“ನನ್ನ 9 ತಲೆಮಾರಿನ ಹೆಸರು ಹೇಳುತ್ತೇನೆ, ಮೋದಿಗೆ ಸಾಧ್ಯವೇ ?”

Update: 2020-01-02 18:29 GMT

ಹೊಸದಿಲ್ಲಿ, ಜ.2: ಪೌರತ್ವ ಕಾಯ್ದೆಯನ್ನು ವಿರೋಧಿಸಿ 15 ದಿನಗಳಿಂದ ದಿಲ್ಲಿಯ ಶಹೀನ್ ಬಾಘ್ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೈನಡುಗಿಸುವ ಚಳಿಯನ್ನೂ ಲೆಕ್ಕಿಸದೆ ಮೂವರು ವೃದ್ಧೆಯರು ಮುಂಚೂಣಿಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

90 ವರ್ಷದ ಆಸ್ಮಾ ಖತೂನ್, 82 ವರ್ಷದ ಬಿಲ್ಕಿಸ್ ಹಾಗೂ 75 ವರ್ಷದ ಶಾರ್ವರಿ ಇದೀಗ ‘ಶಹೀನ್ ಬಾಘ್‌ನ ಅಜ್ಜಿಯಂದಿರು’ ಎಂದೇ ಹೆಸರಾಗಿದ್ದಾರೆ. ನಿಮ್ಮ ಪೂರ್ಣ ಹೆಸರೇನೆಂದು ಯಾರಾದರೂ ಕೇಳಿದರೆ- ನಾವು ಹೇಳುವಂತಿಲ್ಲ. ಯಾಕೆಂದರೆ ಹೆಸರನ್ನು ಸಾಬೀತುಪಡಿಸಲು ನಮ್ಮ ಬಳಿ ದಾಖಲೆಗಳಿಲ್ಲ ಎಂದುತ್ತರಿಸುತ್ತಾರೆ. ‘ನೀವೇಕೆ ಪ್ರತಿಭಟನೆ ನಡೆಸುತ್ತಿದ್ದೀರಿ’ ಎಂಬ ಪ್ರಶ್ನೆಗೆ- “ಅದನ್ನು ಪ್ರಧಾನಿ ಮೋದಿಗೆ ಕೇಳಿ. ನಮ್ಮ ಜೀವನದಲ್ಲಿ ಇಂತಹ ದಿನವನ್ನೂ ಕಾಣಬೇಕಾಯಿತು. ಜೀವನದ ಕೊನೆಯ ದಿನಗಳಲ್ಲಿ ಪ್ರತಿಭಟನೆ ನಡೆಸುವಂತಾಗಿದೆ” ಎಂದುತ್ತರಿಸುತ್ತಾರೆ.

 “ನಾವು ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತೇವೆ. ಅವರು (ಮೋದಿ) ಪೌರತ್ವವನ್ನು ಸಾಬೀತುಪಡಿಸಲು ದಾಖಲೆ ಸಲ್ಲಿಸುವಂತೆ ಕೇಳುತ್ತಿದ್ದಾರೆ. ಈ ದೇಶದಲ್ಲಿ ಯಾವುದೇ ದಾಖಲೆ ಪತ್ರಗಳಿಲ್ಲದ ಹಲವು ಜನರಿದ್ದಾರೆ. ಹಲವರು ಪ್ರವಾಹ, ಭೂಕಂಪದಂತಹ ವಿಪತ್ತಿನಲ್ಲಿ ತಮ್ಮ ದಾಖಲೆಪತ್ರ ಕಳೆದುಕೊಂಡಿದ್ದಾರೆ. ನಾನು ನನ್ನ 9 ತಲೆಮಾರಿನವರ ಹೆಸರನ್ನು ಹೇಳುತ್ತೇನೆ. ಮೋದಿಗೆ ಇದು ಸಾಧ್ಯವೇ” ಎಂದು ಸವಾಲೆಸೆಯುತ್ತಾರೆ ಆಸ್ಮಾ. ಪೌರತ್ವ ಕಾಯ್ದೆಯ ಬಗ್ಗೆ ಅರಿವು ಹೊಂದಿಲ್ಲದವರು ಕಾಯ್ದೆಯನ್ನು ಬೆಂಬಲಿಸುತ್ತಿದ್ದಾರೆ. ಆದರೆ ಮುಸ್ಲಿಮರಷ್ಟೇ ಪ್ರತಿಭಟನೆ ನಡೆಸುತ್ತಿಲ್ಲ, ಎಲ್ಲಾ ಧರ್ಮದವರೂ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವೆಲ್ಲಾ ಇಲ್ಲೇ ಹುಟ್ಟಿ ಬೆಳೆದಿದ್ದು ಇಲ್ಲೇ ಸಾಯಲು ಬಯಸುವವರು. ಇದೊಂದು ವಿಭಜನಾತ್ಮಕ ಕಾನೂನಾಗಿದ್ದು, ನನ್ನ ಪೌರತ್ವ ಸಾಬೀತುಪಡಿಸುವ ಸಂದರ್ಭ ಬಂದರೂ ನಾನು ಯಾವುದೇ ದಾಖಲೆ ಪತ್ರ ನೀಡುವುದಿಲ್ಲ. ದಾಖಲೆ ಒದಗಿಸಲು ಸಾಧ್ಯವಿಲ್ಲದ ಜನರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಎಂದು ಬಿಲ್ಕಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News