​ಮಹಾರಾಷ್ಟ್ರ: ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದ್ದಾಗ ಆತ್ಮಹತ್ಯೆ ಮಾಡಿಕೊಂಡ ರೈತರೆಷ್ಟು ಗೊತ್ತೇ?

Update: 2020-01-03 04:34 GMT
ಸಾಂದರ್ಭಿಕ ಚಿತ್ರ

ಮುಂಬೈ, ಜ.3: ಮಹಾರಾಷ್ಟ್ರದಲ್ಲಿ ಅಧಿಕಾರದ ಸೂತ್ರ ಹಿಡಿಯುವ ಸಲುವಾಗಿ ಪಕ್ಷಗಳ ಮೇಲಾಟ ನಡೆಯುತ್ತಿದ್ದ ನವೆಂಬರ್ ತಿಂಗಳಲ್ಲಿ 300 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.

ಕಳೆದ ನಾಲ್ಕು ವರ್ಷಗಳ ಪೈಕಿ ಒಂದೇ ತಿಂಗಳಲ್ಲಿ ಗರಿಷ್ಠ ಸಂಖ್ಯೆಯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರಲ್ಲಿ ಹಲವು ತಿಂಗಳಲ್ಲಿ 300 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಕ್ಟೋಬರ್‌ನಲ್ಲಿ ಅಕಾಲಿಕ ಮಳೆಯಿಂದಾಗಿ ಮುಂಗಾರು ಹಂಗಾಮಿನ ಶೇಕಡ 70ರಷ್ಟು ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಬಹಳಷ್ಟು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ 186 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ನವೆಂಬರ್‌ನಲ್ಲಿ ಆತ್ಮಹತ್ಯೆ ಪ್ರಕರಣ ಸಂಖ್ಯೆ ಶೇಕಡ 61ರಷ್ಟು ಹೆಚ್ಚಿದೆ. ಬರಪೀಡಿತ ಮರಾಠವಾಡ ಪ್ರದೇಶದಲ್ಲಿ ಗರಿಷ್ಠ ಅಂದರೆ 120 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ವಿದರ್ಭದಲ್ಲಿ 112 ಪ್ರಕರಣಗಳು ದಾಖಲಾಗಿವೆ ಎಂದು ಕಂದಾಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

2018ರಲ್ಲಿ ರಾಜ್ಯದಲ್ಲಿ ಒಟ್ಟು 2,518 ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ, ಕಳೆದ ವರ್ಷ ಈ ಸಂಖ್ಯೆ 2,532ಕ್ಕೇರಿದೆ. ಅಕಾಲಿಕ ಮಳೆಯಿಂದಾಗಿ ಸುಮಾರು ಒಂದು ಕೋಟಿ ರೈತರು ಬೆಳೆ ಕಳೆದುಕೊಂಡಿದ್ದರು. ಸರ್ಕಾರ ಇದುವರೆಗೆ ಸುಮಾರು 6,552 ಕೋಟಿ ರೂಪಾಯಿ ಪರಿಹಾರ ವಿತರಿಸಿದೆ. ಮಹಾವಿಕಾಸ ಅಗಾಡಿ ಸರ್ಕಾರಿ 2019ರ ಡಿಸೆಂಬರ್‌ನಲ್ಲಿ ಸಾಲಮನ್ನಾ ನಿರ್ಧಾರವನ್ನೂ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News