ನಲಂದಾ ವಿವಿ ಧ್ವಂಸ... ಭಾರತದಲ್ಲಿ ಮತ್ತೊಮ್ಮೆ

Update: 2020-01-08 06:10 GMT

ನಮ್ಮ ದೇಶ ಶತ್ರುಗಳ ದಾಳಿಗಳಿಂದ ನೂರಾರು ಬಾರಿ ನಲುಗಿದೆ. ಈ ದೇಶದ ಖಜಾನೆಗಳನ್ನು ದೋಚಲಾಗಿದೆ. ಸಾಂಸ್ಕೃತಿಕ ಸ್ಥಳಗಳನ್ನೂ ಧ್ವಂಸಗೊಳಿಸಲಾಗಿದೆ. ಪರಕೀಯರು ಎಂದಲ್ಲ, ಈ ದೇಶದೊಳಗಿರುವ ರಾಜರ ನಡುವೆ ಪರಸ್ಪರ ಯುದ್ಧ ನಡೆದಾಗಲೂ ಇದೇ ನಡೆದಿದೆ. ಪರಕೀಯ ದಾಳಿಯನ್ನು ಉಲ್ಲೇಖಿಸುವಾಗ ಪ್ರಾಚೀನ ನಲಂದಾ ವಿಶ್ವವಿದ್ಯಾನಿಲಯಗಳ ಮೇಲೆ ನಡೆದ ದಾಳಿಯನ್ನು ನಾವು ಯಾವತ್ತೂ ಸ್ಮರಿಸುತ್ತಲೇ ಇರುತ್ತೇವೆ. ದೇವಸ್ಥಾನದ ಮೇಲೆ ದಾಳಿ ನಡೆದರೆ ಅದನ್ನು ಪುನರ್‌ನಿರ್ಮಿಸಬಹುದು. ಖಜಾನೆಗಳನ್ನು ದೋಚಿದರೆ ಅದನ್ನು ಮತ್ತೆ ಸಂಪಾದಿಸಿಕೊಳ್ಳಬಹುದು. ಆದರೆ ಒಂದು ಜ್ಞಾನ ಭಂಡಾರದ ಮೇಲೆ ದಾಳಿ ನಡೆದರೆ ಅದನ್ನು ಮತ್ತೆ ಪುನರ್ ಸೃಷ್ಟಿಸುವುದು ಕಷ್ಟ. ಅಂತಹ ದಾಳಿಗಳು ಜ್ಞಾನದ ಸರಪಣಿಯ ಮಹತ್ವದ ಕೊಂಡಿಯೊಂದನ್ನೇ ಇಲ್ಲವಾಗಿಸುತ್ತದೆ. ಯುದ್ಧಗಳು ಈ ವಿಶ್ವದ ನೂರಾರು ಜ್ಞಾನ ಕೇಂದ್ರಗಳನ್ನು ನಾಶ ಮಾಡಿವೆೆ ಎನ್ನುವುದನ್ನು ನಾವು ಗಮನಿಸಬೇಕಾಗುತ್ತದೆ. ಸರ್ವಾಧಿಕಾರಿಯ ಕೆಂಗಣ್ಣಿಗೆ ಈ ಜ್ಞಾನ ಕೇಂದ್ರಗಳು ಯಾಕೆ ಗುರಿಯಾಗುತ್ತವೆ ಎನ್ನುವುದನ್ನು ಊಹಿಸುವುದು ಕಷ್ಟವಿಲ್ಲ. ಗ್ರಂಥಗಳು, ವಿಶ್ವವಿದ್ಯಾನಿಲಯಗಳು ಪ್ರಭುತ್ವವನ್ನು ಪ್ರಶ್ನಿಸುತ್ತವೆ. ಶ್ರೀಸಾಮಾನ್ಯನ ತಿಳಿವಿನ ಕುರಿತಂತೆ ಸರ್ವಾಧಿಕಾರಿಗೆ ಸದಾ ಭಯವೊಂದಿರುತ್ತದೆ. ಆದುದರಿಂದಲೇ ಆತ ವಿಶ್ವವಿದ್ಯಾನಿಲಯಗಳು, ಪಠ್ಯಗಳು, ಗ್ರಂಥಗಳನ್ನು ಹಂತಹಂತವಾಗಿ ಧ್ವಂಸಗೊಳಿಸುತ್ತಾ ಬರುತ್ತಾನೆ. ವಿಪರ್ಯಾಸವೆಂದರೆ, ಭಾರತವನ್ನು ಇಂದು ಆಳುತ್ತಿರುವುದು ಪ್ರಜಾಸತ್ತಾತ್ಮಕವಾದ ಸರಕಾರವೇ ಆಗಿದ್ದರೂ, ಈ ಸರಕಾರ ಕಳೆದ ಆರು ವರ್ಷಗಳಿಂದ ಜ್ಞಾನ ಕೇಂದ್ರಗಳನ್ನೇ ಗುರಿಯಾಗಿರಿಸಿಕೊಂಡು ವಿವಿಧ ದಾಳಿಗಳನ್ನು ಪ್ರಾಯೋಜಿಸುತ್ತಾ ಬಂದಿರುವುದು. ಮೊದಲು ಅದು ಪಠ್ಯ ಪುಸ್ತಕಗಳನ್ನು ಗುರಿ ಮಾಡಿತು. ಇದಾದ ಬಳಿಕ ನಿಧಾನಕ್ಕೆ ವಿಶ್ವವಿದ್ಯಾನಿಲಯದೊಳಗಿನ ಮುಖ್ಯಸ್ಥರನ್ನು ಬಳಸುತ್ತಾ ವಿದ್ಯಾರ್ಥಿಗಳ ಚಿಂತನೆಗಳನ್ನು ನಿಯಂತ್ರಿಸುವುದಕ್ಕೆ ಆರಂಭಿಸಿತು. ಆ ಬಳಿಕ ವಿಶ್ವವಿದ್ಯಾನಿಲಯಗಳಿಗೆ ನೀಡುವ ಅನುದಾನಗಳಿಗೆ ಕಡಿತ ಹಾಕಲಾರಂಭಿಸಿತು. ಸಮಾಜದ ಆಗುಹೋಗುಗಳಿಗೆ ವಿದ್ಯಾರ್ಥಿಗಳು ಜಾಗೃತರಾಗಿ ಸ್ಪಂದಿಸತೊಡಗಿದಂತೆಯೇ ವಿಶ್ವವಿದ್ಯಾನಿಲಯವೇ ಉಗ್ರರ ಆವಾಸ ಸ್ಥಾನ ಎಂಬಂತಹ ಚಿತ್ರಣಗಳನ್ನು ನೀಡುತ್ತಾ, ಅವುಗಳ ವಿರುದ್ಧ ವದಂತಿಗಳನ್ನು ಹರಡತೊಡಗಿತು. ಕಟ್ಟ ಕಡೆಗೆ ಸರಕಾರದ ವಿರುದ್ಧ ಧ್ವನಿಯೆತ್ತಿದ ವಿದ್ಯಾರ್ಥಿಗಳನ್ನೇ ಬಂಧಿಸಿ ಅವರಿಗೆ ದೇಶದ್ರೋಹಿಗಳೆಂಬ ಪಟ್ಟ ನೀಡಿ ಜೈಲಿಗೆ ತಳ್ಳಿತು. ಜೈಲುಗಳಿಗೂ ಹೆದರದ ಬೆಳಕಿನ ಬೀಜಗಳು ದೇಶಾದ್ಯಂತ ಪಸರಿಸತೊಡಗಿದಂತೆಯೇ ಪೊಲೀಸರನ್ನು ವಿಶ್ವವಿದ್ಯಾನಿಲಯದೊಳಗೆ ನುಗ್ಗಿಸಿತು. ಕಟ್ಟಕಡೆಯ ಹಂತವಾಗಿ ಇದೀಗ ಗೂಂಡಾಗಳನ್ನೇ ವಿಶ್ವವಿದ್ಯಾನಿಲಯದೊಳಗೆ ಛೂ ಬಿಟ್ಟಿದೆ. ಒಬ್ಬ ಸರ್ವಾಧಿಕಾರಿ ವಿದೇಶಿ ರಾಜ ಈ ದೇಶಕ್ಕೆ ಕಾಲಿಟ್ಟು ಇಲ್ಲಿನ ಜ್ಞಾನಶಾಖೆಗಳನ್ನು ನಾಶ ಮಾಡಿರುವುದಕ್ಕಿಂತಲೂ ಭೀಕರವಾದುದು ಇದೀಗ ದೇಶದಲ್ಲಿ ನಡೆಯುತ್ತಿದೆ.

