ದಿಲ್ಲಿಯಲ್ಲಿ ಆವರಿಸಿದ ದಟ್ಟ ಮಂಜು: 500 ವಿಮಾನ, 30 ರೈಲು ಸಂಚಾರ ವಿಳಂಬ
ಹೊಸದಿಲ್ಲಿ, ಡಿ. 30: ದಿಲ್ಲಿ ಹಾಗೂ ಅದರ ನೆರೆಯ ಪ್ರದೇಶಗಳು ಸೋಮವಾರ ಬೆಳಗ್ಗೆ ದಟ್ಟ ಮಂಜಿನಿಂದ ಆವರಿಸಿಕೊಂಡಿತ್ತು. ಇದರಿಂದ ರೈಲು ಹಾಗೂ ವಿಮಾನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಿಮಾನಗಳ ಹಾರಾಟದ ಪರಿಷ್ಕೃತ ಸಮಯದ ಬಗ್ಗೆ ತಿಳಿಯಲು ಸಂಸ್ಥೆಯೊಂದಿಗೆ ಸಂಪರ್ಕ ಇರಿಸಿಕೊಳ್ಳಿ ಎಂದು ವಿಮಾನ ಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ಸಲಹೆ ನೀಡಿದವು.
ಉತ್ತರ ರೈಲ್ವೆ ವಲಯದಲ್ಲಿ ಕಡಿಮೆ ದೃಗ್ಗೋಚರದ ಹಿನ್ನೆಲೆಯಲ್ಲಿ ಕನಿಷ್ಠ 30 ರೈಲುಗಳು ವಿಳಂಬವಾಗಿ ಸಂಚರಿಸಿದವು. 500 ವಿಮಾನಗಳು ಕೂಡ ವಿಳಂಬವಾಗಿ ಸಂಚರಿಸಿದವು. ದಿಲ್ಲಿ ವಿಮಾನ ನಿಲ್ದಾಣದಿಂದ 21 ವಿಮಾನಗಳ ಪಥ ಬದಲಾಯಿಸಲಾಯಿತು. ದಟ್ಟ ಮಂಜು ಮುಸುಕಿರುವುದರಿಂದ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಕಾರೊಂದು ರಸ್ತೆಯಲ್ಲಿ ಸ್ಕಿಡ್ ಆಗಿ ಕಂದಕಕ್ಕೆ ಉರುಳಿ ಬಿದ್ದು ಇಬ್ಬರು ಅಪ್ರಾಪ್ತರು ಸೇರಿದಂತೆ 6 ಮಂದಿ ಮೃತಪಟ್ಟರು.
ನಗರದ ತಾಪಮಾನದ ಅಧಿಕೃತ ಗುರುತು ಎಂದು ಪರಿಗಣಿಸಲಾಗುವ ಸಪ್ಧರ್‌ಜಂಗ್ ವೀಕ್ಷಣಾಲಯದಲ್ಲಿ ಇಂದು ಮುಂಜಾನೆ 5.30ಕ್ಕೆ 4.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ನಡುವೆ ವಾಯುಗುಣಮಟ್ಟ ಹದಗೆಟ್ಟಿದೆ. ಕಡಿಮೆ ವೇಗದ ಗಾಳಿ ಹಾಗೂ ಗಾಳಿಯಲ್ಲಿ ಅತ್ಯಧಿಕ ಮಟ್ಟದಲ್ಲಿ ತೇವಾಂಶದಿಂದಾಗಿ ನಗರದಲ್ಲಿ ದಟ್ಟ ಮೋಡ ಕವಿದಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳು ತಿಳಿಸಿದ್ದಾರೆ.