ತೈವಾನ್: ಹೆಲಿಕಾಪ್ಟರ್ ಪತನ; ಸೇನಾ ಮುಖ್ಯಸ್ಥ, 7 ಸೇನಾಧಿಕಾರಿಗಳು ಮೃತ್ಯು
ತೈಪೆ (ತೈವಾನ್), ಜ. 2: ತೈವಾನ್‌ನ ಸೇನಾ ಮುಖ್ಯಸ್ಥ ಶೆನ್ ಯಿ-ಮಿಂಗ್ ಗುರುವಾರ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ. ದ್ವೀಪದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಅಪಘಾತ ಸಂಭವಿಸಿದೆ.
ಮೂವರು ಮೇಜರ್ ಜನರಲ್‌ಗಳು ಸೇರಿದಂತೆ 8 ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಬ್ಲಾಕ್ ಹ್ಯಾಕ್ ಹೆಲಿಕಾಪ್ಟರ್ ತೈಪೆ ಸಮೀಪದ ಬೆಟ್ಟಗಳಿಗೆ ಢಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ.
62 ವರ್ಷದ ಸೇನಾ ಮುಖ್ಯಸ್ಥ ಮತ್ತು ಅವರ ಸಿಬ್ಬಂದಿ ಈಶಾನ್ಯದ ಯಿಲಾನ್ ಕೌಂಟಿಯಲ್ಲಿರುವ ಸೈನಿಕರನ್ನು ಭೇಟಿಯಾಗಲು ಹೋಗುತ್ತಿದ್ದರು.
‘‘ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಐವರು ಬದುಕುಳಿದಿದ್ದಾರೆ. ಅವರ ಸಾವಿನಿಂದ ನಮಗೆ ದುಃಖವಾಗಿದೆ. ಅವರ ಕುಟುಂಬ ಸದಸ್ಯರಿಗೆ ನಾವು ಸಂತಾಪ ಸಲ್ಲಿಸುತ್ತೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ವಾಯು ಪಡೆ ಕಮಾಂಡರ್ ಹಸಿಯುಂಗ್ ಹೂ-ಚಿ ಹೇಳಿದರು.
ದುರಂತದ ಹಿನ್ನೆಲೆಯಲ್ಲಿ, ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್ ಮೂರು ದಿನಗಳ ಕಾಲ ತನ್ನ ಎಲ್ಲ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
ಜನವರಿ 11ರಂದು ತೈವಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.