ಅವನೇ ಶ್ರೀಮನ್ನಾರಾಯಣ: ಅಪರೂಪದ ಫ್ಯಾಂಟಸಿ ಸಿನೆಮಾ

Update: 2019-12-28 18:25 GMT

ಕನ್ನಡ ಸಿನೆಮಾಗಳ ಪ್ರೇಕ್ಷಕರಿಗೆ ರಕ್ಷಿತ್ ಶೆಟ್ಟಿಯ ಸಿನೆಮಾ ಅಭಿರುಚಿ ಹೇಗಿರುತ್ತದೆ ಎನ್ನುವುದು ತಿಳಿದಿರುತ್ತದೆ. ಹಾಗಾಗಿ ಮೇಕಿಂಗ್ ವಿಚಾರದಲ್ಲಿ ಬಹಳಷ್ಟು ನಿರೀಕ್ಷೆ ಇರಿಸಿಕೊಂಡು ಚಿತ್ರಮಂದಿರಕ್ಕೆ ಹೋದವರಿಗೆ ತೃಪ್ತಿ ನೀಡುವಂಥ ಸಿನೆಮಾವಾಗಿ ಮೂಡಿ ಬಂದಿದೆ ‘ಅವನೇ ಶ್ರೀಮನ್ನಾರಾಯಣ’. ಅಮರಾವತಿ ಎನ್ನುವುದು ದರೋಡೆಕೋರರಿಗೆ ಹೆಸರಾದ ಊರು. ಅಲ್ಲಿನ ದೊರೆ ರಾಮರಾಮ. ಆತನ ಸಾವಿನ ಬಳಿಕ ತುಕಾರಾಮ ಮತ್ತು ಜಯರಾಮ ಎನ್ನುವ ಇಬ್ಬರಿಗೆ ಉತ್ತರಾಧಿಕಾರಕ್ಕಾಗಿ ವೈಷಮ್ಯ. ಇಬ್ಬರಿಗೂ ಅಮರಾವತಿಯಿಂದಲೇ ಕೊಳ್ಳೆಯಾಗಿರುವ ಸಂಪತ್ತನ್ನು ಹುಡುಕಿ ತಮ್ಮದಾಗಿಸುವ ಗುರಿ. ಕೊಳ್ಳೆ ಹೋಗಿ 15 ವರ್ಷಗಳ ಬಳಿಕವೂ ಪತ್ತೆಯಾಗದ ಆ ನಿಧಿಯನ್ನು ಹುಡುಕಲೆಂದೇ ಪ್ರತ್ಯಕ್ಷವಾಗುವ ಪೊಲೀಸ್ ಅಧಿಕಾರಿ ಶ್ರೀಮನ್ನಾರಾಯಣ. ಆತ ಆ ನಿಧಿಯನ್ನು ಪತ್ತೆ ಮಾಡುತ್ತಾನೆಯೇ? ಅದನ್ನು ಸಹೋದರರಲ್ಲಿ ಯಾರ ಕೈಗೆ ಸೇರಿಸುತ್ತಾನೆ? ಅಲ್ಲಿ ‘ಹಾಯ್ ಅಮರಾವತಿ’ ಪತ್ರಿಕೆಯ ವರದಿಗಾರ್ತಿಗೆ ಏನು ಕೆಲಸ? ಆಕೆ ಪೊಲೀಸ್ ಅಧಿಕಾರಿಯ ಕೊಲೆಗೆ ಯತ್ನಿಸುವುದೇಕೆ? ಮೊದಲಾದ ಪ್ರಶ್ನೆಗಳನ್ನು ಮೂಡಿಸುವ ಘಟನೆಗಳು ಮತ್ತು ಅವುಗಳಿಗೆ ಉತ್ತರ ನೀಡುವ ಸನ್ನಿವೇಶಗಳು ಚಿತ್ರದಲ್ಲಿವೆ. ಅವಷ್ಟನ್ನು ತಿಳಿಯಬೇಕಾದರೆ ನೀವು ಥಿಯೇಟರ್‌ಗೆ ಹೋಗಿ ಮೂರು ಗಂಟೆ ಆರು ನಿಮಿಷಗಳ ಕಾಲ ಚಿತ್ರವನ್ನು ನೋಡಲೇಬೇಕು.

