ಬೆಳ್ನುಡಿಯೆಂಬ ಭಾಷಾ ರಾಜಕಾರಣದ ಕತೆ

Update: 2020-01-01 07:34 GMT

ಎಚ್.ಎಸ್.ರೇಣುಕಾರಾಧ್ಯ ಅವರು ಹುಟ್ಟಿದ್ದು ಬೆಂಗಳೂರು ದಕ್ಷಿಣ ತಾಲೂಕಿನ ಹುಲುವೇನಹಳ್ಳಿಯಲ್ಲಿ. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಎಂ.ಎ. ವ್ಯಾಸಂಗ. ಪ್ರಸ್ತುತ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಸುವಿನಕೊಪ್ಪಲು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರಾಜಕಾರಣ ಆಸಕ್ತಿಯ ಕ್ಷೇತ್ರಗಳು.

ಎಚ್.ಎಸ್. ರೇಣುಕಾರಾಧ್ಯ

ಆಳುವ ವರ್ಗವೊಂದು, ಬೌದ್ಧಿಕವಾಗಿ ತಾನು ಮತ್ತೊಂದು ಜನಾಂಗಕ್ಕಿಂತ, ಸಮುದಾಯಕ್ಕಿಂತ ಮೇಲಿದ್ದಾಗ, ಅದರ ಅಧೀನದಲ್ಲಿರುವ ಸಮುದಾಯಕ್ಕೆ ಹೀಗೆ ದಡ್ಡ, ಮೂರ್ಖ, ಅನಾಗರಿಕ, ಸಾಮಾನ್ಯ ಎಂಬ ನಾಮಾರ್ಥಗಳನ್ನು ಲಗತ್ತಿಸುವುದು ಸಾಧ್ಯವಾಗುತ್ತದೆ. ಈ ಬೆಳ್ಪ, ಬೆಳ್ನುಡಿ, ಬೆಳ್ಳಕ್ಕರಿಗ ಪದಗಳ ಹಿಂದೆ ಇರುವುದೂ ಕೂಡ ಇಂಥದೇ ಒಂದು ಸಾಂಸ್ಕೃತಿಕ ದಬ್ಬಾಳಿಕೆಯ ರಾಜಕಾರಣವೇ ಇರಬೇಕು.

ಬೆಪ್ಪ, ಬೆಪ್ಪಾಗು, ಬೆಪ್ಪತಕ್ಕಡಿ ಇಂಥ ಶಬ್ದಗಳನ್ನು ನಾವು ದಿನನಿತ್ಯದ ಬಳಕೆಯಲ್ಲಿ ಕೇಳಿದ್ದೇವೆ. ಬೆಪ್ಪ ಎಂದರೆ ದಡ್ಡ, ಮೂರ್ಖ, ಏನೂ ತಿಳುವಳಿಕೆ ಇಲ್ಲದ, ಅನಾಗರಿಕ ಎಂಬ ಅರ್ಥಗಳನ್ನು ನಿಘಂಟು ಕೊಟ್ಟಿದೆ, ಕನ್ನಡದ ಜನಮಾನಸದಲ್ಲೂ ಕೂಡ ಇದೇ ಅರ್ಥವೇ ಇದೆ.

ಕನ್ನಡದಲ್ಲಿ ‘ಬೆಪ್ಪ’ ಎಂಬ ಪದದ ವ್ಯತ್ಪತ್ತಿ ಗಮನಿಸಿದರೆ ಅದು ‘ಬೆಳ್’ ಎಂಬ ಪದದಿಂದ ವ್ಯತ್ಪತ್ತಿ ಆಗಿದೆ. ಬೆಳ್ ಎಂದರೆ ದಡ್ಡತನ, ಮೂರ್ಖತನ, ಎಂದೆಲ್ಲಾ ಅರ್ಥವಿದೆ. ಬೆಪ್ಪ ಅಂದರೆ ಹುಚ್ಚ, ದಡ್ಡ ಎಂದರ್ಥ. ಇದು ದಿನನಿತ್ಯದ ಬಳಕೆಯಲ್ಲಿ ನಾವು ಕಾಣುವ ಬೆಪ್ಪ/ಬೆಳ್ಪ ಪದದ ನಿದರ್ಶನವಾದರೆ, ಕನ್ನಡ ಸಾಕಷ್ಟು ಕಾವ್ಯಗಳಲ್ಲೂ ಕೂಡ ಈ ಬೆಪ್ಪ/ಬೆಳ್ಪ, ಬೆಳ್ನುಡಿ ಈ ಬೆಳ್‌ಗೆ ಸಂಬಂಧಿಸಿದ ಶಬ್ದಗಳು ಹೆಚ್ಚಿನ ಸಂದರ್ಭಗಳಲ್ಲಿ ಬಳಕೆಯಾಗಿವೆ.

