ಒಲಿದ ಸ್ವರಗಳು

Update: 2020-01-03 17:10 GMT

ಯಾನಂದ ಸಾಲ್ಯಾನ್ (ಸಾ.ದಯಾ)

ಮುಂಬಯಿ ಕನ್ನಡ ಲೋಕದಲ್ಲಿ ಸಾ. ದಯಾ ಎಂದೇ ಗುರುತಿಸಲ್ಪಡುವ ದಯಾನಂದ ಸಾಲ್ಯಾನ್ ಅವರು ಹವ್ಯಾಸಿ ರಂಗ ನಿರ್ದೇಶಕರು ಮತ್ತು ಕಲಾವಿದರು. ಹಲವು ನಾಟಕಗಳನ್ನು ನಿರ್ದೇಶಿಸಿರುವ ದಯಾ, ಕವಿಯಾಗಿ, ಕಥೆಗಾರರಾಗಿಯೂ ಚರ್ಚೆಯಲ್ಲಿರುವವರು. ಪತ್ರಿಕೋದ್ಯಮದಲ್ಲೂ ಕೆಲವು ಕಾಲ ವೃತ್ತಿ ಬದುಕನ್ನು ಕಳೆದಿದ್ದಾರೆ.

      ಬಿಂಬ

ನನ್ನ ನಿನ್ನ ಬೆವರ ಹನಿಯು

ಇಟ್ಟೆ ಇಟ್ಟಿಗೆ ಇಟ್ಟೆ

ಹೆಜ್ಜೆ ಹೆಜ್ಜೆಗೆ ಕೂಡು ಹೆಜ್ಜೆ

ಮೀಸೆ ತಿರುಗಿಸಿ ಕಣ್ಣು ಹೊರಳಿಸಿ

ಒಡ್ಡೋಳಗದಲಿ ಭಲರೆ ಬಾಪುರೆ

ಎಷ್ಟೊಂದು ದಿಗಿಣ

ರಂಗದಂಗಳದಲ್ಲಿ ಗಟ್ಟಿ ಸಿಂಹಾಸನ

ಬೆವರು ನೀರಾಗಿ ಹೊಳೆಯಾಗಿ

ಹರಿಹರಿದು ಹರಿದು ನೆತ್ತರು

ಸಿಂಹಾಸನದಲಿ ನಾನು ನನ್ನದು ನನ್ನಿಂದ

ಬೆವರು ಕತ್ತಲ ಕೂಪ

ಒಂದೊಂದೆ ಇಟ್ಟಿಗೆಗಳನ್ನು ಇಟ್ಟು

ಮತ್ತೆ ಕಟ್ಟಬೇಕಾಗಿದೆ

ತುಂಡು ತುಂಡಾದ ಸಾಮ್ರಾಜ್ಯವನ್ನು ರಾಜ್ಯವನ್ನು

ಕೋಟೆ ಕೊತ್ತಲಗಳೆಲ್ಲ ಮುರಿದು ಮುಗ್ಧ ಕನಸುಗಳು ಎಳೆದ ತೇರಿನ ಚೂರು

 ಒಡೆದ ಕನ್ನಡಿಯಲಿ ಬಿಂಬ ಚೂರು ಚೂರು

****************************

ಎಲ್ಲೆಂದು ಕಾಣಲಿ?

ಬಂದೇ ಬರುವಿ ಎಂದು ಕಾದಿದ್ದೆ

ಅಂಗಡಿಯಿಂದ ದಿನಸಿ ತರಲೆಂದು

ಹೋದ ಮನೆಯೊಡತಿಯಂತೆ;

ಮನೆ ಬಾಗಿಲ ಜಡಿದು ಕೀಗೊಂಚಲನಿತ್ತು

ಹೋದ ಪಕ್ಕದ ಮನೆಯೊಡತಿಯಂತೆ,

ಶಾಲೆಗೆ ಹೋದ ಪುಟ್ಟ ಕಂದಮ್ಮ

ನಂತೆ ನೀ ಬಂದೇ ಬರುವಿ ಎಂದು ಕಾದು ನಿಂತಿದ್ದೆ.

ಅತ್ತ,

ಏರಿಳಿದ ಸೂರ್ಯ ಕಡಲಂಚಿನಲಿ ಆತ್ಮಹತ್ಯೆಗೆ ಶರಣು

ಇತ್ತ,

ಬಯಲು ಆಲಯವಾಗಿ ಆಲಯ ಕುಸಿದು ಶರಣು

ಎಲ್ಲೆಂದು ಹುಡುಕಲಿ

ಹೂದೋಟದ ಕದ ಮುಚ್ಚಿ

ಹೋದ ಮಾಲಿಯನು

ಜಗದಗಲ ನಿನ್ನ ಎಲ್ಲೆಂದು ಕಾಣಲಿ?

*********************************

ಹೀಗೇಕೆ!

ಹೀಗೇಕೆಂದು ಕೇಳಿದ್ದೀಯೇ ನೀನು!

