ಎಲ್.ಎಸ್.ಎಸ್. ಎಂಬ ‘ಸೃಷ್ಟಿ-ದೃಷ್ಟಿ’ ಪ್ರತಿಭೆ

Update: 2019-12-28 18:32 GMT

ಪ್ರತಿಭಾ ವ್ಯಾಪಾರವು ದೃಷ್ಟಿಯೂ ಹೌದು, ಸೃಷ್ಟಿಯೂ ಹೌದು ಎನ್ನುತ್ತಾರೆ ಕಾವ್ಯಮೀಮಾಂಸಕಾರರು. ಇದು ಶೇಷಗಿರಿ ರಾಯರಿಗೆ ನೂರಕ್ಕೆ ನೂರು ಅನ್ವಯಿಸುವ ಮಾತು. ಎಲ್.ಎಸ್.ಎಸ್. ಅವರದು ಸೃಜನಶೀಲ ಪ್ರತಿಭೆಯೂ ಹೌದು, ದೃಷ್ಟಿಶೀಲ ಪ್ರತಿಭೆಯೂ ಹೌದು.ಎಲ್.ಎಸ್.ಎಸ್. ಅವರನ್ನು ವಿಮರ್ಶಕರೆಂದು ಪ್ರಧಾನವಾಗಿ ಗುರುತಿಸಲಾಗಿದೆಯಾದರೂ ಸಣ್ಣಕಥೆ, ನಾಟಕ, ಜೀವನಚರಿತ್ರೆ, ಮಕ್ಕಳ ಸಾಹಿತ್ಯ, ಅನುವಾದ, ಸಂಪಾದನಾ ಕಾರ್ಯಗಳಲ್ಲಿ ಅವರ ಸೃಜನಶೀಲ ಪ್ರತಿಭೆ ಢಾಳಾಗಿ ಕಾಣುತ್ತದೆ.


ಕಾಯಾವಾಚಾಮನಸಾ ನುಡಿ ಸೇವೆಗಾಗಿ ತಮ್ಮ ಬದುಕನ್ನು ಮುಡುಪಾಗಿಸಿದ ವಿರಳರಲ್ಲಿ ವಿರಳರು ಕಳೆದ ಶುಕ್ರವಾರ(ಡಿ.20) ಇಹಲೋಕ ತ್ಯಜಿಸಿದ ಪ್ರೊ. ಎಲ್.ಎಸ್. ಶೇಷಗಿರಿ ರಾವ್. ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಹಿತ್ಯ ರಚನೆ, ಸಾಹಿತ್ಯ ಬೋಧನೆ ಮತ್ತು ಕನ್ನಡಪರ ಕಾಯಕದಲ್ಲಿ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡಿದ್ದ ಪ್ರೊ. ಎಲ್.ಎಸ್.ಎಸ್. ಅವರಿಗೆ ಮರಣಕಾಲಕ್ಕೆ ತೊಂಬತ್ನಾಲ್ಕರ ಇಳಿಪ್ರಾಯ. ಎಲ್.ಎಸ್.ಎಸ್.ಎಂದೇ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ಶೇಷಗಿರಿ ರಾಯರ ಪೂರ್ಣ ಹೆಸರು ಲಕ್ಷ್ಮೇಶ್ವರ ಸ್ವಾಮಿ ರಾವ್ ಶೇಷಗಿರಿರಾವ್ ದೇಶಪಾಂಡೆ. ತಂದೆ ಸ್ವಾಮಿ ರಾವ್. ತಾಯಿ ಕಮಲಾ ಬಾಯಿ. ದೇಶಪಾಂಡೆ ಮನೆತನದ ಹೆಸರು. ಅವರ ಪೂರ್ವಿಕರು ಮಹಾರಾಷ್ಟ್ರದ ದೇಶಪಾಂಡೆಗಳು. ಎಂಟು ಹತ್ತು ತಲೆಮಾರುಗಳ ಹಿಂದೆ ಕರ್ನಾಟಕಕ್ಕೆ ವಲಸೆ ಬಂದು ಹಾವೇರಿ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನೆಲೆಸಿದರು. ತಂದೆ ಸ್ವಾಮಿ ರಾವ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ, ಶಾಲಾ ಇನ್‌ಸ್ಪೆೆಕ್ಟರ್ ಆಗಿ ಬೆಂಗಳೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದವರು. ಎಲ್.ಎಸ್.ಎಸ್. ಜನಿಸಿದ್ದು 1925ರ ಫೆಬ್ರುವರಿ 16ರಂದು.ವಿದ್ಯಾಭ್ಯಾಸವೆಲ್ಲ ಬೆಂಗಳೂರಿನಲ್ಲಿ.

