಘಿಸಿರದವರ ಮೇಲೆ ಸಾಮೂಹಿಕವಾಗಿ ಈ ಕಲಂ ಹೇರಿರುವುದು ಈ ಗ್ರಾಮಗಳ ನಿವಾಸಿಗಳಿಗೆ ಆಘಾತವನ್ನುಂಟು ಮಾಡಿದೆ.

ಪೊಲೀಸರ ಈ ಕ್ರಮಕ್ಕೆ ಗುರಿಯಾದವರಲ್ಲಿ ವಿದ್ಯಾರ್ಥಿಗಳು,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವರು, ಸರಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರು,ವ್ಯಾಪಾರಿಗಳು,ದಿನಗೂಲಿ ಕಾರ್ಮಿಕರು ಮುಂತಾದವರು ಸೇರಿದ್ದಾರೆ. ಪೊಲೀಸರು ಯಾರನ್ನೂ ಬಿಟ್ಟಿಲ್ಲ, ಯುವಕರಿಂದ ಹಿಡಿದು ವೃದ್ಧರವರೆಗೂ ಎಲ್ಲರಿಂದಲೂ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ ಎಂದು 'scroll.in' ವರದಿ ತಿಳಿಸಿದೆ.

ಗ್ರಾಮದ ಮುಸ್ಲಿಮರನ್ನು ಕ್ರಿಮಿನಲ್‌ಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಕಮ್ಲಾಬಾದ್ ಬಧಾವ್ಲಿ ಗ್ರಾಮಸ್ಥರು ಸುದ್ದಿಗಾರರ ಬಳಿ ನೋವು ತೋಡಿಕೊಂಡಿದ್ದಾರೆ. ಗ್ರಾಮದಲ್ಲಿಯ 25 ಮುಸ್ಲಿಮ್ ಕುಟುಂಬಗಳ ಪೈಕಿ 20 ಕುಟುಂಬಗಳಿಗೆ ಸೇರಿದ 37 ಪುರುಷರಿಗೆ, ಕೆಲ ಪ್ರಕರಣಗಳಲ್ಲಿ ಕುಟುಂಬದಲ್ಲಿಯ ಎಲ್ಲ ಪುರುಷ ಸದಸ್ಯರಿಗೆ ಈ ಕಲಂ ಅಡಿ ನೋಟಿಸ್‌ಗಳನ್ನು ಪೊಲೀಸರು ಜಾರಿಗೊಳಿಸಿದ್ದಾರೆ. ಲಕ್ನೋದಲ್ಲಿ ಪ್ರತಿಭಟನೆ, ಬಳಿಕ ಭೀಕರ ಹಿಂಸಾಚಾರ ಸಂಭವಿಸಿದ್ದರೂ ನೋಟಿಸ್ ಸ್ವೀಕರಿಸಿರುವ 37 ಜನರು ಸೇರಿದಂತೆ ಈ ಗ್ರಾಮದ ಒಬ್ಬನೇ ಒಬ್ಬ ವ್ಯಕ್ತಿ ಅತ್ತ ಸುಳಿದಿರಲಿಲ್ಲ ಎಂದು ವರದಿ ತಿಳಿಸಿದೆ

