ಇರಾನ್ ಉದ್ವಿಗ್ನತೆಯಿಂದ ತೈಲ ಬೆಲೆ ಹೆಚ್ಚಳದ ಆತಂಕ

Update: 2020-01-04 05:23 GMT

ಹೊಸದಿಲ್ಲಿ, ಜ.4: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ತೈಲಬೆಲೆ ಶೇಕಡ 4ರಷ್ಟು ಹೆಚ್ಚಿದ್ದು, ತೈಲ ಮಾರುಕಟ್ಟೆಯಲ್ಲಿ ಚಂಚಲತೆ ಹೆಚ್ಚಿ ಗ್ರಾಹಕರಿಗೆ ಇದರ ನೇರ ಬಿಸಿ ತಟ್ಟುವ ಸಾಧ್ಯತೆಗಳು ನಿಚ್ಚಳವಾಗಿವೆ. ಆರ್ಥಿಕ ಪ್ರಗತಿಗೆ ಪುನಶ್ಚೇತನ ನೀಡುವ ಸರ್ಕಾರದ ಪ್ರಯತ್ನಕ್ಕೂ ಇದು ಹೊಡೆತ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ತೈಲ ಬೆಲೆ ಶೇಕಡ 4ರಷ್ಟು ಹೆಚ್ಚಿ ಬ್ಯಾರಲ್‌ಗೆ 70 ಡಾಲರ್ ತಲುಪಿತ್ತು. ಇರಾನ್ ಮಿಲಿಟರಿ ಕಮಾಂಡರ್ ಒಬ್ಬರನ್ನು ಅಮೆರಿಕ ಹತ್ಯೆ ಮಾಡಿರುವುದಕ್ಕೆ ಪ್ರತೀಕಾರವಾಗಿ ಪ್ರಮುಖ ಜಾಗತಿಕ ತೈಲ ವ್ಯಾಪಾರ ಮಾರ್ಗವಾದ ಹರ್ಮಸ್ ಕೊಲ್ಲಿಯನ್ನು ಇರಾನ್ ಮುಚ್ಚುವ ಸಾಧ್ಯತೆ ಇದೆ. ಇದು ತೈಲಬೆಲೆ ಮತ್ತಷ್ಟು ಹೆಚ್ಚುವ ಆತಂಕಕ್ಕೆ ಕಾರಣವಾಗಿದೆ.

ವಿಶ್ವದ ಮೂರನೇ ಅತಿಹೆಚ್ಚು ತೈಲ ಖರೀದಿಸುವ ರಾಷ್ಟ್ರವಾದ ಭಾರತಕ್ಕೆ ಮದ್ಯಪ್ರಾಚ್ಯ ಉದ್ವಿಗ್ನತೆ ಎರಡು ಬಗೆಯಲ್ಲಿ ನೇರ ಪರಿಣಾಮ ಬೀರಲಿದೆ. ಒಂದು; ಬೆಲೆ ಹೆಚ್ಚಳ ಮತ್ತು ದೇಶದ ಆರ್ಥಿಕತೆ ಹಾಗೂ ಗ್ರಾಹಕರ ಭಾವನೆಗಳ ಮೇಲೆ ಅದರ ಪರಿಣಾಮ. ಇನ್ನೊಂದು; ತೈಲ ಪೂರೈಕೆಯಲ್ಲಿ ವ್ಯತ್ಯಯ. ಇದರಿಂದಾಗಿ ಭಾರತ ಪರ್ಯಾಯ ಮೂಲಗಳಿಂದ ತೈಲ ಪಡೆಯುವ ಸಲುವಾಗಿ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ.

ಕಚ್ಚಾ ತೈಲ ದುಬಾರಿಯಾಗುವುದರಿಂದ ಸಹಜವಾಗಿಯೇ ಇಂಧನ ಬೆಲೆ ಹೆಚ್ಚಲಿದೆ. ಕುಟುಂಬಗಳು ಪೆಟ್ರೋಲ್/ ಡೀಸೆಲ್ ಮೇಲೆ ಅಧಿಕ ವೆಚ್ಚ ಮಾಡುವುದು ಅನಿವಾರ್ಯವಾದ ತಕ್ಷಣ ಇತರ ಅಗತ್ಯ ವೆಚ್ಚ ಕಡಿತವಾಗಲಿದ್ದು, ಇದು ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಲಿದೆ. ತೈಲ ಖರೀದಿಗೆ ಸರ್ಕಾರ ಅಧಿಕ ವೆಚ್ಚ ಮಾಡುವ ಪರಿಣಾಮ ಸಾಮಾಜಿಕ ವಲಯಕ್ಕೆ ಮಾಡುವ ವೆಚ್ಚ ಕಡಿತಗೊಳ್ಳಲಿದೆ. ಇದು ಆರ್ಥಿಕ ಪುನಶ್ಚೇತನದ ಹಾದಿಗೆ ತಡೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News