ಒಬ್ಬ ಜಂಗಮದ ಅಭಿಮಾನ

Update: 2020-01-02 12:28 GMT

ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಕೃತಿಗಳಿಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ 3ಬಾರಿ, ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಪು.ತಿ.ನ. ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರು ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ.

ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಈ ದೇಶದ ಚರಿತ್ರೆಯನ್ನು ತಿರುಚಿ ಹೇಳಿದ ಪುರೋಹಿತಶಾಹಿಯ ತಿರೋಹಿತ ಬುದ್ಧಿಯ ಪರಿಣಾಮವೆನ್ನುವುದನ್ನು ನಾವು ಇನ್ನೂ ಅರ್ಥಮಾಡಿಕೊಂಡಿಲ್ಲ. ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಅದಕ್ಕಿಂತ ವಿರುದ್ಧವಾಗಿ ಅವರು ಹೇಳಿದ ಸುಳ್ಳೇ ಸುಳ್ಳು ಚರಿತ್ರೆಯನ್ನೇ ಸತ್ಯದ ಚರಿತ್ರೆಯೆಂದು ಭ್ರಮಿಸಿ ನಂಬಿ ಬಲಿ ಹೋಗುತ್ತಿದ್ದೇವೆ. ಪಾರ್ಕಲಾಂ ಪರಮಶಿವ.

ವಚನಗಳು ಸಂವಾದ ಶೈಲಿಯ ರಚನೆಗಳು ಎಂಬುದು ಅರ್ಧಸತ್ಯ. ಅವು ಸ್ವನಿರೀಕ್ಷಣಾ ಶೈಲಿಯ ರಚನೆಗಳು ಎಂಬುದೂ ಅಷ್ಟೇ ಕಟುಸತ್ಯ. ಹೀಗಂದಾಗ ಈ ಬಗೆಯ ಎರಡು ರೀತಿಯಲ್ಲಿ ಮಾತ್ರ ವ್ಯವಹರಿಸಿದ ರಚನಾ ಮಾದರಿಗಳು ಇವಲ್ಲ; ವಚನಗಳ ರಚನಾ ವಿನ್ಯಾಸವನ್ನು ಬಹುಮುಖೀಗುಣದಲ್ಲಿ ನೋಡಬೇಕಾಗುತ್ತದೆ. ಹೀಗಾಗಿ ಎಷ್ಟೋ ವಚನಕಾರರ ರಚನೆಗಳು ಪರಸ್ಪರ ಸಂವಾದಿಸಿದಂತಿದ್ದರೆ ಮತ್ತೆಷ್ಟೋ ವಚನಗಳು ತಮ್ಮನ್ನು ತಾವೇ ನಿರೀಕ್ಷಿಸಿಕೊಂಡ ಬಗೆಯಲ್ಲಿ ಮಾತನಾಡಿವೆ. ಇವೆಲ್ಲ ವಚನಕಾರರ ವ್ಯಕ್ತಿತ್ವವನ್ನು ಅನುಸರಿಸಿದಂತೆ ಆದ ರಚನಾ ವಿನ್ಯಾಸಗಳು. ಕೆಲವರು ಪರರ ದೋಷಗಳ ಬಗ್ಗೆ ಟೀಕೆ ಮಾಡುತ್ತಾ ನಡೆದರೆ ಕೆಲವರು ಪರರಿಗಿಂತ ತಮ್ಮ ದೋಷಗಳ ನಿರೀಕ್ಷೆ ಮಾಡಿಕೊಂಡಿರುವುದೇ ಹೆಚ್ಚು. ಕೆಲವರು ಮಿಕ್ಕವರಿಗೆ ಬುದ್ಧಿ ಹೇಳುವುದರಲ್ಲೇ ತೊಡಗಿದ್ದರೆ ಇನ್ನು ಕೆಲವರು ತಮಗೆ ತಾವೇ ಬುದ್ಧಿ ಹೇಳಿಕೊಳ್ಳುವ ಪ್ರಜ್ಞಾಮುಖಿಗಳಾಗಿದ್ದಾರೆ. ಇವೆರಡಕ್ಕಿಂತ ಭಿನ್ನವಾಗಿ ಇರುವ ವಸ್ತುಸಂಗತಿಗಳ ಬಗ್ಗೆ ಕೆಲವರು ಪ್ರತಿಕ್ರಿಯಿಸಿದ್ದಾರೆ. ವಸ್ತು ಸಂಗತಿ ಎಂಬುದು ವ್ಯಕ್ತಿಗುಣದಿಂದ ಮೊದಲ್ಗೊಂಡು ಧರ್ಮ ಆಚಾರ ವಿಚಾರ ನಿಸರ್ಗಧರ್ಮ ಸಮಾಜ ರಾಜಕಾರಣ ಈ ಇತ್ಯಾದಿ ಎಲ್ಲವುಗಳ ಸ್ಥಿತಿ ಸ್ವರೂಪಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರತಿಕ್ರಿಯೆಗಳೇ ಆಗಿವೆ. ಹೀಗಾಗಿ ವಚನಗಳನ್ನು ಓದುವುದೆಂದರೆ ಇಡೀ ಹನ್ನೆರಡನೇ ಶತಮಾನದ ಕಾಲಘಟ್ಟವನ್ನು ಓದುವುದೆಂದೇ ಅನುಭವವಾಗುತ್ತದೆ. ಶಬ್ದಾರ್ಥದಲ್ಲಿ ವ್ಯವಹರಿಸಿದಾಗ ಈ ಅನುಭವ ದಕ್ಕುತ್ತದೆಂದು ಹೇಳಲಾಗದು. ಅದಕ್ಕಿಂತ ಭಿನ್ನವಾಗಿ ಆ ಕಾಲದ ಚಾರಿತ್ರಿಕ ಅರಿವು ನಮ್ಮ ಸಮಾಜದ ಸಂರಚನೆಯ ಸ್ವರೂಪ ಅವುಗಳ ನಡುವಿನ ರಾಜಕಾರಣದ ಸಂಘರ್ಷ ಇವುಗಳ ಅರಿವೂ ನಮ್ಮ ಪ್ರಜ್ಞೆಯಲ್ಲಿದ್ದಾಗ ಮಾತ್ರ ಈ ಅನುಭವ ಸಾಧ್ಯವಾಗುತ್ತದೆ. ಹಾಗೂ ನಮ್ಮ ಓದಿಗೆ ಈ ಬಗೆಯ ಅನುಭವ ದಕ್ಕುತ್ತದೆ. ಇದಕ್ಕೆ ಇಲ್ಲಿ ಒಂದು ವಚನವನ್ನು ಉದಾಹರಿಸಲು ಇಷ್ಟ ಪಡುತ್ತೇನೆ. ಇದು ಬಸವಣ್ಣನವರ ವಚನ ಅವರ ವ್ಯಕ್ತಿ ವಿಶಿಷ್ಠತೆಯೇ ಅನನ್ಯವಾದುದು. ಬೇರೆ ಯಾವ ವಚನಕಾರರಲ್ಲೂ ಕಾಣಲಾಗದ ವಿಶೇಷತೆ ಅವರ ವ್ಯಕ್ತಿತ್ವದಲ್ಲಿದೆ. ಅದೆಂದರೆ ಬಸವಣ್ಣ ಒಂದು ಸಮುದಾಯದ ಪಾಪಪ್ರಜ್ಞೆಯನ್ನು ವೈಯಕ್ತಿಕ ನೆಲೆಯಲ್ಲಿ ಹೊಣೆಗಾರಿಕೆಯಾಗಿ ಭರಿಸಿಕೊಂಡು ನರಳಿದ ಜೀವ. ಬ್ರಾಹ್ಮಣನಾಗಿ ಹುಟ್ಟಿ ಬ್ರಾಹ್ಮಣ ಧರ್ಮವು ಇಡೀ ಇತರ ಜನಸಮುದಾಯಗಳಿಗೆ ಬ್ರಾಹ್ಮಣೇತರ ಸಮುದಾಯಗಳಿಗೆ ಮಾಡಿದ ಘೋರ ಅನ್ಯಾಯವನ್ನು ಶೋಷಣೆಯನ್ನು ಅವಮಾನವನ್ನು ಅಮಾನವೀಯ ವರ್ತನೆಯನ್ನು ವ್ಯಕ್ತಿಗತವಾಗಿ ಅರಿವಿಗೆ ತಂದುಕೊಂಡು ಆ ಪಾಪದ ಹೊರೆಯನ್ನು ತಾನೂ ಭರಿಸಿದರು. ಉತ್ತಮ ಕುಲದಲ್ಲಿ ಹುಟ್ಟಿದೆಂಬ ಕಷ್ಟದ ಹೊರೆಯಲ್ಲಿ ನರಳಿದರು. ಈ ಪ್ರಜ್ಞೆ ಇನ್ಯಾವ ವಚನಕಾರನಲ್ಲೂ ಕಾಣುವುದಿಲ್ಲ. ಇದು ಬಸವಣ್ಣನವರ ಅನನ್ಯತೆ. ಹೀಗಾಗಿ ಬಸವಣ್ಣನವರ ವಚನಗಳ ಮೂಲಗುಣವೇ ಸ್ವನಿರೀಕ್ಷೆ ಹಾಗೂ ಆ ಮುಖೇನ ಸಮಾಜನಿರೀಕ್ಷೆ. ಇಷ್ಟೊಂದು ವಿಶೇಷವಿರುವ ಬಸವಣ್ಣ ಒಬ್ಬ ವಚನಕಾರನಾದಷ್ಟೇ ಒಬ್ಬ ಅಧಿಕಾರಿ, ಒಬ್ಬ ರಾಜಕಾರಣಿ. ಪ್ರಭುತ್ವದ ಆಳ್ವಿಕೆಯಲ್ಲಿ ಇಡೀ ಆಡಳಿತವನ್ನು ನಿರ್ವಹಿಸುವ ಶಕ್ತಿಕೇಂದ್ರದಲ್ಲಿ ಪ್ರಧಾನ ಪಾತ್ರವಹಿಸಿದ್ದ ಆಡಳಿತಾಧಿಕಾರಿ.