ಡಿ.23ರಂದು ಪೊಲೀಸರು ಕಲಂ 107/116ರ ಅಡಿ ಆರೋಪ ಹೊರಿಸಲ್ಪಟ್ಟಿರುವರ ಹೆಸರು ಮತ್ತು ವಿಳಾಸಗಳಿದ್ದ ಪಟ್ಟಿಯೊಂದಿಗೆ ಗ್ರಾಮದ ಮನೆಮನೆಗಳಿಗೆ ತೆರಳಿ ಅವರಿಂದ ಸಹಿ ಪಡೆದುಕೊಂಡಿದ್ದರು. ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರೆಲ್ಲರಿಗೂ ಡಿ.26ರಂದು ಸೂಚಿಸಲಾಗಿತ್ತು. ಅಲ್ಲಿಯವರೆಗೂ ತಾವು ಯಾವುದಕ್ಕೆ ಸಹಿ ಮಾಡಿದ್ದೇವೆ ಎನ್ನುವುದೇ ಈ ಜನರಿಗೆ ತಿಳಿದಿರಲಿಲ್ಲ. ನೋಟಿಸಿನಲ್ಲಿಯ ಆರೋಪಗಳು ತಮ್ಮ ಹೆಸರಿನಲ್ಲಿ ಕ್ರಿಮಿನಲ್ ದಾಖಲೆಯಾಗಲಿವೆಯೇ ಎನ್ನುವುದು ಸ್ಪಷ್ಟವಾಗಿಲ್ಲವಾದ್ದರಿಂದ ಅವರು ಕಂಗಾಲಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಮತ್ತು ಸರಕಾರಿ ಉದ್ಯೋಗಗಳಿಗೆ ಪ್ರಯತ್ನಿಸುತ್ತಿರುವ ಯುವಜನರು ಇನ್ನಷ್ಟು ಆತಂಕಗೊಂಡಿದ್ದಾರೆ.

ನಿರೋಧಕ ಕಲಮ್‌ಗಳಡಿಯ ಆರೋಪಗಳು ದೋಷನಿರ್ಣಯವಾಗುವುದಿಲ್ಲ ಮತ್ತು ಸಾಮಾನ್ಯವಾಗಿ ಇವು ಕ್ರಿಮಿನಲ್ ದಾಖಲೆಗಳಾಗುವುದಿಲ್ಲವಾದರೂ ಈ ಬಗ್ಗೆ ಪರಸ್ಪರ ವಿರುದ್ಧವಾದ ಕಾನೂನು ಅಭಿಪ್ರಾಯಗಳಿವೆ. ಕಲಂ 107ರಡಿ ಕಾನೂನು ಕ್ರಮ ಜರುಗಿಲ್ಪಟ್ಟ ವ್ಯಕ್ತಿ ಸರಕಾರಿ ಉದ್ಯೋಗಕ್ಕೆ ಅನರ್ಹ ಎಂದು ಛತ್ತೀಸ್‌ಗಡ ಹೈಕೋರ್ಟ್ ತೀರ್ಪೊಂದರಲ್ಲಿ ಹೇಳಿದೆ.

ಕ್ರಿಮಿನಲ್ ದಾಖಲೆಯಿಲ್ಲದಿದ್ದರೂ ಕಲಂ 107/116 ಹೊರಿಸಿರುವುದರಿಂದ ಭವಿಷ್ಯದಲ್ಲಿ ಇವರು ಪೊಲೀಸರಿಗೆ ಸುಲಭದ ತುತ್ತಾಗಲಿದ್ದಾರೆ. ಶಾಂತಿಭಂಗಕ್ಕೆ ಪ್ರಯತ್ನದ ಶಂಕೆಯಲ್ಲಿ ಪೊಲೀಸರು ಇವರನ್ನು ಯಾವಾಗ ಬೇಕಾದರೂ ಎತ್ತಿ ಹಾಕಿಕೊಳ್ಳಬಹುದು.