ಮುದ್ದಣನ ‘ರಾಮಾಶ್ವಮೇಧಂ’ ಕಾವ್ಯದ ಮೊದಲ ಆಶ್ವಾಸದಲ್ಲಿ ಮನೋರಮೆಯು ತನಗೆ ರಾಮಾಯಣದ ಕತೆ ಹೇಳುವುದಾದರೆ ‘ತಿರುಳ್ಗನ್ನಡದ ಬೆಳ್ನುಡಿಯೊಳೆ ಪುರುಳೊಂದೆ ಪೇಳ್ವುದು ಕನ್ನಡಂ ಕತ್ತುರಿಯಲ್ತೆ’ (ತಿರುಳು ಕನ್ನಡದ ಬೆಳ್ನುಡಿಯಲ್ಲಿ ಸತ್ವಕೆಡದಂತೆ ಕಥೆೆ ಹೇಳಬೇಕು ಏಕೆಂದರೆ ಕನ್ನಡವೆಂದರೆ ಕಸ್ತೂರಿಯಲ್ಲವೆ?) ಎಂದು ಮುದ್ದಣನನ್ನು ಕೇಳುವ ಒಂದು ಸಂದರ್ಭವಿದೆ.

ಇದನ್ನು ಓದಿಕೊಳ್ಳುವ, ಪಾಠಮಾಡುವಾಗ ಮೇಷ್ಟ್ರು ಗಳು ಸಹಜವಾಗಿ ತಿರುಳಗನ್ನಡದ ಬೆಳ್ನುಡಿಯಲ್ಲಿ ಎಂಬುದಕ್ಕೆ ಸತ್ವಯುತವಾದ ಬೆಳಕಿನ ಭಾಷೆಯಾದ ಕನ್ನಡದಲ್ಲಿ ನೀ ಕಥೆೆ ಹೇಳೆಂದು ಅರ್ಥ ಹೇಳಿ ಬಿಡುತ್ತಾರೆ.

 ‘ಶುಭ್ರವಾದ ಮಾತಿನ ಭಾಷೆ’, ‘ಬೆಳಕಿನ ಭಾಷೆ’ ಎಂದು ವಿವರಿಸುತ್ತಿದ್ದಾನೆ ನೋಡಿ ಎಂದು ನಿಘಂಟು ನೀಡಿರುವ ಅರ್ಥಕ್ಕೆ ಜೋತು ಬಿದ್ದು, ಬಹಳ ಭಾವನಾತ್ಮಕವಾಗಿ ಅರ್ಥೈಸಿಬಿಡುತ್ತೇವೆ. (ಪಠ್ಯಪುಸ್ತಕ ಸಮಿತಿಯವರೂ ಕೂಡ ಬೆಳ್ನುಡಿ ಎಂದರೆ ಸವಿಯಾದ ಮಾತು, ಶುಭ್ರವಾದ ಮಾತು ಎಂದೇ ಅರ್ಥ ನೀಡಿದ್ದಾರೆ)

ಇದು ಒಂದು ಉದಾಹರಣೆಯಾದರೆ, ಪಂಪನ ವಿಕ್ರಮಾರ್ಜುನ ವಿಜಯಂ ಕಾವ್ಯದ ಮೊದಲನೇ ಆಶ್ವಾಸದ 46ನೇ ಪದ್ಯದಲ್ಲಿ; ಕವಿತಾ ಗುಣವಿಲ್ಲದೆ ಪೂಣ್ದು ಪೇಳ್ದ ಬೆಳ್ಗಳ ಕೃತಿ ಬಂಧಮುಂ