 ಹಳೆಯ ಕಾಲದ ಫ್ಯಾಂಟಸಿ ಚಿತ್ರಗಳಲ್ಲಿ ನಿಧಿ ಹುಡುಕಾಟದ ಕತೆಗಳು ಸಾಮಾನ್ಯ. ಆದರೆ ಇದು ಮೊದಲೇ ಕಳವಾದ ಸಂಪತ್ತನ್ನು ಎಲ್ಲಿ ಅಡಗಿಸಿದ್ದಾರೆ ಎಂದು ಪತ್ತೆ ಮಾಡುವ ಕತೆ. ಸುಮಾರು ಎಂಬತ್ತರ ದಶಕದಲ್ಲಿ ನಡೆಯುವ ಕತೆಯಾದ ಕಾರಣ ಚಿತ್ರದ ಕಾಸ್ಟ್ಯೂಮ್‌ಗಳು, ಲೊಕೇಶನ್‌ಗಳು ಆಸಕ್ತಿದಾಯಕವಾಗಿವೆ. ಕೆಲವೊಂದು ಹೊಂದಿಕೊಳ್ಳದ ಹಾಗೆ ಕಾಣಿಸಿದರೂ ಅವುಗಳನ್ನು ಪ್ರಶ್ನೆ ಮಾಡುವಂತಿಲ್ಲ. ಯಾಕೆಂದರೆ ಇದು ಫ್ಯಾಂಟಸಿ. ಹಾಸ್ಯದೊಂದಿಗೆ ಆ್ಯಕ್ಷನ್ ಮಾಡುವ ರಕ್ಷಿತ್ ಶೆಟ್ಟಿಯ ನಟನಾ ಶೈಲಿ ಇಲ್ಲಿ ಮುಂದುವರಿದಿದೆ. ಆ್ಯಕ್ಷನ್ ಈ ಹಿಂದೆಂದಿಗಿಂತಲೂ ಹೆಚ್ಚಾಗಿಯೇ ಇದೆ ಮತ್ತು ಅದು ಚೆನ್ನಾಗಿಯೂ ಇದೆ. ಆದರೆ ಹಾಸ್ಯ ಎಲ್ಲ ಕಡೆಯೂ ವರ್ಕೌಟ್ ಆದ ಹಾಗಿಲ್ಲ.

ಶಾನ್ವಿ ಶ್ರೀವಾತ್ಸವ್ ಸಿಕ್ಕ ಪಾತ್ರವನ್ನು ಚೊಕ್ಕದಾಗಿ ಅಭಿನಯಿಸಲು ಪ್ರಯತ್ನಿಸಿದ್ದಾರೆ. ಆದರೆ ಚಿತ್ರದಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಬಾಲಾಜಿ ಮನೋಹರ್ ಎನ್ನದೇ ವಿಧಿಯಿಲ್ಲ. ತಾನು ದೇಹದಲ್ಲಿ ಮಾತ್ರವಲ್ಲ ಪ್ರತಿಭೆಯಲ್ಲಿಯೂ ದೈತ್ಯ ಎನ್ನುವುದನ್ನು ಅವರು ಚಿತ್ರದಿಂದ ಚಿತ್ರಕ್ಕೆ ಸಾಬೀತು ಪಡಿಸುತ್ತಲೇ ಇದ್ದಾರೆ. ಅವರ ಸಹೋದರ ತುಕಾರಾಮನ ಸಂಕೀರ್ಣ ಭಾವಗಳಿಗೆ ಜೀವ ನೀಡುವಲ್ಲಿ ಪ್ರಮೋದ್ ಶೆಟ್ಟಿ ಗೆದ್ದಿದ್ದಾರೆ. ಪೊಲೀಸ್ ಅಚ್ಯುತಣ್ಣನಾಗಿ ಅಚ್ಯುತ್ ಕುಮಾರ್ ಅವರು ಎಂದಿನಂತೆ ಲವಲವಿಕೆ ತುಂಬಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆಯವರ ಬ್ಯಾಂಡ್ ಮಾಸ್ಟರ್ ಪಾತ್ರ ಅವರು ಎಂಥ ಕಲಾವಿದ ಎನ್ನುವುದನ್ನು ನಿರೂಪಿಸುವಂತಿದೆ. ಗುಪ್ತಾನಂದ ಸ್ವಾಮಿಯಾಗಿ ಎರಡು ಬಾರಿ ಕಾಣಿಸಿಕೊಳ್ಳುವ ಯೋಗರಾಜ್ ಭಟ್, ಕೌಬಾಯ್ ಕೃಷ್ಣನಾಗಿ ಮೂರು ಬಾರಿ ಪ್ರತ್ಯಕ್ಷವಾಗುವ ರಿಷಭ್ ಶೆಟ್ಟಿ ಅವರ ಇಮೇಜ್‌ನಿಂದಾಗಿ ನೆನಪಲ್ಲಿ ಉಳಿಯುತ್ತಾರೆ.

