‘‘ಅದ್ಯಾವುದೋ ಮಸೀದಿ ಬೀಳಿಸಿದ್ರಲ್ಲಾ ಅದರ ಮರುದಿನ....’’

Update: 2020-01-04 18:32 GMT

ತ್ರಕರ್ತ ಎಂಜಲು ಕಾಸಿಯ ಮನೆಯ ಕರೆಗಂಟೆ ಬಾರಿಸಿತು. ಅಚ್ಚೇ ದಿನ್ ಬಂದಿರಬಹುದೆ? ಎಂದು ಕಾಸಿ ಓಡಿ ಬಾಗಿಲು ತೆರೆದ.

ನೋಡಿದರೆ ಇಬ್ಬರು ಮಹಿಳೆಯರು ಕಾಗದ ಪತ್ರ ಹಿಡಿದು ನಿಂತಿದ್ದಾರೆ.

‘‘ಸಾರ್...ಮೋದಿ ಕಳಿಸಿದ್ದು....’’

ಕಾಸಿ ರೋಮಾಂಚಗೊಂಡ. ‘‘ಹದಿನೈದು ಲಕ್ಷ ರೂಪಾಯಿ ಕಳುಹಿಸಿದರೆ?’’ ಕೇಳಿದ.

‘‘ಅದಕ್ಕಲ್ಲ ಸಾರ್...’’

‘‘ಮತ್ತೆ....’’ ನಿರಾಶನಾಗಿ ಕೇಳಿದ.

‘‘ನೀವು ಈ ದೇಶದ ಪ್ರಜೆ ಹೌದೋ ಅಲ್ಲವೋ ಎನ್ನುವುದನ್ನು ಕನ್ಫರ್ಮ್ ಮಾಡೋಕೆ ಹೇಳಿದ್ದಾರೆ ಸಾರ್....’’

‘‘ನಾನು ಓಟು ಹಾಕಿ ತಾನೆ ಗೆದ್ದದ್ದು? ನಾನು ಪ್ರಜೆಯಲ್ಲದಿದ್ದರೆ ಅವರು ಪ್ರಧಾನಿ ಆಗುವುದು ಹೇಗೆ?’’

‘‘ಅದೆಲ್ಲ ಗೊತ್ತಿಲ್ಲ ಸಾರ್...ನಿಮ್ಮಲ್ಲಿ ದಾಖಲೆ ಉಂಟಾ..’’

‘‘ಓಟರ್ ಐಡಿ ಉಂಟು...’’

‘‘ಅದು ಬೇಡ. ನನಗೆ ನಿಮ್ಮ ಅಪ್ಪ ಎಲ್ಲಿ ಹುಟ್ಟಿದ್ದು ಎನ್ನುವುದಕ್ಕೆ ದಾಖಲೆ ಬೇಕು...’’

‘‘ದೊಡ್ಡ ನೆರೆ ಬಂತಲ್ಲ ಆಗ ಹುಟ್ಟಿದ್ದು ಎಂದು ಅಪ್ಪ ಹೇಳುತ್ತಿದ್ದ....’’

‘‘ಆ ನೆರೆ ಬಂದದ್ದಕ್ಕೆ ದಾಖಲೆ ಇದೆಯಾ?’’

ಕಾಸಿಗೆ ನೆರೆ ಮನೆ ಬಾಗಿಲಿಗೆ ಬಂದಂತಾಯಿತು....‘‘ಆ ನೆರೆಯಲ್ಲಿ ನನ್ನ ಅಪ್ಪನ ಅಪ್ಪ ಕೊಚ್ಚಿಕೊಂಡು ಹೋದದ್ದು ಎಂದು ನನ್ನ ಅಜ್ಜಿ ಹೇಳ್ತಾ ಇದ್ರು...’’

‘‘ಬಾಡಿ ಸಿಕ್ಕಿದೆಯಾ?’’

‘‘ಇಲ್ಲ...ಇನ್ನೂ ಸಿಕ್ಕಿಲ್ಲ....’’