  ಪ್ರೌಢಶಾಲೆಯ ದಿನಗಳಿಂದಲೇ ಬಾಲಕ ಶೇಷಗಿರಿಗೆ ಸಾಹಿತ್ಯದ ಓದು, ಬರವಣಿಗೆಗಳಲ್ಲಿ ತೀವ್ರ ಆಸಕ್ತಿ. ಪ್ರೌಢ ಶಾಲೆಯ ಮೊದಲ ತರಗತಿಯಲ್ಲಿದ್ದಾಗಲೇ ಅವರು ರಚಿಸಿದ ಇಂಗ್ಲಿಷ್ ಪ್ರಬಂಧವೊಂದು ಮೇಷ್ಟ್ರ ಮೆಚ್ಚುಗೆಗೆ ಪಾತ್ರವಾಗಿತ್ತಂತೆ. ವಿಜ್ಞಾನ ವಿಷಯಗಳನ್ನು ತೆಗೆದುಕೊಂಡು ಇಂಟರ್ ಮೀಡಿಯಟ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಎಲ್.ಎಸ್.ಎಸ್. ಇಂಗ್ಲಿಷ್‌ನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದ ಕಾರಣ ವಿದ್ಯಾರ್ಥಿವೇತನದ ಆಸೆಯಿಂದಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಆನರ್ಸ್ ತರಗತಿಗೆ ಸೇರಿದರು. ಆಗ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಬಿ.ಎಂ.ಶ್ರೀ ಅವರು ‘‘ನೀನು ಇಂಗ್ಲಿಷಿನಲ್ಲಿ ಬರೆದರೆ ಅಮೆರಿಕದವರಾಗಲೀ ಇಂಗ್ಲೆಂಡಿನವರಾಗಲೀ ಅದನ್ನು ಓದುವುದಿಲ್ಲ, ಕನ್ನಡದಲ್ಲಿ ಬರೆದರೆ ಕನ್ನಡಿಗರು ಕೃತಜ್ಞರಾಗಿರುತ್ತಾರೆ’’ ಎಂದು ಕನ್ನಡದ ದಾರಿ ತೋರಿದರಂತೆ. ಹೀಗೆ ಆಚಾರ್ಯ ಬಿ.ಎಂ.ಶ್ರೀ ಅವರಿಂದ ಕನ್ನಡದ ದೀಕ್ಷೆ ಪಡೆದ ಎಲ್.ಎಸ್.ಎಸ್. ಕಥಾ ಸಾಹಿತ್ಯ, ವಿಮರ್ಶೆ, ಮಹಾ ಭಾರತ, ಅನುವಾದ, ಸಾಹಿತ್ಯ ಚರಿತ್ರೆ, ಕನ್ನಡ-ಇಂಗ್ಲಿಷ್ ನಿಘಂಟು ಮೊದಲಾಗಿ ನೂರಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಕೊಟ್ಟು ಕನ್ನಡಿಗರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.

ಇಂಗ್ಲಿಷ್ ಆನರ್ಸ್‌ನಲ್ಲಿ ಎಲ್.ಎಸ್.ಎಸ್. ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಗಳಿಸಿದರು. ಘಟಿಕೋತ್ಸವ ಸಮಾರಂಭದಲ್ಲಿ ಈ ವಿಶೇಷ ಪ್ರತಿಭೆಯನ್ನು ಗಮನಿಸಿದ ವಿಶ್ವವಿದ್ಯಾನಿಲಯದ ಉಪಕುಲಪತಿ ಏಗಲ್ ಟನ್ ಅವರು ಎಲ್.ಎಸ್.ಎಸ್. ಅವರಿಗೆ ಉಪನ್ಯಾಸಕ ಹುದ್ದೆಗೆ ಆಮಂತ್ರಣವಿತ್ತರು. ಹೀಗೆ 1944ರಲ್ಲಿ, ಹತ್ತೊಂಬತ್ತರ ಕಿರಿಯ ಪ್ರಾಯದಲ್ಲೇ ಎಲ್.ಎಸ್.ಎಸ್. ಅಧ್ಯಾಪನವೃತ್ತಿ ಪ್ರಾರಂಭಿಸಿದರು. ಮುಂದೆ ನಾಗಪುರ ವಿಶ್ವವಿದ್ಯಾನಿಲಯದಿಂದ ಎಂ.ಎ. ಪಾಸುಮಾಡಿ ಸ್ನಾತಕೋತ್ತರರಾದರು. ಕೊಡಗು, ಮೈಸೂರು, ಕೋಲಾರ ಮೊದಲಾದ ಕಡೆ ಅಧ್ಯಾಕರಾಗಿ ಸೇವೆ ಸಲ್ಲಿಸಿ 1968ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಸ್ನಾತಕೋತ್ತರ ವಿಭಾಗದಲ್ಲಿ ಪ್ರಾಧ್ಯಾಪಕರಾದರು. 