ಹೀಗಾಗಿ ವಚನಕಾರ ಬಸವಣ್ಣನಲ್ಲಿ ಒಬ್ಬ ಕವಿ ಇರುವಂತೆಯೇ ಒಬ್ಬ ಕವಿಯ ಒಳಪ್ರಜ್ಞೆಯಲ್ಲಿ ಒಬ್ಬ ಆಡಳಿತಗಾರನೂ ಇದ್ದಾನೆ. ವಚನಕಾರ ಬಸವಣ್ಣ ಕೇವಲ ತಾನು ಜೀವಿಸುತ್ತಿರುವ ಧರ್ಮದ ಆಗುಹೋಗುಗಳ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ, ತಾನು ನಡೆಸುತ್ತಿರುವ ಆಡಳಿತದ ಆಗುಹೋಗುಗಳ ಬಗ್ಗೆಯೂ ಅಷ್ಟೇ ಸೂಕ್ಷ್ಮ ವಾಗಿ ಪ್ರತಿಸ್ಪಂದಿಸುತ್ತಿದ್ದಾನೆ ಅನ್ನಿಸುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಅವರ ವಚನಗಳಲ್ಲಿ ಕೊಡಬಹುದು. ಇಲ್ಲಿ ಹೆಚ್ಚು ವಿವಾದಕ್ಕೆ ಅಸ್ಪಷ್ಟ ವ್ಯಾಖ್ಯಾನಕ್ಕೆ ಒಳಗಾಗಿರುವ ಅವರ ಒಂದು ವಚನವನ್ನು ಉದಾಹರಿಸ ಬಯಸುತ್ತೇನೆ. ಆ ವಚನ ಇಂತಿದೆ.

