ದಕ್ಷಿಣದೂರಿನ ಅಸುರರ ಕಥೆಗಳು

Update: 2020-01-03 10:58 GMT

ಹದಿನಾರು ವರ್ಷದ ಚಿದಂಬರಂ ಕೇಳುವ ಒಂದೇ ಪ್ರಶ್ನೆ, ''ಅಪ್ಪ ನಾನು ಮಾಡಿರುವುದು ತಪ್ಪೇ, ಒಪ್ಪಿಕೊಳ್ಳುತ್ತೇನೆ. ಆದರೆ ಅದೇ ತಪ್ಪು ಆ ಉತ್ತರದೂರಿನವನ ಮಗ ಸಹ ಮಾಡಿದ್ದಾನಲ್ಲ? ಅವನು ಯಾಕೆ ಪೊಲೀಸ್ ಸ್ಟೇಷನ್ ಒಳಗಿಲ್ಲ?'' ಈ ಉತ್ತರದೂರಿನವ ಧರಿಸುವ ಬಟ್ಟೆ ಒಂದೊಂದು ಸಲ ಜಾತಿಯದ್ದು, ಒಂದೊಂದು ಸಲ ವರ್ಗದ್ದು, ಒಂದೊಂದು ಸಲ ಅಧಿಕಾರದ್ದು ಅಥವಾ ಧರ್ಮದ್ದು...

ಪತ್ರಕರ್ತೆ, ಲೇಖಕಿ, ಸಿನೆಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಯಾಕೆ ಕಾಡುತಿದೆ ಸುಮ್ಮನೆ(ಅಂಕಣ ಬರಹಗಳು), ತುಂಬೆ ಹೂ (ಜೀವನ ಚರಿತ್ರೆ), ಪೂರ್ವಿ ಕಲ್ಯಾಣಿ ಮತ್ತು ನನ್ನೊಳಗಿನ ಹಾಡು ಕ್ಯೂಬಾ (ನಾಟಕ). ರಾಷ್ಟ್ರಪ್ರಶಸ್ತಿ ವಿಜೇತ 'ನಾತಿಚರಾಮಿ' ಸಿನೆಮಾಕ್ಕೆ ಚಿತ್ರಕತೆ ರಚಿಸಿದ್ದಾರೆ.