ಏಳ್ಪೋಗು ದೂತನಪ್ಪನ ಬೆಳ್ಪನ ನುಡಿಗೇಳ್ದು ಮುಳಿಯಲಾಗದು

(8ನೇ ಆಶ್ವಾಸದ 58ನೇ ಪದ್ಯ)

ಹೀಗೆ ಇಲ್ಲೆಲ್ಲಾ ಬೆಳ್ಪನ ನುಡಿ, ಬೆಳ್ಗಳ ಕೃತಿ ಬಂಧ ಎನ್ನುವಲ್ಲಿ ಮೂರ್ಖರ, ದಡ್ಡರ ಎನ್ನುವ ಅರ್ಥವೇ ಇರೋದು. ಮೇಲೆ ಉದಾಹರಿಸಿದ ಮುದ್ದಣನ ಕಾವ್ಯ ದಲ್ಲೂ ಕೂಡ ಬೆಳ್ನುಡಿ ಎಂದರೆ ಮೂರ್ಖರ, ಹೆಚ್ಚು ತಿಳಿಯದ ಸಾಮಾನ್ಯರ ನುಡಿ ಎಂಬ ಅರ್ಥದಲ್ಲಿಯೇ ಬಳಕೆಯಾಗಿರುವುದು. ಬೆಳ್ನುಡಿ, ಬೆಳ್ಳಕ್ಕರಿಗೆ ಈ ಶಬ್ದಗಳು ಹಳೆಗನ್ನಡ ಕಾವ್ಯಗಳಲ್ಲಿ ಸಾಕಷ್ಟು ಬಾರಿ ಬೆಳ್ನುಡಿ ಎಂದರೆ ದಡ್ಡರ ಭಾಷೆ, ಅಥವಾ ನುಡಿ.ಬೆಳ್ಳಕ್ಕರಿಗ ಎಂದರೆ ದಡ್ಡ, ಮೂರ್ಖ, ಅನಾಗರಿಕ ಸಾಮಾನ್ಯ ಎಂದರ್ಥ.

ಹಾಗಾದರೆ ಈ ಬೆಪ್ಪರು, ಬೆಳ್ಳಕ್ಕರಿಗರು, ಬೆಳ್ನುಡಿಯನ್ನು ಆಡುವವರು ಯಾರು ಎಂದರೆ ಸರಳವಾಗಿ ದಡ್ಡರು ಎಂದು ಹೇಳಬಹುದು. ಅದೇ ಆ ದಡ್ಡರು ಯಾರು? ಯಾರನ್ನು ಕುರಿತು ಇಂಥ ಪದ/ಶಬ್ದ ಬಳಕೆಗೊಂಡಿದೆ? ಇಂಥ ಪದಗಳು ಒಂದು ಭಾಷೆಯಲ್ಲಿ ಬಳಕೆಗೊಳ್ಳುವುದರ ಹಿಂದೆ ಒಂದು ಸಾಂಸ್ಕೃತಿಕ ರಾಜಕಾರಣ ಕೆಲಸ ಮಾಡುತ್ತೆ ಅನ್ನಿಸುತ್ತೆ.

ಆಳುವ ವರ್ಗವೊಂದು, ಬೌದ್ಧಿಕವಾಗಿ ತಾನು ಮತ್ತೊಂದು ಜನಾಂಗಕ್ಕಿಂತ, ಸಮುದಾಯಕ್ಕಿಂತ ಮೇಲಿ ದ್ದಾಗ, ಅದರ ಅಧೀನದಲ್ಲಿರುವ ಸಮುದಾಯಕ್ಕೆ ಹೀಗೆ ದಡ್ಡ, ಮೂರ್ಖ, ಅನಾಗರಿಕ, ಸಾಮಾನ್ಯ ಎಂಬ ನಾಮಾರ್ಥಗಳನ್ನು ಲಗತ್ತಿಸುವುದು ಸಾಧ್ಯವಾಗುತ್ತದೆ.( ಬ್ರಿಟಿಷರು ಭಾರತೀಯರನ್ನು ಅನಾಗರಿಕರು ಎಂದೇ ಪರಿಗಣಿಸಿದ್ದರು)

