ಪ್ರತಿಭಟನಕಾರರಿಂದ ಕಲ್ಲೆಸೆತ: ಮುತ್ತೂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಆಸ್ಪತ್ರೆಗೆ ದಾಖಲು

Update: 2020-01-07 17:00 GMT
ಫೋಟೊ ಕೃಪೆ: Hindustan Times

ತಿರುವನಂತಪುರಂ, ಜ.7: ಚಿನ್ನದ ಮೇಲೆ ಸಾಲ ನೀಡುವ ಮುತ್ತೂಟ್ ಫೈನಾನ್ಸ್ ಲಿ. ಸಂಸ್ಥೆಯ ಆಡಳಿತ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಅವರ ಕಾರಿನ ಮೇಲೆ ಕೇರಳದ ಕೊಚ್ಚಿಯಲ್ಲಿ ಮಂಗಳವಾರ ಕಲ್ಲೆಸೆಯಲಾಗಿದ್ದು, ಜಾರ್ಜ್‌ಗೆ ತಲೆ ಮತ್ತು ಭುಜಕ್ಕೆ ಗಾಯವಾಗಿದೆ ಎಂದು ವರದಿಯಾಗಿದೆ.

ಮುತ್ತೂಟ್ ಸಮೂಹ ಸಂಸ್ಥೆ ಕೇರಳದಲ್ಲಿ 600ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಡಿಸೆಂಬರ್‌ನಲ್ಲಿ 160 ಸಿಬ್ಬಂದಿಯ ಕೆಲಸದಿಂದ ತೆಗೆದುಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಪಿಎಂ ಬೆಂಬಲಿತ ಸಿಐಟಿಯು ಕಾರ್ಮಿಕ ಸಂಘಟನೆಗೆ ಸೇರಿದ ಕೆಲವು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಗಳವಾರ ಪ್ರತಿಭಟನಾಕಾರರು ಸಂಸ್ಥೆಯ ಆಡಳಿತ ನಿರ್ದೇಶಕ ಜಾರ್ಜ್ ಪ್ರಯಾಣಿಸುತ್ತಿದ್ದ ಕಾರಿಗೆ ಕಲ್ಲೆಸೆದಿದ್ದು ಗಾಯಗೊಂಡಿರುವ ಜಾರ್ಜ್‌ರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. “ಕೇರಳದಲ್ಲಿ ಹಲವು ಉದ್ಯಮಗಳನ್ನು ನಾಶ ಮಾಡಿರುವ ಸಿಐಟಿಯು ಈಗ ಮುತ್ತೂಟ್ ಸಂಸ್ಥೆಯ ಮೇಲೆ ಕಣ್ಣಿಟ್ಟಿದೆ. ರಾಜ್ಯದಲ್ಲಿ ಮುತ್ತೂಟ್ ಸಂಸ್ಥೆಯಲ್ಲಿ 2800 ಸಿಬಂದಿಗಳಿದ್ದು ಇವರಲ್ಲಿ 70%ಕ್ಕೂ ಹೆಚ್ಚು ಮಹಿಳೆಯರು. ಕೇವಲ 250ರಷ್ಟಿರುವ ಸಿಐಟಿಯು ಸದಸ್ಯರು ಹೊರಗಿನ ವ್ಯಕ್ತಿಗಳ ಸಹಾಯ ಪಡೆದು ಸಂಸ್ಥೆಯ ಕಾರ್ಯಕ್ಕೆ ಅಡ್ಡಿತರಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಘಟನೆಗಳು ರಾಜ್ಯದ ಪ್ರತಿಷ್ಟೆಗೆ ಹಾನಿ ಎಸಗುತ್ತವೆ” ಎಂದು ಸಂಸ್ಥೆಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

 ಘಟನೆಯನ್ನು ಹಲವು ಉದ್ಯಮಿಗಳು ಖಂಡಿಸಿದ್ದಾರೆ. ಸಿಐಟಿಯು ಮುಖಂಡ ಎ ಆನಂದನ್ ಆರೋಪವನ್ನು ನಿರಾಕರಿಸಿದ್ದು, ಈ ರೀತಿಯ ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಮಗೆ ವಿಶ್ವಾಸವಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News