‘ಪೊಲೀಸರು ನಮ್ಮನ್ನು ಬಂಧಿಸಿಲ್ಲ, ಥಳಿಸಿಯೂ ಇಲ್ಲ. ಅವರು ನಮ್ಮಿಂದ ಸಾರ್ವಜನಿಕ ಆಸ್ತಿಗೆ ನಷ್ಟವನ್ನು ತುಂಬಿಕೊಳ್ಳುವಂತಿಲ್ಲ. ಆದರೆ ಅವರು ನಮ್ಮ ಜೀವನದುದ್ದಕ್ಕೂ ಕಪ್ಪುಚುಕ್ಕಿಯನ್ನಿಟ್ಟಿದ್ದಾರೆ. ನಾವೆಲ್ಲರೂ ಕ್ರಿಮಿನಲ್ ದಾಖಲೆಯನ್ನು ಹೊಂದಲಿದ್ದೇವೆ. ನಾವು ಮುಸ್ಲಿಮರು ಎನ್ನುವುದನ್ನು ಬಿಟ್ಟರೆ ಇದಕ್ಕೆ ಬೇರೆ ಯಾವುದೇ ಕಾರಣವಿಲ್ಲ’ ಎಂದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ 20ರ ಹರೆಯದ ಯುವಕನೋರ್ವ ಹೇಳಿದ. ಈತನ ಸಹೋದರ ವಿಶ್ವವಿದ್ಯಾಲಯಕ್ಕೆ ಮೊದಲ ರ್ಯಾಂಕ್‌ನೊಂದಿಗೆ ಪದವಿ ಪಡೆದಿದ್ದಾನೆ. ಪೊಲೀಸರು ಆತನ ವಿರುದ್ಧವೂ ಕಲಂ 107/116 ಹೊರಿಸಿದ್ದಾರೆ.

ತಮ್ಮ ಗ್ರಾಮದಲ್ಲಿ ಶೇ.30ರಷ್ಟು ಮುಸ್ಲಿಮ್ ಜನಸಂಖ್ಯೆಯಿದೆ. ಆದರೂ ಎಂದೂ ಕೋಮು ಉದ್ವಿಗ್ನತೆ ಉಂಟಾಗಿಲ್ಲ. ಗ್ರಾಮಕ್ಕೆ ಸಮೀಪದ ಬಕ್ಷಿ ಕಾ ತಾಲಾಬ್‌ನಲ್ಲಿ ನಡೆಯುವ ರಾಮಲೀಲಾದಲ್ಲಿ ರಾಮನ ಪಾತ್ರ ವಹಿಸುವುದು ಯಾವಾಗಲೂ ಮುಸ್ಲಿಮರೇ ಆಗಿದ್ದಾರೆ ಎಂದು ಗ್ರಾಮದಲ್ಲಿಯ ಹಿಂದುಗಳು ಹೇಳಿದ್ದಾರೆ.

ಕಮ್ಲಾಬಾದ ಬಧಾವ್ಲಿಗೆ ಸಮೀಪದ ಮುಸ್ಲಿಮ್ ನಗರದಲ್ಲಿ 20 ಮುಸ್ಲಿಮ್ ಪುರುಷರು ಮತ್ತು ಮಧಿಯಾಂ ಗ್ರಾಮದ 150 ಮುಸ್ಲಿಮರೂ ಪೊಲೀಸರ ಕೃಪೆಯಿಂದಾಗಿ ಈಗ ತಮ್ಮ ತಲೆಯ ಮೇಲೆ ಸಿಪಿಸಿಯ ಈ ಕಲಮ್‌ಗಳನ್ನು ಹೊತ್ತುಕೊಳ್ಳುವಂತಾಗಿದೆ. ಶೇರ್ವಾನಿ ನಗರ ಮತ್ತು ಭೋಲಾಪುರ ಗ್ರಾಮಗಳಲ್ಲಿಯೂ ಮುಸ್ಲಿಮರಿಗೆ ನೋಟಿಸ್‌ಗಳು ಜಾರಿಯಾಗಿವೆ. ಇತರ ಗ್ರಾಮಗಳ ಕುರಿತು ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ ಎಂದು 'scroll.in' ವರದಿ ತಿಳಿಸಿದೆ.

ಇದು ನಮ್ಮ ಬದುಕನ್ನು ಶಾಶ್ವತವಾಗಿ ಹಾಳುಮಾಡಬಹುದು. ಮುಖ್ಯಮಂತ್ರಿ ಆದಿತ್ಯನಾಥರು ಹೇಳಿದ್ದ ಪ್ರತೀಕಾರ ಇದೇನಾ ಎಂಬ ಗ್ರಾಮದ ಹತಾಶ ಯುವಕನೋರ್ವನ ಪ್ರಶ್ನೆಗೆ ಸುದ್ದಿಗಾರರ ಬಳಿ ಉತ್ತರವಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News