×
Ad

ಇರಾಕ್‌ನಿಂದ ವಾಪಸಾಗಲು ಸೇನೆ ಸಿದ್ಧ ಎಂದು ಪತ್ರ ಬರೆದ ಅಮೆರಿಕ: ಬಳಿಕ ‘ತಪ್ಪಾಗಿ ಬರೆದ ಪತ್ರ’ ಎಂದ ಅಧಿಕಾರಿಗಳು

Update: 2020-01-07 22:42 IST

ಬಗ್ದಾದ್ (ಇರಾಕ್), ಜ. 7: ಅಮೆರಿಕದ ಪಡೆಗಳು ಇರಾಕ್‌ನಿಂದ ವಾಪಸಾಗಲು ಸಿದ್ಧತೆಗಳನ್ನು ನಡೆಸುತ್ತಿವೆ ಎಂದು ಅಮೆರಿಕ ಸೇನೆ ಸೋಮವಾರ ಇರಾಕ್ ಸರಕಾರಕ್ಕೆ ತಿಳಿಸಿದೆ. ಆದರೆ, ಈ ಸಂದೇಶವನ್ನು ತಪ್ಪಾಗಿ ಕಳುಹಿಸಲಾಗಿದೆ ಎಂದು ವಾಶಿಂಗ್ಟನ್‌ನಲ್ಲಿರುವ ಅಮೆರಿಕದ ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದರು.

ಅಮೆರಿಕ ಸೇನೆಯ ಇರಾಕಿ ಕಾರ್ಯಪಡೆಯ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ವಿಲಿಯಮ್ ಸೀಲಿ ಇರಾಕ್ ಸೇನಾಧಿಕಾರಿಗಳಿಗೆ ರವಿವಾರ ಬರೆದ ಪತ್ರವೊಂದರಲ್ಲಿ, ಇರಾಕ್‌ನಿಂದ ವಾಪಸಾಗಲು ಅಮೆರಿಕ ಸೈನಿಕರು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.

‘‘ಹೊರ ಹೋಗುವಂತೆ ನಮಗೆ ಆದೇಶ ನೀಡುವ ನಿಮ್ಮ ಸಾರ್ವಭೌಮ ನಿರ್ಧಾರವನ್ನು ನಾವು ಗೌರವಿಸುತ್ತೇವೆ’’ ಎಂದು ಇರಾಕ್ ಸೇನಾಧಿಕಾರಿಗಳಿಗೆ ಬರೆದ ಪತ್ರ ತಿಳಿಸಿದೆ.

ಆದರೆ, ಈ ಪತ್ರವು ಕೇವಲ ‘ಕರಡು’ ಆಗಿತ್ತು ಹಾಗೂ ‘ಅದನ್ನು ತಪ್ಪಾಗಿ ಕಳುಹಿಸಲಾಗಿತ್ತು’ ಎಂದು ವಾಶಿಂಗ್ಟನ್‌ನಲ್ಲಿ ಪೆಂಟಗನ್ ಜಂಟಿ ಸೇನಾ ಅಧ್ಯಕ್ಷ ಮಾರ್ಕ್ ಮಿಲಿ ಹೇಳಿದರು.

‘‘ಅದು ಕಣ್ತಪ್ಪಿನಿಂದ ಸಂಭವಿಸಿದೆ. ಅದು ಸಹಿಯಿಲ್ಲದ ಕರಡು ಪತ್ರವಾಗಿತ್ತು. ಅದನ್ನು ಕಳುಹಿಸಬಾರದಾಗಿತ್ತು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News