ಬಹಳ ಹಿಂದೆ ಒಂದು ಕಾದಂಬರಿಯನ್ನು ಓದಿದ್ದೆ, ನಂತರ ಅದು ಚಲನಚಿತ್ರವೂ ಆಗಿತ್ತು. ಅದರಲ್ಲಿ ನಾಯಕ ಜೈಲರ್. ಅತ್ಯಂತ ಅಪಾಯಕಾರಿ ಕೈದಿಯೊಬ್ಬ ಜೈಲಿನಲ್ಲಿದ್ದಾನೆ. ಅವನನ್ನು ಗಲ್ಲಿಗೇರಿಸಲು ಆಜ್ಞೆಯಾಗಿದೆ. ಅಕಸ್ಮಾತ್ತಾಗಿ ಜೈಲರ್‌ಗೆ ಆತ ತನ್ನ ತಂದೆ ಎನ್ನುವುದು ಗೊತ್ತಾಗುತ್ತದೆ. ತಂದೆಯೊಡನೆ ಮಾತನಾಡುತ್ತಾನೆ. ತಂದೆ ಕೇಳುವುದು ಒಂದೇ ಮಾತು, ದೂರದ ಹಳ್ಳಿಯಲ್ಲಿ ಅನ್ಯಾಯಕ್ಕೆ ಒಳಗಾದ ಗಂಡ ಹೆಂಡತಿ ಇದ್ದಾರೆ, ಅವರಿಗೆ ನ್ಯಾಯ ಒದಗಿಸಿ ಕೊಡುವುದರೊಳಗೆ ನನ್ನ ಬಂಧನವಾಯಿತು. ನಾನು ಸಾಯುವುದರೊಳಗಾಗಿ ಅವರಿಗೆ ನ್ಯಾಯ ಸಿಗಬೇಕು, ಸಹಾಯ ಮಾಡುವೆಯಾ ಎಂದು. ಮಗ ಒಪ್ಪುತ್ತಾನೆ, ಆಗ ತಂದೆ ಒಂದು ಕರಾರು ಹಾಕುತ್ತಾನೆ, ನಿನ್ನ ಅಧಿಕಾರ, ಹಣ, ಪದವಿ, ಸಂಪರ್ಕಗಳು ಯಾವುದನ್ನೂ ಬಳಸಕೂಡದು. ಮಗ ಅದಕ್ಕೂ ಒಪ್ಪುತ್ತಾನೆ. ತನ್ನ ಸೋಶಿಯಲ್ ಕ್ಯಾಪಿಟಲ್ ಇರುವ ಅವನ ಕಂಫರ್ಟ್ ಜೋನ್ ಬಿಟ್ಟು ಅವನು ಆ ದೂರದ ಹಳ್ಳಿಗೆ ಹೋಗುತ್ತಾನೆ. ಇಲ್ಲಿನ ಯಾವ ನ್ಯಾಯ-ಕಾನೂನು ಅಲ್ಲಿ ನಡೆಯುವುದಿಲ್ಲ, ಅಲ್ಲಿರುವುದು ಕಾಡಿನ ನ್ಯಾಯ. ಇವನ ಪ್ರಯತ್ನದ ವಿರುದ್ಧ ಇಡೀ ವ್ಯವಸ್ಥೆಯೇ ನಿಲ್ಲುತ್ತದೆ. ಅಲ್ಲಿನ ಶೋಷಕ ವ್ಯವಸ್ಥೆ ಇಡೀ ಸರಕಾರವನ್ನೇ ತನ್ನ ಬೇಲಿಯಾಗಿಸಿಕೊಂಡಿರುತ್ತದೆ. ಕಡೆಗೆ ಸಂಪೂರ್ಣ ಕೈಕಟ್ಟಿ ಹಾಕಿದಂತಹ ಸಮಯದಲ್ಲಿ ಆತ ಆ ವಿಲನ್‌ನನ್ನು ಕೊಂದು, ಆ ದಂಪತಿಗೆ ನ್ಯಾಯ ಕೊಡಿಸಿ ಅಪ್ಪನ ಮುಂದೆ ಜಯಶಾಲಿಯಂತೆ ನಿಂತು, ಅಪ್ಪ ನೀನು ಹೇಳಿದ ಕೆಲಸ ಮಾಡಿದೆ ಎನ್ನುತ್ತಾನೆ. 'ಹೇಗೆ? ನೀನು ಯಾರು ಎಂದು ಹೇಳಿದೆ?' ಎನ್ನುವ ಪ್ರಶ್ನೆಗೆ, 'ಇಲ್ಲ ಅಪ್ಪ, ಅವನನ್ನು ನಾನು ಕೊಂದೆ, ಅವನು ಸತ್ತಿದ್ದೇ ನ್ಯಾಯ' ಎನ್ನುತ್ತಾನೆ. ಅಪ್ಪ ಆಗ ಹೇಳುತ್ತಾನೆ, 'ಇದೇ ಕೆಲಸವನ್ನೇ ನಾನು ಮಾಡಿದ್ದು, ವಿದ್ಯೆ, ಅಧಿಕಾರ, ಹಣ, ಪ್ರಭಾವ, ಸಂಪರ್ಕ ಯಾವುದೂ ಇಲ್ಲದ ಮನುಷ್ಯನೊಬ್ಬನಿಗೆ ವ್ಯವಸ್ಥೆಯನ್ನು ಎದುರಿಸಲು ಮತ್ತೇನಾದರೂ ದಾರಿಯಿರಬಹುದೇನೋ ಎಂದು ನೋಡಲೆಂದೇ ನಿನ್ನನ್ನು ಕಳುಹಿಸಿದೆ, ನಿನ್ನ ವಿದ್ಯೆ ಆ ದಾರಿಯನ್ನು ಕೊಡಬಹುದೇನೋ ಅನ್ನಿಸಿತ್ತು. ಆದರೆ ಇವ್ಯಾವುದೂ ಇಲ್ಲದ ಮನುಷ್ಯ ಕಡೆಗೂ ತನ್ನ ಕತ್ತಿಯನ್ನೇ ನಂಬಬೇಕು ಎಂದು ಮತ್ತೊಮ್ಮೆ ಸಾಬೀತಾಯಿತು, ಈಗ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಸಾಯಲು ನಾನು ಸಿದ್ಧ' ಎನ್ನುತ್ತಾನೆ. ಈ ಮಾತಿನ ಬಗ್ಗೆ ನನಗೆ ಸಮ್ಮತಿ ಇಲ್ಲ, ಏಕೆಂದರೆ ಹಾಗೆ ಪ್ರತಿಭಟನೆಗೆ ನಿಂತವರನ್ನು ಕಡೆಗೂ ಬಂಧಿಸಲಾಗುತ್ತದೆ ಅಥವಾ ಬಲಿಹಾಕಲಾಗುತ್ತದೆ. ವ್ಯವಸ್ಥೆ ವ್ಯಕ್ತಿಗಿಂತ ಪ್ರಬಲವಾದದ್ದು. ಒಂದು ವ್ಯವಸ್ಥೆಯ ವಿರುದ್ಧ ಹೋರಾಡಲು ಇನ್ನೊಂದು ವ್ಯವಸ್ಥೆಯನ್ನೇ ಕಟ್ಟಬೇಕು ಅಥವಾ ಇರುವ ವ್ಯವಸ್ಥೆಯ ಪಟ್ಟುಗಳನ್ನು ಕರಗತ ಮಾಡಿಕೊಳ್ಳಬೇಕು. ಹೊಸತಾದ ವ್ಯವಸ್ಥೆ ಜನರ ನಡುವಿನಿಂದ, ಜನರ ಮೂಲಕವೇ ಬರಬೇಕು. ಆದರೆ 'ಅಸುರನ್' ನೋಡಿದಾಗ ದಶಕಗಳ ಹಿಂದೆ ಓದಿದ ಈ ಕಾದಂಬರಿ ನೆನಪಾಯಿತು. ಇದೂ ಸಹ ಕಾದಂಬರಿ ಆಧಾರಿತ ಚಿತ್ರವೇ. ಶಿವಸಾಮಿ ಮತ್ತು ಪಚ್ಚಿಯಮ್ಮ, ಪಚ್ಚಿಯಮ್ಮಳ ಅಣ್ಣ ಮತ್ತು ಇಬ್ಬರು ಮಕ್ಕಳ ಸಣ್ಣ ಸಂಸಾರ ಉತ್ತರದೂರಿನ ನರಸಿಂಹನ್ ಜೊತೆಯಲ್ಲಿ ಹೋರಾಡುವ ಕಥೆ. ಎರಡು ವರ್ಗಗಳ ನಡುವೆ ಕಾಲದಿಂದಲೂ ಹೋರಾಟ ನಡೆಯುತ್ತಲೇ ಬಂದಿದೆ, ಒಂದು ವರ್ಗ ವ್ಯವಸ್ಥೆಯ ಎಲ್ಲಾ ಕಟ್ಟುಪಾಡುಗಳನ್ನೂ, ದಂಡ ದಂಡನೆಗಳನ್ನು ತನ್ನ ಜಾತಿ, ಹಣ, ಪ್ರಭಾವದ ಮೂಲಕ ಬಳಸಿಕೊಳ್ಳುತ್ತಲೇ ಇರುತ್ತದೆ. ಇವು ಯಾವುದೂ ಇಲ್ಲದ ಇನ್ನೊಂದು ವರ್ಗಕ್ಕೆ ತನ್ನ ಸಹಾಯಕ್ಕೆ ಯಾರೂ ಬರುವುದಿಲ್ಲ, ಏನೂ ಇರುವುದಿಲ್ಲ ಎಂದು ಗೊತ್ತಾದಾಗ ಏನು ಮಾಡಬೇಕು? ನಿನ್ನೆಯವರೆಗೂ ಚಡ್ಡಿ ಹಾಕಿಕೊಂಡು ಓಡಾಡುತ್ತಿದ್ದ ಕಿರಿಯ ಮಗ ಚಿದಂಬರಂ, ಒಂದೇ ರಾತ್ರಿಯಲ್ಲಿ ಪಂಚೆ ಸುತ್ತಿಕೊಂಡು, ಕೈಯಲ್ಲಿ ಬಾಂಬುಗಳಿರುವ ಚೀಲ ಹಿಡಿದುಕೊಂಡು ನಡೆಯುವುದನ್ನು ನೋಡಿ ಶಿವಸಾಮಿ ನಿಟ್ಟುಸಿರಿಡುತ್ತಾನೆ, 'ನಮ್ಮ ಮನೆ ಮಕ್ಕಳೆಲ್ಲಾ ಹೀಗೆಯೇ ದೊಡ್ಡವರಾಗಬೇಕಲ್ಲ?'. ಇಲ್ಲಿ ಇನ್ನೊಂದು ವಿಡಂಬನೆ ಇದೆ, ತನ್ನ ಅಣ್ಣನನ್ನು ಕೊಂದ ಎನ್ನುವ ಸಿಟ್ಟು, ಅಣ್ಣ ಸತ್ತ ಮೇಲೆ ಅಮ್ಮ ಅರಿವೇ ಇಲ್ಲದಂತೆ ನವೆಯುತ್ತಿದ್ದಾಳೆ ಎನ್ನುವ ಹತಾಶೆಯಲ್ಲಿ ಆತ ಹೋಗಿ 'ಉತ್ತರದ ಊರಿ'ನವನನ್ನು ಕೊಲ್ಲುತ್ತಾನೆ. ಆದರೆ ಕೆಳವರ್ಗದ ಹುಡುಗನೊಬ್ಬ ಮರ್ಯಾದೆಗಾಗಿ ಕೊಲೆ ಮಾಡಿದ ಎಂದು ಒಪ್ಪಿಕೊಳ್ಳುವುದಕ್ಕೂ ತಯಾರಿಲ್ಲದ ಮೇಲ್ವರ್ಗದ ಅವರು ಪೊಲೀಸ್ ಠಾಣೆಯಲ್ಲಿ, ಕಳ್ಳತನ ಮಾಡಲು ಬಂದು, ಆ ಹೊಡೆದಾಟದಲ್ಲಿ ಹುಡುಗ ಕೊಲೆ ಮಾಡಿದ ಎಂದು ಫಿರ್ಯಾದು ಕೊಡುತ್ತಾರೆ. ಅಂದರೆ ದಾಖಲೆಯಾಗಿ ಉಳಿಯುವುದು ಪ್ರತಿಭಟನೆ ಅಲ್ಲ, ಕಳ್ಳತನ. ಅವರ ಪ್ರತಿಭಟನೆಯ ಸುಳಿವನ್ನೂ ಅವರು ಉಳಿಸುವುದಿಲ್ಲ. 'ನಮ್ಮ ಹುಡುಗರಿಗೆ ಒಂದು ಘನತೆಯ ಸ್ಥಳವನ್ನೂ ಕೊಡುವುದಿಲ್ಲ ಇವರು' ಶಿವಸಾಮಿ ನಿಟ್ಟುಸಿರಿಡುತ್ತಾನೆ.