ನರೇಂದ್ರ ಮೋದಿಯವರ ನೀತಿಗಳು ಈ ದೇಶವನ್ನು ಸರ್ವನಾಶದ ಕಡೆಗೆ ಒಯ್ಯುತ್ತಿದೆ. ಆರ್ಥಿಕತೆ ಕುಸಿದು ಕೂತಿದೆ. ಸಂವಿಧಾನ ಅಪಾಯದಲ್ಲಿದೆ. ಆಂತರಿಕ ಭದ್ರತೆಯೂ ದುರ್ಬಲಗೊಂಡಿದೆ. ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇಂತಹ ಸಂದರ್ಭದಲ್ಲಿ ಸಂಸತ್‌ನಲ್ಲಿ ಸರಕಾರದ ನೀತಿಯನ್ನು ಪ್ರತಿಭಟಿಸಲು ಪ್ರಬಲ ವಿರೋಧ ಪಕ್ಷಗಳಿಲ್ಲ. ಆದುದರಿಂದಲೇ ಮೋದಿ ಸರಕಾರ ನಿಧಾನಕ್ಕೆ ಸರ್ವಾಧಿಕಾರದ ರೂಪವನ್ನು ಪಡೆದಿದೆ. ಆದರೆ ಒಂದು ಆಶಾದಾಯಕ ಸಂಗತಿಯೆಂದರೆ, ಮೋದಿಯ ವಿರೋಧ ಪಕ್ಷಗಳಾಗಿ ಈ ದೇಶದ ವಿಶ್ವವಿದ್ಯಾನಿಲಯಗಳು ಬೀದಿಗಿಳಿದಿವೆ. ಮೋದಿಯ ಜನವಿರೋಧಿ, ದೇಶವಿರೋಧಿ ನೀತಿಗಳನ್ನು ಈ ದೇಶದ ವಿದ್ಯಾರ್ಥಿಗಳು ದೊಡ್ಡ ಧ್ವನಿಯಲ್ಲಿ ಜಗತ್ತಿಗೆ ಸಾರಿ ಹೇಳುತ್ತಿದ್ದಾರೆ. ಇರುವೆಯ ದಂಡು ಮುತ್ತಿದ ನಾಗರಹಾವಿನಂತೆ ಇದೀಗ ಸರಕಾರ ಭುಸುಗುಟ್ಟುತ್ತಿದೆ. ಅದರ ಹತಾಶೆ, ಇದೀಗ ಗೂಂಡಾಗಳನ್ನು ಬಿಟ್ಟು ವಿದ್ಯಾರ್ಥಿಗಳು, ಉಪನ್ಯಾಸಕರನ್ನು ಥಳಿಸುವ , ಧಮನಿಸುವ ಮಟ್ಟಕ್ಕೆ ತಲುಪಿದೆ. ಕಳೆದ ರಾತ್ರಿ ಜೆಎನ್‌ಯುವಿನಲ್ಲಿ ನಡೆದ ದಾಳಿಯಿಂದಾಗಿ ಮೋದಿ ಸರಕಾರದ ಮಾನ ವಿಶ್ವದ ಮುಂದೆ ಹರಾಜಾದಂತಾಗಿದೆ. ದೇಶ ವಿದೇಶಗಳಿಂದ ಟೀಕೆ, ಆಕ್ರೋಶಗಳ ಸುರಿಮಳೆಯಾಗುತ್ತಿವೆೆ. ‘‘ಕಲಿಕೆಯನ್ನು ಬಿಟ್ಟು ಜೆಎನ್‌ಯು ವಿದ್ಯಾರ್ಥಿಗಳು ರಾಜಕೀಯ ಮಾಡುತ್ತಿದ್ದಾರೆ’’ ಎಂಬ ಆರೋಪಗಳನ್ನೇ ಗುರಾಣಿಯಾಗಿಟ್ಟು ಸರಕಾರ ಬಚಾವಾಗಲು ಹೊರಟಿದೆ. ಆದರೆ ಜೆಎನ್‌ಯು ಒಂದು ಪ್ರತಿಷ್ಠಿತವಾದ ವಿಶ್ವವಿದ್ಯಾನಿಲಯ ಎನ್ನುವುದನ್ನು ಮುಚ್ಚಿಡುವುದು ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ. ದೇಶದ ವಿಶ್ವವಿದ್ಯಾನಿಲಯಗಳಲ್ಲೇ ಅಗ್ರ ವಿಶ್ವವಿದ್ಯಾನಿಲಯವೆಂದು