1985ರಲ್ಲಿ ಅಧ್ಯಾಪನ ವೃತ್ತಿಯಿಂದ ನಿವೃತ್ತರಾದರು. ಅಧ್ಯಾಪನ, ಸಾಹಿತ್ಯ ರಚನೆ ಜೊತೆಗೆ ಎಲ್.ಎಸ್.ಎಸ್. ಅವರಿಗೆ ಒದಗಿಬಂದ ಕನ್ನಡದ ಕೆಲಸಗಳಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯ ಹೊಣೆಗಾರಿಕೆಯೂ ಒಂದು. 1948ರ ಜನವರಿ 13ರಂದು, 22ರ ಹರಯದ ಯುವಕ ಎಲ್.ಎಸ್.ಎಸ್. ಕನ್ನಡ ಸಾಹಿತ್ಯಪರಿಷತ್ತಿನ ಗೌರವ ಕಾರ್ಯದರ್ಶಿಯಾದರು. ಆಗ ತಿ.ತಾ.ಶರ್ಮರು ಪರಿಷತ್ತಿನ ಅಧ್ಯಕ್ಷರಾಗಿದ್ದರು. ಮುಖ್ಯಮಂತ್ರಿ ಗುಂಡೂರಾಯರ ಪತ್ರಿಕಾ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಎಲ್.ಎಸ್.ಎಸ್. ಆಡಳಿತದ, ರಾಜಕೀಯದ ವಿವಿಧ ಮುಖಗಳನ್ನು ಕಂಡವರು. ಗೋಕಾಕ್ ಚಳವಳಿ ಸೇರಿದಂತೆ ಕನ್ನಡ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಎಲ್.ಎಸ್.ಎಸ್. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿ ಕನ್ನಡ ಪ್ರಕಟಣ ಪ್ರಪಂಚದ ಎಲ್ಲೆಗಳನ್ನು ವಿಸ್ತರಿಸುವಂಥ, ಕನ್ನಡಿಗರಲ್ಲಿ ಓದುವ ಅಭಿರುಚಿಯನ್ನು ಬೆಳೆಸುವಂತಹ ವೈವಿಧ್ಯಮಯ ಯೋಜನೆಗಳನ್ನು ರೂಪಿಸಿ ಪ್ರಾಧಿಕಾರಕ್ಕೆ ಭದ್ರ ಬುನಾದಿ ಹಾಕಿದರು.

ಪ್ರತಿಭಾ ವ್ಯಾಪಾರವು ದೃಷ್ಟಿಯೂ ಹೌದು, ಸೃಷ್ಟಿಯೂ ಹೌದು ಎನ್ನುತ್ತಾರೆ ಕಾವ್ಯಮೀಮಾಂಸಕಾರರು. ಇದು ಶೇಷಗಿರಿ ರಾಯರಿಗೆ ನೂರಕ್ಕೆ ನೂರು ಅನ್ವಯಿಸುವ ಮಾತು. ಎಲ್.ಎಸ್.ಎಸ್. ಅವರದು ಸೃಜನಶೀಲ ಪ್ರತಿಭೆಯೂ ಹೌದು, ದೃಷ್ಟಿಶೀಲ ಪ್ರತಿಭೆಯೂ ಹೌದು.ಎಲ್.ಎಸ್.ಎಸ್. ಅವರನ್ನು ವಿಮರ್ಶಕರೆಂದು ಪ್ರಧಾನವಾಗಿ ಗುರುತಿಸಲಾಗಿದೆಯಾದರೂ ಸಣ್ಣಕಥೆ, ನಾಟಕ, ಜೀವನಚರಿತ್ರೆ, ಮಕ್ಕಳ ಸಾಹಿತ್ಯ, ಅನುವಾದ, ಸಂಪಾದನಾ ಕಾರ್ಯಗಳಲ್ಲಿ ಅವರ ಸೃಜನಶೀಲ ಪ್ರತಿಭೆ ಢಾಳಾಗಿ ಕಾಣುತ್ತದೆ. ಎಲ್.ಎಸ್.ಎಸ್. ಸಾಹಿತ್ಯ ರಚನೆ ಪ್ರಾರಂಭಿಸಿದ್ದು ಸಣ್ಣ ಕಥೆಗಳಿಂದ. ಆಗ ಸಣ್ಣ ಕಥೆಗೆ ಮೀಸಲಾಗಿದ್ದ ‘ಕಥೆಗಾರ’ ಪತ್ರಿಕೆಗೆ ಕಥೆಗಳನ್ನು ಬರೆಯಲಾರಂಭಿಸಿದರು. ರಾಯರ ಕಥಾಸೃಷ್ಟಿ ಮತ್ತು ವಿಮರ್ಶನ ಪ್ರಜ್ಞೆ ಎರಡನ್ನೂ ಗುರುತಿಸಿದ ಸಂಪಾದಕ ನರಸಿಂಹ ಮೂರ್ತಿಯವರು ಕಥೆಗಾರದಲ್ಲಿ ಪ್ರಕಟವಾಗುತ್ತಿದ್ದ ಕಥೆಗಳ ವಿಮರ್ಶೆ ಬರೆಯಲು ಪ್ರೇರೇಪಿಸಿದರು. ಹೀಗೆ ಸೃಷ್ಟಿ-ದೃಷ್ಟಿ ಎರಡೂ ಎಲ್.ಎಸ್.ಎಸ್. ಅವರಲ್ಲಿ ಏಕಕಾಕಲದಲ್ಲಿ ದಾಂಗುಡಿ ಇಡಲಾರಂಭಿಸಿದವು.