  ಇತ್ತೀಚೆಗೆ ನೋಡಿದ ಇನ್ನೆರಡು ಚಿತ್ರಗಳು ತಮ್ಮ ಮಿತಿಗಳ ನಡುವೆಯೂ ಇದೇ ಭಾಷೆಯಲ್ಲಿ ಮಾತನಾಡಿದ್ದವು. ಮೊದಲನೆಯದು ತೆಲುಗಿನ 'ರಂಗಸ್ಥಳಂ', ಇನ್ನೊಂದು ತಮಿಳಿನದೇ ಆದ 'ಕಾಲಾ'. ಈ ಮೂರೂ ಚಿತ್ರಗಳೂ ಸಮಾಜದ ಶ್ರೇಣೀಕೃತ ವ್ಯವಸ್ಥೆಗೆ ಸಂಬಂಧಿಸಿದ ಕಥೆಗಳು. 'ಅಸುರನ್' ಮತ್ತು 'ರಂಗಸ್ಥಳಂ' ಹಳ್ಳಿಯಲ್ಲಿ ನಡೆಯುವ ಕಥೆ ಮತ್ತು ಎರಡೂ ಕಳೆದ ಶತಮಾನದ ಕಾಲಘಟ್ಟದಲ್ಲಿ ನಡೆದವು. ಈ ಎರಡೂ ಕಥೆಗಳಲ್ಲೂ ಆರ್ಥಿಕ ಮೂಲದ ಶ್ರೇಣಿ ಇದೆ ಮತ್ತು ಅದಕ್ಕಿಂತಲೂ ಪ್ರಬಲವಾಗಿ ಜಾತಿಮೂಲದ ಶ್ರೇಣಿ ಇದೆ. 'ಕಾಲಾ' ಈ ಕಾಲಘಟ್ಟದಲ್ಲಿ, ಮುಂಬೈ ನಗರದಲ್ಲಿ ನಡೆಯುವುದು. ಇದರಲ್ಲಿ ಇರುವುದು ಮುಖ್ಯವಾಗಿ ವರ್ಗ ಸಂಘರ್ಷ ಮತ್ತು ಜನಾಂಗೀಯ ಸಂಘರ್ಷ. ಇಲ್ಲೂ ಸಹ ಆರ್ಯತನವನ್ನು ಪ್ರತಿನಿಧಿಸುವ ಬಿಳಿಬಟ್ಟೆ ಧರಿಸುವ, ಅಮೃತಶಿಲೆಯ ಮನೆಯಲ್ಲಿ ವಾಸಿಸುವ ನೆಲದಾಹಿ ಶ್ರೀಮಂತ ಇದ್ದಾನೆ. ಅವನಿಗೆದುರಾಗಿ ಕಪ್ಪು ಬಟ್ಟೆ ಧರಿಸುವ, ಕಪ್ಪನ್ನು ಅಸ್ಮಿತೆಯಂತೆ ಭಾವಿಸುವ ಧಾರಾವಿ ವಾಸಿ ಕಾಲಾ ಇದ್ದಾನೆ. ಧಾರಾವಿಯ ನೆಲ ಶ್ರೀಮಂತನಿಗೆ ಹಣದ ಮೂಟೆಯಾಗಿ ಕಾಣಿಸುತ್ತಿದೆ. ಹೇಗಾದರೂ ಧಾರಾವಿಯನ್ನು ಝಗಮಗಿಸುವ ಮುಂಬೈನ ತುಣುಕನ್ನಾಗಿಸಬೇಕು, ಆ ಚಿತ್ರವನ್ನು ಅವರ ಕಣ್ಣುಗಳ ಮುಂದೆ ಪಟ್ಟಿಯಾಗಿ ಕಟ್ಟಿ, ಆ ಮೂಲಕ ಅಲ್ಲಿ ನೆಲೆಯೂರಿ ನಿಂತವರನ್ನು ಒಕ್ಕಲೆಬ್ಬಿಸಬೇಕು ಎನ್ನುವುದು ಶ್ರೀಮಂತನ ತಂತ್ರ. ಧಾರಾವಿಯಲ್ಲಿರುವ ಕೆಲವರಿಗೆ, ಧಾರಾವಿಯನ್ನು ದಾಟುವುದು ಸಾಧ್ಯ, ಸೋಕಾಲ್ಡ್ ಕೊಳೆಗೇರಿಯನ್ನು ದಾಟಿ ಹೊರಟು ಒಂದು ಒಳ್ಳೆಯ ವಿಳಾಸ ಸಂಪಾದಿಸಿಕೊಳ್ಳಬೇಕು ಎನ್ನುವ ಆಸೆ. ಆದರೆ ಹಾಗೆ ದಾಟಿದ ಮರುಕ್ಷಣ ನಮ್ಮ ಶಕ್ತಿಯ ಸಾಂದ್ರತೆ ಕಡಿಮೆಯಾಗಿ, ಅವರಿಗೆ ನಮ್ಮನ್ನು ತುಳಿಯುವುದು ಸುಲಭ ಎನ್ನುವುದು ಕಾಲಾನ ಮಾತು, ಧಾರಾವಿ ಅವರೆಲ್ಲರ ಅಸ್ಮಿತೆ. 'ನೆಲ ನಿನಗೆ ಆಸ್ತಿ, ನಮಗೆ ಬದುಕು' ಎನ್ನುವುದರಲ್ಲಿ ಆತ ಎರಡು ವರ್ಗಗಳ ನಡುವಿನ ಅಂತರವನ್ನು ತೆಗೆದಿಡುತ್ತಾನೆ. ಅಸುರನ್ ಮತ್ತು ಕಾಲಾ ಎರಡರಲ್ಲಿಯೂ ಸೋ ಕಾಲ್ಡ್ 'ಉತ್ತರದವರು' ಮತ್ತು ಸೋ ಕಾಲ್ಡ್ 'ದೈವ ಕುಲದವರ' ಎದುರಲ್ಲಿ ದಕ್ಷಿಣದ ಊರಿನವರು, ದೈತ್ಯ ಜನಾಂಗದವರು ನಿಂತು ಹೋರಾಡುತ್ತಾರೆ. ಈ ಎರಡೂ ಚಿತ್ರಗಳಲ್ಲಿಯೂ ಕಥೆಯನ್ನು ದಕ್ಷಿಣದವರು ಬರೆಯುತ್ತಾರೆ. 'ಕಾಲಾ' ಚಿತ್ರಕ್ಕೆ ರಜನಿಕಾಂತ್ ಬಲ, ಆದರೆ ಕಥೆಗೆ ಅವರೇ ತೊಡಕು ಸಹ. ಕಥೆಯನ್ನೂ ಮೀರಿ ಅವರ ಪ್ರಭಾವಳಿ ಚಿತ್ರವನ್ನು ಆಕ್ರಮಿಸಿಕೊಂಡುಬಿಡುತ್ತದೆ.