ರಾಷ್ಟ್ರಪತಿಯಿಂದ ಜೆಎನ್‌ಯು ಗೌರವಿಸಲ್ಪಟ್ಟಿದೆ. ಇಲ್ಲಿಂದ ಹೊರಹೊಮ್ಮಿದ ವಿದ್ಯಾರ್ಥಿಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ಇತ್ತೀಚೆಗೆ ನೊಬೆಲ್ ಬಹುಮಾನ ಪಡೆದ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಕೂಡ ಇದೇ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿ. ಈ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಕೂಡ ಕಲಿತಿರುವುದು ಇದೇ ವಿವಿಯಲ್ಲಿ. ಜೆಎನ್‌ಯು ವಿದ್ಯಾರ್ಥಿಗಳು ರಾಜಕೀಯವಾಗಿ ಅಕ್ಷರಸ್ಥರು. ಪ್ರತಿಭಟನೆ ಜೆಎನ್‌ಯು ವಿಶ್ವವಿದ್ಯಾನಿಲಯವನ್ನು ಕಟ್ಟಿನಿಲ್ಲಿಸಿದ ಇಟ್ಟಿಗೆಗಳಾಗಿವೆ. ದಿವಂಗತ ಶ್ರೀಮತಿ ಇಂದಿರಾಗಾಂಧಿ ಪ್ರಧಾನಿಯಾದಾಗಲೂ ಅವರ ವಿರುದ್ಧ ಇಲ್ಲಿ ಪ್ರತಿಭಟನೆಗಳಾಗಿದ್ದವು. ಆದರೆ ಇಂದಿರಾಗಾಂಧಿ ಎಂದಿಗೂ ಈ ವಿಶ್ವವಿದ್ಯಾನಿಲಯದ ಘನತೆಗೆ ಧಕ್ಕೆ ತರುವ ಸಾಹಸಕ್ಕೆ ಇಳಿಯಲಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಗೌರವಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲೂ ಇದು ನಡೆದಿದೆ. ಆದರೆ ಪ್ರಧಾನಿ ಮೋದಿ ಸರಕಾರ ಮಾತ್ರ, ಜ್ಞಾನ ಕೇಂದ್ರವೊಂದನ್ನು ‘ನಕ್ಸಲರ ಆವಾಸಸ್ಥಾನ’ ‘ದೇಶದ್ರೋಹಿಗಳ ಕಾರ್ಖಾನೆ’ ‘ಲೈಂಗಿಕ ಚಟುವಟಿಕೆಗಳ ಕೇಂದ್ರ’ ಎಂದೆಲ್ಲ ಕಳಂಕ ಹಚ್ಚಿ, ವಿಶ್ವವಿದ್ಯಾನಿಲಯದ ನಾಶಕ್ಕೆ ಹವಣಿಸುತ್ತಿದ್ದಾರೆ. ಇಂದಿಗೂ ತನ್ನ ಪದವಿ ಪತ್ರದ ದಾಖಲೆ ತೋರಿಸುವಲ್ಲಿ ವಿಫಲರಾಗಿರುವ ನರೇಂದ್ರ ಮೋದಿಗೆ ವಿವಿಗಳ ಕುರಿತಂತೆ ಒಂದು ರೀತಿಯಲ್ಲಿ ಕೀಳರಿಮೆ, ಆತಂಕಗಳಿವೆ. ಅದರ ಪರಿಣಾಮವಾಗಿಯೇ ಅವರು ಅವುಗಳ ವಿರುದ್ಧ ಬಹಿರಂಗ ಕದನಕ್ಕಿಳಿದಂತಿದೆ. ಎಲ್ಲ ಆಧುನಿಕ, ಜೀವಪರ ಚಿಂತನೆಗಳನ್ನು ನಾಶ ಮಾಡಿ, ಅವುಗಳ ಸ್ಥಾನದಲ್ಲಿ ಮನುವಾದಿ ಚಿಂತನೆಗಳನ್ನು ಸ್ಥಾಪಿಸುವ ಹುನ್ನಾರವಾಗಿದೆ ಈ ವಿಶ್ವವಿದ್ಯಾನಿಲಯದ ಮೇಲೆ ನಡೆಯುತ್ತಿರುವ ದಾಳಿಗಳು. ಈ ದಾಳಿಗೆ ಅತಿ ದೊಡ್ಡ ಸವಾಲಾಗಿ ನಿಂತಿರುವುದು ಜೆಎನ್‌ಯು. ಆದುದರಿಂದಲೇ ಬೇರೆ ಬೇರೆ ತಂತ್ರಗಳ ಮೂಲಕ ಅವುಗಳನ್ನು ದುರ್ಬಲಗೊಳಿಸಲು ಸರಕಾರ ಯತ್ನಿಸುತ್ತಿವೆ. ನಾಳೆ ಇತರ ವಿಶ್ವವಿದ್ಯಾನಿಲಯಗಳಿಗೂ ಇದು ವಿಸ್ತರಿಸಲಿದೆ. ಒಂದು ವೇಳೆ ಇದರಲ್ಲಿ ಸರಕಾರ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಮಕ್ಕಳು ಪತಂಜಲಿ ಬಾಬಾನ ವಿಶ್ವವಿದ್ಯಾನಿಲಯಗಳಲ್ಲಿ, ಆರೆಸ್ಸೆಸ್‌ನ ಗುರುಕುಲಗಳಲ್ಲಿ ತುಳಸಿ ಎಲೆಗಳಿಂದ ವಿಕಿರಣ ತಡೆಯುವುದು, ಗೋಮೂತ್ರದಿಂದ ಕ್ಯಾನ್ಸರ್ ನಿವಾರಣೆ, ಮೊಟ್ಟೆ ಸೇವನೆಯಿಂದ ಎದುರಾಗುವ ಆಪತ್ತುಗಳು, ಪುರಾತನ ಪ್ಲಾಸ್ಟಿಕ್ ಸರ್ಜರಿಗಳು...ಇತ್ಯಾದಿಗಳನ್ನು ಕಲಿಯಬೇಕಾಗುತ್ತದೆ. ಜೊತೆಗೆ ಹಂತಹಂತವಾಗಿ ದಲಿತರು, ಶೂದ್ರರು, ಅಲ್ಪಸಂಖ್ಯಾತರನ್ನು ಆಧುನಿಕ ಶಿಕ್ಷಣದಿಂದ ದೂರ ಇಡುವ ಯೋಜನೆಗಳೂ ರೂಪ ಪಡೆಯಲಿವೆ. ರವಿವಾರ ಜೆಎನ್‌ಯು ಮೇಲೆ ನಡೆದ ಗೂಂಡಾಗಳ ದಾಳಿ ಕೇವಲ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯಲ್ಲ, ಈ ದೇಶದ ಶಿಕ್ಷಣ ವ್ಯವಸ್ಥೆಯ ಪಾವಿತ್ರತೆಯ ಮೇಲೆ ನಡೆದ ದಾಳಿ. ಇದರ ವಿರುದ್ಧ ಅಕ್ಷರಸ್ಥರು ಒಂದಾಗಿ ಪ್ರತಿಭಟಿಸದೇ ಇದ್ದರೆ, ಪ್ರಾಚೀನ ನಲಂದಾ ವಿಶ್ವವಿದ್ಯಾನಿಲಯದ ದುರಂತಕತೆಗಳನ್ನು ಇತಿಹಾಸ ಪುಟಗಳಲ್ಲಿ ಓದುವಂತೆ, ಮುಂದೊಂದು ದಿನ ಭಾರತದ ಆಧುನಿಕ ನಲಂದಾ ವಿಶ್ವವಿದ್ಯಾನಿಲಯಗಳ ದುರಂತಗಳನ್ನು ನಮ್ಮ ಮಕ್ಕಳು ಪಠ್ಯಗಳಲ್ಲಿ ಓದಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News