‘ಇದು ಜೀವನ’, ‘ಜಗದ ಜಾತ್ರೆಯಲ್ಲಿ’, ‘ಮುಟ್ಟಿದ ಗುರಿ’ ಮತ್ತು ‘ಮುಯ್ಯಿ’ ಎಲ್.ಎಸ್.ಎಸ್ ಅವರ ನಾಲ್ಕು ಕಥಾ ಸಂಕಲನಗಳು. ಕಲಾತ್ಮಕವಾಗಿ ತುಂಬ ಯಶಸ್ವಿಯಾದ ಕಥೆ ‘ಮುಯ್ಯಿ’ ಎನ್.ಲಕ್ಷ್ಮೀನಾರಾಯಣ್ ಅವರ ನಿರ್ದೇಶನದಲ್ಲಿ ಚಲಚ್ಚಿತ್ರವಾಗಿ ಹೆಚ್ಚಿನ ಜನಪ್ರಿಯತೆ ಗಳಿಸಿತು. ‘ಸತ್ಯನಾರಾಯಣ’ ಈಗ್ಗೆ ಕೆಲವು ವರ್ಷಗಳ ಹಿಂದೆ ಬರೆದ ಕಥೆ. ಕೇಡು (ಈವಿಲ್)ಹೇಗೆ ಹೊಸಹೊಸ ರೂಪಗಳಲ್ಲಿ ಮೇಲುಗೈ ಸಾಧಿಸಿ ಸತ್‌ಶಕ್ತಿಗಳಿಗೆ ಕೊರಳ ಸೆರೆಯಾಗುತ್ತದೆ ಎಂಬುದನ್ನು ಪರಿಣಾಮಾಕಾರಿಯಾಗಿ ನಿರೂಪಿಸುವ ಕಥೆ ಇದು. ‘ಆಕಾಂಕ್ಷೆ’ ಮತ್ತು ‘ಆಸ್ತಿ’ ನಾಟಕಗಳಾದರೆ, ‘ಸಾರ್ಥಕ ಸುಬೋಧ’,‘ಎಂ.ವಿಶ್ವೇಶ್ವರಯ್ಯ’ ಜಿವನ ಚರಿತ್ರೆಗಳು. ಸೃಜನಶೀಲ ಪ್ರತಿಭೆ ಮತ್ತು ವಿಮರ್ಶನ ವಿವೇಕ ಇವೆರಡರ ರಸಪಾಕವಾದ ‘ಸಿರಿಸಂಪದ’ ವಿಶಿಷ್ಟ ಬಗೆಯ ವ್ಯಕ್ತಿಚಿತ್ರಗಳ ಸಂಕಲನ. ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಎಲ್.ಎಸ್.ಎಸ್.ಅವರದು ಗರಿಷ್ಠತೇಜ. ಗುಣ-ಗಾತ್ರ ಎರಡರಲ್ಲೂ ಅವರ ವಿಮರ್ಶೆ ದೊಡ್ಡದು, ಎಂದೇ ಅವರು ವಿಮರ್ಶಕರೆಂದೇ ಖ್ಯಾತನಾಮರು. ವಿವೇಕ, ವಿನಯ, ಸಹೃದಯತೆ ಎಲ್.ಎಸ್.ಎಸ್. ಅವರ ವಿಮರ್ಶೆಯ ಪ್ರಸ್ಥಾನತ್ರಯ.ಇಪ್ಪತ್ತೈದಕ್ಕೂ ಹೆಚ್ಚು ವಿಮರ್ಶಾ ಕೃತಿಗಳನ್ನು ರಚಿಸಿರುವ ಅವರ ವಿಮರ್ಶೆ, ಪರಾಕು ಪಂಪನೊತ್ತುವ ಪ್ರಶಂಸೆ ಅಥವಾ ನಿಂದನೆ, ಭರ್ತ್ಸನೆ, ಕಟುಟೀಕೆಗಳಂಥ ಅತಿರೇಕಗಳಿಂದ ಮುಕ್ತವಾದುದು. ಓದುವ ಅಭಿರುಚಿ ಬೆಳೆಸುವುದರಿಂದ ಹಿಡಿದು ಸಾಹಿತ್ಯವು ಓದುಗರ ಪ್ರಜ್ಞೆಯ ಭಾಗವಾಗುವಂತೆ ಮಾಡುವವನೇ ನಿಜವಾದ ವಿಮರ್ಶಕ. ವಿಮರ್ಶೆ ಜೀವದಾಯಿಯಾಗಿರಬೇಕು (ಲೈಫ್ ಗಿವಿಂಗ್) ಎನ್ನುತ್ತಾನೆ ಪ್ರಸಿದ್ಧ ವಿಮರ್ಶಕ ಎಫ್.