ಇಂತಹದೇ ಕಾರಣಗಳಿಗಾಗಿ ಗಮನಿಸಬೇಕಾದ ಮತ್ತೊಂದು ಚಿತ್ರ 'ರಂಗಸ್ಥಳಂ'. ಇದರಲ್ಲಿ ನಾಯಕ ರಾಮ್‌ಚರಣ್‌ನನ್ನೂ ಮೀರಿ ಕಥೆ ಆವರಿಸಿಕೊಳ್ಳುತ್ತದೆ. ನಾಯಕ ಕಿವುಡಾಗಿರುವುದು ಮತ್ತು ಆ ಮೂಲಕ ಏನೋ ಮಹತ್ತನ್ನು ಅವನ ವ್ಯಕ್ತಿತ್ವಕ್ಕೆ ಆರೋಪಿಸದೆ ಇರುವುದು ಸಹ ಕಥೆಗೆ ಬಲ ಕೊಡುತ್ತದೆ. ಇಲ್ಲಿ ಜಾತಿಯ ಶ್ರೇಣಿ ವ್ಯವಸ್ಥೆ ವಿದ್ಯೆ ಮತ್ತು ಅಧಿಕಾರದ ಶ್ರೇಣಿ ವ್ಯವಸ್ಥೆಯನ್ನೂ ಮೀರಿದೆ. ಸೋಕಾಲ್ಡ್ ಕೆಳಜಾತಿಗೆ ಸೇರಿದ ಆ ಊರಿನ ಬಿಡಿಓ ಊರಿನ ರೆಡ್ಡಿಯ ಮನೆಗೆ ಬಂದಾಗ ತಾನು ಟೀ ಕುಡಿದ ಲೋಟಾವನ್ನು ತಾನೇ ತೊಳೆದಿಡಬೇಕಾಗುತ್ತದೆ.

