ಉ.ಪ್ರದೇಶ : 6 ಪೊಲೀಸರ ವಿರುದ್ಧ ಎಫ್‌ಐಆರ್

Update: 2019-12-29 18:09 GMT
Photo: PTI

ಲಕ್ನೊ, ಡಿ.29: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಉತ್ತರಪ್ರದೇಶದಲ್ಲಿ ಡಿ.20ರಂದು ನಡೆದ ಪ್ರತಿಟನೆ ಸಂದರ್ಭ ಬಿಜ್ನೂರ್ ಜಿಲ್ಲೆಯಲ್ಲಿ 20 ವರ್ಷದ ವ್ಯಕ್ತಿ ಮೃತಪಟ್ಟ ಪ್ರಕರಣದಲ್ಲಿ ಆರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ.

  ಅಧಿಕಾರಿಗಳಾದ ರಾಜೇಶ್ ಸಿಂಗ್ ಸೋಳಂಕಿ, ಆಶಿಷ್ ತೋಮರ್, ಕಾನ್‌ಸ್ಟೇಬಲ್ ಮೋಹಿತ್ ಕುಮಾರ್ ಹಾಗೂ ಮೂವರು ಗುರುತಿಸಲಾಗದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸೋಳಂಕಿಯನ್ನು ಜಿಲ್ಲಾ ಅಪರಾಧ ಪತ್ತ ದಳಕ್ಕೆ ವರ್ಗಾಯಿಸಲಾಗಿದೆ ಎಂದು ನೆಹತಾರ್ ಪೊಲೀಸ್ ಠಾಣಾಧಿಕಾರಿ ಸತ್ಯಪ್ರಕಾಶ್ ಸಿಂಗ್ ಹೇಳಿದ್ದಾರೆ. ಮೃತ ಮುಹಮ್ಮದ್ ಸುಲೈಮಾನ್‌ರ ಸಹೋದರ ದೂರು ದಾಖಲಿಸಿದ್ದರು.

  ಈ ಮಧ್ಯೆ, ಪ್ರತಿಭಟನೆ ಸಂದರ್ಭ ಮೃತಪಟ್ಟ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಉ.ಪ್ರದೇಶ ಪೊಲೀಸ್ ಮಹಾನಿರ್ದೇಶಕ ಒಪಿ ಸಿಂಗ್ ಹೇಳಿದ್ದು, ಮೃತಪಟ್ಟ ಅಥವಾ ಗಾಯಗೊಂಡ ಘಟನೆಗೆ ಚಳವಳಿಗಾರರು ಬಳಸಿದ ಅಕ್ರಮ ಆಯುಧಗಳೂ ಕಾರಣವಾಗಿರಬಹುದು ಎಂದಿದ್ದಾರೆ. ಬಿಜ್ನೂರ್ ಮತ್ತು ಕಾನ್ಪುರದಲ್ಲಿ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಪೊಲೀಸರು ಗುಂಡು ಹಾರಿಸಿದ್ದಾರೆ. ಅಶ್ರುವಾಯು, ಲಾಠಿಚಾರ್ಜ್ ಮುಂತಾದ ರೀತಿಯಲ್ಲಿ ಕನಿಷ್ಟ ಬಲ ಪ್ರಯೋಗಿಸಿ ಪ್ರತಿಭಟನಾಕಾರರನ್ನ ಚದುರಿಸಲು ಪ್ರಯತ್ನಿಸಿದ್ದಾರೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News