ಅರಸು ವಿಚಾರ ಸಿರಿಯು ಶೃಂಗಾರ ಸ್ಥಿರವಲ್ಲ ಮಾನವಾ

ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು ನೋಡಾ

ಒಬ್ಬ ಜಂಗಮದ ಅಭಿಮಾನದಿಂದ

ಚಾಳುಕ್ಯರಾಯನ ಆಳ್ವಿಕೆ ತೆಗೆಯಿತ್ತು

ಸಂದಿತ್ತು ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ

ಈ ವಚನದ ಬಗ್ಗೆ ಈಗಾಗಲೇ ಹಲವು ಜನ ವಿದ್ವಾಂಸರು, ಸಂಶೋಧಕರು ಸಾಕಷ್ಟು ವಿಭಿನ್ನವಾದ ಅರ್ಥೈಕೆಗಳನ್ನು ವ್ಯಾಖ್ಯಾನಗಳನ್ನು ನೀಡಿದ್ದಾರೆ. ನಾನು ಆ ಯಾವ ವ್ಯಾಖ್ಯಾನಗಳನ್ನೂ ಇಲ್ಲಿ ಪ್ರಸ್ತಾಪಿಸ ಬಯಸುವುದಿಲ್ಲ. ಆ ಎಲ್ಲವುಗಳ ಓದಿನ ಅರಿವನ್ನು ಅನ್ನದಂತೆ ಅರಗಿಸಿಕೊಡ ಧಾತುಪ್ರಜ್ಞೆಯ ಭಾವದಲ್ಲಿ ಇಲ್ಲಿ ನೋಟದ ಜೀವವಾಗಿಸಿಕೊಂಡಿದ್ದೇನೆ. ಅವುಗಳನ್ನು ತಿರಸ್ಕರಿಸುವ ಪುರಸ್ಕರಿಸುವ ಪಾಂಡಿತ್ಯ ಪ್ರಜ್ಞೆಗೆ ಹೋಗುವುದಿಲ್ಲ. ನನ್ನ ಓದಿನ ಶ್ರದ್ಧೆಯಲ್ಲಿ ಒಪ್ಪಿದ್ದು ಜೀರ್ಣವಾಗಿ ನನ್ನ ಓದಿನ ಧಾತುದ್ರವ್ಯವಾಗಿ ಇದೆ. ಹಾಗೆಯೇ ಒಪ್ಪಲಾರದ್ದು ವಿಸರ್ಜನೆಯ ಭಾಗವಾಗಿ ಸಹಜವಾಗಿ ಹೊರ ಹೋಗಿದೆ. ನನ್ನ ಓದಿನ ನೋಟದ ಆರೋಗ್ಯವನ್ನು ಕಾಪಾಡಲು ಅರಗದ್ದು ವಿಸರ್ಜನೆಗೆ ಒಳಗಾಗಬೇಕೆಂಬುದು ಬಹಳ ಮುಖ್ಯವೆಂಬ ಅರಿವಿನಲ್ಲಿ ಬರೆಯತೊಡಗಿದವನು, ಹೀಗಾಗಿಯೇ ನಾನು ವಚನಕಾರರ ಬಗ್ಗೆ ವಚನಗಳ ಬಗ್ಗೆ ಬರೆಯುವಾಗ ಅನ್ಯ ಉಲ್ಲೇಖಗಳನ್ನು ಅಷ್ಟಾಗಿ ನೀಡುವುದಿಲ್ಲ. ಬದಲಾಗಿ ವಚನಗಳೇ ಪ್ರತೀತಗೊಳಿಸುವ ಅನುಭವವನ್ನು ಗ್ರಹಿಸುವ ನೇರ ಪ್ರಯತ್ನದಲ್ಲಿ ಓದನ್ನು ಆಚರಣೆಯಂತೆ ಧೇನಿಸುತ್ತೇನೆ.

ಮೇಲೆ ಉದಾಹರಿಸಿರುವ ಬಸವಣ್ಣನವರ ವಚನ ಒಂದು ರಾಜ್ಯಾಧಿಕಾರದ ಪತನವನ್ನು ಹೇಳುತ್ತಲೇ ಇನ್ನೊಂದು ರಾಜ್ಯಾಧಿಕಾರದ ಪ್ರಾರಂಭವನ್ನೂ ಸಾರುತ್ತಿದೆ. ಅಂದರೆ ಒಂದು ವಂಶಾಡಳಿತದಿಂದ ಇನ್ನೊಂದು ವಂಶಾಡಳಿತದ ಕಡೆಗೆ ಅಧಿಕಾರದ ಹಸ್ತಾಂತರವಾದ ಸಂಗತಿಯ ಸೂಕ್ಷ್ಮ ಈ ವಚನದಲ್ಲಿ ಪ್ರಸ್ತಾಪಿಸಲಾಗಿದೆ.

