ದೇಶದ ಅತಿ ದೊಡ್ಡ ಬಂಧನ ಕೇಂದ್ರ ನಿರ್ಮಾಣಕ್ಕೆ ಕೇಂದ್ರದಿಂದ 46 ಕೋ. ರೂ.: ತರುಣ್ ಗೊಗೋಯಿ

Update: 2019-12-27 18:18 GMT

ಗುವಾಹಟಿ, ಡಿ. 27: ದೇಶದಲ್ಲಿ ಬಂಧನ ಕೇಂದ್ರಗಳಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಪಾದನೆಯನ್ನು ಪ್ರಶ್ನಿಸಿರುವ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯಿ, ಅಟಲ್ ಬಿಹಾರ್ ವಾಜಪೇಯಿ ಕಾಲದಲ್ಲೇ ಬಂಧನ ಕೇಂದ್ರಗಳನ್ನು ಆರಂಭಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿತ್ತು ಎಂದಿದ್ದಾರೆ. ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ವಿದೇಶಿಗರ ಕಾರಾಗೃಹ ಶಿಕ್ಷೆ ಪೂರ್ಣಗೊಂಡ ಬಳಿಕ ಇರಿಸಲು ಬಂಧನ ಕೇಂದ್ರಗಳನ್ನು ನಿರ್ಮಿಸುವ ಚಿಂತನೆ ಮೊದಲು ಹುಟ್ಟಿರುವುದು ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ 3,000 ಜನರ ಸಾಮರ್ಥ್ಯದ ದೇಶದ ಅತಿ ದೊಡ್ಡ ಬಂಧನ ಕೇಂದ್ರವನ್ನು ನಿರ್ಮಿಸಲು 46 ಕೋಟಿ ರೂಪಾಯಿ ನೀಡಿದ್ದರು. ಆದುದರಿಂದ ದೇಶದಲ್ಲಿ ಬಂಧನ ಕೇಂದ್ರಗಳಿಲ್ಲ ಎಂದು ಅವರು ಹೇಳಲು ಹೇಗೆ ಸಾಧ್ಯ ? ಗುವಾಹಟಿ ಉಚ್ಚ ನ್ಯಾಯಾಲಯ ‘ವಿದೇಶಿಗರು ಎಂದು ಘೋಷಿಸಿದ’ವರಿಗೆ ಅಗತ್ಯ ಇರುವ ಬಂಧನ ಕೇಂದ್ರಗಳನ್ನು ನನ್ನ ಆಡಳಿತ ನಿರ್ಮಿಸಿದೆ. ಆದರೆ, ಮುಖ ಉಳಿಸಿಕೊಳ್ಳುವುದಕ್ಕಾಗಿ ನರೇಂದ್ರ ಮೋದಿ ಅವರು ಬಂಧನ ಕೇಂದ್ರಗಳು ಇರುವುದನ್ನು ನಿರಾಕರಿಸುತ್ತಿದ್ದಾರೆ ಎಂದು ತರುಣ್ ಗೊಗೋಯಿ ಹೇಳಿದ್ದಾರೆ. 

2014ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಬಂಧನ ಕೇಂದ್ರಗಳು ಹಾಗೂ ಅಕ್ರಮ ವಲಸಿಗರ ಬಗ್ಗೆ ರಾಜ್ಯ ಸರಕಾರಗಳೊಂದಿಗೆ ಗಂಭೀರವಾಗಿ ಚರ್ಚೆ ನಡೆಸಿಲ್ಲ. ಬಾಂಗ್ಲಾದೇಶಕ್ಕೂ ಈ ಬಗ್ಗೆ ವಿಷಯ ತಿಳಿಸಿಲ್ಲ. ಈಗ ಅವರು ನಾವು ಉದಾರವಾದಿ ದೇಶ ಎಂಬ ಅಭಿಪ್ರಾಯ ವ್ಯಕ್ತಪಡಿಸಲು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು. ಅಕ್ರಮ ವಲಸಿಗರನ್ನು ಗುರುತಿಸುವ ಹಾಗೂ ಅವರನ್ನು ಬಂಧನದಲ್ಲಿ ಇರಿಸುವ ಪ್ರಕ್ರಿಯೆಯಲ್ಲಿ ಧರ್ಮ ಪ್ರಮುಖ ಅಂಶ ಆಗಬಾರದು. ಬಂಧನ ಕೇಂದ್ರದಲ್ಲಿ ಮುಸ್ಲಿಮರಿಗಿಂತ ಹಿಂದುಗಳೇ ಹೆಚ್ಚಿದ್ದಾರೆ ಎಂಬುದು ವಾಸ್ತವ. ಆದುದರಿಂದ ಈ ಹಿಂದೂಗಳನ್ನು ಯಾರು ಬಂಧಿಸುತ್ತಿದ್ದಾರೆ ? ಅದು ಬಿಜೆಪಿ. ಆಡಳಿತದ ಸಂದರ್ಭ ಹಿಂದೂ ಮುಸ್ಲಿಂ ಎಂಬ ವ್ಯತ್ಯಾಸ ಇಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News