ಅದು ಅವನ ಅಪಮಾನವನ್ನು ದುಪ್ಪಟ್ಟಾಗಿಸುತ್ತದೆ. ಅವನ ವಿದ್ಯೆ, ಅಧಿಕಾರ ಯಾವುದೂ ಅವನಿಗೆ ಸಮಾನತೆ ಕೊಡಿಸುವುದಿಲ್ಲ. ರೆಡ್ಡಿಯ ಮನೆಯ ಅಂಗಳದಲ್ಲಿ ಕೆಳವರ್ಗದ ಜನ ಚಪ್ಪಲಿ ಹಾಕಿಕೊಂಡು ನಡೆಯುವಂತಿಲ್ಲ. ಇದೆಲ್ಲಾ ಒಂದು ಕಡೆಯಾದರೆ, ಆ ಚಿತ್ರ ಇನ್ನೊಂದು ದನಿ ಎತ್ತುತ್ತದೆ, ಅದು ದೊಡ್ಡಮಟ್ಟದಲ್ಲಿ ಚರ್ಚೆ ಆಗಲಿಲ್ಲ. ಚಿತ್ರದಲ್ಲಿ ಕಮ್ಯುನಿಸ್ಟ್ ಪಕ್ಷದ ಮುಂದಾಳು ಒಬ್ಬನಿರುತ್ತಾನೆ. ಜನರನ್ನೆಲ್ಲಾ ಒಂದುಗೂಡಿಸಿ ರೆಡ್ಡಿಯ ದೌರ್ಜನ್ಯದ ವಿರುದ್ಧ ಪ್ರತಿಭಟನೆಯ ದನಿ ಮೊಳಗಿಸುತ್ತಿರುತ್ತಾರೆ. ಕೆಳವರ್ಗದ, ನಾಯಕನ ಅಣ್ಣ ಆತನ ಮಗಳನ್ನು ಪ್ರೇಮಿಸುತ್ತಿರುತ್ತಾನೆ ಎನ್ನುವ ಒಂದೇ ಕಾರಣಕ್ಕೆ ಈ ಮುಂದಾಳು ಅವನ ಕೊಲೆ ಮಾಡಿಸುತ್ತಾನೆ. ಹೊರಗೆ ಸಮಾನತೆಯ ಕಹಳೆ ಮೊಳಗಿಸುವ ಅವನ ಮನೆಯಲ್ಲಿ ಜಾತಿಯ ಎಲ್ಲಾ ಪ್ರಕ್ರಿಯೆ, ಪದ್ಧತಿ, ಮಡಿ ಮೈಲಿಗೆಗಳನ್ನು ಪಾಲಿಸಲಾಗುತ್ತಿರುತ್ತದೆ. ವರ್ಗಪ್ರೇರಿತ ಅಸಮಾನತೆಯ ವಿರುದ್ಧ ಹೋರಾಡಿದಷ್ಟು ಸುಲಭವಲ್ಲ ಜಾತಿಪ್ರೇರಿತ ಅಸಮಾನತೆಯ ವಿರುದ್ಧ ಹೋರಾಡುವುದು. ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿಯೇ ಪರಿಶಿಷ್ಟ ವರ್ಗಕ್ಕೇ ಸೇರಿದ, ಆದರೆ ಎರಡು ಭಿನ್ನ ಭಿನ್ನ ಜಾತಿಗಳಿಗೆ ಸೇರಿದ ಗಂಡು ಹೆಣ್ಣು ಪ್ರೇಮಿಸಿ ಮದುವೆಯಾದ ಸಿಟ್ಟಿಗೆ, ಮದುವೆಯ ವರ್ಷಗಳ ನಂತರ, ಆ ದಂಪತಿಗೆ ಮಕ್ಕಳಾದ ನಂತರ, ಅವರು ಜಾತ್ರೆಗೆಂದು ಹುಟ್ಟಿದೂರಿಗೆ ಬಂದಾಗ, ಹೆಣ್ಣಿನ ಮನೆಯವರು ಗಂಡನ್ನು ಕೊಚ್ಚಿಕೊಂದ ವರದಿ ಓದುತ್ತಿದ್ದೇನೆ, ನಿಟ್ಟುಸಿರಾಗಿದ್ದೇನೆ.

ಮೇಲಿನ ಮೂರು ಚಿತ್ರಗಳಲ್ಲಿ, ಎರಡು ಚಿತ್ರಗಳಲ್ಲಿನ ಒಂದು ಸಮಾನ ಅಂಶವೆಂದರೆ ಚಿತ್ರದ ಕಥೆಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಅವರು ಚಿತ್ರದ ಅಥೆಂಟಿಸಿಟಿ ಮತ್ತು ಕಥಾವರಣಕ್ಕೆ ಕೊಟ್ಟಿದ್ದು. 'ರಂಗಸ್ಥಳಂ' ಮತ್ತು 'ಅಸುರನ್' ಚಿತ್ರದಲ್ಲಿ ಕಥೆ ನಡೆಯುವ ಪ್ರಾಂತಗಳದ್ದೇ ಭಾಷಾಪ್ರಯೋಗವನ್ನು ಬಳಸಲಾಗಿತ್ತು. 70-80ರ ದಶಕದಲ್ಲಿ ಬಳಕೆಯಲ್ಲಿದ್ದ ಹಲವಾರು ಪದಗಳನ್ನು 'ರಂಗಸ್ಥಳಂ'ನ ಹಾಡುಗಳಲ್ಲಿ ನೋಡಬಹುದಿತ್ತು. ಇಲ್ಲಿನ ಕೇರಿ, ಮನೆ, ರೆಡ್ಡಿಯ ಚುಟ್ಟಾ, ಟ್ರ್ಯಾನ್ಸಿಸ್ಟರ್, ಬೆಲ್ ಬಾಟಂ ಪ್ಯಾಂಟು ಎಲ್ಲವೂ ಕಥೆ ನಡೆಯುವ ಕಾಲಕ್ಕೆ ಹೊಂದುವ ಹಾಗೆ ಎಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಅಸುರನ್ ಚಿತ್ರದಲ್ಲೂ ಹಾಗೆಯೇ. ಒಂದು ಪ್ರಾಂತದ ಒಂದು ಭಾಷೆಯೇ ಪ್ರಧಾನ ಅಥವಾ ಶ್ರೇಷ್ಠ ಎನ್ನುವ ಸಾಮಾನ್ಯವಾದವನ್ನು ಬದಿಗೊತ್ತಿ ಭಾಷೆಯ ಸಕಲ ಸೊಗಡಿನ ಜೊತೆಯಲ್ಲಿ ಅದನ್ನು ಬಳಸಿಕೊಂಡಾಗ ಸಿಗುವ ಅಥೆಂಟಿಸಿಟಿ ಭಾಷೆಯ ಮಟ್ಟಿಗೆ ಒಂದು ದೊಡ್ಡ ಹೆಜ್ಜೆಯೇ ಸರಿ. ಇಲ್ಲಿನ ವ್ಯಕ್ತಿಗಳನ್ನು ಸ್ಟುಡಿಯೋದಲ್ಲಿ ತಯಾರು ಮಾಡಿ, ಸ್ಟುಡಿಯೋದ ಇನ್ನೊಂದು ಫ್ಲೋರಿಗೆ ಕೂರಿಸಿದ ಹಾಗಿರಲಿಲ್ಲ. ಹಾಗಾಗಿ ಕಲಾನಿರ್ದೇಶನ ಮತ್ತು ಸಂಭಾಷಣೆ ಎರಡೂ ಚಿತ್ರಗಳ ಶಕ್ತಿ.