ರಾಜ್ಯಾಧಿಕಾರವೆಂದರೆ ರಾಜನ ಅಧಿಕಾರ ಮಾತ್ರವಾಗುವುದಿಲ್ಲ; ಆ ರಾಜ ಯಾವ ವಂಶ ಜಾತಿ ಧರ್ಮಕ್ಕೆ ಸೇರಿದವನು ಎಂಬುದೂ ಅಷ್ಟೇ ಮುಖ್ಯವಾಗುತ್ತದೆ. ಪ್ರಜಾಪ್ರಭುತ್ವದ ಕಾಲದಲ್ಲಿಯೇ ಯಾವ ಜಾತಿಯ ಮುಖ್ಯಮಂತ್ರಿ ರಾಜ್ಯಾಧಿಕಾರ ನಡೆಸುತ್ತಿದ್ದಾನೆ ಎನ್ನುವುದರ ಹಿನ್ನೆಲೆಯಲ್ಲಿ ಆಯಾ ಜಾತಿಗಳು ಅಧಿಕಾರದ ಅಮಲನ್ನು ತಲೆಗೆ ಹತ್ತಿಸಿಕೊಳ್ಳುವುದನ್ನು ಅಧಿಕಾರದ ಪ್ರಾಬಲ್ಯ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಹೀಗಿರುವಾಗ ಪ್ರಭುತ್ವದ ಕಾಲದಲ್ಲಿ ಸಹಜವಾಗಿ ಜಾತಿಯ ಸಾಮಾನ್ಯರಲ್ಲದಿದ್ದರೂ ಜಾತಿಯ ಮಠಾಧಿಕಾರಿಗಳು ಶ್ರೀಮಂತ ಕುಳವಾಡಿಗಳು ತಮ್ಮ ವರ್ಚಸ್ಸನ್ನು ಧಿಮಾಕನ್ನು ಮೆರೆಯುವುದಕ್ಕೆ ಸಾಕಷ್ಟು ಸಾಧ್ಯತೆಗಳಿದ್ದದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಹೀಗಾಗಿ ಹನ್ನೆರಡನೇ ಶತಮಾನದ ಆ ಕಾಲಾವಧಿಯಲ್ಲಿ ರಾಜ್ಯಾಧಿಕಾರವೆಂದರೆ ಅದು ಪರೋಕ್ಷವಾಗಿ ರಾಜ ಅನುಸರಿಸುತ್ತಿದ್ದ ಧರ್ಮಾಧಿಕಾರವೂ ಸೇರಿಕೊಂಡಿತ್ತು. ಧರ್ಮ ಸಂಘರ್ಷದ ಕಾಲ ಅದಾಗಿತ್ತು. ರಾಜಕಾರಣದಲ್ಲಿ ಧರ್ಮಾರ್ಥಗಳು ಬೆಸೆದುಕೊಂಡಿದ್ದ ಕಾಲಧರ್ಮ ಅದು. ಹೀಗಾಗಿ ಆಡಳಿತದ ಬದಲಾವಣೆ ಎಂಬುದು ಕೇವಲ ವ್ಯಕ್ತಿಕೇಂದ್ರಿತ ವಂಶಕೇಂದ್ರಿತ ನೆಲೆಯ ಬದಲಾವಣೆ ಮಾತ್ರವಾಗಿರದೆ ಅದು ಧರ್ಮವ್ಯತ್ಯಯಗಳ ಸಂಘರ್ಷಾತ್ಮಕ ಬದಲಾವಣೆ ಯೂ ಆಗಿತ್ತು ಎಂಬುದು ಬಹಳ ಮುಖ್ಯ ವಿಚಾರ.

ಈ ವಚನದಲ್ಲಿ ಕಲ್ಯಾಣ ಪಟ್ಟಣವನ್ನು ಆಳುತ್ತಿದ್ದ ರಾಜಮನೆತನದ ಪ್ರಸ್ತಾಪವಿದೆ. ಅದು ಚಾಳುಕ್ಯರಾಯನ ಆಳ್ವಿಕೆ ಅಂದರೆ ಚಾಳುಕ್ಯ ವಂಶದವರು ರಾಜ್ಯಾಧಿಕಾರ ಮಾಡುತ್ತಿದ್ದರು. ಅದರ ಪತನಕ್ಕೆ ಮುಖ್ಯ ಕಾರಣವಾವುದು ಎಂಬುದನ್ನು ವಚನದ ಪ್ರಾರಂಭದಲ್ಲಿಯೇ ಹೇಳಲಾಗಿದೆ. ಅರಸು ವಿಚಾರ ಸಿರಿಯು ಶೃಂಗಾರ ಸ್ಥಿರವಲ್ಲ ಎಂಬುದು ಸ್ಥಿರವೆಂದು ಭ್ರಮಿಸಿ ಮೆರೆದರೆ ಬರುವ ನಶ್ವರತೆಯ ಬಗ್ಗೆ ದನಿ ಎತ್ತಿ ಹೇಳುತ್ತಿದೆ. ಸ್ಥಿರವಾಗುವುದು ಸ್ಥಾವರವಾಗುವುದು, ಜಡವಾಗುವುದು, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಮಿತಿಯರಿತು ನಡೆದಾಗ ಅದು ಸರ್ವಕ್ಕೂ ಹಿತ. ಮಿತಿಮೀರಿ ನಡೆದಾಗ ಅಂದರೆ ಅತಿಯಾದಾಗ ಅಮೃತವೂ ವಿಷವಾಗುವಂತೆ ಸ್ವಯಂನಾಶಕ್ಕೆ ಮೂಲವಾಗುತ್ತದೆ. 12ನೇ ಶತಮಾನದಲ್ಲಿ ಅಧಿಕಾರ ಕೇಂದ್ರದಲ್ಲಿದ್ದ ಬಹುತೇಕ ರಾಜಮನೆತನಗಳು ಸ್ಥಾವರದ ಸ್ಥಿತಿ ತಲುಪಿ ದುರ್ಬಲವಾಗಿದ್ದವು.