ಈ ಬೆಳ್ಪ, ಬೆಳ್ನುಡಿ, ಬೆಳ್ಳಕ್ಕರಿಗ ಪದಗಳ ಹಿಂದೆ ಇರು ವುದೂ ಕೂಡ ಇಂಥದೇ ಒಂದು ಸಾಂಸ್ಕೃತಿಕ ದಬ್ಬಾಳಿಕೆಯ ರಾಜಕಾರಣವೇ ಇರಬೇಕು. ಈ ‘ಬೆಳ್ಳ’ ಎನ್ನುವುದು ಮೇಲ್ನೋಟಕ್ಕೆ ದಡ್ಡ, ಮೂರ್ಖ ಎನ್ನುವ ಅರ್ಥವನ್ನು ಲಗತ್ತಿಸಿರುವುದು, ದೈಹಿಕವಾಗಿ ಬಲವಾಗಿದ್ದ, ಜನಾಂಗವೇ ಇರಬೇಕು. ವೇದಗಳಲ್ಲಿ ಅನಾಗರಿಕವಾಗಿರುವ, ತಂತ್ರ ಮಂತ್ರ ಆಚರಣಾವಿಧಿಗಳಲ್ಲಿ ತೊಡಗಿರುವವರನ್ನು ‘ದಸ್ಯು’ಗಳೆಂದು ಕರೆದಿರುವುದು ಕಂಡು ಬರುತ್ತದೆ.

ಮುಳಿಯ ತಿಮ್ಮಪ್ಪಯ್ಯನವರು ತಮ್ಮ ನಾಡೋಜ ಪಂಪ ಕೃತಿಯಲ್ಲಿ ಈ ಬೆಳ್ಳರ ಹಿನ್ನೆಲೆಯ ಬಗ್ಗೆ ಹೀಗೆ ಉಲ್ಲೇಖಿಸುತ್ತಾರೆ. ಆ ದಸ್ಯುಗಳೆ ಈ ಬೆಳ್ಳರು, ಬೆಳ್ಳರೆಂದರೆ ಆಸ್ತಿಕರಾದ ವಿಶಿಷ್ಟ ದೇವತಾಭಕ್ತರು, ಅದೊಂದು ತರದ ವಾಙ್ಮಯಪ್ರವಣರು, ವೀರತ್ವ ಶೂರತ್ವಗಳಿಂದೊಡಗೂಡಿದವರು ಎಂದು.ಮುಂದುವರಿದು ಬೇಳ್ ಎಂಬುದಕ್ಕೆ ಹೋಮಿಸು, ಯಜ್ಞ ಎಂಬರ್ಥವಿದ್ದು.

ಬೇಳ್ ಎಂಬುದರ ನಿಜವಾದ ಅರ್ಥವು ಬೆಳಗು (ಬೆಳ್+ ಆಗು= ಬೆಳಕನ್ನಾಗಿಸು) ಎಂದೇ ಆಗಿರಬೇಕು. ಹಾಗೆ ಬೆಳಕಿಗೆ ಆಧಾರವಾದ ತೇಜೋಮಯ ದ್ರವ್ಯವೆಂದೆ ಬೆಂಕಿ (ಬೆಳ್+ಕಿ)ಗೆ ಆ ಹೆಸರು ಬೆಳಗು ಆಗಿರಬೇಕು. ಮೂಲತಃ ಕಾಡಿನವಾಸಿಗಳಾದ ಈ ಬೆಳ್, ಬೆಳ್ಳರು, (ದಸ್ಯು) ಕಲ್ಲು, ಅರಣಿಗಳಿಂದ ಮೊತ್ತಮೊದಲು ಬೆಂಕಿ ಯನ್ನು ಉಂಟುಮಾಡಿದ ಪಂಗಡದವರಿಗೆ ಬೆಳ್ಪರು, ಬೆಳ್ಳರು ಎಂದು ಹೆಸರಾಗಿರಬಾರದೇಕೆ ಎಂದು ವಾದಿಸುತ್ತಾರೆ.