‘‘ಹಾಗಾದರೆ ಆ ಬಾಡಿ ಸೀದಾ ಬಾಂಗ್ಲಾ ದೇಶಕ್ಕೆ ಹೋಗಿರಬೇಕು. ನಿಮ್ಮಪ್ಪನ ಅಪ್ಪ ಬಾಂಗ್ಲಾ ದೇಶದವರಾಗುವುದರಿಂದ ನಿಮ್ಮ ಅಪ್ಪ ಬಾಂಗ್ಲಾ ನುಸುಳುಕೋರರಾಗುತ್ತಾರೆ...ಆದುದರಿಂದ ನೀವು ಬಾಂಗ್ಲಾ ನುಸುಳುಕೋರರು ಆಗುತ್ತೀರಿ....ಮೋದಿಯವರು ನಿಮಗೆ ಎಂತಲೇ ಬೇರೆಯೇ ಒಂದು ಕಾರ್ಡ್ ಮಾಡಿಟ್ಟಿದ್ದಾರೆ...ಪೋಸ್ಟಲ್ಲಿ ಕಳುಹಿಸುತ್ತಾರೆ...’’

*****

ಕಾಗದ ಪತ್ರದೊಂದಿಗೆ ಅವರು ಪಕ್ಕದ ಗುಡಿಸಲಿಗೆ ಹೋಯಿತು. ಅಲ್ಲೊಂದು ಮಹಿಳೆ ಮಗುವಿಗೆ ಹಾಲೂಡಿಸುತ್ತಾ ಇತ್ತು.

 ಸರಿ, ಪೌರತ್ವ ನೋಂದಣಿಗೆ ಬಂದವರು ಕೇಳತೊಡಗಿದರು.

‘‘ಅಮ್ಮಾ ನೀವು ಹುಟ್ಟಿದ್ದು ಯಾವಾಗ...?’’

‘‘ಅಡ್ವಾಣಿಯೋರು ರಥಯಾತ್ರೆ ಮಾಡಿದರಲ್ಲ ಆಗ....’’

‘‘ನಿಮಗೆ ಮದುವೆಯಾಗಿದೆಯಾ?’’

‘‘ಹೌದು...’’

‘‘ಯಾವಾಗ ಮದುವೆಯಾಗಿದ್ದು....’’

‘‘ಅದ್ಯಾವುದೋ ಮಸೀದಿ ಬೀಳಿಸಿದ್ರಲ್ಲಾ ಅದರ ಮರುದಿನ....’’

‘‘ಗಂಡ ಎಲ್ಲಿ?’’

‘‘ಅವ ಓಡಿ ಹೋದ....’’

‘‘ಯಾವಾಗ...’’

‘‘ಅದೇ ಅದೆಲ್ಲೋ ಕಾರ್ಗಿಲ್ ಉದ್ದ ಆಯಿತಲ್ಲ....ಅದಕ್ಕೆ ಒಂದು ವಾರ ಮುಂಚೆ...’’

‘‘ಎಷ್ಟು ಮಕ್ಕಳು....’’

‘‘ಒಂದು....’’

‘‘ಈ ಮಗು ಹುಟ್ಟಿದ್ದು ಯಾವಾಗ...’’

‘‘ಅದೇ ಮೋದಿಯೋರು ಅಚ್ಚೇದಿನ್ ಬರತ್ತೆ ಅಂತ ಹೇಳಿದರಲ್ಲ, ಅದರ ಹಿಂದಿನ ದಿನ....’’

‘‘ಇದಕ್ಕೆಲ್ಲ ದಾಖಲೆ ಇದೆಯಾ....’’

‘‘ಮೊದಲು ನೀನು ನಿನ್ನ ಮೋದಿ ಅದಾನಲ್ಲ, ಅವನ ಎಲಿಮ್ಯಾಂಟ್ರಿ ಸಾಲೆಯ ಸರ್ಟಿಫಿಕೇಟ್ ತಂದ್ಕೊಡು....ನಾನು ನನ್ನ ದಾಖಲೆ ತೋರಿಸ್ತೀನಿ...ಹೋಗಮ್ಮ....ಸುಮ್ನೆ....ಇಲ್ಲಿ ಬೇಯಿಸೋದಕ್ಕೆ ಅಕ್ಕಿ ಇಲ್ಲ....ದಾಖಲೆ....ಅಂತೆ ದಾಖಲೆ...’’

Similar News