ಕೇಂದ್ರ ದುರ್ಬಲವಾದಾಗ ಅಂಚಿನ ಸಾಮಂತರು ಸ್ವಾತಂತ್ರಕ್ಕೆ ಹಂಬಲಿಸಿ ದುರ್ಬಲ ಕೇಂದ್ರದ ವಿರುದ್ಧ ಸಿಡಿದು ನಿಲ್ಲುತ್ತಾರೆ. ಆದರೆ ಹೀಗೆ ಸಿಡಿದು ನಿಂತವರಲ್ಲಿಯೇ ಪ್ರಬಲನಾದವನೊಬ್ಬ ಕೇಂದ್ರದ ಅಧಿಕಾರ ಹಿಡಿಯುತ್ತಾನೆ. ಇಲ್ಲಿ ಆಗಿರುವುದೂ ಅದೇ. ಚಾಲುಕ್ಯ ರಾಯನ ಆಳ್ವಿಕೆ ತೆಗೆಯಲು ಕಾರಣ ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು. ಅರಸನ ಅಧಿಕಾರ ಭೋಗಲೋಲುಪತೆಯ ಪರಿಣಾಮದಲ್ಲಿ ಕಲ್ಯಾಣದ ಆರ್ಥಿಕ ಬಲ ಅಧಿಕಾರ ಬಲ ಶಕ್ತಿಗುಂದಿತು; ಸ್ಥಾವರವಾಯಿತು, ದುರ್ಬಲವಾಯಿತು ಹಾಳಾಯಿತು. ಅಂಥ ಸನ್ನಿವೇಶದಲ್ಲಿ ವಿರುದ್ಧ ನಿಂತ ಹಲವು ಸಾಮಂತ ಶಾಹಿಗಳಲ್ಲಿ ಕಳಚೂರ್ಯ ಬಿಜ್ಜಳನೂ ಒಬ್ಬ. ಬಿಜ್ಜಳ ಕಳಚೂರಿ ಅಂದರೆ ಕಟ್ಟಚೂರಿ / ಕಷ್ಟಚೂರಿ ವಂಶಸ್ಥ. ಬಿಜ್ಜಳ ಚಾಲುಕ್ಯರಾಜರ ಸಾಮಂತನಷ್ಟೆ ಅಲ್ಲ ಅವರ ಬಂಧುವೂ ಆಗಿದ್ದನೆಂದು ಹೇಳಲಾಗುತ್ತಿದೆ. ಕ್ಷತ್ರಿಯ ಎಂಬುದು ಚಾತುರ್ವರ್ಣ ವ್ಯವಸ್ಥೆಯಲ್ಲಿ ಬೇರೆ ವರ್ಣಗಳಂತೆ ಹುಟ್ಟಿನ ಮೂಲದಿಂದ ನಿರ್ಣಯಿತವಾದದ್ದಲ್ಲ. ಅದು ರಟ್ಟೆಯ ಬಲದಿಂದ ಮಾನ್ಯವಾದುದು. ಅದು ವರ್ಣವೆಂದರೂ ವರ್ಗ ಪ್ರಧಾನವಾದುದು. ಹೀಗಾಗಿ ಅರಸರ ಆಡಳಿತ ಕಾರಣವಾದಂತೆ ಆ ವರ್ಗದಲ್ಲಿ ಜಾತಿ ಮೂಲವನ್ನು ನೋಡದೆ ಅಧಿಕಾರ ಮಾತ್ರ ಕಾರಣವಾಗಿ ವೈವಾಹಿಕ ಸಂಬಂಧಗಳು ನಡೆಯುತ್ತಿದ್ದವು. ಇದನ್ನು ಬಲದ/ಶಕ್ತಿಯ ಹೆದರಿಕೆಯಿಂದ ವೈದಿಕ ವರ್ಣಧರ್ಮ ವಿರೋಧಿಸದೆ ಮಾನ್ಯ ಮಾಡಿದೆ. ಹೀಗಾಗಿ ಚಾಲುಕ್ಯರ ಹಾಗೂ ಕಳಚೂರಿಗಳ ನಡುವಿನ ಬಂಧುತ್ವಕ್ಕೆ ಅರಸು ವಿಚಾರವೂ / ಅಧಿಕಾರವೂ ಕಾರಣವಾಗಿತ್ತು. ಚಾಲುಕ್ಯರು ಅರ್ಥಾತ್ ಕಲ್ಯಾಣದ ಚಾಲುಕ್ಯರು ಶೈವರು. ಅವರ ಪ್ರಾಬಲ್ಯ ಹನ್ನೆರಡನೇ ಶತಮಾನದಲ್ಲಿ ದುರ್ಬಲವಾಗಿ ಮರೆಗೆ ಸರಿಯುವ ಸ್ಥಿತಿ ಉಂಟಾಗಿತ್ತು. ಅದರಲ್ಲಿ ಲಾಕುಲಿಶ ಕಾಳಾಮುಖ ಪಾಶುಪತ ಹೀಗೆ ಹಲವು ಛಿದ್ರೀಕರಣದ ಪರಿಣಾಮದಲ್ಲಿ ತಾತ್ವಿಕ ಭಿನ್ನತೆ ಉಂಟಾಗಿತ್ತು. ಇದು ಶೈವಮತವು ಸ್ಥಿರಗೊಂಡ ಸ್ಥಿತಿ. ಇಂಥ ಸನ್ನಿವೇಶದಲ್ಲಿ ರಾಜನ ರಾಜ್ಯಾಧಿಕಾರವೂ ದುರ್ಬಲ ಸ್ಥಿತಿಗೆ ಮುಟ್ಟಿದ್ದು ಸಹಜವಾಗಿತ್ತು. ಈ ಅವಕಾಶವನ್ನು ಬಳಸಿಕೊಂಡಂತೆ ಸನ್ನಿವೇಶದ ಲಾಭ ಪಡೆದು ಕಳಚೂರಿ ಬಿಜ್ಜಳ ಚಾಲುಕ್ಯವಂಶವನ್ನು ಕಿತ್ತೊಗೆದು ಕಲ್ಯಾಣದಲ್ಲಿ ತಾನು ರಾಜನಾಗುತ್ತಾನೆ. ಈ ಬದಲಾವಣೆಯ ಸಂಗತಿಯನ್ನು ಅರ್ಥಾತ್ ರಾಜಕೀಯ ವಿದ್ಯಮಾನವನ್ನು ಬಸವಣ್ಣನವರು ತಮ್ಮ ವಚನದಲ್ಲಿ ದಾಖಲಿಸಿದ್ದಾರೆ. ಈ ಮಧ್ಯೆ ಅವರು ಅಲ್ಲಿ ನಡೆದಿರುವ ಧಾರ್ಮಿಕ ಸ್ಥಿತ್ಯಂತರದ ಬಗ್ಗೆಯೂ ಧ್ವನಿಪೂರ್ಣವಾಗಿ ಸೂಚಿಸಿದ್ದಾರೆ.

