35% ಜನಸಂಖ್ಯೆ ಇರುವ ಮುಸ್ಲಿಮರು, ಕ್ರೈಸ್ತರ ಪ್ರಾತಿನಿಧ್ಯ ಮಂಗಳೂರು ಪೊಲೀಸರಲ್ಲಿ 3.5% !

Update: 2020-01-04 12:35 GMT
ಫೈಲ್ ಚಿತ್ರ

ಮಂಗಳೂರು : ಡಿ.19ರಂದು ಮಂಗಳೂರಿನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆಗಳ ಸಂದರ್ಭ ಪೊಲೀಸ್ ಗೋಲಿಬಾರಿನಲ್ಲಿ ಇಬ್ಬರು ಮುಸ್ಲಿಮರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಪಡೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಅತ್ಯಲ್ಪ ಸಂಖ್ಯೆಯಲ್ಲಿರುವ ಬಗ್ಗೆ ಹಲವಾರು ಸಂಘಟನೆಗಳು ಮತ್ತು ಗಣ್ಯರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಹರ್ಷರಾಜ್ ಗಟ್ಟಿಯವರು ಬರೆದಿರುವ ವಿಶೇಷ ವರದಿಯನ್ನು english.manoramaonline.com ಪ್ರಕಟಿಸಿದ್ದು, ಮಂಗಳೂರು ಪೊಲೀಸ್ ಇಲಾಖೆಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತರ ಪಾಲು ಕೇವಲ 3.5 ಶೇಕಡ ಎಂಬ ಮಾಹಿತಿಯನ್ನು ವರದಿಯು ಬಹಿರಂಗಪಡಿಸಿದೆ.

ಉಳ್ಳಾಲ ಮತ್ತು ಸುರತ್ಕಲ್‌ ಗಳಂತಹ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿಯ ಪೊಲೀಸ್ ಠಾಣೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಸಿಬ್ಬಂದಿಗಳಿಲ್ಲ. ನಗರದ ಜನಸಂಖ್ಯೆಯ ಶೇ.35ರಷ್ಟು ಭಾಗ ಅಲ್ಪಸಂಖ್ಯಾತ ಸಮುದಾಯಗಳಾಗಿದ್ದರೂ ಸ್ವಾತಂತ್ರ್ಯಾನಂತರ ಈವರೆಗೂ ಮಂಗಳೂರಿಗೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಎಸ್‌ಪಿ ಅಥವಾ ಪೊಲೀಸ್ ಆಯುಕ್ತರು ನೇಮಕಗೊಂಡಿಲ್ಲ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್)ನ ಉಪಾಧ್ಯಕ್ಷ ಮುಹಮ್ಮದ್ ಕಬೀರ್ ಅವರು ಹೇಳುತ್ತಾರೆ.

ದತ್ತಾಂಶ ವಿಶ್ಲೇಷಣೆ

ಮಂಗಳೂರು ನಗರ ಪೊಲೀಸ್ ಪಡೆಯಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಪ್ರಾತಿನಿಧ್ಯ ಅತ್ಯಲ್ಪವಾಗಿದೆ ಎನ್ನುವುದನ್ನು ಮಂಗಳೂರು ಸಿಟಿ ಪೊಲೀಸ್ ವೆಬ್‌ ಸೈಟ್‌ ನಲ್ಲಿ ಲಭ್ಯವಿರುವ ದತ್ತಾಂಶಗಳ ವಿಶ್ಲೇಷಣೆಯು ಬಹಿರಂಗಗೊಳಿಸಿದೆ. ಮಂಗಳೂರು ನಗರ ವ್ಯಾಪ್ತಿಯ 15 ಪೊಲೀಸ್ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ)ಗಳಲ್ಲಿ ಒಟ್ಟು 605 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓರ್ವ ಆಯುಕ್ತರು, ಇಬ್ಬರು ಉಪ ಆಯುಕ್ತರು ಮತ್ತು ನಾಲ್ಕು ಸಹಾಯಕ ಆಯುಕ್ತರು ಸೇರಿದಂತೆ ಏಳು ಪ್ರಮುಖ ಹುದ್ದೆಗಳಲ್ಲಿ ಒಬ್ಬರೇ ಒಬ್ಬ ಮುಸ್ಲಿಮ್ ಅಥವಾ ಕ್ರಿಶ್ಚಿಯನ್ ಇಲ್ಲ.