ಮುಳಿಯ ತಿಮ್ಮಪ್ಪಯ್ಯನವರ ಈ ವಾದವನ್ನು ಒಪ್ಪಿ ಮುಂದುವರಿದರೆ, ಈ ಬೆಳ್ಳರೆಂದರೆ ಈ ದೇಶದ ಮೂಲನಿವಾಸಿಗಳಾದ ದ್ರಾವಿಡರೇ (ಅವೈದಿಕರು ) ಎಂಬುದು ದೃಢವಾಗುತ್ತದೆ.

ಕರ್ನಾಟಕದಲ್ಲಿ ಹುಚ್ಚಯ್ಯ, ಹುಚ್ಚಪ್ಪ, ಮರುಳಯ್ಯ, ಬೆಳ್ಳಪ್ಪ ಎಂಬ ಹೆಸರುಗಳಿವೆ.

ಮರುಳಯ್ಯ, ಹುಚ್ಚಯ್ಯ (ಹುಚ್ಚುಗಳ ಅಯ್ಯ) ಎಂದರೆ ಶಿವ. ಹೀಗೆಯೇ ಬೆಳ್ಳಪ್ಪ ಎಂದು ಹೆಸರಿದೆ. ಬೆಳ್ಳಪ್ಪ ಎಂದರೆ ಬೆಳ್ಳ (ಹುಚ್ಚ, ಮರುಳ, ದಡ್ಡ)ಗಳ ಅಪ್ಪ ಯಾರೋ ಅವನು ಬೆಳ್ಳಪ್ಪ ಅರ್ಥಾತ್ ಶಿವ. ಶಿವ ದ್ರಾವಿಡರ ದೇವತೆ. ಹಾಗಾಗಿ ಬೆಳ್ ಎಂಬ ಪದ ದಕ್ಷಿಣದಲ್ಲಿ ವಾಸಿಸುತ್ತಿದ್ದ ಜನಾಂಗವನ್ನು ಗುರುತಿ ಸಲು ಆರ್ಯರು ಪಿಶಾಚ, ಬೆಳ್ಳರು, ಬಳಸುತ್ತಿದ್ದ ಪದಗಳಿರಬೇಕು.

ಬೆಳ್ ಎಂದರೆ ಒಂದು ಜನಾಂಗದ ಹೆಸರು. ಆ ಬೆಳ್ ಜನಾಂಗವೇ ದಕ್ಷಿಣ ಭಾರತದ ದ್ರಾವಿಡರು. ಬೆಳ್ ಜನಾಂಗ ಆರ್ಯರ ದಾಳಿಗೆ ಒಳಗಾಗಿ ದಕ್ಷಿಣಕ್ಕೆ ಬಂದ ಶಿವನ ಆರಾಧಕರು. ಬೆಳ್ ಎಂದರೆ ದಡ್ಡ, ಮರುಳ, ಹುಚ್ಚ ಎಂದರ್ಥ. ಮರುಳಯ್ಯ,ಹುಚ್ಚಪ್ಪ, ಬೆಳ್ಳಪ್ಪ ಎಂದರೆ ಶಿವ. ಮರುಳರ ಅಯ್ಯ, ಹುಚ್ಚರ ಅಯ್ಯ ಬೆಳ್ಳರ ಅಪ್ಪ - ಎಲ್ಲವೂ ಶಿವನೆ....

