ಪ್ರಬುದ್ಧ ಭಾರತದ ನವಯಾನ

Update: 2020-01-03 06:46 GMT

 ಚೇತನ್ ಎಂದಾಗ ನೆನಪಾಗುವುದು 'ಆ ದಿನಗಳು'. ಆದರೆ ದಿನಗಳು ಉರುಳಿವೆ. ಮನುಷ್ಯ ಪ್ರೀತಿ ಉಕ್ಕಿ ಹರಿಯುವ ಬಟ್ಟಲು ಕಣ್ಣುಗಳ ಆ ನಟ ಇಂದು ಜನರ ನೋವು ಸಂಕಟಗಳಿಗೆ ಧ್ವನಿಯಾಗುತ್ತಿದ್ದಾರೆ. ಶೋಷಿತರ, ಬಡವರ, ಆದಿವಾಸಿಗಳ ಸಂಕಟಗಳಿಗೆ ಧ್ವನಿಯಾಗುವ ಮೂಲಕ ನಿಜವಾದ ಅರ್ಥದಲ್ಲಿ ಹೀರೊ ಆಗಿ ಗುರುತಿಸಿ ಕೊಳ್ಳುತ್ತಿದ್ದಾರೆ. ಕಲಾವಿದನ ಹೊಣೆಗಾರಿಕೆಯನ್ನು ನಿಭಾಯಿಸುತ್ತಾ ಉಳಿದವರಿಗೆ ಮಾದರಿಯಾಗುತ್ತಿದ್ದಾರೆ.

ನಮ್ಮ ಇಂದಿನ ಭಾವೋನ್ಮತ್ತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸನ್ನಿವೇಶದಲ್ಲಿ ಬುದ್ಧ ಅಥವಾ ಬೆಳಕು ಕಂಡವ ಒಂದು ಐಕಾನ್ ಆಗಿಯೂ, ಹಾಗೆಯೇ ಸತ್ಯ, ವಿವೇಕ ಹಾಗೂ ನೆಮ್ಮದಿಯ ಸಂಕೇತವಾಗಿಯೂ ಉಳಿದಿದ್ದಾನೆ. ಸಾಮಾಜಿಕ ಜಾಲತಾಣಗಳ ವೈರಲ್ ಸಂದೇಶಗಳಿಂದ ಹಿಡಿದು ಟೆಡ್‌ಟಾಕ್(Ted Talk)  ಭಾಷಣಗಳಲ್ಲಿ ಉಲ್ಲೇಖಿಸಲಾಗುವ ಬುದ್ಧನ ವಿಸ್ತೃತವಾದ ಹೇಳಿಕೆಗಳು, ಇದರಲ್ಲಿ ಕೆಲವು ಬುದ್ಧನದೆಂದು ಹೇಳಲಾದ ಉಲ್ಲೇಖಗಳಾಗಿದ್ದರೂ, ಜೀವನದ ಪ್ರಕ್ಷುಬ್ಧತೆ ನಡುವೆ ಸಾಗುವಾಗ ನಮ್ಮ ಸಾಮುದಾಯಿಕ ಜಾಗೃತಿಯನ್ನು ಆವರಿಸುತ್ತದೆ.

ಇಂದಿನ ಸಾಮಾಜಿಕ, ಧಾರ್ಮಿಕ, ಆರ್ಥಿಕ ಗೊಂದಲ ಗಳನ್ನು ತಣಿಸಲು ಹಾಗೂ ಒಂದು ಆದರ್ಶ ದೇಶವನ್ನು ಕಟ್ಟಲು ಯಾವ ರೀತಿಯ ಬುದ್ಧಿಸಂ ಅವಶ್ಯಕವೆಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮುಂದಿಟ್ಟ ನಿಯೋ ಬುದ್ಧಿಸಂ (ಅಂಬೇಡ್ಕರ್ ಅವರು ಹುಟ್ಟು ಹಾಕಿದ ಪದ) ಅಥವಾ 'ನವಯಾನ' ಈ ಪ್ರಶ್ನೆಯನ್ನು ಬಗೆಹರಿಸುತ್ತದೆ.