ಉಳಿದ 598 ಹುದ್ದೆಗಳ ಪೈಕಿ ಇನ್ಸ್‌ಪೆಕ್ಟರ್, ಪಿಎಸ್‌ಐ, ಎಎಸ್‌ಐ ಮತ್ತು ಕಾನ್‌ಸ್ಟೇಬಲ್‌ ಗಳು ಸೇರಿದಂತೆ 575 (ಶೇ.95.37) ಹುದ್ದೆಗಳು ಹಿಂದೂಗಳ ಪಾಲಾಗಿವೆ. ನಗರ ಪೊಲೀಸ್ ಪಡೆಯು 14 ಮುಸ್ಲಿಮರು ಮತ್ತು 9 ಕ್ರಿಶ್ಚಿಯನ್‌ ರನ್ನು ಹೊಂದಿದ್ದು, ಇದು ಒಟ್ಟು ಬಲದ ಕೇವಲ ಶೇ.3.47ರಷ್ಟಿದೆ. 2011ರ ಜನಗಣತಿಯಂತೆ ನಗರದ ಜನಸಂಖ್ಯೆಯಲ್ಲಿ ಶೇ.23.85 ಮುಸ್ಲಿಮರು ಮತ್ತು ಶೇ.11.14 ಕ್ರಿಶ್ಚಿಯನ್ನರು ಸೇರಿದಂತೆ ಶೇ.35ರಷ್ಟು ಪಾಲು ಇವೆರಡು ಸಮುದಾಯಗಳದ್ದಾಗಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.13ರಷ್ಟು ಮುಸ್ಲಿಮರು ಮತ್ತು ಶೇ.1.87ರಷ್ಟು ಕ್ರಿಶ್ಚಿಯನ್ನರಿದ್ದಾರೆ.

ಕ್ರಿಶ್ಚಿಯನ್ ಇನ್ಸ್‌ ಪೆಕ್ಟರ್‌ ಗಳಿಲ್ಲ

ಇರುವ ಒಟ್ಟು 15 ಇನ್ಸ್‌ ಪೆಕ್ಟರ್‌ ಗಳ ಪೈಕಿ ಕೇವಲ ಇಬ್ಬರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪೈಕಿ ಓರ್ವರು ಮಂಗಳೂರು ಗ್ರಾಮೀಣ ಠಾಣೆಯಲ್ಲಿ ಮತ್ತು ಇನ್ನೋರ್ವರು ಪಣಂಬೂರು ಠಾಣೆಯಲ್ಲಿದ್ದಾರೆ. ಇನ್ಸ್‌ ಪೆಕ್ಟರ್‌ ಗಳ ಪಟ್ಟಿಯಲ್ಲಿ ಕ್ರಿಶ್ಚಿಯನ್ನರಿಲ್ಲ ಎನ್ನುವುದು ಅಚ್ಚರಿ ಮೂಡಿಸಿದೆ.

ನಗರ ಪೊಲೀಸ್ ಪಡೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮೂವರು ಎಎಸ್‌ ಐಗಳಿದ್ದಾರೆ. ಮುಸ್ಲಿಮ್ ಸಮುದಾಯಕ್ಕೆ ಸೇರಿದ ಓರ್ವ ಎಎಸ್‌ ಐ ಬಜ್ಪೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಇಬ್ಬರು ಕ್ರಿಶ್ಚಿಯನ್ ಎಎಸ್‌ ಐಗಳು ಕಂಕನಾಡಿ ಮತ್ತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗಳಲ್ಲಿದ್ದಾರೆ.