ಆರ್.ಲೀವಿಸ್. ಅಂದರೆ ವಿಮರ್ಶೆ ಎಂದೂ ಮಾರಕವಾಗಿರಬಾರದು, ಜೀವ ಪರವಾಗಿರಬೇಕು.ಕೃತಿ, ಕೃತಿಕಾರ, ಓದುಗ ಇವರೆಲ್ಲರನ್ನೊಳಗೊಂಡಂತೆ ವಿಮರ್ಶಕ ನಿರ್ವಹಿಸಬೇಕಾದ ಹೊಣೆ ಇದು. ಎಲ್.ಎಸ್.ಎಸ್. ಇದೆಲ್ಲವನ್ನೂ ಹೃದ್ಗತಮಾಡಿಕೊಡಿದ್ದರು. ಎಂದೇ ಅವರದು ಸಹೃದಯ ವಿಮರ್ಶೆ.

ಎಲ್.ಎಸ್.ಎಸ್. ಅವರ ವಿಮರ್ಶನ ವಿವೇಕ ಹಲವು ಆಯಾಮಗಳಿಗೆ ಚಾಚಿಕೊಂಡಿರುವುದನ್ನು ನಾವು ಗಮನಿಸಬಹುದು. ಪ್ರಯೋಗಿಕ ವಿಮರ್ಶೆ, ಸಾಹಿತ್ಯ ತತ್ವ-ಮೀಮಾಂಸೆಗಳ ಚಿಂತನೆ, ಸಾಹಿತ್ಯ ಚರಿತ್ರೆ, ಸಮೀಕ್ಷಾವಲೋಕನೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಗ್ರಂಥಗಳ ಸಂಪಾದನೆ ಇತ್ಯಾದಿಯಾಗಿ ಎಲ್.ಎಸ್.ಎಸ್. ಅವರ ವಿಮರ್ಶನಾ ಕಾರ್ಯ ಬಹುಮುಖಿಯಾದುದು. ಕಾದಂಬರಿ ಪ್ರಕಾರದ ಉಗಮ, ಬೆಳವಣಿಗೆ, ಕಾದಂಬರಿಕಾರ-ಓದುಗರ ಸಂಬಂಧ ಇವುಗಳನ್ನು ಸೋದಾಹರಣವಾಗಿ ವಿವರಿಸಿ ವಿಶ್ಲೇಷಿಸುವ ‘ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ, ‘ಪರಂಪರೆಗಳ ಮನೋಧರ್ಮ’, ‘ಮಾಸ್ತಿ:ಜೀವನ ಮತ್ತು ಸಾಹಿತ್ಯ’, ‘ಹೊಸಗನ್ನಡ ಸಾಹಿತ್ಯ’, ‘ಸಾಹಿತ್ಯ ವಿಶ್ಲೇಷಣೆ’, ‘ಗ್ರೀಕ್ ರಂಗಭೂಮಿ ಮತ್ತು ನಾಟಕ’, ‘ವಿಲಿಯಂ ಶೇಕ್ಸ್‌ಪಿಯರ್’, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ’, ‘ಪಾಶ್ಚಾತ್ಯ ಮತ್ತು ಭಾರತೀಯ ಮಹಾಕಾವ್ಯ’, ‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’, ‘ಹೊಸಗನ್ನಡ ಸಾಹಿತ್ಯ ಚರಿತ್ರೆ’ -ಹೀಗೆ ಎಲ್.ಎಸ್.ಎಸ್. ಅವರ ವಿಮರ್ಶಾ ಗ್ರಂಥಗಳ ಯಾದಿ ಬೆಳೆಯುತ್ತದೆ.