ಹಾಗಾದರೆ ಅವೈದಿಕರಾದ ದ್ರಾವಿಡರನ್ನು ಬೆಳ್ಳರು, ಅವರ ನುಡಿಯನ್ನು ಬೆಳ್ಳರ ನುಡಿ( ಬೆಳ್ನುಡಿ,) ಬೆಳ್ಳರ ಅಕ್ಕರ, ಎಂದು ಕಟಕಿಯಾಡಿದವರು ವೈದಿಕರೆ ಸೈ.(ಆರ್ಯರು) ಮಂಕ ಎಂಬ ಪದದ ಹಿನ್ನೆಲೆಯಲ್ಲಿ ಇದೇ ತರದ ಕಥೆಗಳಿವೆ. ಮಂಕ ಎನ್ನುವವನು ಅವೈದಿಕ ಪಂಥ ವೊಂದರ ಮೂಲಪುರುಷ. ಮಖ್ಖಾಲಿ ಗೋಸಲನ ತಂದೆಯ ಹೆಸರು ಮಂಕ ಆಗಿತ್ತು.

ಏಕೆಂದರೆ ಶತಶತಮಾನಗಳಿಂದಲೂ ಅಬಲನಾದವನ ತಲೆಗೆ ಮೂಢ, ಮೂರ್ಖತೆಗಳ ಹೊರೆಯನ್ನು ಹೊರಿಸುತ್ತಾ ಬಂದಿರುವುದು ಇದೇ ವೈದಿಕತನ.

ಈ ದ್ರಾವಿಡರ/ ಅವೈದಿಕರ ಭಾಷೆಯಲ್ಲಿ ಯಾವುದೇ ಮಹಾಪ್ರಾಣಾಕ್ಷರಗಳು ಇಲ್ಲ. ಇಂಥ ಮಹಾಪ್ರಾಣಾಕ್ಷರಗಳು ಇಲ್ಲದ ಭಾಷೆಯನ್ನು ವೈದಿಕರು ಪೈಶಾಚಿ ಭಾಷೆಯೆಂದು ಕರೆದರು. ಬಹುಶಃ ಮಹಾ ಪ್ರಾಣಾಕ್ಷರಗಳು(ಶ.ಷ)ಗಳು ಇಲ್ಲದ ದ್ರಾವಿಡ ಭಾಷೆಗಳೆಲ್ಲವೂ ಬೆಳ್ ನುಡಿಗಳೆ, ಬೆಳ್ಳರ ಭಾಷೆಗಳೆ.

ಗುಣಾಢ್ಯನ ಬೃಹತ್ ಕಥಾಕೋಶದಲ್ಲಿ ‘ಪೈಶಾಚಿ ಮಾತನಾಡುವ ಪಿಶಾಚರು ಪಾಂಡ್ಯ, ಕೇಕಯ, ಕುಂತಳ (ದಕ್ಷಿಣ), ಹೈವಕದಲ್ಲಿ ನೆಲೆನಿಂತು ಹರಡಿಕೊಂಡಿದ್ದರು ಎಂಬ ಪ್ರಾದೇಶಿಕ ಉಲ್ಲೇಖವಿದೆ. ಹಾಗಾಗಿ ಈ ಪಿಶಾಚಿ ಭಾಷೆ ಮಾತನಾಡುವವರು ಎಂದರೆ ಬೆಳ್ಳರು ಅರ್ಥಾತ್ ದ್ರಾವಿಡರು ಅರ್ಥಾತ್ ಕನ್ನಡಿಗ, ತಮಿಳು, ಮಲಯಾಳಿ, ತೆಲುಗು, ತುಳುವರು.

ಹಾಗಾಗಿ ವೈದಿಕರಾದ ಆರ್ಯರು ತಮ್ಮನ್ನು ತಾವು ಬುದ್ಧಿವಂತರೆಂದು ಕರೆದುಕೊಂಡು ಅವೈದಿಕರಾದ ದ್ರಾವಿಡ ರನ್ನು ಅವರ ಕವಿಗಳಿಂದಲೇ, ಅವರ ಜನರಿಂದಲೇ ‘ಬೆಳ್ಳ’ ರೆಂದು ಕರೆಯುವುದಷ್ಟೆ ಅಲ್ಲದೆ, ಅವರ ದಿನನಿತ್ಯದ ಬಳಕೆಯಲ್ಲಿ ಅವರಿಗೆ ತಿಳಿಯದಂತೆ ಅವರನ್ನೆ ಅವರು ನಿಂದಿಸಿಕೊಳ್ಳುವ, ಕೀಳಾಗಿ ಕಾಣುವಂತೆ ಮಾಡಿರುವ ಇಂಥ ಭಾಷಾ ಮತ್ತು ಸಾಂಸ್ಕೃತಿಕ ರಾಜಕಾರಣಗಳನ್ನು ನಾವುಗಳು ಇನ್ನಾದರೂ ಅರಿಯಬೇಕಾಗಿದೆ.