ಉಳ್ಳಾಲ ಮತ್ತು ಸುರತ್ಕಲ್‌ ಗಳಂತಹ ಕೋಮುಸೂಕ್ಷ್ಮ ಪ್ರದೇಶಗಳಲ್ಲಿಯ ಪೊಲೀಸ್ ಠಾಣೆಗಳಲ್ಲಿನ ಚಿತ್ರಣವೂ ಭಿನ್ನವಾಗಿಲ್ಲ. ಶೇ.65.44ರಷ್ಟು ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿರುವ ಉಳ್ಳಾಲದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಏಕಮಾತ್ರ ಕಾನ್‌ಸ್ಟೇಬಲ್ ಇದ್ದರೆ, 1998ರಲ್ಲಿ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಸುರತ್ಕಲ್‌ ನಲ್ಲಿ ಮುಸ್ಲಿಮ್ ಅಥವಾ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ಸಿಬ್ಬಂದಿ ಒಬ್ಬರೂ ಇಲ್ಲ. ಡಿ.19ರಂದು ಹಿಂಸಾಚಾರ ನಡೆದಿದ್ದ ಮಂಗಳೂರು ಉತ್ತರ (ಬಂದರು)ದಲ್ಲಿ ಓರ್ವ ಕಾನ್‌ಸ್ಟೇಬಲ್ ಮಾತ್ರ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಮಹಿಳಾ ಪೊಲೀಸ್ ಪಡೆ

ನಗರದ ಪೊಲೀಸ್ ಪಡೆಯಲ್ಲಿ 66 ಮಹಿಳಾ ಸಿಬ್ಬಂದಿಗಳಿದ್ದಾರೆ. ಆದರೆ ಇನ್ಸ್‌ಪೆಕ್ಟರ್ ಅಥವಾ ಪಿಎಸ್‌ಐ ಹುದ್ದೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಒಬ್ಬರೂ ಮಹಿಳೆಯಿಲ್ಲ. ಮುಲ್ಕಿಯಲ್ಲಿ ಓರ್ವರು ಮತ್ತು ಪಣಂಬೂರಿನಲ್ಲಿ ಓರ್ವರು, ಹೀಗೆ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ಕೇವಲ ಇಬ್ಬರು ಕಾನ್‌ ಸ್ಟೇಬಲ್‌ ಗಳಿಗೆ ಸೀಮಿತವಾಗಿದೆ.

ಕಾನ್‌ ಸ್ಟೇಬಲ್‌ ಗಳು

ನಗರ ವ್ಯಾಪ್ತಿಯಲ್ಲಿ ವಿವಿಧ ಠಾಣೆಗಳಲ್ಲಿರುವ ಕಾನ್‌ ಸ್ಟೇಬಲ್‌ ಗಳ ಸಂಖ್ಯೆ ಒಟ್ಟು 448. ಇವರಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಕೇವಲ ಶೇ.3.30 (ಶೇ.2.27 ಮುಸ್ಲಿಮರು ಮತ್ತು ಶೇ.1.03 ಕ್ರಿಶ್ಚಿಯನ್‌ರು), ಅಂದರೆ 11 ಕಾನ್‌ಸ್ಟೇಬಲ್‌ಗಳು ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದರೆ, ಏಳು ಕ್ರಿಶ್ಚಿಯನ್ ಸಮುದಾಯದವರಾಗಿದ್ದಾರೆ.

ಮಂಗಳೂರು ಪೊಲೀಸರು ಹೇಳುವುದೇನು?

ಪೊಲೀಸ್ ವೆಬ್‌ ಸೈಟ್‌ ನಲ್ಲಿರುವ ಅಂಕಿ ಅಂಶಗಳಿಗೂ ವಾಸ್ತವ ಅಂಕಿ ಅಂಶಗಳಿಗೂ ವ್ಯತ್ಯಾಸವಿರಬಹುದು ಎಂದು ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ಪೊಲೀಸ್ ಅಧಿಕಾರಿಯೋರ್ವರು, ಪೊಲೀಸ್ ಸಿಬ್ಬಂದಿಯ ವರ್ಗಾವಣೆಗಳು ಮತ್ತು ಅಮಾನತುಗಳಿಂದಾಗಿ ಕೆಲವು ಬದಲಾವಣೆಗಳಿರಬಹುದು. ಅಲ್ಲದೆ ವೆಬ್‌ ಸೈಟ್ ಕೂಡ ಸಕಾಲಕ್ಕೆ ಅಪ್‌ ಡೇಟ್ ಆಗಿಲ್ಲ ಎಂದು ಹೇಳಿದರು. ಆದರೆ ಧಾರ್ಮಿಕ ಸಮುದಾಯಗಳ ಪ್ರಾತಿನಿಧ್ಯ ಹೆಚ್ಚು ಕಡಿಮೆ ಅಷ್ಟೇ ಇದೆ ಎಂದರು.