ಹೊಸಗನ್ನಡ ಸಾಹಿತ್ಯ ಚರಿತ್ರೆ, ಇಂಗ್ಲಿಷ್ ಸಾಹಿತ್ಯ ಚರಿತ್ರೆಗಳು ಸಾಹಿತ್ಯದ ವಿದ್ಯಾರ್ಥಿಗಳಿಗೆ ಮತ್ತು ಸಾಹಿತ್ಯಾಸಕ್ತರಿಗೆ ಉತ್ತಮ ಆಕರ ಗ್ರಂಥಗಳು. ಎಲ್.ಎಸ್.ಎಸ್. ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಗೌರವ ತಂದುಕೊಟ್ಟ ‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’ಯಂತೂ ಜೀವನಪೂರ್ಣ ಅಧ್ಯಯನದ ಫಲ. ಇದರ ಮಹತ್ವವಿರುವುದು, ಇಂಗ್ಲಿಷ್ ಚರಿತ್ರೆಕಾರಗಿಂತ ಭಿನ್ನವಾದ ವಸ್ತುನಿಷ್ಠ ವಿಶ್ಲೇಷಣೆ, ವಿವೇಚನೆಗಳಲ್ಲಿ. ‘ಗ್ರೀಕ್ ರಂಗಭೂಮಿ ಮತ್ತು ನಾಟಕ’ ದಾರ್ಶನಿಕ ವಿಮರ್ಶೆಯ ಒಂದು ಮಾದರಿ ಕೃತಿ. ಈ ಬೃಹತ್ ಕೃತಿಯಲ್ಲಿ ಮೊದಲ ನೋಟಕ್ಕೇ ನಮ್ಮನ್ನು ಸೆಳೆಯುವ ಅಂಶವೆಂದರೆ ಎಲ್.ಎಸ್.ಎಸ್. ಅವರ ವಿದ್ವತ್ ಶಿಸ್ತಿನ ಅಧ್ಯಯನ. ಗ್ರೀಕ್ ರಂಗಭೂಮಿಯ ಇತಿಹಾಸ, ಗ್ರೀಕ್‌ನ ಶ್ರೇಷ್ಠ ನಾಟಕಕಾರರು, ಶ್ರೇಷ್ಠ ನಾಟಕಗಳು, ಅವುಗಳ ರಂಗಪ್ರಯೋಗಗಳು, ಗ್ರೀಸ್ ದೇಶದ ಬೌದ್ಧಿಕ ಚಟುವಟಿಕೆಗಳು, ಹೀಗೆ ಹತ್ತು ಹನ್ನೊಂದು ನಿಟ್ಟುಗಳಿಂದ ಗ್ರೀಕ್ ರಂಗಭೂಮಿಯ ಸಮ್ಯಕ್ ದರ್ಶನ ಮಾಡಿಸುವುದರೊಟ್ಟಿಗೆ ಒಟ್ಟಾರೆಯಾಗಿ ಗ್ರೀಕ್ ನಾಟಕಗಳ ಜೀವನದರ್ಶನ ಸಾರವನ್ನು ಎತ್ತಿಕೊಡುತ್ತದೆ ಈ ಕೃತಿ. ಪುರಾಣಗಳು, ಧಾರ್ಮಿಕ ನಂಬಿಕೆ-ಆಚರಣೆಗಳು, ವಿಜ್ಞಾನ, ಜಿಜ್ಞಾಸೆ-ಹೀಗೆ ಹಲವಾರು ಶೋಧನೆ, ದರ್ಶನ, ದಾರ್ಶನಿಕತೆಗಳಿಂದ ರೂಪುಗೊಂಡಿರುವುದು ಗ್ರೀಕ್ ಸಂಸ್ಕೃತಿಯ ವೈಶಿಷ್ಟ್ಯ. ಈ ಸಂಸ್ಕೃತಿಯ ಸತ್ವಹೀರಿ ಹುಟ್ಟಿದ್ದು ಗ್ರೀಕ್ ಮಹಾನ್ ರಂಗಭೂಮಿ. ಇಂಥ ಸಂಸ್ಕೃತಿಯ ದಾರ್ಶನಿಕ ಜ್ಞಾನ, ನೋಟ-ಒಳನೋಟಗಳಿಲ್ಲದೆ ಗ್ರೀಕ್ ನಾಟಕ ಸಾಹಿತ್ಯ ಮತ್ತು ರಂಗಭೂಮಿಯ ವಿಮರ್ಶೆ ಅಸಾಧ್ಯ. ಎಲ್.ಎಸ್.ಎಸ್. ಅವರ ಈ ಕೃತಿಯಲ್ಲಿ ವಿಮರ್ಶೆಯ ಮೇಧಾವಿತನ, ಧೀಮಂತಿಕೆಗಳ ಜೊತೆಗೆ ದಾರ್ಶನಿಕ ಒಳನೋಟಗಳನ್ನೂ ಹೇರಳವಾಗಿ ಕಾಣುತ್ತೇವೆ. ‘ಹೊಸಗನ್ನಡ ಸಾಹಿತ್ಯ ಚರಿತ್ರೆ’ ಎಲ್.ಎಸ್.ಎಸ್.ಅವರ ಕನ್ನಡ ಸಾಹಿತ್ಯದ ವ್ಯಾಪಕ ಅಧ್ಯಯನ ಮತ್ತು ವಿಮರ್ಶನ ವಿವೇಕಕ್ಕೆ ಮತ್ತೊಂದು ನಿದರ್ಶನ. ಸಮೃದ್ಧವಾಗಿ ಬೆಳೆದಿರುವ ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸವನ್ನು ನಿರೂಪಿಸುವ ಈ ಕೃತಿಯ ಮಹತ್ವ ಇರುವುದು ಹೊಸಗನ್ನಡ ಸಾಹಿತ್ಯದ ಎಲ್ಲ ಘಟ್ಟಗಳನ್ನು ಮತ್ತು ಮಹತ್ವದ ಲೇಖಕರನ್ನು ಆಯಾ ಕಾಲಘಟ್ಟದ ಚಾರಿತ್ರಕ ಮತ್ತು ಸಾಸ್ಕೃತಿಕ ಬೆಳಕಿನಲ್ಲಿ ಓದಿರುವುದರ ಪರಿಯಲ್ಲಿ.

