ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್‌ಗೆ 1.3 ಕೋ.ರೂ.ಹೆಚ್ಚುವರಿ ಪರಿಹಾರ

Update: 2019-12-27 16:03 GMT

ತಿರುವನಂತಪುರ,ಡಿ.27: ಬೇಹುಗಾರಿಕೆ ಹಗರಣ ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲ್ಪಟ್ಟಿದ್ದ ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರು ದಾಖಲಿಸಿರುವ ಮೊಕದ್ದಮೆಯನ್ನು ಇತ್ಯರ್ಥಗೊಳಿಸಲು ಅವರಿಗೆ 1.3 ಕೋ.ರೂ.ಹೆಚ್ಚುವರಿ ಪರಿಹಾರವನ್ನು ಪಾವತಿಸಲು ಕೇರಳ ಸಂಪುಟವು ನಿರ್ಧರಿಸಿದೆ.

ತನ್ನ ಅಕ್ರಮ ಬಂಧನ ಮತ್ತು ಕಿರುಕುಳಕ್ಕಾಗಿ ಹೆಚ್ಚಿನ ಪರಿಹಾರವನ್ನು ಕೋರಿ ನಾರಾಯಣನ್ ತಿರುವನಂತಪುರದ ಅಧೀನ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಿದ್ದರು.

ವಿಷಯವನ್ನು ಪರಿಶೀಲಿಸುವ ಮತ್ತು ಮೊಕದ್ದಮೆಯನ್ನು ರಾಜಿಯಲ್ಲಿ ಇತ್ಯರ್ಥಗೊಳಿಸುವ ಕಾರ್ಯವನ್ನು ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಜಯಕುಮಾರ ಅವರಿಗೆ ವಹಿಸಲಾಗಿದ್ದು,ನಾರಾಯಣನ್‌ಗೆ ಹೆಚ್ಚುವರಿ ಪರಿಹಾರವನ್ನು ನೀಡುವಂತೆ ಅವರು ಸರಕಾರಕ್ಕೆ ಶಿಫಾರಸು ಮಾಡಿದ್ದರು. ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕ ಇತ್ಯರ್ಥ ಒಪ್ಪಂದವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.

ಏನಿದು ಬೇಹುಗಾರಿಕೆ ಹಗರಣ?

ನಾರಾಯಣನ್ ಮತ್ತು ಇತರ ಆರು ಜನರು ಇಸ್ರೋದ ಕೃಯೋಜನಿಕ್ ಇಂಜಿನ್ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ರಷ್ಯಾ,ಪಾಕಿಸ್ತಾನದ ಐಎಸ್‌ಐ ಮತ್ತು ಇತರ ದೇಶಗಳಿಗಾಗಿ ಗೂಢಚರ್ಯೆ ನಡೆಸುತ್ತಿದ್ದ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದರೆಂದು ಆರೋಪಿಸಲಾಗಿತ್ತು. ನಾರಾಯಣನ್ ಹಾಗೂ ಬೆಂಗಳೂರಿನ ಉದ್ಯಮಿಗಳಾದ ಚಂದ್ರಶೇಖರನ್ ಮತ್ತು ಎಸ್.ಕೆ.ಶರ್ಮಾ ಅವರನ್ನು ಬೇಹುಗಾರಿಕೆ ಆರೋಪದಲ್ಲಿ ನವಂಬರ್ 1994ರಲ್ಲಿ ಬಂಧಿಸಲಾಗಿತ್ತು. ಪ್ರಕರಣವನ್ನು ಬಳಿಕ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಎಪ್ರಿಲ್ 1996ರಲ್ಲಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ಸಲ್ಲಿಸಿದ್ದ ತನ್ನ ಅಂತಿಮ ವರದಿಯಲ್ಲಿ ಸಿಬಿಐ,ಆರೋಪಗಳನ್ನು ಪುಷ್ಟೀಕರಿಸಲು ಸಾಕ್ಷಾಧಾರಗಳ ಕೊರತೆಯಿದೆ ಎಂದು ತಿಳಿಸಿತ್ತು.

 ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಕೇರಳ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಮಾಜಿ ಡಿಜಿಪಿ ಹಾಗೂ ಮಾಜಿ ಎಸ್‌ಪಿಗಳಾದ ಕೆ.ಕೆ.ಜೋಶುವಾ ಮತ್ತು ಎಸ್.ವಿಜಯನ್ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು. ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮತ್ತು ಶಿಸ್ತುಕ್ರಮವನ್ನು ಕೋರಿ ನಾರಾಯಣನ್ 2015ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಈ ಅಧಿಕಾರಿಗಳು ತನ್ನನ್ನು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಿದ್ದರು ಎಂದು ಅವರು ಆರೋಪಿಸಿದ್ದರು.

ನಾರಾಯಣನ್ ಕೇರಳ ಪೊಲೀಸರು ಮಾಡಿದ್ದ ಆರೋಪಗಳ ಬಲಿಪಶುವಾಗಿದ್ದರು ಎಂದು ಸೆಪ್ಟೆಂಬರ್ 2018ರಲ್ಲಿ ತನ್ನ ತೀರ್ಪಿನಲ್ಲಿ ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು,ಅವರ ಬಂಧನವು ಅನಗತ್ಯವಾಗಿತ್ತು ಎಂದು ಹೇಳಿತ್ತಲ್ಲದೆ ಪ್ರಕರಣದಲ್ಲಿ ಅವರಿಗೆ ಮಾನಸಿಕ ಹಿಂಸೆಯನ್ನು ನೀಡಿದ್ದಕ್ಕಾಗಿ 50 ಲ.ರೂ.ಪರಿಹಾರ ಪಾವತಿಸುವಂತೆ ಆದೇಶಿಸಿತ್ತು. ಇದರ ಜೊತೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಅವರಿಗೆ 10 ಲ.ರೂ.ಗಳ ಪರಿಹಾರಕ್ಕೆ ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News