ಚಾಳುಕ್ಯರಾಯನ ಆಳ್ವಿಕೆ ತೆಗೆಯಿತ್ತು. ಸಂದಿತ್ತು ಕೂಡಲ ಸಂಗಮ ದೇವಾ ನಿಮ್ಮ ಕವಳಿಗೆಗೆ ಎನ್ನುವಲ್ಲಿ ಈ ಧಾರ್ಮಿಕ ಪಲ್ಲಟದ ಪರಿಸ್ಥಿತಿಯ ಉಲ್ಲೇಖವಿದೆ. ಶೈವಧರ್ಮೀಯ ಚಾಲುಕ್ಯರ ಕೈಯಿಂದ ಜಂಗಮದ ಅಭಿಮಾನಿಗಳಾದ ಅರ್ಥಾತ್ ಶರಣ/ಲಿಂಗಾಯಿತರ ಅಭಿಮಾನಿಗಳಾದ ಕಳಚೂರಿಗಳ ಕೈಗೆ ಅಧಿಕಾರ ಹಸ್ತಾಂತರವಾಗಿದೆ. ಕೂಡಲಸಂಗಮ ದೇವಾ ನಿಮ್ಮ ಕವಳಿಗೆಗೆ ಸಂದಿತ್ತು ಎಂಬ ಮಾತಿನಲ್ಲಿ ಇದು ವ್ಯಂಜಿತವಾಗುತ್ತಿದೆ. ಕವಳಿಗೆ ಅಂದರೆ ಬತ್ತಳಿಕೆ ಕವಳಿಗೆಗೆ ಸಂದಿತ್ತು ಅಂದರೆ ಬತ್ತಳಿಕೆಗೆ ಬಿತ್ತು. ಕಳವಳಿಗೆ ರಾಜಕೀಯ ಸಮರ ಪರಿಭಾಷೆ. ಬತ್ತಳಿಕೆಗೆ ಬಾಣ ಬೀಳುವುದೆಂದರೆ ಶಕ್ತಿ ಸಂಚಯಿತವಾಯಿತು ಎಂದೇ ಅರ್ಥ. ಜಡಗೊಂಡಿದ್ದ ಶೈವಧರ್ಮದ ವಿರುದ್ಧವಾಗಿ ಜಂಗಮಶೀಲವಾಗಿದ್ದ ಲಿಂಗಾಯಿತ / ಶರಣಧರ್ಮ ಇದು ಇಲ್ಲಿನ ಸಂಘರ್ಷ. ಇಲ್ಲಿ ಬರುವ ವಚನ ಮಧ್ಯದ ಸಾಲನ್ನು (ಒಬ್ಬ ಜಂಗಮದ ಅಭಿಮಾನದಿಂದ) ವಚನದ ಪೂವಾರ್ಧ ಮತ್ತು ಉತ್ತರಾರ್ಧಗಳ ಸಂಗತದಲ್ಲಿ ಅನ್ವಯಿಸಿಕೊಂಡು ಅರ್ಥೈಸಿಕೊಳ್ಳಬೇಕು. ಅದನ್ನು ಬಿಟ್ಟು ಇಲ್ಲಿಗೆ ಸಲ್ಲದ ಯಾರೋ ಒಬ್ಬ ಜಂಗಮವನ್ನು ಎಳೆದು ತಂದು ವ್ಯಾಖ್ಯಾನಿಸುವುದು ಚರಿತ್ರೆಯ ಸಂಗತಿಯನ್ನು ವಿರೂಪಗೊಳಿಸುವ ದುರುದ್ದೇಶದ ಎಳೆತವಾಗುತ್ತದೆಯೇ ಹೊರತು ವಸ್ತುನಿಷ್ಠ ವಿಶ್ಲೇಷಣೆ ಆಗುವುದಿಲ್ಲ. ಅಲ್ಲದೆ ಇಲ್ಲಿ ಪ್ರಸ್ತಾಪಿತವಾಗಿರುವುದು ಒಬ್ಬ ಜಂಗಮದ ಅಭಿಮಾನದಿಂದ ಎಂದು. ಅದು ಒಬ್ಬ ಜಂಗಮನ ಅಭಿಮಾನದಿಂದ ಅಲ್ಲ. ಜಂಗಮನ ಅನ್ನುವುದಕ್ಕೂ ಜಂಗಮದ ಅನ್ನುವುದಕ್ಕೂ ಬರೀ ಅರ್ಥ ವ್ಯತ್ಯಾಸ ಅಷ್ಟೇ ಅಲ್ಲ, ವ್ಯಕ್ತಿ ಮತ್ತು ಸಮಷ್ಠಿಗಳ ನಿರ್ದೇಶಿತ ವ್ಯತ್ಯಾಸವೂ ಸೂಚಿತವಾಗಿರುತ್ತದೆ. ಇದು ಬಹಳ ಮುಖ್ಯವಾಗಿ ಪರಿಭಾವಿಸಬೇಕಾದ ಸಂಗತಿ. ಜಂಗಮದ ಅಭಿಮಾನದಿಂದ ಎನ್ನುವುದು ಧರ್ಮವ್ಯವಸ್ಥೆಯ ಅಭಿಮಾನವನ್ನು ಸೂಚಿಸಿದರೆ ಅದನ್ನು ಪ್ರತಿನಿಧಿಸುವ ಪ್ರಾತಿನಿಧಿಕ ಅಧಿಕಾರವಾಗಿ ಒಬ್ಬ ಎಂಬುದು ನಿರ್ದೇಶಿತವಾಗಿದೆ. ಹೀಗಾಗಿ ಚಾಲುಕ್ಯರಾಯನ ಆಳ್ವಿಕೆಯನ್ನು ತೆಗೆದವನು ಬಿಜ್ಜಳ. ಅವನು ಜಂಗಮದ ಅಭಿಮಾನಿ. ಅದೇ ಬಿಜ್ಜಳ ಬದಲಾದ ಧಾರ್ಮಿಕ ಶಕ್ತಿ ಸಂಚಯದ ಅಧಿಕಾರದ ಪ್ರತೀಕವೂ ಆಗುತ್ತಾನೆ. ಇಡೀ ವಚನ ಅರ್ಥಸೌಷ್ಠವಕ್ಕೆ ಕೇಡೆಣಿಸದ ಬಗೆಯಲ್ಲಿ ವಸ್ತುಸಂಗತಿಯನ್ನು ದಾಖಲೀಕರಿಸಿದೆ. ಈ ವಚನ ಹೀಗಲ್ಲದೆ ಬೇರೆ ಯಾವ ಬಗೆಯ ವ್ಯಾಖ್ಯೆಗೂ ದಕ್ಕುವುದಿಲ್ಲ. ಕಾರಣ ಇಲ್ಲಿ ಚಾರಿತ್ರಿಕ ಸಂಗತಿಯ ದಾಖಲೆ ಇದೆಯೇ ಹೊರತು ಲೋಕದರ್ಶನದ ತಾತ್ವಿಕ ಚಿಂತನೆಯ ಪ್ರಧಾನತೆಗಳಿಲ್ಲ. ಈ ಅಂಶಗಳು ಚಾರಿತ್ರಿಕ ಸಂಗತಿಗಳ ಪ್ರಸ್ತಾಪದಿಂದ ಪ್ರತೀತಗೊಳ್ಳುವ ಅರ್ಥಾತ್ ವಸ್ತುಧ್ವನಿಯಲ್ಲಿ ವ್ಯಂಜಿತವಾಗುವ ದರ್ಶನಾಂಶಗಳು ಅಷ್ಟೆ. ಆದರೆ ಪ್ರಧಾನವಾಗಿ ಇದರ ಉದ್ದೇಶ ಚಾರಿತ್ರಿಕ ಸಂಗತಿಯನ್ನು ಸಾರುವುದೇ ಆಗಿದೆ. ಅದು ವಚನದ ಕೊನೆಯ ಸಾಲಿನಲ್ಲಿ ಸಂದಿತ್ತು ಕೂಡಲ ಸಂಗಮ ದೇವಾ ನಿಮ್ಮ ಕವಳಿಗೆಗೆ ಎನ್ನುವಲ್ಲಿ ಬಿತ್ತರವಾಗುತ್ತಿದೆ.