ಕವಲು ದಾರಿಗಳ, ನಡೆದು

ನಡೆದಷ್ಟು ನಡೆದು

ಪುಟ್ಟ ಹೆಜ್ಜೆ ಗುರುತುಗಳ ಹಡೆದು

ಹರಸಿ ಹಾರೈಸಿ ನಡೆದವ

ನೀನು ಹೀಗೇಕೆಂದು ಕೇಳಿದ್ದಿಯೇ

ಭೂತ ವರ್ತಮಾನಕ್ಕೆ ಮಾನ ಅಪಮಾನಕ್ಕೆ

ಸಂಕೇತಗಳ ಹೆಸರಿಟ್ಟು; ನಾನು

ಹಡೆದ ಕನಸಿನ ಚಿತ್ರಕ್ಕೆ

ಹೆಸರಿಟ್ಟು ಹೀಗೇಕೆಂದು ಕೇಳಿದ್ದೀಯೆ ನೀನು

ಗುಲಾಬಿ ಗಿಡದ ಮುಳ್ಳು

ಚುಚ್ಚಿ ನಿದ್ದೆಹೋದ ಮಗು

ಕೆಂಪು ಮಣ್ಣಲ್ಲಿ ಅರಳಿ ನಿಂತ ಸೇವಂತಿಗೆ

ಗಲ್ಲಿಗಳಲ್ಲಿ ಕಳೆದುಹೋದ ಹೆಸರು

ಆಕಾಶದಲ್ಲಿ ಅರ್ಧ ಮುಳುಗಿದ ಸೂರ್ಯ

ಎಷ್ಟು ಎಷ್ಟು ಸಲ

ಕೇಳಿದ್ದೀಯೇ ನೀನು ಹೀಗೆ

ಏಕೆ ಎಂದು

*****************

ಒಡಲುಂಟು ಪ್ರೀತಿಗೆ

ಪ್ರೀತಿಗೆ ಒಡಲುಂಟು

ಹೂವಿನ ಪಕಳೆಗೆ ನೋವುಂಟು

ಹಾಳೆಯಲಿ ಬರೆದಿಟ್ಟ ಕವಿತೆಗೆ ಮಗು ತುಳಿದ ಹಾದಿಯುಂಟು

ಹಾವು ಸರಿದ ಹಾದಿಯಲಿ

ನವಿಲು ನಡೆದ ಒನಪು ಉಂಟು

ಜಿಂಕೆ ಕುಣಿದ ಕಾಡಿನಲ್ಲಿ

ಸವಿಯ ನೀಡೊ ಜೇನು ಉಂಟು

ಬಣ್ಣ ಬಳಿದ ಚಿತ್ರದಲ್ಲಿ

ನಾನು ಯಾರು ನೀನು ಯಾರು

ಬದುಕು ನಿನ್ನ ಸುರಗಿಯಂತೆ

ದಾರಿ ತುಂಬ ಸವೆದು ಹೋದ

ಚಪ್ಪಲಿಗಳ ಲೆಕ್ಕವೇಕೆ

ನೀ ಬಿರಿದ ನಗುವಿನಲಿ

ಬಸುರಾದ ಕನಸುಗಳಿಗೆ ಜೊಂಪು ಹತ್ತದಿರಲಿ

ಲಾಲಿ ಹಾಡುವ ಹೊತ್ತು

ಗಾಲಿ ಹರಿಯದಿರಲಿ

*************************

 ಅವರು

ಅಮ್ಮ ಅಕ್ಕ ತಂಗಿಯರು

ಊರಿನಲ್ಲಿ ಹರಸಿದ ರೀತಿ

ಹೊಟೇಲು ಕ್ಯಾಂಟೀನ್‌ಗಳು ಬಾಗಿಲು ತೆರೆದವು

ನಿಯೋನ್ ಬೆಳಕಿನಡಿಯಲ್ಲಿ

ಗ್ಲಾಸುಗಳು ಮಾತನಾಡುವ ಹೊತ್ತು

ಕನಸುಗಳು ಚೆಲ್ಲಾಪಿಲ್ಲಿ

ಆಟ ಓಟಗಳೆಡೆಯಲ್ಲಿ ಸಂಜೆ

ಮಂಗಳೂರು ಮೈದಾನು ಮೈತುಂಬಿ ನಿಂತಾಗ

ಅವರು ಕೈ ಚಾಚಿದರು

ಮೆಲ್ಲ ಮೆಲ್ಲನೆ ಮೆಟ್ಟಲೇರುತ್ತಾ

ಏರುತ್ತಾ ನಸು ನಕ್ಕು...

ಹತ್ತು ನೂರು ಸಾವಿರ.....

ರಾತ್ರಿ ನಿದ್ದೆ ಕಣ್ಣುಗಳಲ್ಲಿ ಕನಸ ತೂರಿದರು

ಚರಿತ್ರೆಯ ನೆನಪುಗಳನ್ನು ಬಿತ್ತಿದರು

ಮನದಲ್ಲಿ ಒತ್ತಿದರು

ಚಿಗುರೊಡೆದ ಮೊಗ್ಗು

ಮರ ಮರ...

ಇಂದು ಹೆಮ್ಮರ

********************************

Writer - ದಯಾನಂದ ಸಾಲ್ಯಾನ್ (ಸಾ.ದಯಾ)

contributor

Editor - ದಯಾನಂದ ಸಾಲ್ಯಾನ್ (ಸಾ.ದಯಾ)

contributor

Similar News