ಜಕಾರ್ತದಲ್ಲಿ ಜಲಪ್ರಳಯ: ಕನಿಷ್ಠ 23 ಸಾವು

Update: 2020-01-02 16:35 GMT

ಜಕಾರ್ತ (ಇಂಡೋನೇಶ್ಯ), ಜ. 2: ಇಂಡೋನೇಶ್ಯದ ರಾಜಧಾನಿ ಜಕಾರ್ತದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತ ಮತ್ತು ಪ್ರವಾಹದಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಹಾಗೂ ನಗರದ ಹೆಚ್ಚಿನ ಭಾಗ ಜಲಾವೃತವಾಗಿದೆ.

ಆದರೆ, ಈ ಪ್ರಾಕೃತಿಕ ದುರಂತದಲ್ಲಿ ಇನ್ನೂ ಹೆಚ್ಚು ಜನರು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಇಂಡೋನೇಶ್ಯದ ವಿಪತ್ತು ನಿರ್ವಹಣಾ ಸಂಸ್ಥೆ ಗುರುವಾರ ಹೇಳಿದೆ.

ಸಾವಿರಾರು ಮಂದಿಯನ್ನು ತಾತ್ಕಾಲಿಕ ಆಶ್ರಯ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ವರ್ಷಗಳಲ್ಲೇ ಭೀಕರ ಪ್ರವಾಹದಿಂದಾಗಿ ನೂರಾರು ಮನೆಗಳು ಹಾನಿಗೀಡಾಗಿವೆ. ಹೊಸ ವರ್ಷದ ಮುನ್ನಾ ದಿನ ಸುರಿದ ಮಳೆಯು 3 ಕೋಟಿ ಜನಸಂಖ್ಯೆಯ ನಗರದಲ್ಲಿ ಜಲಪ್ರಳಯವನ್ನೇ ಸೃಷ್ಟಿಸಿತು.

ಜಲಾವೃತ ಮನೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ರಬ್ಬರ್ ದೋಣಿಗಳನ್ನು ಬಳಸಿದರು.

ಕೆಲವು ಕಡೆಗಳಲ್ಲಿ ನೀರಿನ ಮಟ್ಟವು ಇಳಿದಿದ್ದು, ರಸ್ತೆ, ಮೈದಾನ ಸೇರಿದಂತೆ ಎಲ್ಲ ಕಡೆಯು ಕೆಸರಿನಿಂದಾವೃತವಾಗಿತ್ತು. ಅವಶೇಷಗಳು, ಕಸಕಡ್ಡಿಗಳು ಎಲ್ಲೆಲ್ಲಿಯೂ ಕಂಡು ಬಂದಿವೆ. ಕಾರುಗಳು ಒಂದರ ಮೇಲೊಂದರಂತೆ ಇರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಒಂದು ಹಂತದಲ್ಲಿ ನೀರಿನ ಮಟ್ಟವು ಕಟ್ಟಡಗಳ ಎರಡನೇ ಮಹಡಿವರೆಗೂ ಏರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News