ಅಪ್ಪ ಅಮ್ಮನ ಕೊಲೆಯಾಗಿ, ರಕ್ತ ಕೋಡಿ ಹರಿಯುತ್ತಿದೆ. ಅದರ ಮೇಲೆ ಕಾಲೂರಿದ ಕಂದ ಪುಟ್ಟಪುಟ್ಟ ಹೆಜ್ಜೆ ಗಳನ್ನಿಟ್ಟುಕೊಂಡು ನಡೆಯುವುದು, ಆ ಪುಟಾಣಿ ಪಾದಗಳ ರಕ್ತದ ಅಚ್ಚಿನೊಂದಿಗೆ ಚಿತ್ರ ಮುಗಿಯುತ್ತದೆ. ಇದು ಕ್ರೌರ್ಯವೆಂದರೆ ಕ್ರೌರ್ಯ, ಜಾತಿ ಪ್ರಜ್ಞೆಯ ಕೊಲೆಗಡುಕ ಮನಸ್ಸುಗಳ ಹೆಜ್ಜೆಗುರುತುಗಳ ಅತ್ಯಂತ ಪರಿಣಾಮಕಾರಿ ಚಿತ್ರ ಎಂದರೆ ಅದೂ ಹೌದು.

ಅಸುರನ್ ಧನುಷ್ ವೃತ್ತಿ ಬದುಕಿನ ಅತ್ಯಂತ ಪರಿಣಾಮಕಾರಿ ಚಿತ್ರಗಳಲ್ಲಿ ಒಂದು. ವೆಟ್ರಿಮಾರನ್ ಮತ್ತು ಧನುಷ್ ಜೋಡಿ ಸೇರಿ ಭಾರಿಸಿದ ಶತಕ ಇದು. ಧನುಷ್ ಚಿತ್ರರಂಗಕ್ಕೆ ಬಂದಾಗ, ಪೀಚಲು ದೇಹದ ಈ ಹುಡುಗನನ್ನು ನೋಡಿ ನಕ್ಕವರು ಬೆರಗಾಗುವ ಹಾಗೆ ಈ ಹುಡುಗ ಬೆಳೆದ. ಇತ್ತೀಚಿನ ಕೆಲವು ಕಮರ್ಷಿಯಲ್ ಚಿತ್ರಗಳಲ್ಲಿ ಮಾವ ರಜನಿಕಾಂತ್ ರನ್ನು ಅನುಕರಿಸುತ್ತಿದ್ದಾನೆ ಎಂದು ಅನ್ನಿಸುವ ಸಮಯದಲ್ಲಿ ಇಂತಹ ಒಂದು ಚಿತ್ರವನ್ನು ಕೊಟ್ಟಿದ್ದಾನೆ. ಚಿತ್ರದ ಮೊದಲ ಭಾಗದಲ್ಲಿ ಶಿವಸಾಮಿ ಹದಿಹರೆಯದ, ರಕ್ತದ ಬಿಸಿ ಧಗಧಗ ಎಂದು ಉರಿಯುವ ಯುವಕ. ಊರಿನ ಸಾಹುಕಾರನ ಜಮೀನಿನಲ್ಲಿ ಸೇಂದಿ ಕಾಯಿಸುತ್ತಿರುತ್ತಾನೆ. ಅವನು ಒಬ್ಬಾತನನ್ನು ಯಜಮಾನರ ಬಳಿ ಕೆಲಸಕ್ಕೆ ಸೇರಿಸುತ್ತಾನೆ. ಆತ ಯಜಮಾನರ ಮನೆ 'ಒಳಗೆ' ಹೊಕ್ಕಬಲ್ಲಾತ. ಶಿವಸಾಮಿ ಹೊಸ್ತಿಲಾಚೆ ನಿಲ್ಲಬೇಕಾದವನು. ಶಿವಸಾಮಿಯ ಅಣ್ಣ ಒಬ್ಬ ಹೋರಾಟಗಾರ, ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಸಮಾಜದ ಕೆಳಜಾತಿಗಳ ಜನರಿಗೆ 'ಪಂಚಮಿ ಭೂಮಿ' ಎಂದು ಜಮೀನು ಬರೆದುಕೊಟ್ಟು ಹೋಗಿರುತ್ತಾರೆ. ಅದನ್ನು ಪರಭಾರೆ ಮಾಡುವಂತಿಲ್ಲ. ಸಾಲ ಕೊಟ್ಟೋ, ಬಡ್ಡಿ ಬೆಳಸಿಯೋ ಆ ಜಮೀನನ್ನು ಸಾಹುಕಾರ ತನ್ನ ಹೆಸರಿಗೆ ಬರೆಸಿಕೊಂಡಿರುತ್ತಾನೆ. ಶಿವಸಾಮಿಯ ಅಣ್ಣ ಆ ನೆಲವನ್ನು ಮತ್ತೆ ತನ್ನವರಿಗೆ ಕೊಡಿಸಬೇಕು ಎಂದು ಹೊಡೆದಾಡುತ್ತಿರುತ್ತಾನೆ. ಮಣ್ಣು ಇಲ್ಲಿ ಸಾಹುಕಾರನ ಕೋಪಕ್ಕೆ ಮೂಲಕಾರಣ ಆಗಿರುತ್ತದೆ. ಎಲ್ಲಿಯವರೆಗೂ ಶಿವಸಾಮಿ ತನ್ನ ಕಾಲಡಿಯಲ್ಲಿ ಇದ್ದಾನೆ ಎನ್ನುವ ಗ್ಯಾರಂಟಿ ಇರುತ್ತದೆಯೋ ಅಲ್ಲಿಯವರೆಗೂ ಆತನನ್ನು ಮನೆಮಗ ಎಂದು ಹೇಳುವ ಸಾಹುಕಾರ, ಅವನು ತಲೆ ಎತ್ತಿ ನಿಲ್ಲುತ್ತಿದ್ದಾನೆ ಎಂದು ಅನ್ನಿಸಿದ ಕೂಡಲೇ ಪ್ರತಿಕಾರಕ್ಕೆ ಸಿದ್ಧನಾಗುತ್ತಾನೆ. ಶಿವಸಾಮಿ ಎದುರಿಸಿ ನಿಂತ ಎನ್ನುವ ಕಾರಣಕ್ಕೆ ಅವನ ಗುಡಿಸಲನ್ನು ಸುಟ್ಟು ಬೂದಿ ಮಾಡಲಾಗುತ್ತದೆ. ತನ್ನ ಸಿಟ್ಟಿನ ಪರಿಣಾಮಕ್ಕೆ ಇಡೀ ಮನೆ ನಾಶವಾದದ್ದನ್ನು, ಸಮುದಾಯವೇ ಹಾಳಾದದ್ದನ್ನು ಕಂಡ ಆತ ಸಿಟ್ಟನ್ನು ಕಟ್ಟಿಟ್ಟು, ತಲೆಬಗ್ಗಿಸಿ ಬದುಕುವುದನ್ನು ರೂಢಿಸಿಕೊಳ್ಳುತ್ತಾನೆ. ಆಗ ಅವನ ಬಾಳಿಗೆ ಬಂದಾಕೆ ಪಚ್ಚಿಯಮ್ಮ, (ಮಂಜು ವಾರಿಯರ್). ಅವರಿಗೆ ಇಬ್ಬರು ಮಕ್ಕಳು. ಸಿಟ್ಟೇ ಇಲ್ಲದಂತೆ, ಸ್ವಾಭಿಮಾನವೇ ಗೊತ್ತಿಲ್ಲದಂತೆ ಬದುಕುತ್ತಿರುವ ಅಪ್ಪ ಎಂದರೆ ಇಬ್ಬರು ಗಂಡು