ವಿಶ್ಲೇಷಣೆಯ ಮಹತ್ವ

ಡಿ.19ರಂದು ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ವಿವೇಚನಾ ರಹಿತ ಬಲ ಪ್ರಯೋಗಿಸಿದ್ದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ದತ್ತಾಂಶಗಳು ಮಹತ್ವ ಪಡೆದುಕೊಂಡಿವೆ.

ಅಬ್ದುಲ್ ಜಲೀಲ್(49) ಮತ್ತು ನೌಶೀನ್(23) ಪೊಲೀಸರ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಇವರಿಬ್ಬರೂ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ ಮತ್ತು ದೂರದಿಂದ ಪ್ರತಿಭಟನೆಯನ್ನು ವೀಕ್ಷಿಸುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಮೃತರ ಬಂಧುಗಳು ಆರೋಪಿಸಿದ್ದಾರೆ. ಪೊಲೀಸರು ಮೃತರ ಹೆಸರುಗಳನ್ನೂ ಎಫ್‌ಐಆರ್‌ ನಲ್ಲಿ ಸೇರಿಸಿದ್ದಾರೆ.

thewire.in ವರದಿಯಂತೆ ಪೊಲೀಸರು ನಗರದ ಹೈಲ್ಯಾಂಡ್ ಆಸ್ಪತ್ರೆಗೂ ನುಗ್ಗಿದ್ದರು ಮತ್ತು ರೋಗಿಗಳನ್ನು ಕೊಲ್ಲುವುದಾಗಿ ಬೆದರಿಕೆಯನ್ನೊಡ್ಡಿದ್ದರು. ಪೊಲೀಸ್ ಗೋಲಿಬಾರ್ ‘ಕೋಮು ಪ್ರಚೋದಿತವಾಗಿತ್ತು' ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಟೀಕೆಗಳು

ಈ ಅಂಕಿಅಂಶಗಳು 2015ರಲ್ಲಿ ಸಂಘ ಪರಿವಾರದ ನಾಯಕ ಗಣೇಶ ಕಾರ್ಣಿಕ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ದೃಢೀಕರಿಸುವಂತೆ ಕಂಡು ಬರುತ್ತಿವೆ.

2015ರಲ್ಲಿ 'ಕೋಬ್ರಾ-ಪೋಸ್ಟ್' ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಕಾರ್ಣಿಕ್, "ಪೊಲೀಸ್ ಪಡೆಯ ಶೇ.60ರಷ್ಟು ಭಾಗ ಆರೆಸ್ಸೆಸ್ ಕಾರ್ಯಕರ್ತರನ್ನು ಒಳಗೊಂಡಿದೆ ಮತ್ತು ಈ ಸೇರ್ಪಡೆಯು ಪಕ್ಷದ ಕಾರ್ಯಕರ್ತರು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವುದು ಅಗತ್ಯವಾದಾಗ ಅವರಿಗೆ ನೆರವಾಗುತ್ತದೆ’"ಎಂದು ಹೇಳಿದ್ದರು.

ಸಂಘ ಪರಿವಾರದೆಡೆಗೆ ನಿಷ್ಠೆಗಾಗಿ ಪೊಲೀಸರನ್ನು ಹಲವಾರು ಗಣ್ಯರು ಟೀಕಿಸಿದ್ದು, ಕೋಮು ಸೌಹಾರ್ದ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುರೇಶ ಭಟ್ ಬಾಕ್ರಬೈಲ್ ಅವರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ನ ಕೆಲವು ಸಿಬ್ಬಂದಿ ಬಜರಂಗದಳ ಅಥವಾ ಶ್ರೀರಾಮಸೇನೆಯಂತೆ ಸಂಘ ಪರಿವಾರದ ಸಾಂಸ್ಥೀಕರಣಗೊಂಡ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳವಳಗಳು

ಮಂಗಳೂರು 26 ವರ್ಷಗಳಿಂದಲೂ ಪದೇ ಪದೇ ಕೋಮು ಹಿಂಸಾಚಾರಗಳಿಗೆ ಸಾಕ್ಷಿಯಾಗುತ್ತಿದ್ದರೂ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಇತರ ಶೋಷಿತ ಗುಂಪುಗಳಲ್ಲಿ ಮತ್ತೆ ವಿಶ್ವಾಸ ಮೂಡಿಸುವಲ್ಲಿ ಪೊಲೀಸರಿಂದ ಪ್ರಯತ್ನಗಳ ಕೊರತೆಯ ಬಗ್ಗೆ ಪೊಲೀಸ್ ಸುಧಾರಣೆಗಳಿಗಾಗಿ ಪ್ರತಿಪಾದಿಸುತ್ತಿರುವ ಸಾಮಾಜಿಕ ಕಾರ್ಯಕರ್ತರು ದೂರುತ್ತಲೇ ಇದ್ದಾರೆ.

ಸರಕಾರವು ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಾಗ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಮತೋಲಿತ ನೀತಿಯನ್ನು ಹೊಂದಿರಬೇಕು ಎಂದು ಹೇಳಿದ ಖ್ಯಾತ ನ್ಯಾಯವಾದಿ ದಿನೇಶ ಹೆಗ್ಡೆ ಉಳೆಪಾಡಿ ಅವರು, ಇದರಿಂದ ಪೊಲೀಸರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವಿನ ವಿಶ್ವಾಸದ ಕೊರತೆಯನ್ನೂ ನೀಗಿಸಬಹುದು ಎಂದರು.

ಐಪಿಎಸ್ ಅಧಿಕಾರಿಗಳು ಅಥವಾ ಹಿರಿಯ ಅಧಿಕಾರಿಗಳಿಗೆ ತಮ್ಮ ಅಧೀನ ಸಿಬ್ಬಂದಿಯ ಮೇಲೆ ನಿಯಂತ್ರಣವಿರುವುದಿಲ್ಲ ಎಂದು ಮಂಗಳೂರು ಸಿಟಿ ಪೊಲೀಸ್‌ ವಿಭಾಗದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಸ್ಥಳೀಯ ಬಿಜೆಪಿ ಪಾಳೇಗಾರರ ಅನುಮತಿಯಿಲ್ಲದೆ ಕಿರಿಯ ಅಧಿಕಾರಿಗಳ ಮಾಮೂಲು ನಿಯೋಜನೆ ಮತ್ತು ವರ್ಗಾವಣೆಗಳನ್ನು ಮಾಡುವುದೂ ಕಷ್ಟವಾಗಿದೆ. ಇದಕ್ಕೆ ತೀರ ಇತ್ತೀಚಿನ ಉದಾಹರಣೆ, ಕಳೆದ ವರ್ಷದ ಜುಲೈನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸಂದೀಪ್ ಪಾಟೀಲ್ ಅವರು ಸುರತ್ಕಲ್ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ಜಾನುವಾರುಗಳ ಕಳ್ಳತನ ಮತ್ತು ಮಾದಕ ದ್ರವ್ಯ ಜಾಲದ ವಿರುದ್ಧ ಕ್ರಮವನ್ನು ಕೈಗೊಳ್ಳಲು ವಿಫಲರಾಗಿದ್ದರಿಂದ ಕರ್ತವ್ಯ ಲೋಪದ ಆರೋಪದಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದರು. ಆದರೆ 24 ಗಂಟೆಗೂ ಕಡಿಮೆ ಅವಧಿಯಲ್ಲಿ ಇನ್ಸ್‌ ಪೆಕ್ಟರ್ ಅಮಾನತು ರದ್ದುಗೊಂಡು ಕರ್ತವ್ಯಕ್ಕೆ ಮರಳಿದ್ದರು ಮತ್ತು ಮೂರು ವಾರಗಳಲ್ಲಿ ಸಂದೀಪ್ ಪಾಟೀಲ್ ಮಂಗಳೂರಿನಿಂದ ಎತ್ತಂಗಡಿಗೊಂಡಿದ್ದರು ಎಂದೂ ಈ ಅಧಿಕಾರಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News