ಸಿದ್ಧಾರ್ಥ ಗೌತಮನು 2,500 ವರ್ಷಗಳ ಹಿಂದೆ ಜೀವನದ ಸಂಕಷ್ಟಗಳ ಮೂಲವನ್ನು ಹುಡುಕಿಕೊಂಡು ಹೊರಟ ಹಾಗೆ, ಅಂಬೇಡ್ಕರ್ ಅವರು 20ನೇ ಶತಮಾನದ ಅನ್ಯಾಯಗಳ ಪರಿಹಾರಕ್ಕೆ ರೂಪುರೇಷೆ ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ. ರಾಜಕುಮಾರ ಜೀವನದ ಬೆಳಕನ್ನು ಅರಸುತ್ತಾ ನೇಪಾಳದ ಕಪಿಲವಸ್ತುವಿನಿಂದ ಬಿಹಾರದ ಬೋಧಗಯಾಕ್ಕೆ ಹೊರಟಂತೆ, ಭೀಮರಾವ್ ಅವರು ಜ್ಞಾನವನ್ನು ಅರಸುತ್ತಾ ಭಾರತದಿಂದ ಲಂಡನ್, ನ್ಯೂಯಾರ್ಕ್ ಸೇರಿದಂತೆ ವಿಶ್ವಪಯಣ ನಡೆಸುತ್ತಾರೆ. ಬುದ್ಧ ಹಾಗೂ ಬಾಬಾ ಸಾಹೇಬ್ ಅವರು ಯಾವುದೇ ಜಾತಿ, ವರ್ಗ ಹಾಗೂ ಲಿಂಗಬೇಧವಿಲ್ಲದ, ಸರ್ವರಿಗೂ ಸಮಾನವಾದ ವ್ಯವಸ್ಥೆಗೆ ಪೂರಕವಾಗಿ ಹಲವು ಧರ್ಮಶಾಸ್ತ್ರಗಳ ಅಧಿಕಾರಕ್ಕೆ ಸವಾಲೆಸೆಯುತ್ತಾರೆ.

ಬುದ್ಧ ಮತ್ತು ಅಂಬೇಡ್ಕರ್‌ರವರ ತತ್ವಜ್ಞಾನದ ತಿರುಳು, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ವೈಜ್ಞಾನಿಕ ಮನೋಭಾವ ಮೇಲೆ ನಿಂತಿದೆ ಹೊರತು, ಯಾವುದೇ ರೀತಿಯ ದೈವಿಕ ಹಸ್ತಕ್ಷೇಪ ಅಥವಾ ಪೂರ್ವ/ಭವಿಷ್ಯದ ವೃತ್ತಾಂತಗಳ ಮೇಲೆ ಅಲ್ಲ. ವೈಯಕ್ತಿಕವಾಗಿ ಧಾರ್ಮಿಕ ವ್ಯಕ್ತಿಯಾಗಿರದ ಅಂಬೇಡ್ಕರ್ ಅವರು, ಜೀವನದ ಉದ್ದಕ್ಕೂ ಧಾರ್ಮಿಕ ಪ್ರಜ್ಞೆಯುಳ್ಳ ವ್ಯಕ್ತಿಯಾಗಿ ಉಳಿಯುತ್ತಾರೆ. ಸಾವಿರಾರು ವರ್ಷಗಳಿಂದ ಬ್ರಾಹ್ಮಣರ ಶ್ರೇಣೀಕೃತ ವ್ಯವಸ್ಥೆಯಲ್ಲಿ ಶೋಷಣೆಗೆ ಒಳಗಾಗುತ್ತಾ ಬಂದ ದಲಿತರಿಗೆ ನಕಾರಾತ್ಮಕ ಮನೋಭಾವದ ಬದಲು ಒಂದು ಪರ್ಯಾಯ ಆಧ್ಯಾತ್ಮಿಕ ನೆಲೆಗಟ್ಟು ಅಗತ್ಯವಿದೆ ಎಂದು ಅವರು ಅರಿತುಕೊಂಡಿದ್ದರು.

ಬಾಬಾ ಸಾಹೇಬ್ ಅವರ ಮಾದರಿ ಧಾರ್ಮಿಕ ದೃಷ್ಟಿಕೋನದ ಅನ್ವೇಷಣೆಯು, ಅವರ ಅರ್ಧ ಶತಮಾನ ಗಳ ಸಂಶೋಧನೆ ಹಾಗೂ ವಿಮರ್ಶೆಗಳ ಫಲವಾಗಿದೆ. ಅಂಬೇಡ್ಕರ್ ತನ್ನ 16ನೇ ವಯಸ್ಸಿನಲ್ಲಿ ಬೌದ್ಧಧರ್ಮದ ಕುರಿತಾದ ಮೊದಲ ಪುಸ್ತಕವನ್ನು ಪಡೆಯುತ್ತಾರೆ ಹಾಗೂ 65ನೇ ವಯಸ್ಸಿನಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುತ್ತಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಿದ್ದಲ್ಲಿ, ಯಾವ ರೀತಿ ಭಾರತೀಯ ಸ್ವಾತಂತ್ರ ಸಂಗ್ರಾಮದ ಹಾದಿಯನ್ನು ಬಾಬಾ ಸಾಹೇಬರ ಜೀವನ ಚರಿತ್ರೆಯಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲವೋ, ಅದೇ ರೀತಿ ಅಂಬೇಡ್ಕರ್‌ರವರ ಸಾಮಾಜಿಕ ರಾಜಕೀಯ ಪಥವನ್ನು ಹಾಗೂ ಅವರು ಕಂಡುಕೊಂಡ ಧಾರ್ಮಿಕ ಹಾದಿಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಅವೆಲ್ಲಾ ಪರಸ್ಪರ ಬೆಸೆದುಕೊಂಡಿವೆ.

ದಲಿತರು ಹಿಂದೂ ಧರ್ಮದಿಂದ ಹೊರಬಂದು, ಅವರಿಗೆ ಧಾರ್ಮಿಕ ಸಂಜೀವಿನಿಯಾಗಿ 'ನವಯಾನ'ವನ್ನು ಅಂತಿಮಗೊಳಿಸುವ ಮೊದಲು ಅಂಬೇಡ್ಕರ್ ಅವರು, ಭಾರತದ ಪ್ರಮುಖ ಧರ್ಮಗಳಾದ ಇಸ್ಲಾಮ್, ಕ್ರಿಶ್ಚಿಯನ್, ಜೈನ ಹಾಗೂ ಸಿಖ್ ಧರ್ಮಗಳ ಚಲನಶೀಲತೆ ಹಾಗೂ ಸಂಕೇತಗಳನ್ನು ಅಭ್ಯಸಿಸುತ್ತಾರೆ.

