×
Ad

ಜೆಎನ್ ಯುನಲ್ಲಿ ಗೂಂಡಾ ದಾಳಿ: ಲಾಠಿ ಹಿಡಿದ ಎಬಿವಿಪಿ ನಾಯಕನ ಫೋಟೊ ಬಹಿರಂಗ

Update: 2020-01-06 23:34 IST

ಹೊಸದಿಲ್ಲಿ, ಜ. 6: ಕನಿಷ್ಠ 34 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಗಾಯಗೊಳ್ಳಲು ಕಾರಣವಾದ ದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ರವಿವಾರ ರಾತ್ರಿ ಮುಸುಕುಧಾರಿ ಗೂಂಡಾಗಳು ನಡೆಸಿದ ಹಿಂಸಾಚಾರದ ವೀಡಿಯೊ ಹಾಗೂ ಚಿತ್ರಗಳು ಬಹಿರಂಗವಾಗುತ್ತಿದ್ದು, ಒಂದು ಫೋಟೊದಲ್ಲಿ ಎಬಿವಿಪಿಗೆ ನಂಟು ಇರುವುದು ಕಂಡು ಬಂದಿದೆ.

ಫೋಟೊವೊಂದರಲ್ಲಿ ಎಬಿವಿಪಿಯ ಜೆಎನ್‌ಯು ಕಾರ್ಯಕಾರಿ ಸಮಿತಿಯ ಸದಸ್ಯ ವಿಕಾಸ್ ಪಟೇಲ್ ಎಂದು ಗುರುತಿಸಲಾದ ಯುವಕ ಲಾಠಿ ಹಿಡಿದ 12ಕ್ಕೂ ಅಧಿಕ ಯುವಕರೊಂದಿಗೆ ಇರುವುದು ಕಂಡು ಬಂದಿದೆ. ಪಟೇಲ್ ಫೈಬಲ್ ಗ್ಲಾಸ್‌ನ ಲಾಠಿ ಹಿಡಿದಿದ್ದು, ಇದು ಪೊಲೀಸರ ಲಾಠಿಯಂತೆ ಇದೆ. ಆತನ ಬಳಿಕ ನಿಂತ ನೀಲಿ ಹಾಗೂ ಹಳದಿ ಟೀ ಶರ್ಟ್ ಹಾಕಿಕೊಂಡ ವಿದ್ಯಾರ್ಥಿಯನ್ನು ಶಿವ ಪೂಜನ್ ಮಂಡಲ್ ಎಂದು ಗುರುತಿಸಲಾಗಿದೆ. ಈತ ಜೆಎನ್‌ಯುನ ಬಿ.ಎ. ಮೊದಲ ವರ್ಷದ ವಿದ್ಯಾರ್ಥಿ ಹಾಗೂ ಎಬಿವಿಪಿಯ ಕಾರ್ಯಕರ್ತ. ಜೆಎನ್‌ಯುನಲ್ಲಿ ದಾಳಿ ನಡೆಯುವ ರವಿವಾರ ಮಧ್ಯಾಹ್ನ ಈ ಪೋಟೊ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಇತರ ಕೆಲವು ಫೋಟೊಗಳಲ್ಲಿ ಲಾಠಿ ಹೊಂದಿದ ದೊಡ್ಡ ಗುಂಪಿನಲ್ಲಿ ಮಂಡಲ್ ಕಾಣಿಸಿಕೊಂಡಿದ್ದಾನೆ. ಶಸ್ತ್ರ ಗುಂಪು ಕ್ಯಾಂಪಸ್‌ನಿಂದ ರಾತ್ರಿ ಹಿಂದಿರುಗುವ ಸಂದರ್ಭ ದಾಖಲಿಸಿದ ವೀಡಿಯೊದಲ್ಲಿ ಕೂಡ ಮಂಡಲ್ ಕಾಣಿಸಿಕೊಂಡಿದ್ದಾನೆ. ಪಟೇಲ್ ಹಾಗೂ ಮಂಡಲ್ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯನ್ನು ಅಳಿಸಿದ್ದಾರೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಎಡಪಂಥೀಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವ ಕುರಿತು ಎಬಿವಿಪಿ ಸದಸ್ಯರ ವ್ಯಾಟ್ಸ್‌ಆ್ಯಪ್ ಗುಂಪಿನಲ್ಲಿ ನಡೆದ ಚರ್ಚೆಯಲ್ಲಿ ಪಟೇಲ್ ನಂಬರ್ ಇರುವ ಸ್ಕ್ರೀನ್ ಶಾಟ್ ಬಹಿರಂಗವಾಗಿದೆ. ವ್ಯಾಟ್ಸ್‌ಆ್ಯಪ್‌ನ ಇತರ ಸಂಭಾಷಣೆಗಳಲ್ಲಿ ಜೆಎನ್‌ಯುನ ಸಂಸ್ಕೃತ ವಿದ್ಯಾರ್ಥಿ ಯೋಗೇಂದ್ರ ಭಾರಧ್ವಾಜ್, ಪಿಎಚ್‌ಡಿ ವಿದ್ಯಾರ್ಥಿ ಸಂದೀಪ್ ಸಿಂಗ್ ಒಳಗೊಂಡಿರುವ ಸ್ಕ್ರೀನ್ ಶಾಟ್ ಕೂಡ ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮದ ಖಾತೆಯನ್ನು ಭಾರಧ್ವಾಜ್ ಅಳಿಸಿದ್ದಾನೆ. ಆದರೆ, ಆತ ಎಬಿವಿಪಿ ಸದಸ್ಯ ಎಂಬುದನ್ನು ಟ್ವಿಟ್ಟರ್ ಪ್ರೊಫೈಲ್‌ನ ಸ್ಕ್ರೀನ್ ಶಾಟ್ ಬಹಿರಂಗಪಡಿಸಿದೆ.

ವ್ಯಾಟ್ಸ್‌ಆ್ಯಪ್ ಸಂಭಾಷಣೆಯಲ್ಲಿ ಭಾರದ್ವಾಜ್ ಕೊನೆಯಲ್ಲಿ ‘‘ಎಡಪಂಥೀಯ ಭಯೋತ್ಪಾದನೆ’’ ಹಾಗೂ ‘‘ನಾವು ಅವರನ್ನು ಹಿಡಿಯಬೇಕು ಹಾಗೂ ಥಳಿಸಬೇಕು’’ ಎಂದು ಹೇಳಿದ್ದಾನೆ.

 ಆದರೆ, ಹಿಂಸಾಚಾರದಲ್ಲಿ ತನ್ನ ಪಾತ್ರ ಇರುವುದನ್ನು ಎಬಿವಿಪಿ ನಿರಾಕರಿಸಿದೆ. ಚಿತ್ರಗಳು ಹಾಗೂ ವ್ಯಾಟ್ಸ್‌ಆ್ಯಪ್ ಸಂದೇಶಗಳನ್ನು ತಿರುಚಲಾಗಿದೆ ಎಂದು ಹೇಳಿದೆ. ಅಲ್ಲದೆ, ಎಡಪಂಥೀಯ ವಿದ್ಯಾರ್ಥಿಗಳು ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News