ಲಂಕಾ: ಉಚಿತ ಪ್ರವಾಸಿ ವೀಸಾ ಯೋಜನೆ ಎ. 30ರವರೆಗೆ ವಿಸ್ತರಣೆ

Update: 2020-01-02 16:26 GMT

ಕೊಲಂಬೊ, ಜ. 2: ಭಾರತ ಸೇರಿದಂತೆ 48 ದೇಶಗಳ ನಾಗರಿಕರಿಗೆ ದೇಶಕ್ಕೆ ಬಂದ ಬಳಿಕವೇ ಉಚಿತ ವೀಸಾ ನೀಡುವ ಯೋಜನೆಯನ್ನು ಶ್ರೀಲಂಕಾವು ಗುರುವಾರ ಎಪ್ರಿಲ್ 30ರವರೆಗೆ ವಿಸ್ತರಿಸಿದೆ.

ಕಳೆದ ವರ್ಷದ ಈಸ್ಟರ್ ರವಿವಾರದ ಸರಣಿ ಬಾಂಬ್ ಸ್ಫೋಟಗಳ ಬಳಿಕ ಕುಸಿದಿರುವ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡುವುದಕ್ಕಾಗಿ ದ್ವೀಪರಾಷ್ಟ್ರವು ಈ ಕ್ರಮವನ್ನು ತೆಗೆದುಕೊಂಡಿದೆ. ಎಪ್ರಿಲ್ 21ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 258 ಮಂದಿ ಮೃತಪಟ್ಟಿದ್ದಾರೆ.

  39 ದೇಶಗಳ ನಾಗರಿಕರಿಗೆ ದೇಶಕ್ಕೆ ಬಂದ ನಂತರವೇ ವೀಸಾ ನೀಡುವ ಯೋಜನೆಯನ್ನು ಬಾಂಬ್ ಸ್ಫೋಟಗಳ ಬಳಿಕ ಶ್ರೀಲಂಕಾವು ತಡೆಹಿಡಿದಿತ್ತು. ಜುಲೈಯಲ್ಲಿ ಈ ಯೋಜನೆಗೆ ಶ್ರೀಲಂಕಾವು ಮತ್ತೆ ಚಾಲನೆ ನೀಡಿತು ಹಾಗೂ ಈ ಪಟ್ಟಿಗೆ ಭಾರತ ಮತ್ತು ಚೀನಾ ಸೇರಿದಂತೆ ಇನ್ನೂ ಹಲವು ದೇಶಗಳನ್ನು ಸೇರಿಸಿತು. ಯೋಜನೆಯು ಆಗಸ್ಟ್ 1ರಿಂದ ಜಾರಿಗೆ ಬಂದಿತು.

‘‘ಸಂಬಂಧಪಟ್ಟವರ ಬೇಡಿಕೆಗಳನ್ನು ಗಮನದಲ್ಲಿರಿಸಿ ಈ ಯೋಜನೆಯನ್ನು ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ’’ ಎಂದು ಪ್ರವಾಸೋದ್ಯಮ ಸಚಿವ ಪ್ರಸನ್ನ ರಣತುಂಗ ಹೇಳಿದರು.

ಆರಂಭದಲ್ಲಿ, ವೀಸಾ ಶುಲ್ಕವಾಗಿ ಏಶ್ಯದ ಪ್ರವಾಸಿಗರಿಂದ 20 ಡಾಲರ್ (ಸುಮಾರು 1,425 ರೂಪಾಯಿ) ಮತ್ತು ಇತರ ದೇಶಗಳ ಪ್ರವಾಸಿಗರಿಂದ 35 ಡಾಲರ್ (ಸುಮಾರು 2,500 ರೂಪಾಯಿ) ಸಂಗ್ರಹಿಸಲಾಗುತ್ತಿತ್ತು. ಆದರೆ, ಈಸ್ಟರ್ ರವಿವಾರದ ಬಾಂಬ್ ದಾಳಿಗಳ ಬಳಿಕ ಈ ಶುಲ್ಕವನ್ನು ರದ್ದುಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News