ಆ ಕಾಲದ ಹಲವು ಮುಸ್ಲಿಮ್ ನಾಯಕರು ಇಸ್ಲಾಮಿಗೆ ಮತಾಂತರ ಹೊಂದುವಂತೆ ಅಂಬೇಡ್ಕರ್ ಅವರನ್ನು ಪುಸಲಾಯಿಸುತ್ತಾರೆ. 20ನೇ ಶತಮಾನದ ಪೂರ್ವಾರ್ಧದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹಲವು ಮಂದಿ ಪರಿಗಣಿಸಿದ್ದ ಹೈದರಾಬಾದಿನ ನಿಜಾಮ, ಮತಾಂತರಕ್ಕಾಗಿ ಅಂಬೇಡ್ಕರ್ ಅವರಿಗೆ 5 ಕೋಟಿ ರೂ. ನೀಡಲು ಮುಂದೆ ಬಂದಿದ್ದ. ಆದರೆ ಅಂಬೇಡ್ಕರ್ ಅವರಿಗೆ ವೈಯಕ್ತಿಕ ಆರ್ಥಿಕ ಲಾಭಕ್ಕಿಂತ, ನೀತಿತತ್ವ ಮತ್ತು ಸಿದ್ಧಾಂತ ಮುಖ್ಯವಾಗಿದ್ದ ಕಾರಣ ನಿಜಾಮನ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಾರೆ. ಅಂಬೇಡ್ಕರ್ ಇಸ್ಲಾಮ್‌ನಲ್ಲಿ ಬಹಳಷ್ಟು ಸಾತ್ವಿಕ ಚಿಂತನೆಗಳನ್ನು ಗುರುತಿಸಿದರೂ, ಅದರಲ್ಲಿದ್ದ ಪರ್ದಾ ಮತ್ತು ಬಹು ಪತ್ನಿತ್ವದ ಆಚರಣೆಗಳು ಸ್ತ್ರೀಯರಿಗೆ ತಕ್ಕುದಾದ ಘನತೆಯನ್ನು ಒದಗಿಸುತ್ತಿಲ್ಲ ಎಂದು ಅವರು ಭಾವಿಸುತ್ತಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದಂತೆ, ಈಗಿನ ಕಾಲದ ಕ್ರಿಶ್ಚಿಯನ್ನರು ಏಸುಕ್ರಿಸ್ತನ ತತ್ವಗಳಿಂದ ದೂರವಿದ್ದಾರೆ. ಕ್ರೈಸ್ತ ಧರ್ಮಕ್ಕೆ ದಲಿತರ ಸಾಮೂಹಿಕ ಮತಾಂತರದಿಂದ ಭಾರತ ಉಪಖಂಡದಲ್ಲಿ ಬ್ರಿಟೀಷರ ಹಿಡಿತ ಇನ್ನಷ್ಟು ಬಲಗೊಳ್ಳಬಹುದು ಎಂದು ಅಂಬೇಡ್ಕರ್ ಅವರು ಭಯಪಡುತ್ತಾರೆ. ದೇಶ ಏಕತೆಗಿಂತ ಹೆಚ್ಚಾಗಿ ದಲಿತರ ಮುಕ್ತಿಯನ್ನು ಬಾಬಾಸಾಹೇಬ್ ಪರಿಗಣಿಸಿರಲಿಲ್ಲ ಎಂಬುವುದು ಇದರಿಂದ ಸ್ಪಷ್ಟ. ಜೈನ ಧರ್ಮ ತನ್ನ ಅನುಯಾಯಿಗಳ ಬೇಡಿಕೆಗಳಿಗೆ ತೀವ್ರವಾದದಂತೆ ಕಂಡು ಬಂದರೆ, ಸಿಖ್ ಧರ್ಮ ಬೇರೆಯೆ ವಿಶೇಷತೆಯನ್ನು ಹೊಂದಿತ್ತು. ಸಿಖ್ ಧರ್ಮದ ಏಕದೇವೋಪಾಸನೆ ಮತ್ತು ಸಮಾನತೆಯ ತತ್ವಗಳು ಅಂಬೇಡ್ಕರ್ ಅವರನ್ನು ಸೆಳೆದಿದ್ದವು. ಈ ಕಾರಣದಿಂದಲೇ ಅವರು ಸಿಖ್ ಧರ್ಮದ ಬಗ್ಗೆ ಇನ್ನಷ್ಟು ಅರಿತುಕೊಳ್ಳಲು ತನ್ನ ಮಗ ಹಾಗೂ ಸೋದರಳಿಯನನ್ನು ಅಮೃತಸರದ ಗುರುದ್ವಾರಕ್ಕೆ ಕಳುಹಿಸುತ್ತಾರೆ. ಅವರು ಸೈದ್ಧಾಂತಿಕವಾಗಿ ಸಿಖ್ ಧರ್ಮದಿಂದ ಪ್ರಭಾವಿತರಾದರೂ, ಒಂದು ವೇಳೆ ದಲಿತರು ಸಿಖ್ ಧರ್ಮಕ್ಕೆ ಮತಾಂತರವಾದರೆ, ಅವರ ರಾಜಕೀಯ ಸಂಚಲನ ಕೇವಲ ಪಂಜಾಬ್‌ಗೆ ಮಾತ್ರ ಸೀಮಿತವಾಗಬಹುದು ಎಂಬ ರಾಜಕೀಯ ಕಾರಣಕ್ಕಾಗಿ ಅದನ್ನು ಕೈಬಿಡುತ್ತಾರೆ.

