ನಕಲಿ ಸಮನ್ಸ್,ಪತ್ರಗಳ ವಿರುದ್ಧ ಜನರಿಗೆ ಈ.ಡಿ.ಎಚ್ಚರಿಕೆ

Update: 2020-01-06 18:26 GMT

 ಹೊಸದಿಲ್ಲಿ,ಜ.6: ಜಾರಿ ನಿರ್ದೇಶನಾಲಯ (ಈ.ಡಿ.)ವು ನೀತಿಬಾಹಿರ ಶಕ್ತಿಗಳಿಂದ ತನ್ನ ಹೆಸರಿನಲ್ಲಿ ನಕಲಿ ಸಮನ್ಸ್ ಮತ್ತು ಪತ್ರಗಳ ವಿರುದ್ಧ ಸೋಮವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ ಮತ್ತು ಇಂತಹ ತಂತ್ರಗಳಿಗೆ ಬಲಿಯಾದವರು ತನ್ನನ್ನು ಸಂಪರ್ಕಿಸುವಂತೆ ಸೂಚಿಸಿದೆ.

ತನ್ನ ಹೆಸರಿನಲ್ಲಿ ನಕಲಿ ಸಂವಹನಗಳನ್ನು ತನ್ನ ಗಮನಕ್ಕೆ ತರಲಾಗಿದ್ದು,ಈ ಬಗ್ಗೆ ಇತ್ತೀಚಿಗೆ ದೇಶಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದೂ ಈ.ಡಿ.ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಹಣವನ್ನು ವಸೂಲು ಮಾಡುವ ಉದ್ದೇಶದಿಂದ ಈ.ಡಿ.ಅಧಿಕಾರಿಗಳ ಸೋಗು ಹಾಕಲು ಪ್ರಯತ್ನಿಸುವ ಮತ್ತು ಸಾರ್ವಜನಿಕರೊಂದಿಗೆ ನಕಲಿ ಪತ್ರ ವ್ಯವಹಾರಗಳಲ್ಲಿ ತೊಡಗುವವರ ವಿರುದ್ಧ ಕ್ರಮಗಳನ್ನು ಏಜೆನ್ಸಿಯು ಮುಂದುವರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಂದು ಪ್ರಕರಣದಲ್ಲಿ ಈ.ಡಿ.ಅಧಿಕಾರಿಯ ನಕಲಿ ಇ-ಮೇಲ್ ಐಡಿಯಿಂದ ಇ-ಮೇಲ್ ರವಾನಿಸಿದ್ದಕ್ಕಾಗಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿರುವ ಹೇಳಿಕೆಯು,ಇಂತಹ ಅಕ್ರಮಗಳನ್ನು ತಡೆಯಲು ಮತ್ತು ನೀತಿಬಾಹಿರ ಶಕ್ತಿಗಳು ಸಾರ್ವಜನಕರಿಗೆ ಕಿರುಕುಳ ನೀಡಲು ಸಾಧ್ಯವಾಗದಂತೆ ಏಜೆನ್ಸಿಯು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಎಂದೂ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News