ಕಡೆಯದಾಗಿ ಇದೊಂದು ಊಹೆ...

ಬೆಂದ ಕಾಳೂರು ಬೆಂಗಳೂರು ಆಗಿದೆ ಎಂಬುದು ಪ್ರಚಲಿತದಲ್ಲಿರುವ ಮಾತು. ವಾಸ್ತವದಲ್ಲಿ ‘ಬೆಳ್’ರಿಗರು ಇರುವ ಊರು ಬೆಂಗಳೂರು. ಬೆಳ್ ಎಂದರೆ ದಡ್ಡ/ ಪ್ರಾಕೃತ (ಅನಾಗರಿಕ) ಎಂಬ ಅರ್ಥವಿದೆ. ಆರ್ಯರಿಂದ ಅನಾಗರಿಕರು, ದಡ್ಡರು ಅನ್ನಿಸಿಕೊಂಡವರು ದಕ್ಷಿಣದವರು ( ದ್ರಾವಿಡ). ಕನ್ನಡದಲ್ಲಿ ಕೆಲವು ಸಂದರ್ಭಗಳಲ್ಲಿ ವ್ಯಂಜನ ‘ಳ’ಕಾರಕ್ಕೆ ಬದಲಾಗಿ ಬಿಂದು ಬರುವುದು ಕನ್ನಡ ವ್ಯಾಕರಣದ ರೂಢಿ. ಉದಾಹರಣೆಗೆ ಬೆಳ್+ಕಿ = ಬೆಂಕಿ. ಕೊಳ್ ಎಂಬುದು ಕೊಂಡು ಎಂಬಂತೆ ಸೀಳ್ ಎಂಬುದು ಸೀಂಟು- ಸೀಟು ಪದಗಳನ್ನು ನೋಡಬಹುದಾಗಿದೆ. ಹಾಗಾಗಿ ಈ ಬೆಳ್ಳರು ಇದ್ದ ಊರೇ ಬೆಳ್+ಕರ+ಊರು ಬೆಂಗಳೂರು ಆಗಿರಬಾರದೇಕೆ.

ಇದಕ್ಕೆ ಮತ್ತೊಂದು ನಿದರ್ಶನವೆಂದರೆ ಕನ್ನಡವನ್ನು ಬೆಳ್ನುಡಿಯೆಂದೂ ಕರೆಯಲಾಗುತ್ತದೆ. ಬೆಳ್ನುಡಿಯೆಂದರೆ ಬೆಳ್ಳಕ್ಕರಿಗರ ಭಾಷೆ ಎಂದರ್ಥ. ಈ ಬೆಳ್ಳಕ್ಕರಿಗರು ಯಾರು ಎಂದರೆ (An illiterate stupid person -ಕಿಟೆಲ್ ಕೋಶ.)

ಬೆಳ್ನುಡಿ ಎಂದರೆ ‘ಬೆಳ್ಳ’ ಜನಾಂಗದ ಭಾಷೆ. ಅಂದರೆ ಆರ್ಯರ ಸಂಸ್ಕೃತಕ್ಕಿಂತ ಭಿನ್ನವಾದ ಭಾಷೆ. ದ್ರಾವಿಡರ ಭಾಷೆ. ದಕ್ಷಿಣದವರ ಭಾಷೆ.

Writer - ಎಚ್.ಎಸ್. ರೇಣುಕಾರಾಧ್ಯ

contributor

Editor - ಎಚ್.ಎಸ್. ರೇಣುಕಾರಾಧ್ಯ

contributor

Similar News