ಬೌದ್ಧ ಧರ್ಮದಲ್ಲಿ ಅಂತರ್ಗತವಾದ ಹೊಂದಿಕೊಳ್ಳುವ ಗುಣ, ದಯೆ, ಸಮಾನತೆ ಮತ್ತು ಅರಿವು ಅಂಬೇಡ್ಕರ್ ಅವರನ್ನು ಆಕರ್ಷಿಸಿತು. ಬೌದ್ಧರು ಸುಮಾರು ಸಾವಿರ ಅಥವಾ ಸಾವಿರದ ಐದುನೂರು ವರ್ಷಗಳ ಹಿಂದೆಯೇ ಅಮಾನವೀಯ ಅಸ್ಪಶ್ಯತೆಯ ಜಾತಿ ವ್ಯವಸ್ಥೆ ವಿರುದ್ಧ ಸಂಘರ್ಷಕ್ಕೆ ಇಳಿದ ಇತಿಹಾಸ, ದಲಿತರಿಗೆ ಬೌದ್ಧ ಧರ್ಮ ವನ್ನು ಸಹಜ ಧರ್ಮವಾಗಿ ಅಪ್ಪಿಕೊಳ್ಳಲು ದಾರಿ ಮಾಡಿತು. 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮದ 22 ಹೊಸ ಪ್ರತಿಜ್ಞೆಗಳೊಂದಿಗೆ ಹಾಗೂ ತನ್ನ ದುಡಿಮೆಯ 1/20ನೇ ಅಂಶವನ್ನು ದಾನವಾಗಿ ನೀಡುವ ಒತ್ತಾಸೆಯೊಂದಿಗೆ ದಲಿತರನ್ನು ಸಾಮೂಹಿಕವಾಗಿ ಮತಾಂತರದ ಮೂಲಕ 'ನವಯಾನ'ಕ್ಕೆ ಮುನ್ನಡೆಸುತ್ತಾರೆ. ಬಾಬಾಸಾಹೇಬ್ ಅವರು ಯಾವುದೇ ಧಾರ್ಮಿಕ ವ್ಯಕ್ತಿಗಳಿಗೆ ಕಾಯದೆ ಮತಾಂತರ ಪ್ರಕ್ರಿಯೆಯನ್ನು ತಾವೇ ಸ್ವತಃ ಆರಂಭಿಸುವ ಮೂಲಕ 'ನವಯಾನ'ದಲ್ಲಿ ಮಧ್ಯವರ್ತಿಗಳ ಅಗತ್ಯವಿಲ್ಲವೆಂಬುವುದನ್ನು ಸ್ಪಷ್ಟಪಡಿ ಸುತ್ತಾರೆ. ಇದಾದ ಎರಡು ತಿಂಗಳಲ್ಲೇ ಅಂಬೇಡ್ಕರ್ ಅವರು ನಿಧನರಾದರೂ, ಅಷ್ಟರಲ್ಲೇ ನವಯಾನಕ್ಕೆ ಬುದ್ಧ ಮತ್ತು ಧಮ್ಮವನ್ನು ಧರ್ಮಶಾಸ್ತ್ರದ ಬುನಾದಿಯನ್ನಾಗಿಸುತ್ತಾರೆ. ಪ್ರಸ್ತುತ ದೇಶದ ಗೊಂದಲಮಯ ಸಾಮಾಜಿಕ ರಾಜಕೀಯ ವಾತಾವರಣದಲ್ಲಿ ಬಾಬಾಸಾಹೇಬ್ ಅವರ ಸತ್ಯವಾಖ್ಯ ನಿರಂತರವಾಗಿ ಸತ್ಯವಾಗಿ ಅನುರಣಿಸುತ್ತಿದೆ. ಭಾರತದ ಇತಿಹಾಸವು ಕೇವಲ ಬೌದ್ಧ ಧರ್ಮ ಮತ್ತು ಬ್ರಾಹ್ಮಣತ್ವದ ಬದ್ಧವೈರದ ಸಂಘರ್ಷವಾಗಿದೆ. ಭಾರತದ ಬಗ್ಗೆ ಸಮಗ್ರವಾಗಿ ಅರ್ಥೈಸಿಕೊಳ್ಳಬೇಕಿದ್ದರೆ, ಬುದ್ಧ ಹಾಗೂ ಬುದ್ಧಿಸಂ ಕುರಿತು ಅಂಬೇಡ್ಕರ್ ಅವರ 'ನವಯಾನ'ವನ್ನು ಅರಿತುಕೊಳ್ಳಬೇಕಾಗಿದೆ. ಅದು ಸದ್ಯ ನಡೆಯುತ್ತಿರುವ ಸಂಘರ್ಷಗಳಿಗೆ ಬಹುತೇಕ ಪರಿಹಾರವನ್ನು ಒದಗಿಸಲಿದೆ.

Writer - ಚೇತನ್ ಅಹಿಂಸಾ

contributor

Editor - ಚೇತನ್ ಅಹಿಂಸಾ

contributor

Similar News