ಆದರೆ ಪೆಂಡುಲಮ್ ಮೂಲಕ ನಿಧಿ ಪತ್ತೆ ಮಾಡುವ ರಘು ರಾಮನಕೊಪ್ಪ, ಕಣ್ಣು ಮತ್ತು ಧ್ವನಿಯಲ್ಲೇ ಅಭಿನಯಿಸಿರುವ ಎಂ.ಕೆ ಮಠ, ಪತ್ರಕರ್ತ ವಿಜಯ್ ಚೆಂಡೂರ್ ಮೊದಲಾದವರು ತಮ್ಮ ಪಾತ್ರಗಳ ಮೂಲಕ ಸೆಳೆಯುತ್ತಾರೆ. ಉಳಿದಂತೆ ಮಧುಸೂದನ್ ರಾವ್, ಅಶ್ವಿನ್ ಹಾಸನ್, ಚಂದನ್ ಆಚಾರ್, ರಘು ಪಾಂಡೇಶ್ವರ ಮೊದಲಾದ ಕಲಾವಿದರ ದಂಡೇ ಚಿತ್ರದಲ್ಲಿದೆ. ಸಾಮಾನ್ಯ ಪ್ರೇಕ್ಷಕರಿಗೆ ರಕ್ಷಿತ್‌ನ ಹಾಸ್ಯ, ಅದ್ಭುತ ಸಾಹಸ ಸನ್ನಿವೇಶ ಮತ್ತು ಹ್ಯಾಂಡ್ಸಪ್ ಹಾಡು ಬಿಟ್ಟರೆ ಆಕರ್ಷಕ ಕತೆಯ ಕೊರತೆ ಕಾಡುತ್ತದೆ. ನವ ನಿರ್ದೇಶಕನಾಗಿ ಸಚಿನ್ ರವಿಯ ಹೆಸರು ಕಂಡರೂ ಚಿತ್ರದಲ್ಲಿ ರಕ್ಷಿತ್ ಶೈಲಿ ಎದ್ದು ಕಾಣುತ್ತದೆ.

ಕನ್ನಡಕ್ಕೆ ಸಂಬಂಧಿಸಿದ ಹಾಗೆ ಇಂಥದೊಂದು ಅದ್ದೂರಿ ಫ್ಯಾಂಟಸಿ ಸಿನೆಮಾ ಅಪರೂಪ. ಚಿತ್ರದ ತಾಂತ್ರಿಕ ಗುಣಮಟ್ಟ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ, ಕರಂ ಛಾವ್ಲಾ ಛಾಯಾಗ್ರಹಣ ಮೊದಲಾದವು ಆಸ್ವಾದನೀಯ. ಈಗಾಗಲೇ ಜನಪ್ರಿಯವಾಗಿರುವ ಹ್ಯಾಂಡ್ಸಪ್ ಹಾಡು, ಸಾಹಸ ಸನ್ನಿವೇಶಗಳು, ರಕ್ಷಿತ್ ಶೆಟ್ಟಿ ಮತ್ತು ಪ್ರಮುಖ ಕಲಾವಿದರ ನಟನೆಯನ್ನು ನೋಡುವ ಆಸಕ್ತಿವಂತರು ನೋಡಬಹುದಾದ ಚಿತ್ರ ಇದು.

ನಿರ್ದೇಶನ: ಸಚಿನ್ ರವಿ
ನಿರ್ಮಾಣ: ಮಲ್ಲಿಕಾರ್ಜುನಯ್ಯ, ಎಚ್. ಕೆ. ಪ್ರಕಾಶ್
ತಾರಾಗಣ: ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News