ವಾಜಪೇಯಿ ಸರಕಾರದಡಿ ನಡೆದಿದ್ದ ಕಲ್ಲಿದ್ದಲು ಹಗರಣ: ಖಾಸಗಿ ಕಂಪನಿ ವಿರುದ್ಧ ಪ್ರಕರಣ ದಾಖಲು

Update: 2020-01-05 17:59 GMT

ಹೊಸದಿಲ್ಲಿ, ಜ.5: ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 1998ರಲ್ಲಿ ಮಹಾರಾಷ್ಟ್ರದಲ್ಲಿಯ ಕಿಲ್ಹೋನಿ ಕಲ್ಲಿದ್ದಲು ಗಣಿಯನ್ನು ಖಾಸಗಿ ಕಂಪನಿ ನಿಪ್ಪಾನ್ ಡೆನ್ರೊ ಇಸ್ಪಾತ್ ಲಿ.(ಎನ್‌ಡಿಐಎಲ್)ಗೆ ಹಂಚಿಕೆ ಮಾಡಿದ್ದರಲ್ಲಿ ಅಕ್ರಮಗಳ ಆರೋಪದಲ್ಲಿ ಪ್ರಕರಣವೊಂದನ್ನು ಸಿಬಿಐ ದಾಖಲಿಸಿಕೊಂಡಿದೆ.

ಆಗಿನ ಆರು ಕಾಂಗ್ರೆಸ್ ಸದಸ್ಯರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ. 1993 ಮತ್ತು 2004ರ ನಡುವೆ ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಈ ಸಂಸದರು ಆರೋಪಿಸಿದ್ದರು. ಈ ಬಗ್ಗೆ ಸಿಬಿಐ 2012, ಸೆ.26ರಂದು ತನ್ನ ಪ್ರಾಥಮಿಕ ವಿಚಾರಣೆಯನ್ನು ಆರಂಭಿಸಿತ್ತು.

ಕ್ಯಾಪ್ಟಿವ್ ಮೈನಿಂಗ್‌ಗಾಗಿ ಹಂಚಿಕೆ ಮಾಡಲು ಉದ್ದೇಶಿಸಿದ್ದ ಗಣಿಗಳ ಪಟ್ಟಿಯಲ್ಲಿ ಕಿಲ್ಹೋನಿ ಇದ್ದಿರಲಿಲ್ಲ. (ಕ್ಯಾಪ್ಟಿವ್ ಮೈನಿಂಗ್‌ನಲ್ಲಿ ನೀಡಲಾಗುವ ಗಣಿಯ ಉತ್ಪನ್ನವು ಗಣಿಯ ಮಾಲಿಕನ ನಿರ್ದಿಷ್ಟ ಅಂತಿಮ ಬಳಕೆಗೆ ಮಾತ್ರ ಮೀಸಲಿರುತ್ತದೆಯೇ ಹೊರತು ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ). ಕಿಲ್ಹೋನಿ ಗಣಿಯನ್ನು ಎನ್‌ಡಿಐಎಲ್‌ಗೆ ನೀಡಲು ಕೋಲ್ ಇಂಡಿಯಾ ಲಿ.ನ ಅಪೆಕ್ಸ್ ಸಮಿತಿಯು ಸಹ ಒಪ್ಪಿಕೊಂಡಿರಲಿಲ್ಲ. ಹೀಗಿದ್ದರೂ 1998, ಆ.2 4ರಂದು ನಡೆದಿದ್ದ ಸ್ಕ್ರೀನಿಂಗ್ ಸಮಿತಿಯ 13ನೇ ಸಭೆಯಲ್ಲಿ ಕಿಲ್ಹೋನಿ ಗಣಿಯನ್ನು ಎನ್‌ಡಿಐಎಲ್‌ಗೆ ಮಂಜೂರು ಮಾಡಲಾಗಿತ್ತು ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಹೇಳಿದೆ. ಸಿಬಿಐನ ತನಿಖಾ ವರದಿಯಂತೆ ಎನ್‌ಡಿಐಎಲ್ ಕಿಲ್ಹೋನಿ ಗಣಿಯನ್ನು ತನಗೆ ಹಂಚಿಕೆ ಮಾಡುವಂತೆ ಮೊದಲ ಬಾರಿಗೆ 1997ರಲ್ಲಿ ಕಲ್ಲಿದ್ದಲು ಸಚಿವಾಲಯವನ್ನು ಕೋರಿಕೊಂಡಿತ್ತು. ಆದರೆ ಅದು ಮಹಾರಾಷ್ಟ್ರ ಸರಕಾರಕ್ಕೆ ಮೀಸಲಾಗಿದ್ದರಿಂದ ಸಚಿವಾಲಯವು ಈ ಕೋರಿಕೆಯನ್ನು ತಿರಸ್ಕರಿಸಿತ್ತು. ಕಂಪನಿಯು ಎಪ್ರಿಲ್ 1998ರಲ್ಲಿ ಕಲ್ಲಿದ್ದಲು ಸಚಿವಾಲಯವನ್ನು ಮತ್ತೊಮ್ಮೆ ಕೋರಿಕೊಂಡಿತ್ತು ಮತ್ತು ಅಂತಿಮವಾಗಿ 1998 ಆಗಸ್ಟ್‌ನಲ್ಲಿ ಕಿಲ್ಹೋನಿಯನ್ನು ಕ್ಯಾಪ್ಟಿವ್ ಮೈನಿಂಗ್‌ನ ಪಟ್ಟಿಯಲ್ಲಿ ಸೇರಿಸುವಂತೆ ಕೋಲ್ ಇಂಡಿಯಾಕ್ಕೆ ನಿರ್ದೇಶ ರವಾನೆಯಾಗಿತ್ತು.

ಎನ್‌ಡಿಐಎಲ್ ಕೆಲವು ಅಪರಿಚಿತ ಸರಕಾರಿ ನೌಕರರೊಂದಿಗೆ ಶಾಮೀಲಾಗಿ ಸರಕಾರವನ್ನು ವಂಚಿಸಿದೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News