ಮಕ್ಕಳಿಗೆ ಅದರಲ್ಲೂ ಚಿಕ್ಕ ಮಗನಿಗೆ ಸಸಾರ. ಉತ್ತರದೂರಿನವನ ಎಕರೆಗಟ್ಟಲೆ ನಡುವಿನಲ್ಲಿ ಶಿವಸಾಮಿಯದು ಮೂರೆಕರೆ ಭೂಮಿ. ಸಿಮೆಂಟು ಫ್ಯಾಕ್ಟರಿ ಕಟ್ಟುತ್ತಿರುವ ಅವನಿಗೆ ಈ ಮೂರೆಕರೆ ಕಣ್ಣು ಚುಚ್ಚುತ್ತಿರುತ್ತದೆ. ಮಣ್ಣು ಮತ್ತೆ ಎರಡು ಊರುಗಳ, ಈ ಎರಡು ಮನೆಗಳ ನಡುವಿನ ಕಲಹಕ್ಕೆ ಕಾರಣವಾಗುತ್ತದೆ. ಸಿಟ್ಟುಸೆಡವಿನ ಪಚ್ಚಿಯಮ್ಮಳಾಗಿ ಮಂಜು ವಾರಿಯರ್ ಅಭಿನಯ ಮನಮುಟ್ಟುತ್ತದೆ. ಅನ್ಯಾಯವಾಗಿ ಜೈಲಿಗೆ ಹೋದ ಮಗನನ್ನು ಬಿಡಿಸುವ ಸಲುವಾಗಿ ಶಿವಸಾಮಿ ಊರಿನ ಎಲ್ಲಾ ಮನೆಗಳವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಬಂದಿದ್ದಾನೆ ಎಂದು ಗೊತ್ತಾದಾಗ ಸಿಡಿದು ನಿಲ್ಲುತ್ತಾಳೆ. ಆಗ ಶಿವಸಾಮಿ ಹೇಳುವುದು ಒಂದೇ ಮಾತು, 'ಮಗನಿಗೆ ಏನಾದರೂ ಆದರೆ ಈ ಮರ್ಯಾದೆ ಇಟ್ಟುಕೊಂಡು ಏನು ಮಾಡಲಿ? ಮಕ್ಕಳನ್ನು ಕಾಪಾಡಿಕೊಳ್ಳಬೇಕು'? ಕಾಲ ಶಿವಸಾಮಿಯನ್ನು ಈ ಪರಿಗೆ ಮಾಗಿಸಿದೆ. ಆದರೆ ಶಿವಸಾಮಿಯ ಹಿರಿಮಗ ಅದನ್ನು ಸಹಿಸುವುದಿಲ್ಲ, ಅವನು ತಿರುಗಿ ನಿಂತ ಎನ್ನುವ ಕಾರಣಕ್ಕೆ ಅವನ ಕೊಲೆಯಾಗುತ್ತದೆ, ಸಾಕ್ಷ್ಯ ಸಿಗದಿರಲಿ ಎಂದು ತಲೆಯನ್ನೇ ಕತ್ತರಿಸಲಾಗಿರುತ್ತದೆ. ಈ ಕೊಲೆಗೆ ಪಾಠ ಕಲಿಸಬೇಕು ಎಂದು ಎರಡನೆಯ ಮಗ ಕೊಲೆ ಮಾಡುತ್ತಾನೆ. ಆದರೂ ಅವನಿಗೆ ಅಪ್ಪನ ಮೇಲೆ ಸಿಟ್ಟು, ಅವನ 'ಹೇಡಿತನ' ಎಂದರೆ ಅಸಹ್ಯ. ಅಣ್ಣನಿಗೆ ಬದಲು ನೀನೇ ಸಾಯಬೇಕಾಗಿತ್ತು ಎಂದು ಸಹ ಅಂದು ಬಿಡುತ್ತಾನೆ. ಶಿವಸಾಮಿ ಆಗಲೂ ಮೌನವಾಗೇ ದುಃಖಿಸುತ್ತಾನೆ. ಊರಿನ ಸಾಹುಕಾರ ಹಂದಿಕೊರಮರ ಜಾತಿಗೆ ಸೇರಿದ, ಶಿವಸಾಮಿಯ ಸಮುದಾಯದವನನ್ನೇ ಇವನ ಮೇಲೆ ಛೂ ಬಿಡುತ್ತಾನೆ. ಬೇಟೆನಾಯಿಗಳ ಜೊತೆಯಲ್ಲಿ ಆತ ಬಂದು ಎರಡನೆಯ ಮಗನ ಮೇಲೆ ಬೀಳುತ್ತಾನೆ, ಶಿವಸಾಮಿ ಆಗ ಕೋಲು ಕೈಗೆತ್ತಿಕೊಳ್ಳುತ್ತಾನೆ. ಮಧ್ಯಂತರಕ್ಕೆ ಮೊದಲು ಬರುವ ಈ ದೃಶ್ಯ ಚಿತ್ರದ ಟರ್ನಿಂಗ್ ಪಾಯಿಂಟ್. ಚಿದಂಬರನ ಕಣ್ಣುಗಳಲ್ಲಿ ಅಪ್ಪ ದೊಡ್ಡವನಾಗಿ ಬೆಳೆದ ಕ್ಷಣ ಅದು. ಹೋರಾಟದ ಕಡೆಯ ಘಟ್ಟದಲ್ಲಿ ಮಗ 'ಅಪ್ಪ ಇವನೇ ಅಣ್ಣನನ್ನು ಕೊಂದದ್ದು, ಕೊಂದುಬಿಡು ಅವನನ್ನು' ಎಂದು ಮಚ್ಚು ಎಸೆಯುತ್ತಾನೆ. ಆದರೆ ಶಿವಸಾಮಿ ಕೊಲ್ಲುವುದಿಲ್ಲ. ಕೊಂದು ಬರುವ ಗೆಲುವು ಕ್ಷಣಿಕ, ಅದರ ಪರಿಣಾಮ ಭೀಕರ ಎನ್ನುವುದು ಈಗ ಅವನಿಗೆ ಅರಿವಾಗಿದೆ. ಈ ಚಿತ್ರದ ಇನ್ನೊಂದು ಭಿನ್ನತೆ ಎಂದರೆ ಇಲ್ಲಿ ನಾಯಕ ಜನಸಾಮಾನ್ಯರ ನಡುವಿನಲ್ಲೇ ಇರುವವನು. ಅವನಿಗೆ ಯಾವುದೇ ಅತಿಮಾನುಷ ಶಕ್ತಿ ಇಲ್ಲ, ಆತನ 'ಹೀರೋಯಿಸಂ' ಕಾನೂನಿನ ಪರಧಿಯನ್ನು ಮೀರಿದ್ದಲ್ಲ. ಹೀಗಾಗಿ ಕಥೆಯ ಎರಡನೆಯ ಭಾಗದಲ್ಲಿ ಶಿವಸಾಮಿ ಕಾನೂನಿನ ಬೇಲಿಯ ಒಳಗಡೆಯೇ ಪರಿಹಾರ ಹುಡುಕಲು ಪ್ರಯತ್ನಿಸುತ್ತಾನೆ. ಮದುವೆಗೆ ಮೊದಲು ತನಗೆ ಪರಿಚಯವಿರುವ ವಕೀಲರ ನೆರವಿನಿಂದ ಕಾನೂನಿಗೆ ಶರಣಾಗತನಾಗಿ, ಶಿಕ್ಷೆ ಅನುಭವಿಸಿ ಬಂದು ಪಚ್ಚಿಯಮ್ಮಳನ್ನು ಮದುವೆಯಾಗುತ್ತಾನೆ.