ಬಿಜ್ಜಳನ ಆಸ್ಥಾನದಲ್ಲಿ ವಿತ್ತ ಸಚಿವನಾಗಿ ಶರಣ ಚಳವಳಿಯ ಸಂಘಟನಾ ಶಕ್ತಿಯಾಗಿ ಬೆಳೆದ ಬಸವಣ್ಣನ ಹೋರಾಟದ ಹಿಂದೆ ಪ್ರಭು ಬಿಜ್ಜಳನ ಜಂಗಮದ ಅಭಿಮಾನವೂ ಒತ್ತಾಸೆಯಾಗಿದ್ದು ವಸ್ತುಸತ್ಯ. ಅಕಸ್ಮಾತ್ ಬಿಜ್ಜಳ ಜಂಗಮದ ವಿರೋಧಿಯಾಗಿದ್ದರೆ ಬಸವಣ್ಣ ಶರಣರ ಸಂಘಟನೆ ಮಾಡುವುದಿರಲಿ ಅಲ್ಲಿ ಒಂದು ದಿನ ಉಳಿಯುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಕಷ್ಟ ಕುಲದ ಕಾಯಕ ಮೂಲದವನಾದ ಬಿಜ್ಜಳರಾಜ ಕುಲಮೂಲದ ಅವಮಾನದ ನೆನಪುಗಳನ್ನು ಕಳೆದುಕೊಂಡವನಲ್ಲ. ಕಾಯಕ ಜೀವಿಗಳು ಸಂಘಟಿತವಾದಂತೆ ವರ್ಣವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಅವರದೇ ಮಾರ್ಗದಲ್ಲಿ ನಡೆಯ ತೊಡಗಿದಾಗ ಅದಕ್ಕೆ ಬಿಜ್ಜಳನ ಅಧಿಕಾರಬಲ ಸಂದಿತ್ತು ಕೂಡಲ ಸಂಗಮ ದೇವಾ ನಿಮ್ಮ ಕವಳಿಗೆಗೆ. ಹೀಗೆ ಬಿಜ್ಜಳನ ಪರೋಕ್ಷ / ಪ್ರತ್ಯಕ್ಷ ಬೆಂಬಲದಿಂದ ಬಸವಣ್ಣ ಸಂಘಟಿಸಿದ ಶರಣ ಚಳವಳಿಗೆ ಬಲಬಂದಿತು.

