ಕುವೈತ್‌ನಲ್ಲಿ ನಮ್ಮ ಪ್ರಜೆಗಳು ಕೆಲಸ ಮಾಡುವುದನ್ನು ನಿಷೇಧಿಸುತ್ತೇವೆ: ಫಿಲಿಪ್ಪೀನ್ಸ್ ಎಚ್ಚರಿಕೆ

Update: 2020-01-02 16:00 GMT

ಮನಿಲಾ (ಫಿಲಿಪ್ಪೀನ್ಸ್), ಜ. 2: ಕುವೈತ್‌ನಲ್ಲಿ 26 ವರ್ಷದ ಫಿಲಿಪ್ಪೀನ್ಸ್ ಮಹಿಳೆಯೊಬ್ಬರು ಸಾವಿಗೀಡಾದ ಹಿನ್ನೆಲೆಯಲ್ಲಿ, ತನ್ನ ಪ್ರಜೆಗಳು ಕುವೈತ್‌ನಲ್ಲಿ ಕೆಲಸ ಮಾಡುವುದನ್ನು ಮತ್ತೊಮ್ಮೆ ನಿಷೇಧಿಸಬೇಕಾಗಬಹುದು ಎಂದು ಫಿಲಿಪ್ಪೀನ್ಸ್ ಬುಧವಾರ ಹೇಳಿದೆ. ಮಹಿಳಾ ಒಡತಿಯಿಂದ ಹಲ್ಲೆಗೊಳಗಾದ ಬಳಿಕ ಫಿಲಿಪ್ಪೀನ್ಸ್‌ನ ಮನೆಗೆಲಸದ ಮಹಿಳೆಯು ಆಸ್ಪತ್ರೆಯಲ್ಲಿ ಮೃತಪಟ್ಟರು ಎನ್ನಲಾಗಿದೆ.

ಈ ಹತ್ಯೆಯನ್ನು ಫಿಲಿಪ್ಪೀನ್ಸ್ ಖಂಡಿಸಿದೆ ಹಾಗೂ ಕ್ಷಿಪ್ರ ನ್ಯಾಯಕ್ಕಾಗಿ ಆಗ್ರಹಿಸಿದೆ.

ಕುವೈತ್ ಮತ್ತು ಫಿಲಿಪ್ಪೀನ್ಸ್ 2018ರಲ್ಲಿ ಮಾಡಿಕೊಂಡ ಫಿಲಿಪ್ಪೀನ್ಸ್ ಕೆಲಸಗಾರರ ರಕ್ಷಣಾ ಒಪ್ಪಂದಕ್ಕೆ ವಿರುದ್ಧವಾಗಿ ಈ ಸಾವು ಸಂಭವಿಸಿದೆ ಎಂದು ಕಾರ್ಮಿಕ ಕಾರ್ಯದರ್ಶಿ ಸಿಲ್ವೆಸ್ಟರ್ ಬೆಲ್ಲೊ ಹೇಳಿದ್ದಾರೆ.

2018ರಲ್ಲಿ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಫಿಲಿಪ್ಪೀನ್ಸ್‌ನ ಮನೆಗೆಲಸದಾಕೆಯ ಶವ ಉದ್ಯೋಗದಾತರ ಮನೆಯ ಫ್ರಿಜ್‌ನಲ್ಲಿ ಪತ್ತೆಯಾಗಿತ್ತು. ಆ ಬಳಿಕ, ಕುವೈತ್‌ನಲ್ಲಿ ಕೆಲಸ ಮಾಡುವ ಎಲ್ಲ ಫಿಲಿಪ್ಪೀನ್ಸ್ ಕೆಲಸಗಾರರು ಮರಳಿ ದೇಶಕ್ಕೆ ಬರುವಂತೆ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಆದೇಶ ಹೊರಡಿಸಿದ್ದರು.

ಆ ಬಳಿಕ ಉಭಯ ದೇಶಗಳ ನಡುವೆ ಮಾತುಕತೆಗಳು ನಡೆದು, ಫಿಲಿಪ್ಪೀನ್ಸ್ ಕುವೈತ್‌ನಲ್ಲಿರುವ ಕೆಲಸಗಾರರನ್ನು ರಕ್ಷಿಸುವ ಉದ್ದೇಶದ ಒಪ್ಪಂದವನ್ನು ರೂಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News