ಎರಡನೆಯ ಸಲವೂ ಅದೇ ವಕೀಲರ ನೆರವಿನಿಂದ, ಕಾನೂನಿಗೆ ಮೊರೆ ಹೋಗುತ್ತಾನೆ. ಈ ಪ್ರಕ್ರಿಯೆಯಲ್ಲಿ ಸಂಧಾನ ಮಾಡಿಕೊಂಡು ತನ್ನ ಮೂರೆಕರೆ ನೆಲವನ್ನೂ ಬರೆದುಕೊಡುತ್ತಾನೆ. ಆದರೆ ಉತ್ತರದೂರಿನ ಆ ಸಾಹುಕಾರ ಆ ಸಂಧಾನದ ಪ್ರಕಾರ ನಡೆದುಕೊಳ್ಳುವುದಿಲ್ಲ ತನ್ನ ಮರಿಯನ್ನು ಎಳೆದುಕೊಂಡು ಹೋದರೆ ಬಂದು ಕಾದು, ತನ್ನ ಮರಿಯನ್ನು ಕರೆದುಕೊಂಡು ಹೋಗುವ ಹುಲಿಯಂತೆ ಶಿವಸಾಮಿ ಬಂದು ಹೋರಾಡಿ ತನ್ನ ಮಗನನ್ನು ಕರೆದುಕೊಂಡು ಹೋಗುತ್ತಾನೆ. ಕಡೆಯ ದೃಶ್ಯದಲ್ಲಿ ಕೊಲೆಯ ಆರೋಪವನ್ನು ತನ್ನ ತಲೆಯ ಮೇಲೆ ಹಾಕಿಕೊಂಡು ಆತ ನ್ಯಾಯಾಲಯಕ್ಕೆ ಶರಣಾಗುತ್ತಿರುತ್ತಾನೆ, ಆಗ ಅವನ ಮುಖದಲ್ಲಿ ಒಂದು ಮಗುವಿನಂತಹ ನಗು. ಹೀಗೆ ನಾಯಕ ಕಾನೂನಿನ ಮೂಲಕವೇ ತನ್ನ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾನೆ ಎಂದು ಕಟ್ಟಿಕೊಟ್ಟಿರುವುದು ಚಲನಚಿತ್ರಗಳ ಮಟ್ಟಿಗೆ ಒಂದು ಮುಖ್ಯ ಹೆಜ್ಜೆ ಅನ್ನಿಸುತ್ತದೆ. ಏಕೆಂದರೆ ಈ ಪರಿಹಾರ ಹುಡುಕಿಕೊಳ್ಳಲು ಆತ 'ಹೀರೋ' ಆಗಿರಬೇಕಿಲ್ಲ, ಇದು ಸಾಮಾನ್ಯ ಮನುಷ್ಯನ ಅಳವಿಗೂ ಸಿಗುತ್ತದೆ. ಇಲ್ಲಿ ಕಥೆಯನ್ನು ಶಿವಸಾಮಿಯ ಕಣ್ಣುಗಳ ಮೂಲಕ ಹೇಳಲಾಗಿದೆ ಮತ್ತು ಕಥೆ ಹೇಳುವಾಗ ಕ್ಯಾಮರಾ ಶೋಷಕನ ಕಣ್ಣುಗಳಿಂದಲ್ಲ, ಶೋಷಿತನ ಕಣ್ಣುಗಳ ಮೂಲಕ ಕಥೆ ಹೇಳುತ್ತದೆ. ಹಾಗಾಗಿಯೇ ಅನೇಕ ದೃಶ್ಯಗಳನ್ನು ನೋಡುವಾಗ ನಮಗೆ ಕರುಣೆ ಅಲ್ಲ, ಬೀಭತ್ಸ, ಜಿಗುಪ್ಸೆಯ, ಸಿಟ್ಟಿನ ಅನುಭವವಾಗುತ್ತದೆ. ಚಿತ್ರದ ಕಡೆಯಲ್ಲಿ ಶಿವಸಾಮಿ ಮಗನನ್ನು ಕರೆದು ಒಂದು ಮಾತು ಹೇಳ�

Writer - ಸಂಧ್ಯಾರಾಣಿ

contributor

Editor - ಸಂಧ್ಯಾರಾಣಿ

contributor

Similar News