ಗಗನಯಾನದಲ್ಲಿ ಮೈಸೂರಿನ ಇಡ್ಲಿ, ಹಲ್ವ, ಪಲಾವ್ !

Update: 2020-01-07 16:10 GMT
ಫೋಟೊ ಕೃಪೆ: indiatimes

ಮೈಸೂರು, ಜ.7: ದೇಶದ ಪ್ರಪ್ರಥಮ ಮಾನವ ಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸಿರುವ ಇಸ್ರೋ, ಗಗನಯಾನ ಕೈಗೊಳ್ಳಲು ವಾಯುಪಡೆಯ ನಾಲ್ವರು ಪೈಲಟ್‌ಗಳನ್ನು ಆಯ್ಕೆ ಮಾಡಿದೆ. ಇದೀಗ ಇವರಿಗೆ ಗಗನಯಾತ್ರೆಯ ಸಂದರ್ಭ ಭಾರತೀಯ ಶೈಲಿಯ ಆಹಾರ ಒದಗಿಸಲು ಕ್ರಮ ಕೈಗೊಂಡಿದ್ದು ಮೈಸೂರಿನಲ್ಲಿರುವ ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ವಿಶೇಷ ಆಹಾರವನ್ನು ಸಿದ್ಧಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಗ್ ರೋಲ್, ವೆಜ್ ರೋಲ್, ಇಡ್ಲಿ ಸಾಂಬಾರ್, ಉಪ್ಪಿಟ್ಟು, ಹೆಸರುಬೇಳೆ ಹಲ್ವಾ, ವೆಜ್ ಪಲಾವ್ ಸೇರಿದಂತೆ 30 ಆಹಾರಗಳ ಮೆನು ಸಿದ್ಧವಾಗಿದೆ. ಅಲ್ಲದೆ ಆಹಾರಗಳನ್ನು ಬಿಸಿಮಾಡಲು ಹೀಟರ್ ಕೂಡಾ ಒದಗಿಸಲಾಗುತ್ತದೆ. ಜೊತೆಗೆ ನೀರು ಮತ್ತು ಜ್ಯೂಸ್ ಕೊಂಡೊಯ್ಯಲು ವಿಶೇಷ ಕಂಟೈನರ್‌ಗಳನ್ನೂ ಸಿದ್ಧಗೊಳಿಸಲಾಗುತ್ತದೆ. ಅಲ್ಲದೆ ತ್ಯಾಜ್ಯ ವಿಲೇವಾರಿ ಪ್ಯಾಕ್‌ಗಳನ್ನು ಒದಗಿಸಲಾಗುತ್ತದೆ ಎಂದು ಮೈಸೂರಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಹೇಳಿಕೆ ತಿಳಿಸಿದೆ.

2022ರಲ್ಲಿ ಮಾನವ ಸಹಿತ ಗಗನಯಾನ ನಡೆಸಲು ಇಸ್ರೋ ಉದ್ದೇಶಿಸಲಾಗಿದ್ದು, ಆಯ್ಕೆಯಾಗಿರುವ ಗಗನಯಾತ್ರಿಗಳಿಗೆ ರಶ್ಯಾದಲ್ಲಿ ತರಬೇತಿ ನೀಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News