ಶೇಕ್ಸ್‌ಪಿಯರ್, ಗೋಲ್ಡ್‌ಸ್ಮಿತ್, ಕಾಫ್ಕ, ಮೊದಲಾದ ಪಾಶ್ಚಾತ್ಯ ಸಾಹಿತಿಗಳಲ್ಲದೆ ಬಿ.ಎಂ.ಶ್ರೀ, ಕೈಲಾಸಂ, ಕುವೆಂಪು, ಮಾಸ್ತಿ, ಕಾರಂತ ಮೊದಲಾದ ಕನ್ನಡ ಲೇಖಕರ ಬಗ್ಗೆಯೂ ಎಲ್.ಎಸ್.ಎಸ್. ಬರೆದಿದ್ದಾರೆ. ನಿಷ್ಕಲ್ಮಷವಾದ ಮಾಹಿತಿ ಮತ್ತು ಸಮತೂಕದ ವಿಮರ್ಶೆ ಇವುಗಳ ವಿಶೇಷ. ಭಾರತೀಯ ಸಾಹಿತ್ಯ ಸಮೀಕ್ಷೆ, ಸ್ವತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಕಿರಿಯರ ಕರ್ನಾಟಕ, ಕನ್ನಡದ ಅಳು-ಉಳಿವು, ಬೆಂಗಳೂರು ದರ್ಶನ ಎಲ್.ಎಸ್.ಎಸ್. ಅವರ ಮುಖ್ಯ ಸಂಪಾದಿತ ಕೃತಿಗಳು.

 ನಿಘಂಟು ಕ್ಷೇತ್ರದಲ್ಲೂ ಎಲ್.ಎಸ್.ಎಸ್. ಅವರ ಸಾಧನೆ, ಕೊಡುಗೆ ಕನ್ನಡಕ್ಕೆ ಅನನ್ಯವಾದುದು. ಇಂಗ್ಲಿಷ್-ಕನ್ನಡ ಉಭಯ ಭಾಷಾ ಕೋವಿದರಾಗಿದ್ದ ರಾಯರ ದ್ವಿಭಾಷಾ ನಿಘಂಟುಗಳು ವಿದ್ಯಾರ್ಥಿಗಳಿಗೆ ಹಾಗೂ ಅನುವಾದಕರಿಗೆ ಅತ್ಯುಪಯುಕ್ತ ಎಂದರೆ ಅತಿಶಯದ ಮಾತಾಗದು. ‘ಸುಭಾಷ್ ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು’, ‘ಸುಭಾಷ್ ಇಂಗ್ಲಿಷ್ ಕನ್ನಡ ನಿಘಂಟು’, ‘ಸುಭಾಷ್ ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು’ ಮುಖ್ಯವಾದವು. 1,600 ಪುಟಗಳ ‘ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು’ ಅಂತರ್‌ರಾಷ್ಟ್ರೀಯ ಧ್ವನಿಮಾ (ಇಂಟರ್‌ನ್ಯಾಷನಲ್ ಫೊನೆಟಿಕ್ ಆರ್ಡರ್) ಪ್ರಕಾರ ಧ್ವನಿ ಪ್ರಭೇದಗಳನ್ನೂ ಇಂಗಿಷ್ ಉಚ್ಚಾರಣೆಗಳನ್ನೂ ಕನ್ನಡ ಉಚ್ಚಾರಣೆಗಳನ್ನೂ ಒಂದೇ ಕಡೆ ತಿಳಿಸುವ ವಿಶಿಷ್ಟವಾದ ನಿಘಂಟು. ಪ್ರೊ. ಎಲ್.ಎಸ್.ಎಸ್. ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿರುವ ಕೃತಿಗಳ ಸಂಖ್ಯೆ ಎರಡು ಕೈಬೆರಳೆಣಿಕೆಯನ್ನು ಮೀರಿದರೆ ಇಂಗಿಷ್‌ನಲ್ಲಿ ಬರೆದಿರುವ ಕೃತಿಗಳ ಸಂಖ್ಯೆ ಹನ್ನೆರಡಕ್ಕೂ ಹೆಚ್ಚು. ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡಿರುವ ಶ್ರೀ ಮಹಾಭಾರತ ಇಂಗ್ಲಿಷ್ ಸಾಹಿತ್ಯಕ್ಕೆ ರಾಯರು ನೀಡಿರುವ ಮಹಾಕಾವ್ಯ ಕಾಣಿಕೆಯಷ್ಟೇ ಅಲ್ಲ, ಅದೊಂದು ಭಾರತೀಯ ಸಂಸ್ಕೃತಿಯ ಕಾಣ್ಕೆ. ಇದರ ಕನ್ನಡ ಅನುವಾದವನ್ನು ಈ ಅಂಕಣಕಾರನೇ ಮಾಡಿದ್ದು, ಅದು ಇತ್ತೀಚೆಗಷ್ಟೆ ಪ್ರಕಟಗೊಂಡಿದೆ. ಅನ್ ಇಂಟರ್‌ಡಕ್ಷನ್ ಟು ಮಾಡರ್ನ್ ಕನ್ನಡ ಲಿಟರೇಚರ್ (1977), ಎ ಹಿಸ್ಟರಿ ಆಫ್ ಕನ್ನಡ ಲಿಟರೇಚರ್(1983)ಕೃತಿಗಳನ್ನೂ ರಾಯರು ಇಂಗ್ಲಿಷ್‌ನಲ್ಲಿ ರಚಿಸಿದ್ದಾರೆ.

ಶೇಷಗಿರಿರಾಯರ ವಿಪುಲ ಸಾಹಿತ್ಯದ ಕಿರುಪರಿಚಯವೂ ಒಂದು ಅಂಕಣದ ಮಿತಿಗೆ ಮೀರಿದ್ದು. ಮೂರ್ತಿ ಚಿಕ್ಕದಾದರೂ ಸಾಧನೆಯ ಕೀರ್ತೀ ದೊಡ್ಡದು. 2007ರಲ್ಲಿ ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಸೇರಿದಂತೆ, ಕನ್ನಡಿಗರ ಕೃತಜ್ಞತೆಯ ದ್ಯೋತಕವಾಗಿ ಅವರಿಗೆ ಸಂದಿರುವ ಪ್ರಶಸ್ತಿ ಪುರಸ್ಕಾರಗಳ ಪಟ್ಟಿಯೂ ದೊಡ್ಡದಿದೆ. ಗುಣಾಢ್ಯವಾದ ಸಾಹಿತ್ಯ ಸೃಷ್ಟಿಯಿಂದಲೂ ಸಜ್ಜನಿಕೆ ಮತ್ತು ಮಾರ್ದವತೆಗಳು ತುಂಬಿದ ಪ್ರೀತಿವಿಶ್ವಾಸಗಳಿಂದಲೂ ಕನ್ನಡದ ಬದುಕನ್ನು ಹಸನುಗೊಳಿಸಿದ ಎಲ್.ಎಸ್.ಎಸ್. ಇನ್ನಿಲ್ಲ. ಅವರ ನಿಧನದಿಂದ ಕನ್ನಡಕ್ಕೆ ದೊಡ್ಡ ನಷ್ಟವಾಗಿದೆ ಎಂದರೆ ಅದು ಖಂಡಿತವಾಗಿಯೂ ಕ್ಲೀಷೆಯಾಗದು. ಎಚ್.ಎಸ್.ವೆಂಕಟೇಶ ಮೂರ್ತಿಯವರು ಎಲ್.ಎಸ್.ಎಸ್. ಬಗ್ಗೆ ಬರೆದಿರುವ ಸುನೀತದ ಒಂದು ಸಾಲು ನೆನಪಾಗುತ್ತಿದೆ:
...ಸೂರ್ಯ ತೆರಳಿದ ಮೇಲೂ ತಂಗಿರುವ ತೀರದ ಬೆಳಕು.
ಇರುಳಲ್ಲೂ ಚಲಿಸುವಕ್ಷರಸಾಲು.

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News