ಮಾರ್ಚ್‌ ನಲ್ಲಿ ಐಸಿಸಿ ಚರ್ಚೆ

Update: 2020-01-07 04:20 GMT

ಇಂದೋರ್, ಜ.6: ಭಾರತದ ನಾಯಕ ವಿರಾಟ್ ಕೊಹ್ಲಿ ಸಹಿತ ವಿಶ್ವದ ಪ್ರಮುಖ ಆಟಗಾರರು ನಾಲ್ಕು ದಿನಗಳ ಟೆಸ್ಟ್ ಪಂದ್ಯವನ್ನು ಆಯೋಜಿಸುವ ಕುರಿತು ಟೀಕೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲದರ ನಡುವೆಯೂ ಐಸಿಸಿಯ ಕ್ರಿಕೆಟ್ ಸಮಿತಿಯು ಮಾರ್ಚ್‌ನಲ್ಲಿ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಪ್ರಸ್ತಾವದ ಕುರಿತು ಚರ್ಚೆ ನಡೆಸಲು ಸಿದ್ಧತೆ ನಡೆಸಿದೆ.

ದುಬೈನಲ್ಲಿ ಮಾ.27ರಿಂದ 31ರ ತನಕ ನಡೆಯುವ ಮುಂದಿನ ಸುತ್ತಿನ ಐಸಿಸಿ ಸಭೆಯಲ್ಲಿ ನಾಲ್ಕು ದಿನಗಳ ಟೆಸ್ಟ್ ಪಂದ್ಯ ಆಯೋಜಿಸುವ ಪ್ರಸ್ತಾವದ ಬಗ್ಗೆ ಚರ್ಚಿಸಲಾಗುವುದು ಎಂದು ಭಾರತದ ಮಾಜಿ ನಾಯಕ, ಕ್ರಿಕೆಟ್ ಸಮಿತಿಯ ಅಧ್ಯಕ್ಷ ಅನಿಲ್ ಕುಂಬ್ಳೆ ಹೇಳಿದ್ದಾರೆ.

 ಆ್ಯಂಡ್ರೂ ಸ್ಟ್ರಾಸ್, ರಾಹುಲ್ ದ್ರಾವಿಡ್, ಮಹೇಲ ಜಯವರ್ಧನೆ ಹಾಗೂ ಶಾನ್ ಪೊಲಾಕ್ ಸಮಿತಿಯಲ್ಲಿದ್ದಾರೆ.

2023-2031ರ ಋತುವಿನಲ್ಲಿ ನಾಲ್ಕು ದಿನಗಳ ಟೆಸ್ಟ್ ಪಂದ್ಯ ನಡೆಸುವ ಪ್ರಸ್ತಾವವಿದೆ. ಐಸಿಸಿಯ ಈ ಪ್ರಸ್ತಾವನೆಗೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಹಾಗೂ ರಿಕಿ ಪಾಂಟಿಂಗ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯ ಸದಸ್ಯರು ಈ ಕಲ್ಪನೆಯನ್ನು ಸ್ವಾಗತಿಸಿದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ, ಈ ಕುರಿತು ಈಗ ಮಾತನಾಡುವುದು ಅವಸರ ಎನಿಸುತ್ತದೆ ಎಂದಿದ್ದರು.

ಗುವಾಹಟಿಯಲ್ಲಿ ಕಳೆದ ವಾರ ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಗೆ ಮೊದಲು ಕೊಹ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News