ಇದಿಷ್ಟು ವಚನ ಪ್ರತೀತಗೊಳಿಸುವ ವಸ್ತುಸಂಗತಿಯಾದರೆ ಇನ್ನು ಹೇಳದೆ ಇರುವ ಇಡೀ ದೇಶದ ಚರಿತ್ರೆಯುದ್ದಕ್ಕೂ ದಾಖಲಾಗದೆ ಬಾಕಿ ಇತಿಹಾಸವಾಗಿ ಉಳಿದಿರುವ ಸಂಗತಿ ಮತ್ತೊಂದಿದೆ. ಅದು ವೈದಿಕ ಪುರೋಹಿತಶಾಹಿಗೆ ಸಂಬಂಧಿಸಿದ ವಿಚಾರ. ಅರಸು ವಿಚಾರದೊಳಗಿರುವ ಮರಸು ವಿಚಾರ. ಇಲ್ಲಿಯ ವಂಶಾಡಳಿತ ಬದಲಾದ ಹೋರಾಟದ ಹಿಂದೆ ವೈದಿಕ ಪುರೋಹಿತಶಾಹಿಯೂ ತನ್ನ ಪಾತ್ರವನ್ನು ತಾನು ವಹಿಸಿಯೇ ಇರುತ್ತದೆ. ವೈದಿಕವಾಗಿ ಕಾಳಾಮುಖ ಲಾಕುಲೀಶ ಪಾಶುಪತಗಳ ಆಚರಣಾ ವಿಧಾನಗಳನ್ನು ಅರ್ಥಾತ್ ಈ ಶೈವ ಮಾರ್ಗಗಳನ್ನು ತನ್ನ ವಿರುದ್ಧ ಶಕ್ತಿಗಳೆಂದು ಪರಿಗಣಿಸಿರುವುದು ವಸ್ತುಸತ್ಯ. ತನ್ನ ಮನುಧರ್ಮ ನೀತಿಗೆ ವಿರುದ್ಧವಾದ ಯಾವ ಆಡಳಿತವನ್ನು ಸಹಿಸಿಲ್ಲ ವೈದಿಕಶಾಹಿ; ಅದಕ್ಕೆ ವಿರುದ್ಧವಾಗಿ ಹೆಜ್ಜೆ ಇಡುವ ವ್ಯಕ್ತಿ ಶಕ್ತಿಯನ್ನು ಶತ್ರುವಿನ ಶತ್ರು ಮಿತ್ರ ಎಂಬ ಭಾವದಲ್ಲಿ ಬಳಸಿಕೊಳ್ಳುತ್ತದೆ. ಮತ್ತೆ ಅದೇ ಮಿತ್ರನನ್ನು ತನ್ನ ಪ್ರಧಾನ ಶತ್ರುವಿನಂತೆ ತಿಳಿದು ಕುಮಾರ್ಗಗಳಿಂದ ಅವನನ್ನು ತುಳಿದು ಹಾಕುತ್ತದೆ. ಇದು ವೈದಿಕ ಪುರೋಹಿತಶಾಹಿಯ ನಿಜವಾದ ಚರಿತ್ರೆ. ಅಪ್ಪನನ್ನು ಮಕ್ಕಳಿಂದ ಸೋದರರನ್ನು ಸೋದರರಿಂದ ಕೊಲ್ಲಿಸುತ್ತಾ ಒಡೆದಾಳುವ ನೀತಿಯಲ್ಲಿ ಲಾಭವನ್ನು ಉಣ್ಣುವ ಈ ಪುರೋಹಿತ ಶಾಹಿಯ ಚರಿತ್ರೆ ಎಲ್ಲೂ ದಾಖಲಾಗದಿರುವ ಬಾಕಿ ಇತಿಹಾಸ. ಇದು ದಾಖಲೆಗಳಿಂದ ಸಾಬೀತಾಗುವ ಇತಿಹಾಸವಲ್ಲ; ಗ್ರಹಿಕೆಯಿಂದ ಅನುಭವದ ಸೂಕ್ಷ್ಮಗಳನ್ನು ತಿಳಿಯುವುದರಿಂದ ವೇದ್ಯವಾಗುವ ಸತ್ಯ. ಬಿಜ್ಜಳನನ್ನು ಅವನ ಮಗ ಸೋವಿದೇವನನ್ನು ಬಳಸಿಕೊಂಡು ಕೊಲ್ಲಿಸಿತು. ಹೀಗಾಗಿ ಶರಣ ಚಳವಳಿಯ ಮೊದಲ ಬಲಿ ಬಿಜ್ಜಳ. ಅದರ ಎರಡನೆಯ ಬಲಿ ಬಸವಣ್ಣ. ಮುಂದುವರಿದಂತೆ ಸಾವಿರಾರು ಶರಣರ ಜಂಗಮದ ಹತ್ಯೆ ನಡೆದದ್ದು ಇತಿಹಾಸ. ದುರಂತವೆಂದರೆ ಇಂಥ ಸಮಾನತೆಯನ್ನು ಹಾರೈಸಿದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಚಳವಳಿಯೊಳಗೆ ಪರಸ್ಪರ ಸಂಘಟಿತ ಶಕ್ತಿಗಳಾಗಿದ್ದ ಚೇತನಗಳನ್ನು ಎದುರಾ ಬದುರ ಶತ್ರುಗಳಂತೆ ಬಿಂಬಿಸಿ ಚಿತ್ರಿಸಿರುವುದು ಚರಿತ್ರೆಯ ದುರಂತ ವ್ಯಂಗ್ಯ; ಈ ದೇಶದ ಚರಿತ್ರೆಯನ್ನು ತಿರುಚಿ ಹೇಳಿದ ಪುರೋಹಿತಶಾಹಿಯ ತಿರೋಹಿತ ಬುದ್ಧಿಯ ಪರಿಣಾಮವೆನ್ನುವುದನ್ನು ನಾವು ಇನ್ನೂ ಅರ್ಥಮಾಡಿಕೊಂಡಿಲ್ಲ. ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಅದಕ್ಕಿಂತ ವಿರುದ್ಧವಾಗಿ ಅವರು ಹೇಳಿದ ಸುಳ್ಳೇ ಸುಳ್ಳು ಚರಿತ್ರೆಯನ್ನೇ ಸತ್ಯದ ಚರಿತ್ರೆಯೆಂದು ಭ್ರಮಿಸಿ ನಂಬಿ ಬಲಿ ಹೋಗುತ್ತಿದ್ದೇವೆ. ಪಾರ್ಕಲಾಂ ಪರಮಶಿವ.

ಕೇಂದ್ರ ದುರ್ಬಲವಾದಾಗ ಅಂಚಿನ ಸಾಮಂತರು ಸ್ವಾತಂತ್ರಕ್ಕೆ ಹಂಬಲಿಸಿ ದುರ್ಬಲ ಕೇಂದ್ರದ ವಿರುದ್ಧ ಸಿಡಿದು ನಿಲ್ಲುತ್ತಾರೆ. ಆದರೆ ಹೀಗೆ ಸಿಡಿದು ನಿಂತವರಲ್ಲಿಯ�

Writer - ಪ್ರೊ.ಎಸ್.ಜಿ.ಸಿದ್ದರಾಮಯ್ಯ

contributor

Editor - ಪ್ರೊ.ಎಸ್.ಜಿ.ಸಿದ್ದರಾಮಯ್ಯ

contributor

Similar News