ಇನ್ನು ಜನರ ಮೊಬೈಲ್ ಫೋನ್ ಕಳೆದುಹೋದರೆ ಪತ್ತೆಹಚ್ಚಲಿದೆ ಇಲ್ಲಿನ ಸರಕಾರ

Update: 2019-12-31 09:55 GMT

ಹೊಸದಿಲ್ಲಿ: ಕಳ್ಳತನಗೈದ ಅಥವಾ ಕಳೆದು ಹೋದ ಮೊಬೈಲ್ ಫೋನ್‍ ಗಳನ್ನು ಬ್ಲಾಕ್ ಮಾಡಲು ಹಾಗೂ ಅವುಗಳ ಜಾಡು ಹಿಡಿಯಲು ದಿಲ್ಲಿ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ವೆಬ್ ತಾಣವೊಂದನ್ನು ಸರಕಾರ ಆರಂಭಿಸಿದೆ.

ಮೊದಲು ಮುಂಬೈಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಒದಗಿಸಲಾದ ಈ ಸೌಲಭ್ಯವನ್ನು ಈಗ ದಿಲ್ಲಿಗೂ ವಿಸ್ತರಿಸಲಾಗಿದ್ದು, ಮುಂದಿನ ವರ್ಷ ದೇಶದ ಇತರೆಡೆಗಳಿಗೂ ವಿಸ್ತರಿಸಲಾಗುವುದು.

ವೆಬ್ ತಾಣ  www.ceir.gov.in ಮೂಲಕ  ಈ ಸೌಲಭ್ಯವನ್ನು ಅಗತ್ಯವಿರುವವರು ಪಡೆಯಬಹುದಾಗಿದ್ದು ಈ ಯೋಜನೆಯನ್ನು ದೂರಸಂಪರ್ಕ ಇಲಾಖೆಯ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ವ್ಯವಸ್ಥೆಯ ಮೂಲಕ ಜಾರಿಗೊಳಿಸಲಾಗಿದೆ.

ದಿಲ್ಲಿಯಲ್ಲಿ ಈ ಯೋಜನೆಯನ್ನು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಉದ್ಘಾಟಿಸಿ ದೇಶ ಡಿಜಿಟಲ್ ಶಕ್ತಿಯಾಗುವತ್ತ ಸಾಗುತ್ತಿರುವ ಈ ಕಾಲದಲ್ಲಿ ಮೊಬೈಲ್ ಫೋನ್ ಸುರಕ್ಷತೆ ಅತ್ಯಗತ್ಯ ಎಂದರು.

ಈ ಯೋಜನೆ  ದಿಲ್ಲಿಯ 5 ಕೋಟಿ ಮೊಬೈಲ್ ಫೋನ್ ಬಳಕೆದಾರರಿಗೆ ಅನುಕೂಲಕರವಾಗಲಿದೆ. ತಮ್ಮ ಫೋನ್ ಕಳೆದುಕೊಂಡವರು ವೆಬ್ ತಾಣಕ್ಕೆ ಲಾಗಿನ್ ಮಾಡಿ ದೂರು ದಾಖಲಿಸಬಹುದಾಗಿದ್ದು, ಜತೆಗೆ ಪೊಲೀಸ್ ದೂರಿನ  ಪ್ರತಿ ಹಾಗೂ ಐಡಿ ದಾಖಲೆ ಕೂಡ ಒದಗಿಸಬೇಕಿದೆ. ಈ ಮಾಹಿತಿ ಆಧಾರದಲ್ಲಿ ಕಳೆದು ಹೋದ ಮೊಬೈಲ್ ಫೋನ್ ಅನ್ನು ಬ್ಲಾಕ್ ಮಾಡಬಹುದಾಗಿದೆ. ಯಾರಾದರೂ ಈ ಫೋನ್‍ ಗಳನ್ನು ಬಳಕೆ ಮಾಡಿದರೂ  ಆ ಸ್ಥಳದ ಟವರ್ ಸಿಗ್ನಲ್ ಮೂಲಕ ಅವುಗಳನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅಂಶು ಪ್ರಕಾಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News